Bengaluru Weather Today: ಬೆಂಗಳೂರಿನಲ್ಲಿ ಮೂರ್ನಾಲ್ಕು ದಿನಗಳಿಂದ ಮಳೆ ಕೊಂಚ ಕಡಿಮೆಯಾಗಿತ್ತು. ಆದರೆ, ನಾಳೆಯಿಂದ (ಡಿ. 5) ಮತ್ತೆ ಮಳೆ ಹೆಚ್ಚಾಗುವ ನಿರೀಕ್ಷೆಯಿದೆ. ಡಿಸೆಂಬರ್ 5ರಿಂದ ಕರ್ನಾಟಕದ (Karnataka Rains) ಬಹುತೇಕ ಜಿಲ್ಲೆಗಳಲ್ಲಿ ಮತ್ತೊಂದು ಸುತ್ತಿನ ಮಳೆ ಆರಂಭವಾಗಲಿದೆ ಎಂಬ ಮುನ್ಸೂಚನೆಯಿದೆ. ಇಂದು ರಾಜ್ಯದಲ್ಲಿ ಒಣಹವೆ ಮುಂದುವರಿಯಲಿದೆ. ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಡಿ. 5ರಿಂದ ಬೆಂಗಳೂರು ಸೇರಿದಂತೆ ಮಲೆನಾಡು, ಕರಾವಳಿ, ಉತ್ತರ ಕರ್ನಾಟಕದ ಕೆಲವೆಡೆ ಮಳೆಯಾಗುವ ಮುನ್ಸೂಚನೆ ಇದೆ. ಈ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಇಂದು ಅಂಡಮಾನ್ ದ್ವೀಪದ ದಕ್ಷಿಣ ಸಮುದ್ರ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ನಿರ್ಮಾಣವಾಗಲಿದೆ. ಡಿಸೆಂಬರ್ 5ರಂದು ಅದೇ ಪ್ರದೇಶದ ಸಮುದ್ರಮಟ್ಟದಲ್ಲಿ ವಾಯುಭಾರ ಕುಸಿತದ ಪ್ರದೇಶ ನಿರ್ಮಾಣವಾಗಲಿದೆ. ಮೈಸೂರಿನಲ್ಲಿ ಡಿ. 14ರವರೆಗೆ ಮೋಡ ಕವಿದ ವಾತಾವರಣವಿರಲಿದ್ದು, ಮಳೆ ಹೆಚ್ಚಾಗಲಿದೆ. ಡಿಸೆಂಬರ್ 8ರ ಸುಮಾರಿಗೆ ಆಂಧ್ರ ಪ್ರದೇಶ ಹಾಗೂ ತಮಿಳುನಾಡಿನ ಕರಾವಳಿಗೆ ಮಳೆ ಅಪ್ಪಳಿಸಲಿದೆ ಎಂದು ಹವಾಮಾನ ತಜ್ಞ ಹಾಗೂ ವಿಜ್ಞಾನಿ ಡಾ. ಪ್ರಸಾದ್ ತಿಳಿಸಿದ್ದಾರೆ.
ಇದನ್ನೂ ಓದಿ: Karnataka Weather Today: ಕರ್ನಾಟಕದ ಕರಾವಳಿ, ಮಲೆನಾಡಿನಲ್ಲಿ ಇನ್ನೆರಡು ದಿನ ಮಳೆಯ ನಿರೀಕ್ಷೆ
ಕರ್ನಾಟಕದ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ಚಾಮರಾನಗರ, ಮಂಡ್ಯ, ಮೈಸೂರು ಜಿಲ್ಲೆಗಳು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗಲಿದೆ. ಅದರಂತೆ ಈ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಲಿದೆ. ಇಂದು ಕರ್ನಾಟಕ, ತಮಿಳುನಾಡು ಹಾಗೂ ಕೇರಳದಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ. ಡಿಸೆಂಬರ್ 8ರ ವೇಳೆಗೆ ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಇಂದು ಯಾವ ರಾಜ್ಯಗಳಲ್ಲಿ ಮಳೆ?:
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಇಂದು ವ್ಯಾಪಕವಾದ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ಮತ್ತು ಲಕ್ಷದ್ವೀಪದಲ್ಲಿ ಗುಡುಗು ಸಹಿತ ಚದುರಿದ ಮಳೆಯಾಗುವ ಸಾಧ್ಯತೆಯಿದೆ. ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕೇರಳ – ಮಾಹೆಯಲ್ಲಿ ಮಿಂಚು ಸಹಿತ ಮಳೆಯಾಗಲಿದೆ. ಇಂದು ಮುಂಜಾನೆ ಉತ್ತರ ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಹಿಮಾಚಲ ಪ್ರದೇಶದ ಮೇಲೆ ದಟ್ಟವಾದ ಮಂಜು ಬೀಳುವ ಸಾಧ್ಯತೆಯಿದೆ. ಇನ್ನುಳಿದ ಪ್ರದೇಶಗಳಲ್ಲಿ ಒಣ ಹವಾಮಾನ ಇರಲಿದೆ ಎಂದು ನಿರೀಕ್ಷಿಸಲಾಗಿದೆ.