ದೇವನಹಳ್ಳಿ: ಕಾಂಗ್ರೆಸ್ ಪಕ್ಷ ಸದಾ ಜನರ ಜೊತೆಯಲ್ಲೇ ಇರಲಿದೆ. ನಾವು ಇಲ್ಲಿಗೆ ಬರುವಾಗಲೂ ಗಾಡಿಗಳಲ್ಲಿ ಮೆರವಣಿಗೆ ಮಾಡಿಕೊಂಡು ಬರಲಿಲ್ಲ. ಬದಲಾಗಿ ನಿಮ್ಮ ಜೊತೆ ನಡೆದುಕೊಂಡು ಬಂದಿದ್ದೇವೆ. ಬರುವಾಗ ಒಂದಷ್ಟು ಜನ ಅರ್ಜಿಗಳನ್ನು ಕೊಟ್ಟಿದ್ದಾರೆ. ಕೆಲ ರೈತರು ಮುದಿ ಎತ್ತುಗಳನ್ನ ತೆಗೆದುಕೊಂಡು ಬಂದಿದ್ದರು. ಏಕೆ ಎಂದು ಕೇಳಿದಾಗ ಮಾರಾಟ ಮಾಡಲು ಹೋದರೆ ಕೊಂಡುಕೊಳ್ಳುವವರೇ ಇಲ್ಲ. ಏನು ಮಾಡೋದು ಇವುಗಳನ್ನ ಇಟ್ಟುಕೊಂಡು ಎಂದು ಬೇಸರದಿಂದ ಹೇಳಿದರು. ಅವರ ಪರಿಸ್ಥಿತಿ ನೋಡಿದರೆ ಬೇಜಾರಾಗುತ್ತೆ. ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ರೈತರು ಸಹ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ಸಲುವಾಗಿ ದೇವನಹಳ್ಳಿಯಿಂದ ಆರಂಭಿಸಿರುವ ಜನಧ್ವನಿ ಯಾತ್ರೆಯಲ್ಲಿ ಕಾಂಗ್ರೆಸ್ ಸರ್ಕಾರ ತನ್ನ ಅವಧಿಯಲ್ಲಿ ಮಾಡಿರುವ ಸಾಧನೆಗಳ ಪಟ್ಟಿಯನ್ನು ಜನರ ಮುಂದಿಟ್ಟ ಡಿ.ಕೆ.ಶಿವಕುಮಾರ್ ಜನರ ಬೆಂಬಲ ಕೋರಿದರು. ಮುಂದಿನ ದಿನಗಳಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ಕ್ಷೇತ್ರಗಳನ್ನು ಕಾಂಗ್ರೆಸ್ ಪಕ್ಷ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಂತೆಯೇ, ನಾನು ಮಂತ್ರಿಯಾಗಿದ್ದಾಗ ಏರ್ಪೋರ್ಟ್ಗೆ ಭೂಮಿ ಕೊಡಿಸಿದ್ದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇಲ್ಲಿಗೆ ತಂದಿದ್ದು ನಾವು. ಎಕರೆಗೆ 6 ಲಕ್ಷ ರೂ.ನಂತೆ 2 ಸಾವಿರ ಎಕರೆ ಭೂಮಿ ಕೊಡಿಸಿದ್ದೆ. ಆದರೆ, ಇಂದು ಒಂದು ಎಕರೆಗೆ 6 ಕೋಟಿ ಬೆಲೆ ಇದೆ. ಬಿಜೆಪಿಯವರು ಯಾವುದಾದ್ರೂ ಇಂತಹ ಕೆಲಸ ಮಾಡಿದ್ದಾರಾ? ಎಂದು ಪ್ರಶ್ನಿಸಿದ ಡಿ.ಕೆ.ಶಿವಕುಮಾರ್, ಶಾಸಕ ಶರತ್ ಬಚ್ಚೇಗೌಡ ಕಾಂಗ್ರೆಸ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಶರತ್ ಬಚ್ಚೇಗೌಡ ಬೆಂಬಲಿಗರು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ ಮುಂದಿನ ದಿನಗಳಲ್ಲಿ ನಮ್ಮ ಪಕ್ಷ ಇನ್ನೂ ಬಲಗೊಳ್ಳಲಿದೆ ಎಂದು ಹೇಳಿದರು.
ದೇವನಹಳ್ಳಿಗೆ ಬಂದಾಗ ನೀವು ನೀಡಿದ ಉತ್ಸಾಹ, ಪ್ರೋತ್ಸಾಹಕ್ಕೆ ಚಿರಋಣಿ. ಈ ಕಾರ್ಯಕ್ರಮದ ಮೂಲಕ ಇಂದು ಇತಿಹಾಸ ಸೃಷ್ಟಿ ಮಾಡಿದ್ದೀರಿ ಎಂದು ಜನರಿಗೆ ಧನ್ಯವಾದ ಅರ್ಪಿಸಿದರು. ಸಮಾವೇಶದ ನಂತರ ಡಾ.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಉಳಿದ ಕಾಂಗ್ರೆಸ್ ನಾಯಕರ ಜೊತೆ ಚಿಕ್ಕಬಳ್ಳಾಪುರಕ್ಕೆ ತೆರಳಿದರು.
ಇದನ್ನೂ ಓದಿ:
ದೇಶಪ್ರೇಮಿ ಟಿಪ್ಪುವಿನ ಜನ್ಮಸ್ಥಳ ದೇವನಹಳ್ಳಿಯಿಂದ ಕಾಂಗ್ರೆಸ್ ಜನಧ್ವನಿ ಯಾತ್ರೆ ಆರಂಭ: ಸಿದ್ದರಾಮಯ್ಯ