ಕೊರೊನಾ ಮೂರನೇ ಅಲೆ ನಿಯಂತ್ರಿಸಲು ಕರ್ನಾಟಕ ಸರ್ಕಾರ ಕಠಿಣ ನಿಯಮಗಳನ್ನ ಜಾರಿಗೆ ತಂದಿದೆ. ರಾಜ್ಯಾದ್ಯಂತ ನಿನ್ನೆ (ಜ.7) ರಾತ್ರಿ10ರಿಂದ ವೀಕೆಂಡ್ ಕರ್ಫ್ಯೂ ಜಾರಿಯಾಗಿದೆ. 2 ವಾರಗಳ ಕಾಲ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರುತ್ತದೆ. ನಿಯಮ ಉಲ್ಲಂಘಿಸಿ ಅನಗತ್ಯವಾಗಿ ಓಡಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಹೀಗಿದ್ದೂ, ರಾಜ್ಯದ ಹಲವೆಡೆ ಜನರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಬೇಕಾಬಿಟ್ಟಿ ಓಡಾಡುತ್ತಿದ್ದಾರೆ.
ವೀಕೆಂಡ್ ಕರ್ಫ್ಯೂ ಉಲ್ಲಂಘಿಸಿದ ಹಿನ್ನೆಲೆ ಬೆಂಗಳೂರು ಪಶ್ಚಿಮ ವಿಭಾಗದಲ್ಲಿ ಸುಮಾರು 111 ವಾಹನಗಳನ್ನ ಸೀಜ್ ಮಾಡಲಾಗಿದೆ. ಇದರಲ್ಲಿ ಮೂರು ಚಕ್ರದ 10 ವಾಹನ, 4 ಚಕ್ರದ 4 ವಾಹನ ಸೀಜ್ ಆಗಿವೆ. ಇನ್ನು ವಿಜಯಪುರದಲ್ಲಿ ವೀಕೆಂಡ್ ಕರ್ಪ್ಯೂಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಕಂಡು ಬಂದಿಲ್ಲ. ಪ್ರಯಾಣಿಕರಿಗಾಗಿ ಬಸ್ಗಳು ಕಾದು ಕುಳಿತಿವೆ. ಆದರೆ ಕೊರೊನಾ ಕಾರಣದಿಂದ ಮೂರರಿಂದ ನಾಲ್ಕು ಜನ ಮಾತ್ರ ಪ್ರಯಾಣಿಕರು ಬರುತ್ತಿದ್ದಾರೆ.
ಆದರೆ ಮೈಸೂರಿನಲ್ಲಿ ಕೊರೊನಾ ಭಯವಿಲ್ಲದೆ ತರಕಾರಿ ಮಾರುಕಟ್ಟೆಯಲ್ಲಿ ಜನ ಜಂಗುಳಿ ಸೇರಿದೆ. ಸಾಮಾಜಿಕ ಅಂತರ ಮರೆತು ಖರೀದಿಸುತ್ತಿದ್ದಾರೆ. ಪೊಲೀಸರು ಜಾಗೃತಿ ಮೂಡಿಸಿದರು ಕಿವಿಕೊಡದ ಜನ, ಮಾಸ್ಕ್ ಸರಿಯಾಗಿ ಧರಿಸದೆ ಓಡಾಡುತ್ತಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಜನಜೀವನ ಎಂದಿನಂತೆ ಇದೆ. ಟೀ ಸ್ಟಾಲ್ಗಳ ಬಳಿ ಜನ ಗುಂಪು ಗುಂಪಾಗಿ ನಿಂತು ಚಹಾ ಸೇವಿಸುತ್ತಿದ್ದಾರೆ. ಬಸ್ಗಳು ಯಥಾಸ್ಥಿತಿಯಲ್ಲಿ ಸಂಚಾರ ನಡೆಸುತ್ತಿವೆ. ಬೆಳಗಾವಿಯ ತರಕಾರಿ ಮಾರುಕಟ್ಟೆಯಲ್ಲಿ ಜನ ನಿರ್ಲಕ್ಷ್ಯ ತೋರಿದ್ದಾರೆ. ದೈಹಿಕ ಅಂತರ ಮರೆತು ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ.
ಇನ್ನು ವೀಕೆಂಡ್ ಕರ್ಪ್ಯೂ ಹಿನ್ನೆಲೆ ಬಾಗಲಕೋಟೆ ಸ್ತಬ್ಧವಾಗಿದೆ. ನಗರದ ರಸ್ತೆಗಳು ಬಿಕೋ ಅನ್ನುತ್ತಿವೆ. ರಸ್ತೆಯಲ್ಲಿ ವಾಹನಗಳ ಸಂಚಾರ ಕಂಡು ಬಂದಿಲ್ಲ. ಅಲ್ಲೋ ಇಲ್ಲೋ ಕೆಲ ಬೈಕ್ಗಳು ಓಡಾಡುತ್ತಿವೆ. ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿವೆ. ಪಾರ್ಸಲ್ ಕೊಡಲು ಅವಕಾಶ ಇದ್ದರೂ ಹೊಟೆಲ್ಗಳು ಬಂದ್ ಆಗಿವೆ. ಹಾವೇರಿಯಲ್ಲೂ ಬಹುತೇಕ ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ. ಜನರ ಓಡಾಟ ವಿರಳವಾಗಿದೆ.
ಕೊಪ್ಪಳ, ದಾವಣಗೆರೆ, ಬೀದರ್, ಚಿಕ್ಕಬಳ್ಳಾಪುರ, ಬಳ್ಳಾರಿ ಸೇರಿ ಹಲವು ಜಿಲ್ಲೆಗಳಲ್ಲಿ ಜನರು ಕೊರೊನಾ ಬಗ್ಗೆ ಭಯವಿಲ್ಲದೆ ನಿಯಮಗಳನ್ನ ಉಲ್ಲಂಘಿಸುತ್ತಿದ್ದಾರೆ. ಕೊಪ್ಪಳದಲ್ಲಿ ಗುಂಪು ಗುಂಪಾಗಿ ನಿಂತು ಚಹಾ ಸೇವಿಸುತ್ತಿದ್ದಾರೆ. ಕಾಟಾಚಾರಕ್ಕೆ ಎನ್ನುವಂತೆ ವೀಕೆಂಡ್ ಕರ್ಫ್ಯೂ ಜಾರಿಯಾಗಿದೆ. ಕಲಬುರಗಿಯ ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಕಡಿಮೆಯಾಗಿದೆ. ನಿರೀಕ್ಷಿತ ಗ್ರಾಹಕರು ಬಾರದೇ ತರಕಾರಿ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ. ಕಾಫಿನಾಡು ಚಿಕ್ಕಮಗಳೂರು, ಚಿತ್ರದುರ್ಗದಲ್ಲಿ ವೀಕೆಂಡ್ ಕರ್ಫ್ಯೂಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಜಿಲ್ಲೆಯಾದ್ಯಂತ ಅಂಗಡಿ-ಮುಂಗಟ್ಟುಗಳು ಬಂದ್ ಆಗಿವೆ. ಮೆಡಿಕಲ್, ಅಗತ್ಯ ವಸ್ತು ಮಾರಾಟ ಹೊರತುಪಡಿಸಿ ಎಲ್ಲಾ ಮಳಿಗೆಗಳು ಬಂದ್ ಆಗಿವೆ.
ತುಮಕೂರಿನ ಕೃಷಿ ಮಾರುಕಟ್ಟೆಯಲ್ಲಿ ವ್ಯಾಪಾರ ಕುಂಠಿತವಾಗಿದೆ. ಮೊದಲಿನಂತೆ ವ್ಯಾಪಾರ ನಡೆಯುತ್ತಿಲ್ಲ ಅಂತಾ ವ್ಯಾಪಾರಿಗಳು ಹೇಳುತ್ತಿದ್ದಾರೆ. ಕೇಸ್ಗಳು ಹೆಚ್ಚುತ್ತಿಲ್ಲ ಆದರೂ ಸರ್ಕಾರ ಹೀಗೆ ಮಾಡಿದೆ ಅಂತ ಅಳಲು ತೋಡಿಕೊಂಡಿದ್ದಾರೆ. ಮಂಗಳೂರಿನಲ್ಲಿ ಅನಗತ್ಯವಾಗಿ ಓಡಾಡುವವರಿಗೆ ಪೊಲೀಸರು ಶಾಕ್ ನೀಡಿದ್ದಾರೆ. ಅನಗತ್ಯವಾಗಿ ರಸ್ತೆಗೆ ಇಳಿದ ಜನರಿಗೆ ದಂಡ ಪೊಲೀಸರು ದಂಡ ಹಾಕುತ್ತಿದ್ದಾರೆ.
ಇದನ್ನೂ ಓದಿ
Published On - 9:28 am, Sat, 8 January 22