ಕಲಬುರಗಿ, ಮೇ.26: ರಾಜ್ಯದೆಲ್ಲೆಡೆ ಕಳೆದ ಕೆಲ ದಿನಗಳಿಂದ ಭಾರೀ ಮಳೆ(Rain)ಯಾಗುತ್ತಿದ್ದು, ತಂಪಾದ ವಾತಾವರಣ ನಿರ್ಮಾಣವಾಗಿದೆ. ಅದರಲ್ಲೂ ಇಂದು(ಮೇ.26) ಕರ್ನಾಟಕದ ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಯೆಲ್ಲೋ ಮತ್ತು ರೆಡ್ ಅಲರ್ಟ್ ಘೋಷಿಸಲಾಗಿದೆ. ಅದರಂತೆ ಇಂದು ಕೆಲವೆಡೆ ಮಳೆಯಾಗಿದ್ದು, ಸಿಡಿಲಿಗೆ ಇಬ್ಬರು ಬಲಿಯಾಗಿದ್ದಾರೆ. ಈ ನಡುವೆ ಹವಾಮಾನ ಇಲಾಖೆ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಮೇ ತಿಂಗಳ ಕೊನೆ ವಾರದಲ್ಲಿ ಮುಂಗಾರು ಮಳೆ ರಾಜ್ಯಕ್ಕೆ ಎಂಟ್ರಿ ಕೊಡಲಿದೆ ಎಂದು ಭಾರತ ಹವಾಮಾನ ಇಲಾಖೆ(IMD) ಸೂಚನೆ ನೀಡಿದೆ.
ಕಲಬುರಗಿ: ಜಿಲ್ಲೆಯ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಮದ ಬಳಿ ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ. ಏಕನಾಥ್ ವಾಘಮೂಡೆ(55) ಹಾಗೂ ಸತೀಶ್ ಶಳಕೆ(40) ಮೃತರು. ಇಬ್ಬರೂ ವಾಡಿ ಪಟ್ಟಣದ ರೈಲ್ವೆ ಕಾಲೋನಿಯ ನಿವಾಸಿಗಳಾಗಿದ್ದು, ಮಳೆ ಬಂದ ಹಿನ್ನೆಲೆ ಮರದಡಿ ನಿಂತಿದ್ದಾಗ ಸಿಡಿಲು ಬಡಿದು ಕೊನೆಯುಸಿರೆಳೆದಿದ್ದಾರೆ. ಈ ಕುರಿತು ವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ:ಮಳೆಯಿಂದ ರಂಗಕರ್ಮಿ ಡಾ.ಗುಬ್ಬಿ ವೀರಣ್ಣ ದಂಪತಿ ಸಮಾಧಿ ಮುಳುಗಡೆ
ಯಾದಗಿರಿ: ಬಿರುಗಾಳಿ ಸಹಿತ ಬಾರಿ ಮಳೆ ಹಿನ್ನಲೆ ಯಾದಗಿರಿ ನಗರದ ಹೊಸಹಳ್ಳಿ ಕ್ರಾಸ್ ಬಳಿಯ ಬಡಾವಣೆ ಕರೆಯಂತಾಗಿದೆ. ಮನೆಗಳ ಸುತ್ತ ಮಳೆ ನೀರು ಆವರಿಸಿಕೊಂಡಿದ್ದು, ಮಳೆ ನಿಂತ ಮೇಲೂ ಮನೆಯಿಂದ ಹೊರ ಬರಲಾಗದೆ ನಿವಾಸಿಗಳ ಪರದಾಟ ನಡೆಸಿದ್ದಾರೆ. ಸತತ ಮೂರು ಗಂಟೆಗಳ ಕಾಲ ಸುರಿದಿರುವ ಮಳೆಯಿಂದ ರಸ್ತೆ ಮೇಲೂ ಸಹ ನೀರು ಆವರಿಸಿಕೊಂಡಿದೆ. ಇದರಿಂದ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ. ಇನ್ನು ವಿದ್ಯುತ್ ಕಂಬಗಳು, ಬೃಹತ್ ಮರಗಳು ಸಹ ನೆಲಕ್ಕುರಳಿದ್ದರಿಂದ ವಾಹನ ಸಂಚಾರಕ್ಕೂ ಅಡಚಣೆ ಆಗಿದೆ.
ಕೊಪ್ಪಳ: ಬಿಸಿಲನಾಡು ಕೊಪ್ಪಳವೂ ಇದೀಗ ಪುಲ್ ಕೂಲ್ ಕೂಲ್ ಆಗಿದೆ. ಮುಂಜಾನೆಯಿಂದ ಕೊಪ್ಪಳ ನಗರ ಸೇರಿ ಹಲವಡೆ ಭರ್ಜರಿ ಮಳೆಯಾಗಿದ್ದು, ಮುಂಜಾನೆಯೇ ಗುಡುಗು ಸಹಿತ ವರುಣನ ಆಗಮನವಾಗಿದೆ. ಮಳೆಯಿಂದ ಕೊಪ್ಪಳ ಜನತೆ ಸಂತಸಗೊಂಡಿದ್ದಾರೆ. ಇತ್ತ ಕರಾವಳಿ ಜಿಲ್ಲೆ ಉಡುಪಿಯಲ್ಲೂ ಗುಡುಗು ಸಹಿತ ಭಾರಿ ಮಳೆ ಆಗಿತ್ತಿದ್ದು, ಸಾಸ್ತಾನ, ಸಾಲಿಗ್ರಾಮ, ಕೋಟದ ಕೋಟೇಶ್ವರದಲ್ಲಿ ಮಳೆಯ ಅಬ್ಬರ ಶುರುವಾಗಿದೆ. ಮುಂದಿನ 2 ದಿನ ಉಡುಪಿ ಜಿಲ್ಲೆಯಲ್ಲಿ ಮಳೆ ಮುನ್ಸೂಚನೆ ನೀಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ