ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧದ ಕಿಚ್ಚಿಗೆ ವಾಹನಗಳು ಧಗಧಗಿಸುತ್ತಿವೆ. ಬಸ್, ಕಾರುಗಳ ಗಾಜು ಪುಡಿ ಪುಡಿಯಾಗಿವೆ. ಪ್ರತಿಭಟನಾಕಾರರ ಆಕ್ರೋಶಕ್ಕೆ ಸಾರ್ವಜನಿಕ ಆಸ್ತಿ ಬೆಂಕಿಯಲ್ಲಿ ಬೆಂದು ಹೋಗಿದೆ.
‘ಸಾರ್ವಜನಿಕ ಆಸ್ತಿ ನಾಶಪಡಿಸಿದ್ರೆ ಕಂಡಲ್ಲಿ ಗುಂಡಿಕ್ಕಿ’
ಯೆಸ್, ದಿಲ್ಲಿ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಪೌರತ್ವದ ಕಿಚ್ಚಿಗೆ ಸಾಕಷ್ಟು ಸಾರ್ವಜನಿಕ ಆಸ್ತಿಪಾಸ್ತಿ ನಾಶವಾಗಿದೆ. ಪ್ರತಿಭಟನೆಯ ಹೆಸರಲ್ಲಿ ವಾಹನಗಳಿಗೆ ಬೆಂಕಿ ಹಚ್ಚಿ, ಕಲ್ಲು ತೂರಿ ಪ್ರತಿಭಟನಾಕಾರರು ಆಕ್ರೋಶ ಹೊರಹಾಕುತ್ತಿದ್ದಾರೆ. ಇದರ ಬೆನ್ನಲ್ಲೇ ವಿವಾದಾತ್ಮಕ ಹೇಳಿಕೆ ನೀಡಿರೋ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ, ಉರಿಯೋ ಬೆಂಕಿಗೆ ಪೆಟ್ರೋಲ್ ಸುರಿದಿದ್ದಾರೆ. ರೈಲ್ವೆ ಇಲಾಖೆ ಸೇರಿದಂತೆ ಇತರೆ ಸಾರ್ವಜನಿಕ ಆಸ್ತಿಯನ್ನ ನಾಶಪಡಿಸಿದ್ರೆ ಕಂಡಲ್ಲಿ ಗುಂಡಿಕ್ಕಿ ಅಂತ ಅಧಿಕಾರಿಗಳಿಗೆ ಹೇಳಿದ್ದಾರೆ.
‘ಕರ್ನಾಟಕ ಕೂಡ ಹೊತ್ತಿ ಉರಿಯೋದ್ರಲ್ಲಿ ಸಂಶಯವಿಲ್ಲ’
ಇನ್ನು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಲ್ಲಿ ನಡೆದ ಪ್ರತಿಭಟನೆ ವೇಳೆ ಮಾಜಿ ಸಚಿವ ಯುಟಿ ಖಾದರ್ ಸಿಎಂ ಯಡಿಯೂರಪ್ಪಗೆ ಎಚ್ಚರಿಕೆ ನೀಡಿದ್ದಾರೆ. ರಾಜ್ಯದಲ್ಲೂ ಕಾಯ್ದೆ ಅನುಷ್ಠಾನ ಮಾಡುತ್ತಾರೆಂಬ ಮಾಹಿತಿ ಸಿಕ್ಕಿದೆ. ಹಾಗೇನಾದ್ರೂ ಆದ್ರೆ ಕರ್ನಾಟಕ ಕೂಡ ಹೊತ್ತಿ ಉರಿಯುವುದರಲ್ಲಿ ಡೌಟೇ ಇಲ್ಲ ಎಂದಿದ್ದಾರೆ.
ಇನ್ನು ಉಡುಪಿಯಲ್ಲಿ ಮಾತನಾಡಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ದೇಶವನ್ನ ಈಗಾಗಲೇ ಆರ್ಥಿಕವಾಗಿ ನಿರ್ನಾಮ ಮಾಡಲಾಗಿದೆ. ಈಗ ಧರ್ಮದ ವಿಚಾರದಲ್ಲಿ ದೇಶವನ್ನ ಇಬ್ಭಾಗ ಮಾಡುತ್ತಿರೋದು ಸರಿಯಲ್ಲ ಅಂತ ಕಿಡಿಕಾರಿದ್ದಾರೆ. ಒಟ್ನಲ್ಲಿ, ಪೌರತ್ವದ ಕಿಚ್ಚು ರಾಜ್ಯಕ್ಕೂ ನಿಧಾನವಾಗಿ ವ್ಯಾಪಿಸುತ್ತಿದ್ದು, ರಾಜಕೀಯ ನಾಯಕರ ಹೇಳಿಕೆಗಳು ಅದಕ್ಕೆ ಪೆಟ್ರೋಲ್ ಸುರಿದಂತೆ ಕಾಣುತ್ತಿವೆ.