Karnataka Rain: ಕರ್ನಾಟಕದಲ್ಲಿ ಇನ್ನೂ ಎರಡು ದಿನ ಮಳೆ; ಹವಾಮಾನ ಇಲಾಖೆ
ಲಬುರ್ಗಿ, ವಿಜಯಪುರ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಹಾಸನ ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ನೀಡಿದ್ದು, ಮುಂದಿನ 48 ಗಂಟೆಗಳು ರಾಜ್ಯದ ಬಹುತೇಕ ಕಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು: ಕರಾವಳಿ ಮತ್ತು ಮಲೆನಾಡಿನ ಹಲವೆಡೆ ಇನ್ನೂ ನಾಲ್ಕು ದಿನ ಮಳೆ (Rain) ಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಿಗೆ ಇಂದು (ಜುಲೈ 14) ಆರೆಂಜ್ ಅಲರ್ಟ್ ಘೋಷಣೆ ಮಾಡಿದ್ದು, ಇನ್ನು ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್, ಹಾಸನ ಸೇರಿ ಪಶ್ಚಿಮ ಘಟ್ಟ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಿಗೆ 5 ದಿನ ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಕಲಬುರ್ಗಿ, ವಿಜಯಪುರ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಹಾಸನ ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ನೀಡಿದ್ದು, ಮುಂದಿನ 48 ಗಂಟೆಗಳು ರಾಜ್ಯದ ಬಹುತೇಕ ಕಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ: Karnataka Dams Water Level: ಕೆಆರ್ಎಸ್ ಶೇ.94ರಷ್ಟು ಭರ್ತಿ, ರಾಜ್ಯದ ಉಳಿದ ಅಣೆಕಟ್ಟುಗಳ ಸದ್ಯದ ಸ್ಥಿತಿಗತಿ ಹೀಗಿ
ಕೊಡಗು ಜಿಲ್ಲೆಯ ಭಾಗಮಂಡಲ ವ್ಯಾಪ್ತಿಯಲ್ಲಿ ವರ್ಷಧಾರೆ ಹಿನ್ನೆಲೆ, ಭಾಗಮಂಡಲದಲ್ಲಿ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಭಾಗಮಂಡಲ-ನಾಪೋಕ್ಲು ರಸ್ತೆ ಸಂಪರ್ಕಕಡಿತವಾಗಿದ್ದು, ಭಾಗಮಂಡಲ-ತಲಕಾವೇರಿ ರಸ್ತೆಗೆ ಎರಡು ಮರಗಳು ಉರುಳಿವೆ. ಮಡಿಕೇರಿ ತಾಲೂಕಿನ ಭಾಗಮಂಡಲ-ತಲಕಾವೇರಿ ರಸ್ತೆ ಸಂಚಾರವೂ ಸ್ಥಗಿತಗೊಂಡಿದ್ದು, ಜನರ ಪರದಾಡುತ್ತಿದ್ದಾರೆ. ಜಿಲ್ಲೆಯ ಪೊನ್ನಂಪೇಟೆ ಭಾಗದಲ್ಲಿ ಬಿರುಗಾಳಿ ಮಳೆಯಾಗಿದ್ದು, ಶ್ರೀಮಂಗಲ-ನಾಲ್ಕೇರಿ ಗ್ರಾಮದ ಸಂಪರ್ಕ ಸೇತುವೆ ಜಲಾವೃತವಾಗಿದೆ. ಸೋಮವಾರಪೇಟೆ ತಾಲ್ಲೂಕಿನಾದ್ಯಂತವೂ ಭಾರೀ ಮಳೆಯಾಗಿದ್ದು, ತಾಲೂಕಿನ ಹಲವು ಶಾಲಾಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ: Hogenakkal Falls: ಮೈತುಂಬಿ ಹರಿಯುತ್ತಿದೆ ಪ್ರಸಿದ್ಧ ಹೊಗೆನಕಲ್ ಜಲಪಾತ, ಕಣ್ಣಿಗೆ ಹಬ್ಬ
ಕ್ಷಣ ಕ್ಷಣಕ್ಕೂ ಹೆಚ್ಚಾಗ್ತಿದೆ ತುಂಗಭದ್ರಾ ಜಲಾಶಯದ ಹೊರಹರಿವು:
ಇನ್ನೂ ಕೊಪ್ಪಳ ತಾಲೂಕಿನ ತುಂಗಭದ್ರಾ ಜಲಾಶಯದ ಹೊರಹರಿವು ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದ್ದು, ಜಲಾಯಶಯದಿಂದ 128732 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಜಲಾಶಯದ 30 ಕ್ರಸ್ಟ ಗೇಟ್ಗಳ ಮೂಲಕ ನೀರು ಬಿಡುಗಡೆ ಮಾಡಲಾಗಿದೆ. ತುಂಗಭದ್ರಾ ಜಲಾಶಯದಿಂದ ನದಿಗೆ 123577 ಕ್ಯೂಸೆಕ್, ಕಾಲುವೆಗೆ 5155 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಮಲೆನಾಡು ಭಾಗದಲ್ಲಿ ಮಳೆಯಾಗುತ್ತಿರುವ ಕಾರಣ ತುಂಗಭದ್ರಾ ಜಲಾಶಯ ಭರ್ತಿಯಾಗಿದೆ. 105 ಟಿ.ಎಮ್.ಸಿ ನೀರು ಸಂಗ್ರಹ ಸಾಮರ್ಥ್ಯವನ್ನು ತುಂಗಭದ್ರಾ ಜಲಾಶಯ ಹೊಂದಿದೆ. ಸದ್ಯ ಜಲಾಯಶಯದಲ್ಲಿ 99.468 ಟಿ.ಎಮ್.ಸಿ ನೀರು ಸಂಗ್ರಹವಿದೆ. ಜಲಾಯಶಕ್ಕೆ 128907 ಕ್ಯೂಸೆಕ್ ನೀರು ಒಳಹರಿವು ಉಂಟಾಗಿದೆ. ಜುಲೈನಲ್ಲಿ ಮೊದಲ ಬಾರಿಗೆ ತುಂಗಭದ್ರಾ ಜಲಾಶಯ ಭರ್ತಿಯಾಗಿದೆ. ನದಿ ಪಾತ್ರದ ಜನರಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದ್ದು, ಇಗಾಗಲೇ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ನವಬೃಂದಾವನ ಸಂಪರ್ಕ ಕಡಿತವಾಗಿದೆ.
ಕೇರಳದ ವಯನಾಡು, ಕಬಿನಿ ಜಲಾನಯನ ಪ್ರದೇಶದಲ್ಲಿ ಕಡಿಮೆಯಾದ ಮಳೆ
ಮೈಸೂರು: ಕೇರಳದ ವಯನಾಡು, ಕಬಿನಿ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿದ್ದು, ಕಬಿನಿ ಜಲಾಶಯದ ಒಳ ಹರಿವಿನ ಪ್ರಮಾಣ ಕಡಿಮೆಯಾಗಿದೆ. ಜಲಾಶಯದ ಇಂದಿನ ಒಳಹರಿವು 32,615 ಕ್ಯೂಸೆಕ್, ಜಲಾಶಯದ ಹೊರಹರಿವು 34,8755 ಕ್ಯೂಸೆಕ್, 84 ಅಡಿ ಗರಿಷ್ಠ ಸಾಮರ್ಥ್ಯವನ್ನು ಕಬಿನಿ ಜಲಾಶಯ ಹೊಂದಿದೆ. ಜಲಾಶಯದ ಇಂದಿನ ನೀರಿನ ಮಟ್ಟ 81.66 ಅಡಿ. ಒಟ್ಟು 19.52 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವನ್ನು ಕಬಿನಿ ಜಲಾಶಯ ಹೊಂದಿದೆ. ಜಲಾಶಯದಲ್ಲಿ ಇಂದು 18.03 ಟಿಎಂಸಿ ನೀರು ಸಂಗ್ರಹವಾಗಿದೆ. 40 ಎಂ.ಎಂ ಮಳೆ ದಾಖಲಾಗಿದೆ.
ಹಾಸನ ಜಿಲ್ಲೆಯಲ್ಲಿ ಮುಂದುವರಿದ ವರುಣನ ಅಬ್ಬರ
ಹಾಸನ: ಜಿಲ್ಲೆಯಲ್ಲಿ ವರುಣನ ಅಬ್ಬರ ಮುಂದುವರೆದಿದ್ದು, ಹಲವೆಡೆ ಎಡಬಿಡದೆ ಮಳೆ ಸುರಿಯುತ್ತಿದೆ. ಸಕಲೇಶಪುರ, ಆಲೂರು, ಅರಕಲಗೂಡು, ಬೇಲೂರಿನಲ್ಲಿ ಭಾರೀ ಮಳೆಯಾಗಿದೆ. ಇಂದು ಆಲೂರು, ಸಕಲೇಶಪುರ, ಅರಕಲಗೂಡು, ತಾಲ್ಲೂಕುಗಳ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಬೀದರ್ ಜಿಲ್ಲೆಯಲ್ಲಿ ವಾರದಿಂದ ಸುರಿಯುತ್ತಿರುವ ಮಳೆ
ಬೀದರ್: ಜಿಲ್ಲೆಯಲ್ಲಿ ವಾರದಿಂದ ಮಳೆ ಸುರಿಯುತ್ತಿದ್ದು, ಮಳೆಯಿಂದಾಗಿ ಅಂಗನವಾಡಿ ಹಾಗೂ 1 ರಿಂದ 5ನೇ ತರಗತಿವರೆಗೆ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ರಜೆ ಘೋಷಣೆ ಮಾಡಿ ಆದೇಶ ಹೋರಡಿಸಿದ್ದಾರೆ.
Published On - 8:16 am, Thu, 14 July 22