ನಾಗ್ಪುರದಲ್ಲಿರುವ ಆರ್​ಎಸ್​ಎಸ್​ ಪ್ರಧಾನ ಕಚೇರಿ ಸುತ್ತಲಿನ ಪ್ರದೇಶ ಪರಿಶೀಲನೆ ನಡೆಸಿರುವ ಭಯೋತ್ಪಾದಕರು; ಸ್ಥಳದಲ್ಲಿ ಹೈಅಲರ್ಟ್​, ಬಿಗಿ ಭದ್ರತೆ

ಸದ್ಯ ಆರ್​ಎಸ್​ಎಸ್​ ಪ್ರಧಾನ ಕಚೇರಿ, ರೇಷಿಮ್​ಬಾಗ್​ನಲ್ಲಿರುವ ಹೆಡ್ಗೆವಾರ್​ ಭವನ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಭದ್ರತೆ ಪ್ರಮಾಣ ಹೆಚ್ಚಿಸಲಾಗಿದೆ. ಈ ಮಾರ್ಗವಾಗಿ ಚಲಿಸುವ ಪ್ರತಿಯೊಂದು ವಾಹನ, ವ್ಯಕ್ತಿಗಳನ್ನೂ ತಪಾಸಣೆಗೆ ಒಳಪಡಿಸಲಾಗುವುದು ಎಂದು ಅಮಿತೇಶ್​ಕುಮಾರ್​ ತಿಳಿಸಿದ್ದಾರೆ.

ನಾಗ್ಪುರದಲ್ಲಿರುವ ಆರ್​ಎಸ್​ಎಸ್​ ಪ್ರಧಾನ ಕಚೇರಿ ಸುತ್ತಲಿನ ಪ್ರದೇಶ ಪರಿಶೀಲನೆ ನಡೆಸಿರುವ ಭಯೋತ್ಪಾದಕರು; ಸ್ಥಳದಲ್ಲಿ ಹೈಅಲರ್ಟ್​, ಬಿಗಿ ಭದ್ರತೆ
ಆರ್​ಎಸ್​ಎಸ್​ ಪ್ರಧಾನ ಕಚೇರಿ
Follow us
TV9 Web
| Updated By: Lakshmi Hegde

Updated on:Jan 08, 2022 | 9:41 AM

ನಾಗ್ಪುರ: ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಆರ್​ಎಸ್​ಎಸ್​ (ರಾಷ್ಟ್ರೀಯ ಸ್ವಯಂ ಸೇವಕ ಸಂಘ-RSS)ನ ಪ್ರಧಾನ ಕಚೇರಿ ಮತ್ತು ಹೆಡ್ಗೆವಾರ್ ಭವನಗಳ ಸುತ್ತಲಿನ ಪ್ರದೇಶಗಳಲ್ಲಿ ಜೈಷ್​ ಇ ಮೊಹಮ್ಮದ್(Jaish-e-Mohammed)​ ಭಯೋತ್ಪಾದಕರು ಭೂಪರಿಶೀಲನೆ ಮಾಡಿದ್ದಾರೆ ಎಂದು ನಾಗ್ಪುರ ಪೊಲೀಸ್ ಆಯುಕ್ತ ಅಮಿತೇಶ್​ ಕುಮಾರ್​ ಶುಕ್ರವಾರ ತಿಳಿಸಿದ್ದಾರೆ. ಅದರ ಬೆನ್ನಲ್ಲೇ ಆರ್​ಎಸ್​ಎಸ್​ ಪ್ರಧಾನ ಕಚೇರಿ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಶುಕ್ರವಾರ ಹೈಅಲರ್ಟ್​ ಘೋಷಿಸಲಾಗಿದೆ. ಈ ಪ್ರದೇಶಗಳ ಆಸುಪಾಸು ಡ್ರೋನ್​ ಹಾರಾಟವನ್ನೂ ಕೂಡ ನಿಷೇಧಿಸಿ ನಾಗ್ಪುರ ಪೊಲೀಸ್ ಉನ್ನತ ಅಧಿಕಾರಿ ಆದೇಶ ಹೊರಡಿಸಿದ್ದಾರೆ. ಭದ್ರತೆ ಹೆಚ್ಚಿಸಲಾಗಿದೆ. 

ಇತ್ತೀಚೆಗೆ ಕಾಶ್ಮೀರದಲ್ಲಿ ಉಗ್ರನೊಬ್ಬನನ್ನು ಬಂಧಿಸಲಾಗಿತ್ತು. ಈತ ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಜೈಷ್​ ಇ ಮೊಹಮ್ಮದ್​ಗೆ ಸೇರಿದಾತ ಎಂದು ಹೇಳಲಾಗಿದೆ. ಅವನನ್ನು ವಿಚಾರಣೆ ನಡೆಸುವಾಗ ಸತ್ಯ ಬಾಯ್ಬಿಟ್ಟಿದ್ದ. ನಮ್ಮ ಸಂಘಟನೆಯ ಕೆಲವು ಸದಸ್ಯರು ನಾಗ್ಪುರದ ಆರ್​ಎಸ್​ಎಸ್​ ಕಚೇರಿ ಸಮೀಪ ಭೂಸಮೀಕ್ಷೆ ನಡೆಸಿದ್ದಾಗಿ ಹೇಳಿದ್ದಾನೆ. ಉಗ್ರ ಈ ವಿಚಾರ ತಿಳಿಸಿದ ಬೆನ್ನಲ್ಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ನಾಗ್ಪುರ ಪೊಲೀಸ್ ಆಯುಕ್ತ ಅಮಿತೇಶ್​ ಕುಮಾರ್, ಇತರ ಪೊಲೀಸ್​ ಸಿಬ್ಬಂದಿಯೊಂದಿಗೆ ಆರ್​ಎಸ್​ಎಸ್ ಪ್ರಧಾನ ಕಚೇರಿಗೆ ಭೇಟಿ ಕೊಟ್ಟು ಅಲ್ಲಿನ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಸದ್ಯ ಆರ್​ಎಸ್​ಎಸ್​ ಪ್ರಧಾನ ಕಚೇರಿ, ರೇಷಿಮ್​ಬಾಗ್​ನಲ್ಲಿರುವ ಹೆಡ್ಗೆವಾರ್​ ಭವನ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಭದ್ರತೆ ಪ್ರಮಾಣ ಹೆಚ್ಚಿಸಲಾಗಿದೆ. ಈ ಮಾರ್ಗವಾಗಿ ಚಲಿಸುವ ಪ್ರತಿಯೊಂದು ವಾಹನ, ವ್ಯಕ್ತಿಗಳನ್ನೂ ಸಂಪೂರ್ಣವಾಗಿ ತಪಾಸಣೆಗೆ ಒಳಪಡಿಸಲಾಗುವುದು ಎಂದು ಅಮಿತೇಶ್​ಕುಮಾರ್​ ತಿಳಿಸಿದ್ದಾರೆ. ಆದರೆ ಬೇರೆ ಯಾವುದೇ ಮಾಹಿತಿ ನೀಡಲು ನಿರಾಕರಿಸಿರುವ ಅವರು, ಇದೊಂದು ತುಂಬ ಸೂಕ್ಷ್ಮ ವಿಚಾರ ಎಂದಿದ್ದಾರೆ. ಇನ್ನು ಹೆಸರು ಹೇಳಲು ಇಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದು, ಡಿಸೆಂಬರ್​​ನಲ್ಲಿ ಕೆಲವು ದಿನಗಳ ಕಾಲ ನಾಗ್ಪುರದಲ್ಲಿ ಒಂದಷ್ಟು ಭಯೋತ್ಪಾದಕರು ತಂಗಿದ್ದರು ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಅದಕ್ಕೆ ಸಂಬಂಧಪಟ್ಟಂತೆ ಪ್ರಕರಣ ಕೂಡ ದಾಖಲಾಗಿದೆ. ತನಿಖೆಗಾಗಿ ನಾಗ್ಪುರ ಕ್ರೈಂ ಬ್ರ್ಯಾಂಚ್​​ನಿಂದ ತಂಡವನ್ನೂ ರಚಿಸಲಾಗಿದೆ. ಇದೀಗ ಮಾಹಿತಿ ನೀಡಿರುವ ಬಂಧಿತ ಉಗ್ರನೂ ಕೂಡ ಇಲ್ಲಿನ ಆರ್​ಎಸ್​ಎಸ್​ ಪ್ರಧಾನ ಕಚೇರಿ ಸರ್ವೇ ನಡೆಸಿದ್ದ. ಆದರೆ 2021ರ ಜುಲೈಗೂ ಮೊದಲು ನಡೆಸಿದ ಭೂ ಸಮೀಕ್ಷೆಯಲ್ಲಿ ಆತ ಪಾಲ್ಗೊಂಡಿದ್ದ ಎಂದು ಮಾಹಿತಿ ನೀಡಿದ್ದಾರೆ.  ಗಣರಾಜ್ಯೋತ್ಸವ ಸಮೀಪಿಸುತ್ತಿರುವ ಬೆನ್ನಲ್ಲೇ ಭಯೋತ್ಪಾದಕರ ದಾಳಿಯ ಆತಂಕವೂ ಹೆಚ್ಚುತ್ತಿದೆ.

2006ರಲ್ಲಿ ನಾಗ್ಪುರದ ಆರ್​ಎಸ್​ಎಸ್​ ಪ್ರಧಾನ ಕಚೇರಿಯ ಮೇಲೆ ದಾಳಿಗೆ ಸಂಚು ಹಾಕಿ, ಎಕೆ-47  ಮತ್ತು ಹ್ಯಾಂಡ್ ಗ್ರೆನೇಡ್​ಗಳೊಂದಿಗೆ ಸಜ್ಜಾಗಿದ್ದ ಮೂವರು, ಜೈಷ್ ಇ ಮೊಹಮ್ಮದ್​ ಸಂಘಟನೆಯ ಉಗ್ರರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿದ್ದವು.  ಇದೀಗ ಮತ್ತೊಮ್ಮೆ ದಾಳಿಯ ಆತಂಕ ಶುರುವಾಗಿದ್ದು, ಅಲ್ಲಿ ಆರ್​ಎಸ್​ಎಸ್​ ಪ್ರಧಾನ ಕಚೇರಿ ಮೇಲ್ಭಾಗದಲ್ಲಿ ಡ್ರೋನ್​ ಹಾರಾಡುವುದನ್ನು, ಅಲ್ಲಿನ ಫೋಟೋ ತೆಗೆಯುವುದನ್ನೂ ನಿರ್ಬಂಧಿಸಲಾಗಿದೆ.

ಇದನ್ನೂ ಓದಿ: Video: ಛತ್ತೀಸ್​ಗಢ್​​ನ ಹಳ್ಳಿಯೊಂದರಲ್ಲಿ ವಿವಾದಿತ ಪ್ರತಿಜ್ಞಾ ವಿಧಿ ಸ್ವೀಕಾರ; ಕಾರ್ಯಕ್ರಮ ಆಯೋಜಕರನ್ನು ಹುಡುಕುತ್ತಿರುವ ಪೊಲೀಸರು !

Published On - 9:05 am, Sat, 8 January 22