ಬೆಂಗಳೂರು: ಪರಿಷತ್ ಸಭಾಪತಿ ಸ್ಥಾನಕ್ಕೆ ಪ್ರತಾಪಚಂದ್ರ ಶೆಟ್ಟಿ ಇಂದು ರಾಜೀನಾಮೆ ಸಲ್ಲಿಸಿದ್ದಾರೆ. ಉಪಸಭಾಪತಿಗೆ ಅವರು ರಾಜೀನಾಮೆ ಪತ್ರ ಸಲ್ಲಿಕೆ ಮಾಡಿದ್ದಾರೆ. 2018ರ ಡಿ.12ರಿಂದ ಪ್ರತಾಪಚಂದ್ರ ಶೆಟ್ಟಿ ಸಭಾಪತಿಯಾಗಿದ್ದರು. 113 ವರ್ಷಗಳ ರಾಜ್ಯದ ಮೇಲ್ಮನೆಗೆ ಭವ್ಯ ಇತಿಹಾಸವಿದೆ. ಈ ಸದನದ ಘನತೆ ಎತ್ತಿಹಿಡಿಯುವುದು ನಮ್ಮೆಲ್ಲರ ಕರ್ತವ್ಯ. ಕಳೆದ 37 ವರ್ಷಗಳಿಂದ ನಾನು ಸಾರ್ವಜನಿಕ ಬದುಕಿನಲ್ಲಿದ್ದೇನೆ. ಆದರೆ ಈಗ ಮೌಲ್ಯಗಳು ಕಡಿಮೆಯಾಗುತ್ತಿದೆ. ವಿಧಾನಪರಿಷತ್ ಸಭಾಪತಿ ಪೀಠ ಸಿಕ್ಕಿದ್ದು ನನ್ನ ಸೌಭಾಗ್ಯ. 2 ವರ್ಷಗಳಿಂದ ಸಭಾಪತಿಯಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಜವಾಬ್ದಾರಿಯಿಂದ ನಡೆದುಕೊಂಡಿದ್ದೇನೆ ಎಂಬ ತೃಪ್ತಿ ಇದೆ ಎಂದು ಪರಿಷತ್ ಸಭಾಪತಿ ಪ್ರತಾಪಚಂದ್ರಶೆಟ್ಟಿ ವಿದಾಯ ಭಾಷಣ ಮಾಡಿದ್ದಾರೆ.
2018ರ ಡಿ.12ರಿಂದ ಪ್ರತಾಪಚಂದ್ರ ಶೆಟ್ಟಿ ಸಭಾಪತಿಯಾಗಿದ್ದರು. ಇವರು ವಿಧಾನಪರಿಷತ್ನ ಕಾಂಗ್ರೆಸ್ ಸದಸ್ಯರಾಗಿದ್ದಾರೆ. ಪ್ರತಾಪಚಂದ್ರಶೆಟ್ಟಿ ವಿರುದ್ಧ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡಿಸಿತ್ತು. ಬಿಜೆಪಿಯ ಅವಿಶ್ವಾಸ ನಿರ್ಣಯವನ್ನು ಜೆಡಿಎಸ್ ಬೆಂಬಲಿಸಿತ್ತು. ಹೀಗಾಗಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ರಾಜೀನಾಮೆ ನೀಡಿದ್ದಾರೆ. ನಿನ್ನೆ ನಡೆದ ಸಿಎಲ್ಪಿ ಸಭೆಯಲ್ಲೇ ಅವರು ರಾಜೀನಾಮೆ ನಿರ್ಧಾರಕ್ಕೆ ಬಂದಿದ್ದರು. ಪಕ್ಷಕ್ಕೆ ಮುಜುಗರವಾಗುವುದನ್ನು ತಪ್ಪಿಸಲು ರಾಜೀನಾಮೆ ನೀಡುತ್ತಿರುವುದಾಗಿ ಅವರು ಸಿಎಲ್ಪಿ ಸಭೆಯಲ್ಲಿ ಹೇಳಿದ್ದರು ಎನ್ನಲಾಗಿದೆ.
ರಾಜೀನಾಮೆ ನೀಡಿದ ನಂತರ ವಿಧಾನಸೌಧದ ತಮ್ಮ ಕೊಠಡಿಗೆ ಪ್ರತಾಪಚಂದ್ರ ಶೆಟ್ಟಿ ತೆರಳಿದ್ದಾರೆ. ಸಭಾಪತಿ ಭೇಟಿಗೆ ಮೂರೂ ಪಕ್ಷಗಳ ನಾಯಕರು ಆಗಮಿಸಿದ್ದಾರೆ. ಸಚಿವರಾದ ಬಸವರಾಜ ಬೊಮ್ಮಾಯಿ, ಶ್ರೀನಿವಾಸ ಪೂಜಾರಿ, ಲಕ್ಷ್ಮಣ ಸವದಿ, ಎಸ್.ಆರ್.ಪಾಟೀಲ್, ಹೆಚ್.ವಿಶ್ವನಾಥ್, ಬಸವರಾಜ ಹೊರಟ್ಟಿ ಸೇರಿ ಹಲವು ನಾಯರು ಪ್ರತಾಪಚಂದ್ರ ಶೆಟ್ಟಿ ಭೇಟಿಯಾಗಿದ್ದಾರೆ.
Published On - 8:30 pm, Thu, 4 February 21