ತಮ್ಮ ವಿರುದ್ಧ ಮಾಧ್ಯಮಗಳು ವರದಿ ಮಾಡಬಾರದೆಂದು ಕೋರ್ಟ್ ಮೆಟ್ಟಿಲೇರಿದ ಕರ್ನಾಟಕದ 6 ಸಚಿವರು: ಅಚ್ಚರಿ ಹುಟ್ಟಿಸಿದ ನಡೆ
‘ತಮ್ಮ ವಿರುದ್ಧ ಮಾಧ್ಯಮಗಳು ವರದಿ ಮಾಡಬಾರದು’ ಎಂದು ವಿನಂತಿಸಿ ನಗರದ ಬಹುತೇಕ ಪ್ರಮುಖ ಮಾಧ್ಯಮಗಳನ್ನು (ಟಿವಿ ಮತ್ತು ದಿನಪತ್ರಿಕೆಗಳು ಸೇರಿ) ಪ್ರತಿವಾದಿಗಳನ್ನಾಗಿಸಿ, ರಾಜ್ಯದ ಆರು ಸಚಿವರು ಸಿಟಿ ಸಿವಿಲ್ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಬೆಂಗಳೂರು: ‘ತಮ್ಮ ವಿರುದ್ಧ ಮಾಧ್ಯಮಗಳು ವರದಿ ಮಾಡಬಾರದು’ ಎಂದು ವಿನಂತಿಸಿ ನಗರದ ಬಹುತೇಕ ಪ್ರಮುಖ ಮಾಧ್ಯಮಗಳನ್ನು (ಟಿವಿ ಮತ್ತು ದಿನಪತ್ರಿಕೆಗಳು ಸೇರಿ) ಪ್ರತಿವಾದಿಗಳನ್ನಾಗಿಸಿ, ರಾಜ್ಯದ ಆರು ಸಚಿವರು ಸಿಟಿ ಸಿವಿಲ್ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಕಾರ್ಮಿಕ ಇಲಾಖೆ ಸಚಿವ ಶಿವರಾಮ್ ಹೆಬ್ಬಾರ್, ಕೃಷಿ ಸಚಿವ ಬಿ.ಸಿ.ಪಾಟೀಲ್, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಕೆ.ಸುಧಾಕರ್, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ತೋಟಗಾರಿಕೆ ಹಾಗೂ ಕ್ರೀಡಾ ಇಲಾಖೆ ಸಚಿವ ಕೆ.ಸಿ.ನಾರಾಯಣಗೌಡ ಮತ್ತು ನಗರಾಭಿವೃದ್ಧಿ ಇಲಾಖೆ ಸಚಿವ ಭೈರತಿ ಬಸವರಾಜ್ ಸಿಟಿ ಸಿವಿಲ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಿರುವ ಆರು ಸಚಿವರ ನಡೆ ಅಚ್ಚರಿ ಮೂಡಿಸಿದೆ.
ಈ ಸಚಿವರು ಏಕಾಏಕಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ರಮೇಶ ಜಾರಕಿಹೊಳಿ ಪ್ರಕರಣ ಬಹಿರಂಗಗೊಂಡ ನಂತರ ಇತರ ಕೆಲವರ ಸಿಡಿಗಳೂ ಹೊರಬರಬಹುದು ಎಂಬ ಮಾತುಗಳು ಅಲ್ಲಲ್ಲಿ ಕೇಳಿಬಂದಿದ್ದವು. ಇದೀಗ ಈ ಆರೂ ಮಂದಿ ಅರ್ಜಿ ಸಲ್ಲಿಸಿರುವ ಬೆಳವಣಿಗೆಯನ್ನು ಹಲವು ರೀತಿಗಳಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.
ಜಲಸಂಪನ್ಮೂಲ ಖಾತೆ ಸಚಿವ, ಬೆಳಗಾವಿಯ ಪ್ರಭಾವಿ ನಾಯಕ ರಮೇಶ್ ಜಾರಕಿಹೊಳಿ ಭಾಗಿಯಾಗಿದ್ದಾರೆ ಎನ್ನಲಾದ ಆಕ್ಷೇಪಾರ್ಹ ದೃಶ್ಯಗಳುಳ್ಳ ಸಿಡಿ ಬಹಿರಂಗಗೊಂಡು ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. ಇದು ಎಡಿಟ್ ಆಗಿರುವ ಸಿಡಿ ಎಂದಿರುವ ರಮೇಶ್ ಜಾರಕಿಹೊಳಿ, ಸಿಡಿಯಲ್ಲಿರುವ ವ್ಯಕ್ತಿ ನಾನಲ್ಲ ಎಂದಿದ್ದರು. ಆದರೆ ಕೊನೆಗೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅತ್ತ ಗೋಕಾಕ ಪಟ್ಟಣದಲ್ಲಿ ತಮ್ಮ ನಾಯಕನ ಪರವಾಗಿ ಬೆಂಬಲಿಗರು ಬೀದಿಗಳಿದು ಪ್ರತಿಭಟಿಸುತ್ತಿದ್ದರು.
ಈ ಸಂದರ್ಭ ಮಾಧ್ಯಮಗಳ ಎದುರು ಮಾತನಾಡಿದ್ದ ಕೆಲವರು, ಇನ್ನಷ್ಟು ನಾಯಕರ ಇಂಥ ಸಿಡಿಗಳು ನಮ್ಮ ಬಳಿಯಿವೆ ಎಂದಿದ್ದರು.
ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆ ಹಿಂದಿದೆ ಹಲವು ಲೆಕ್ಕಾಚಾರ: ‘ಸಾಹುಕಾರ’ನ ಮುಂದಿನ ನಡೆ ನಿಗೂಢ
ಇದನ್ನೂ ಓದಿ: ಮಂತ್ರಿಗಿರಿ ಇಲ್ಲದ ಜಾರಕಿಹೊಳಿ ಕುಟುಂಬದಿಂದ ಬಿಜೆಪಿ ಸರಕಾರ ಕೆಡವಲು ಸಾಧ್ಯವೇ?
Published On - 9:30 pm, Fri, 5 March 21