Monsoon 2022: ಕರ್ನಾಟಕದ ಕರಾವಳಿ ಜಿಲ್ಲೆಗಳು ಮತ್ತು ಮಲೆನಾಡಿನಲ್ಲಿ ವರುಣನ ಆರ್ಭಟಕ್ಕೆ ಜೋರಾಗಿದ್ದು, ಹಲವೆಡೆ ಭೂಕುಸಿತ ಉಂಟಾಗಿದೆ. ಪ್ರವಾಹದ (Karnataka Flood) ಭೀತಿಯೂ ಎದುರಾಗಿದೆ. ಇಂದು ಮಳೆಯಿಂದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ (Red Alert) ಘೋಷಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಜಿಲ್ಲೆಯಾದ್ಯಂತ ಮತ್ತೆ ಎಡೆಬಿಡದೆ ಭಾರೀ ಮಳೆ ಸುರಿಯುತ್ತಿರುವುದರಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಂದಿನಿ ನದಿ ಅಬ್ಬರ ಜೋರಾಗಿದ್ದು, ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದೆ. ನಂದಿನಿ ದಡದ ಕಟೀಲು ಸುತ್ತಾ ಮುತ್ತಾ ಪ್ರದೇಶದಲ್ಲಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ.
ಇದನ್ನೂ ಓದಿ: Kerala Rain: ಕೇರಳದಲ್ಲಿ ಐದು ದಿನ ಭಾರೀ ಮಳೆ: ಮುಖ್ಯಮಂತ್ರಿ ಕಚೇರಿಯಿಂದ ಸಿದ್ಧತೆಗೆ ಸೂಚನೆ
ಕರಾವಳಿ, ಮಲೆನಾಡಿನಲ್ಲಿ ಭರ್ಜರಿ ಮಳೆ ಎಫೆಕ್ಟ್ನಿಂದಾಗಿ ಬೆಂಗಳೂರಿನಲ್ಲಿ ತುಂತುರು ಮಳೆ ಜೊತೆ ದಿಢೀರ್ ಚಳಿ ಶುರುವಾಗಿದೆ. ನಗರದಲ್ಲಿ ಮೋಡಕವಿದ ವಾತಾವರಣ ಜೊತೆಗೆ ತುಂತುರು ಮಳೆಯಿಂದ ಉಷ್ಣತೆ ಇಳಿಕೆಯಾಗಿದೆ. ಸಿಟಿ ಜನರಿಗೆ ಮೂರ್ನಾಲ್ಕು ದಿನಗಳಿಂದ ಚಳಿಗಾಲದ ಅನುಭವ ಉಂಟಾಗಿದೆ. ಜೂನ್ ಅಂತ್ಯದಲ್ಲಿ 30ಡಿಗ್ರಿ ಸೆಲ್ಸಿಯಸ್ನಷ್ಟಿದ್ದ ನಗರದ ಗರಿಷ್ಠ ಉಷ್ಣಾಂಶ ಈಗ 20 ಡಿಗ್ರಿ ಸೆಲ್ಸಿಯಸ್ಟ್ ಇದೆ. ನಗರದಲ್ಲಿ ಇನ್ನೆರಡು ದಿನಗಳ ಕಾಲ ಗರಿಷ್ಠ ಮತ್ತು ಕನಿಷ್ಠ ತಾಪಮಾನ 24 ಮತ್ತು 19 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆಯಿಂದ ಮಾಹಿತಿ ನೀಡಿದೆ.
ಉತ್ತರಕನ್ನಡ ಜಿಲ್ಲೆಯ 8 ತಾಲೂಕಿನ ಶಾಲಾ ಕಾಲೇಜಿಗೆ ನಾಳೆ ರಜೆ ಘೋಷಿಸಲಾಗಿದೆ. ಹೆಚ್ಚು ಮಳೆ ಬೀಳುತ್ತಿರುವ ತಾಲೂಕುಗಳ ಶಾಲಾ ಕಾಲೇಜಿಗೆ ರಜೆ ಮುಂದುವರಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಆದೇಶ ಹೊರಡಿಸಿದ್ದಾರೆ. ಕಾರವಾರ, ಕುಮಟಾ, ಹೊನ್ನಾವರ, ಅಂಕೋಲಾ, ಜೋಯಿಡಾ, ಶಿರಸಿ, ಸಿದ್ದಾಪುರ, ಭಟ್ಕಳ ತಾಲೂಕಿನ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದ್ದು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ, ಹಳಿಯಾಳ ತಾಲೂಕು, ಯಲ್ಲಾಪುರ ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ.
ಕಾರವಾರ ಜಿಲ್ಲೆಯ ಜೋಯಿಡಾ ತಾಲೂಕಿನಾದ್ಯಂತ ಮಳೆ ಅಬ್ಬರ ಮುಂದುವರೆದಿದೆ. ಜೋಯಿಡಾ-ರಾಮನಗರ ಸಂಪರ್ಕಿಸುವ ರಸ್ತೆಯಲ್ಲಿ ಗುಡ್ಡ ಕುಸಿತವಾಗಿದೆ. ಜೋಯಿಡಾ ತಾಲೂಕಿನ ಗಣೇಶಗುಡಿ ಸಮೀಪದಲ್ಲಿ ಗುಡ್ಡ ಕುಸಿದು ರಸ್ತೆ ಮೇಲೆ ಬಂಡೆಗಲ್ಲು, ಮರದ ಕೊಂಬೆಗಳು ಬಿದ್ದಿವೆ. ಜೀವ ಕೈಯಲ್ಲಿ ಹಿಡಿದು ಕಚ್ಚಾ ರಸ್ತೆ ಮೇಲೆ ವಾಹನ ಸವಾರರು ಸಂಚರಿಸುತ್ತಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ನಾಳೆ ಭಾರಿ ಮಳೆ ಮುನ್ಸೂಚನೆ ಹಿನ್ನೆಲೆ ಕಲಬುರಗಿ ಜಿಲ್ಲೆಯಾದ್ಯಂತ ನಾಳೆ ಅಂಗನವಾಡಿ, ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಯಶವಂತ ಗುರುಕರ್ ಆದೇಶ ಹೊರಡಿಸಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ರೆಡ್ ಮತ್ತು ಯಲ್ಲೋ ಅಲರ್ಟ್ ಘೋಷಿಸಲಾಗಿದೆ.
ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಮಳೆಯಿಂದಾಗಿ ತುಂಗಾಭದ್ರಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಿದ್ದು ಹೊನ್ನಾಳಿ, ಹರಿಹರ ತಾಲೂಕಿನ ನದಿ ಪಾತ್ರದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಉಕ್ಕಡಗಾತ್ರಿ ದೇವಸ್ಥಾನದ ಬಳಿಯ ಸೇತುವೆ ಮುಳುಗಿದೆ. ಫತ್ತೇಪುರ-ಉಕ್ಕಡಗಾತ್ರಿ ನಡುವೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಉಕ್ಕಡಗಾತ್ರಿ-ನಂದಗುಡಿಗೆ ಸಂಪರ್ಕಿಸುವ ರಸ್ತೆ ಜಲಾವೃತಗೊಂಡಿದೆ. ಉಕ್ಕಡಗಾತ್ರಿ ಬಳಿಯ ಸ್ನಾನಘಟ್ಟ, ಜವಳಘಟ್ಟ ಮುಳುಗಿದೆ. ಉಕ್ಕಡಗಾತ್ರಿ ದೇವಸ್ಥಾನದ ಬಳಿಯ ಅಂಗಡಿಗಳಿಗೆ ನೀರು ನುಗ್ಗಿದೆ. ಸ್ಥಳಕ್ಕೆ ಹರಿಹರ ತಹಶೀಲ್ದಾರ್ ಡಾ.ಅಶ್ವತ್ಥ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೇ ರೀತಿ ನದಿ ನೀರು ಹರಿದರೆ ಕಾಳಜಿ ಕೇಂದ್ರ ತೆರೆಯುತ್ತೇವೆ. ಗಂಗಾನಗರ, ಚಿಕ್ಕಬಿದರಿ ಸೇರಿ 4 ಕಡೆ ಕಾಳಜಿ ಕೇಂದ್ರ ತೆರೆಯಲು ಚಿಂತನೆ ನಡೆದಿದೆ. ಸದ್ಯಕ್ಕೆ ಯಾವುದೇ ಹಾನಿ ಆಗದಂತೆ ಕ್ರಮಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕೊಡಗು ಜಿಲ್ಲೆಯಾದ್ಯಂತ ಮಳೆಯ ಆರ್ಭಟ ಮುಂದುವರೆದಿದ್ದು ಕೊಡಗು ಜಿಲ್ಲೆಯಲ್ಲಿ ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ನೀಡಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಆದೇಶ ಹೊರಡಿಸಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಬಳಿಕ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು ಮಳೆಯಿಂದ ಜೂನ್ 1ರಿಂದ 12 ಜನ ಮೃತಪಟ್ಟಿದ್ದಾರೆ. ಮಳೆಯಿಂದ ಹಾನಿಯಾದ ಮನೆಗಳಿಗೆ 10 ಸಾವಿರ ಪರಿಹಾರ ನೀಡುತ್ತೇವೆ. ಅಧಿಕಾರಿಗಳು ವರದಿ ನೀಡಿದ ಬಳಿಕ ಮನೆ ಹಾನಿಗೆ ತಕ್ಕಂತೆ ಮುಂದೆ ಹೆಚ್ಚುವರಿ ಪರಿಹಾರ ನೀಡುತ್ತೇವೆ. ಕಳೆದ 3-4 ದಿನಗಳಿಂದ ವಾಡಿಕೆಗಿಂತ ಅತಿ ಹೆಚ್ಚು ಮಳೆ ಆಗಿದೆ. ರಾಜ್ಯದ 13 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಇದೆ. ಅದರಲ್ಲೂ 13 ತಾಲೂಕುಗಳಲ್ಲಿ ಮಳೆಯಿಂದ ಹೆಚ್ಚು ಹಾನಿ ಆಗಿದೆ. ಭೂಕುಸಿತ ಪ್ರದೇಶಗಳಲ್ಲಿ ಜನರ ಸ್ಥಳಾಂತರಕ್ಕೆ ಸೂಚಿಸಿದ್ದೇವೆ. ರಸ್ತೆ ಹಾನಿಯ ಬಗ್ಗೆಯೂ ಕೂಡಲೇ ವರದಿ ನೀಡಲು ಸೂಚಿಸಲಾಗಿದೆ. ಗ್ರಾಮ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚಿಸಲು ಸೂಚಿಸಿದ್ದೇವೆ. ಮತ್ತಷ್ಟು ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ತಿಳಿಸಿದೆ. ಡ್ಯಾಂಗಳಿಂದ ನೀರು ಬಿಡುಗಡೆ ಮುನ್ನ ತಿಳಿಸುವಂತೆ ನೆರೆಯ ಮಹಾರಾಷ್ಟ್ರದ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದರು.
ಕೊಡಗು ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರೆದಿದ್ದು ಸೋಮವಾರಪೇಟೆ ತಾಲೂಕಿನ ರಾಮನಳ್ಳಿಯಲ್ಲಿ ಮಳೆ, ಗಾಳಿಗೆ ಮನೆ ಮೇಲೆ ಬೃಹತ್ ಗಾತ್ರದ ಮರ ಬಿದ್ದಿದೆ. ವಿನಾತ್ ಎಂಬುವರಿಗೆ ಸೇರಿದ ಮನೆ ಮೇಲೆ ಮರ ಬಿದ್ದಿದೆ. ಸದ್ಯ ವಿನಾತ್ ಕುಟುಂಬ ಸದಸ್ಯರು ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಾರವಾರ: ಜನತೆಗೆ ಮೂನ್ಸೂಚನೆ ನೀಡಿ ಕದ್ರಾ ಜಲಾಶಯದಿಂದ ನೀರು ಹೊರಕ್ಕೆ ಬಿಡಲಾಗಿದೆ. ಕದ್ರಾ ಅಣೆಕಟ್ಟಿನ ನಾಲ್ಕು ಗೇಟ್ಗಳ ಮೂಲಕ ಒಟ್ಟು 7063 ಕ್ಯೂಸೆಕ್ ನೀರು ಹೊರಕ್ಕೆ ಬಿಡಲಾಗಿದೆ. ಹೆಚ್ಚಿನ ಮಳೆಯಾದ್ರೆ ಇನ್ನಷ್ಟು ಪ್ರಮಾಣದ ನೀರು ಬಿಡಲಾಗುತ್ತೆ. ಕದ್ರಾ ಜಲಾಶಯದ ಗರಿಷ್ಠ ಮಟ್ಟ 34.50 ಮೀ ಇದ್ದು ಈಗಾಗಲೇ 30.81 ಮೀ ಭರ್ತಿಯಾಗಿದೆ.
ಮಳೆ ಪರಿಸ್ಥಿತಿ ಬಗ್ಗೆ ಸಿಎಂ ಬೊಮ್ಮಾಯಿ ನಡೆಸಿದ ವಿಡಿಯೋ ಕಾನ್ಫರೆನ್ಸ್ ಅಂತ್ಯಗೊಂಡಿದೆ. ಸಿಎಂ ಗೃಹಕಚೇರಿ ಕೃಷ್ಣಾದಿಂದ ಬೊಮ್ಮಾಯಿ ವಿಡಿಯೋ ಕಾನ್ಫರೆನ್ಸ್ ನಡೆಸಿದ್ರು. ಮಳೆ ಮುನ್ಸೂಚನೆ ಬಗ್ಗೆ ಸಭೆಯಲ್ಲಿ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಮನೋಜ್ ರಾಜನ್ರಿಂದ ವಿವರಣೆ ಪಡೆದಿದ್ದಾರೆ. ಸಭೆಯಲ್ಲಿ ಕೊಡಗು, ಉಡುಪಿ, ದಕ್ಷಿಣ ಕನ್ನಡ, ಮೈಸೂರು, ಉತ್ತರ ಕನ್ನಡ, ಶಿವಮೊಗ್ಗ, ಹಾಸನ, ಬೆಳಗಾವಿ, ಬಾಗಲಕೋಟೆ, ಬೀದರ್, ಹಾವೇರಿ, ಕಲಬುರಗಿ, ಬೆಂಗಳೂರು ನಗರ ಜಿಲ್ಲೆಯ ಅಧಿಕಾರಿಗಳು ಭಾಗಿಯಾಗಿದ್ದರು.
ಉಡುಪಿ ಜಿಲ್ಲೆಯಾದ್ಯಂತ ಮಳೆಯ ಆರ್ಭಟ ಮುಂದುವರೆದಿದ್ದು ಕುಂದಾಪುರ ತಾಲೂಕು ವ್ಯಾಪ್ತಿಯ ತೆಕ್ಕಟ್ಟೆ ಸಮೀಪದ ಬೇಳೂರಲ್ಲಿ ಕಿಂಡಿ ಅಣೆಕಟ್ಟು ತುಂಬಿ ಹರಿದಿದೆ. ಕೃಷಿ ಭೂಮಿ, ತಗ್ಗು ಪ್ರದೇಶಗಳಿಗೆ ನೆರೆ ನೀರು ನುಗ್ಗಿದೆ. ಮಳೆ, ನೆರೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆ ಸುರುತ್ತಿದ್ದು ಉಪ್ಪೂರು ಭಾಗದಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ. ರಾಷ್ಟ್ರೀಯ ಹೆದ್ದಾರಿ 66 ಕಾಮಗಾರಿ ಲೋಪದಿಂದ, ಸರಿಯಾದ ಚರಂಡಿ ಇಲ್ಲದೆ ನೆರೆ ಸೃಷ್ಟಿಯಾಗಿದೆ. ನೂರಾರು ಮನೆ, ಕೃಷಿ ಜಾಮೀನು ಜಲಾವೃತಗೊಂಡಿದೆ. ಹೆದ್ದಾರಿ ಪ್ರಾಧಿಕಾರಕ್ಕೆ ಸ್ಥಳೀಯರು ಹಿಡಿಶಾಪ ಹಾಕುತ್ತಿದ್ದಾರೆ.
ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಹಿನ್ನೆಲೆ ಮಳೆಹಾನಿ ಪರಿಹಾರಕ್ಕೆ ಸರ್ಕಾರ ಹಣ ಬಿಡುಗಡೆ ಮಾಡಿದೆ. ಸರ್ಕಾರದಿಂದ ಹೆಚ್ಚುವರಿಯಾಗಿ 55 ಕೋಟಿ ಹಣ ರಿಲೀಸ್ ಮಾಡಲಾಗಿದೆ. ಡಿಸಿಗಳ ಖಾತೆಗೆ ಕಂದಾಯ ಇಲಾಖೆಯಿಂದ ಹಣ ರಿಲೀಸ್ ಮಾಡಲಾಗಿದ್ದು ಈಗಾಗಲೇ ಡಿಸಿಗಳ ಖಾತೆಯಲ್ಲಿ 680.59 ಕೋಟಿ ರೂ. ಹಣ ಜಮೆಯಾಗಿದೆ.
ಮಳೆ ಸಂಬಂಧಿತ ಹಾನಿ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ಆರಂಭವಾಗಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಯುತ್ತಿದ್ದು ಜಿಲ್ಲಾ ಉಸ್ತುವಾರಿ ಸಚಿವರು, 13 ಡಿಸಿಗಳು, ಜಿ.ಪಂ ಸಿಇಒ, ಇತರೆ ಅಧಿಕಾರಿಗಳ ಜೊತೆ ಚರ್ಚೆ ನಡೆದಿದೆ. ಗೃಹಕಚೇರಿ ಕೃಷ್ಣಾದಿಂದ ಸಿಎಂ ವಿಡಿಯೋ ಕಾನ್ಫರೆನ್ಸ್ ಕೈಗೊಂಡಿದ್ದಾರೆ. 13 ಜಿಲ್ಲೆಯಲ್ಲಿನ ಪ್ರವಾಹ ಪರಿಸ್ಥಿತಿ ಬಗ್ಗೆ ಸಿಎಂ ಮಾಹಿತಿ ಪಡೆದಿದ್ದಾರೆ.
ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಹಿನ್ನೆಲೆ ಉತ್ತರ ಕನ್ನಡ ಜಿಲ್ಲೆ ಜೋಯಿಡಾ ತಾಲೂಕಿನ ಅನಮೋಡ ಬಳಿ ಗೋವಾಗೆ ತೆರಳುವ ಹೆದ್ದಾರಿಯಲ್ಲಿ ರಸ್ತೆ ಕುಸಿತವಾಗಿದೆ. ಕರ್ನಾಟಕ-ಗೋವಾ ಗಡಿಯಲ್ಲಿ ಪಶ್ಚಿಮಘಟ್ಟದಲ್ಲಿ ಹಾದುಹೋಗುವ ಹೆದ್ದಾರಿಯಲ್ಲಿ ರಸ್ತೆ ಕುಸಿದಿದೆ. ಜೀವ ಭಯದಲ್ಲೇ ಹೆದ್ದಾರಿಯ ಒಂದು ಬದಿಯಲ್ಲಿ ವಾಹನಗಳು ಸಂಚರಿಸುತ್ತಿವೆ.
ಕೊಪ್ಪಳ ತಾಲೂಕಿನ ಬಂಡಿ ಹರ್ಲಾಪೂರದಲ್ಲಿ ಮಳೆ ಲೆಕ್ಕಿಸದೇ ಕುಂಭೋತ್ಸವ ಆಚರಿಸಲಾಗಿದೆ. ಗ್ರಾಮದ ದುರ್ಗಾದೇವಿ ಜಾತ್ರೆ ಹಿನ್ನಲೆ ಮಳೆ ಲೆಕ್ಕಿಸದೇ ಗ್ರಾಮದ ಭಕ್ತರು ಮಳೆಯಲ್ಲೆ ಕುಂಭೋತ್ಸವ ಆಚರಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ವರುಣನ ಆರ್ಭಟ. ಗುಡ್ಡೆತೋಟದ ಗ್ರಾಮದಲ್ಲಿ ಗುಡ್ಡ ಕುಸಿಯುವ ಭೀತಿ ಎದುರಾಗಿದ್ದು ಮನೆ ಪಕ್ಕದಲ್ಲಿ ಕುಸಿಯುತ್ತಿರುವ ಮಣ್ಣಿನಿಂದ ನಿವಾಸಿಗಳು ಕಂಗಾಲಾಗಿದ್ದಾರೆ. ಕೂಲಿ ಕೆಲಸವನ್ನು ಬಿಟ್ಟು ಮನೆ ಕಾಯುವಂತಾಗಿದೆ. ಕೂಲಿ ನಾಲಿ ಮಾಡಿ ಸಣ್ಣದೊಂದು ಮನೆ ಕಟ್ಟಿದ್ವಿ. ಮಳೆ ಜೋರಾದಂತೆ ಮಣ್ಣು ಕುಸಿಯುತ್ತಲೇ ಹೋಗ್ತಿದೆ. ಅನೇಕ ಬಾರಿ ನಮ್ಮನ್ನ ಇಲ್ಲಿಂದ ಸ್ಥಳಾಂತರಿಸಿದ್ದಾರೆ. ಮನೆ ಕೊಡಿ ಎಂದು ಬೇಡಿಕೊಂಡಿದ್ವಿ. ಆದರೆ ನಮ್ಮ ಸಮಸ್ಯೆಯನ್ನ ಯಾರು ಕೂಡ ಬಗೆಹರಿಸಿಲ್ಲ. ಮನೆ ಬೀಳುವ ಆತಂಕದಿಂದ ಕೂಲಿ ಕೆಲಸಕ್ಕೆ ಹೋಗಿಲ್ಲ, ಮನೆಯನ್ನ ಕಾಯುತ್ತಿದ್ದೇವೆ ಎಂದು ಟಿವಿ9 ಬಳಿ ನಾರಾಯಣ-ಸುಮತಿ ದಂಪತಿ ಅಳಲು ತೋಡಿಕೊಂಡಿದ್ದಾರೆ.
ಉಡುಪಿ: ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಮಳೆಯಿಂದ ಪಾಪನಾಶಿನಿ ನದಿ ತುಂಬಿ ಹರಿಯುತ್ತಿದೆ. ಪಡುಅಲೆವೂರು ಭಾಗದಲ್ಲಿ ಭತ್ತದ ಗದ್ದೆಗಳು ಜಲಾವೃತವಾಗಿವೆ. 500 ಎಕರೆಗೂ ಹೆಚ್ಚು ಭತ್ತದ ಗದ್ದೆಗಳು ಜಲಾವೃತವಾಗಿವೆ.
ಕೊಡಗು: ಭಾರಿ ಮಳೆಯಿಂದ ಜಿಲ್ಲೆಯ ಮಡಿಕೇರಿ ತಾಲೂಕಿನ ಒಂದನೇ ಮೊಣ್ಣಂಗೇರಿಯಲ್ಲಿ ಭೂಕುಸಿತ ಉಂಟಾಗಿದೆ. ಭಾರೀ ಮಳೆಯಿಂದಾಗಿ ಮಣ್ಣು ಜರಿದು ಬಿದ್ದಿದೆ.
ಹಾಸನ: ಜಿಲ್ಲೆಯಲ್ಲಿ ಮಳೆಯ ಆರ್ಭಟಕ್ಕೆ ರೈತರು ನಲುಗಿದ್ದು, ಕಾವೇರಿ ನದಿ ಪ್ರವಾಹದಿಂದ ಹೊಲಗದ್ದೆಗಳು ಜಲಾವೃತವಾಗಿವೆ.
ಮಳೆ, ಪ್ರವಾಹದಿಂದ ಅಪಾರ ಪ್ರಮಾಣದ ಬೆಳೆಗಳು ನೀರುಪಾಲಾಗಿರುವಂತಹ ಘಟನೆ ಅರಕಲಗೂಡು ತಾಲೂಕಿನ ರುದ್ರಪಟ್ಟಣ ಗ್ರಾಮದಲ್ಲಿ ನಡೆದಿದೆ. ನೂರಾರು ಎಕರೆಯಲ್ಲಿ ಬೆಳೆದಿದ್ದ ಶೇಂಗಾ, ಶುಂಠಿ, ಅಡಕೆ, ಶುಂಠಿ ಬೆಳೆ ಹಾನಿಯಿಂದಾಗಿ ರೈತರಿಗೆ ಸಂಕಷ್ಟವಾಗಿದೆ. ಬೆಳೆ ಹಾನಿ ಪ್ರದೇಶಗಳಿಗೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಬೆಳೆ ಪರಿಹಾರ ಕೊಡಿಸುವಂತೆ ಅಧಿಕಾರಿಗಳ ಬಳಿ ರೈತರು ಮನವಿ ಮಾಡಿದರು.
ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆಯ ಆರ್ಭಟ ಹಿನ್ನೆಲೆ ರಾಜ್ಯದ ಕೃಷ್ಣಾ ನದಿ ತೀರದ ಪ್ರದೇಶಗಳಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸೂಚನೆ ನೀಡಿದ್ದಾರೆ. ಬೆಳಗಾವಿ, ಬಾಗಲಕೋಟೆ ಜಿಲ್ಲಾಡಳಿತಕ್ಕೆ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಸಿದ್ಧವಿರುವಂತೆ ಸಚಿವ ಕಾರಜೋಳ ಸೂಚನೆ ನೀಡಿದ್ದಾರೆ. ನೆರೆ ಪ್ರದೇಶಗಳಲ್ಲಿ ಅಗತ್ಯ ಕ್ರಮಕೈಗೊಳ್ಳಲು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾಹಿತಿ ನೀಡಿದರು.
ಉಡುಪಿ: ದೇವಸ್ಥಾನಕ್ಕೆ ಬಂದಿದ್ದವರು ನೀರಲ್ಲಿ ಲಾಕ್ ಆಗಿದ್ದು, ಸ್ಥಳೀಯರ ಸಹಾಯದಿಂದ ರಸ್ತೆ ದಾಟಿದ್ದಾರೆ. ರಾಜರಾಜೇಶ್ವರಿ ದೇವಸ್ಥಾನಕ್ಕೆ ಕುಟುಂಬ ಆಗಮಿಸಿದ್ದು, ಹೊರಡೊ ಸಮಯದಲ್ಲಿ ನೀರಿನಲ್ಲಿ ಸಿಲುಕಿಕೊಂಡಿದ್ದಾರೆ. ಸ್ಥಳೀಯರ ಸಹಾಯದಿಂದ ರಸ್ತೆ ದಾಟಿಸಿ ಕಳುಹಿಸಲಾಯ್ತು. ಮಹಿಳೆ ಸೇರಿ ಹಲವರನ್ನು ಸ್ಥಳೀಯರು ರಸ್ತೆ ದಾಟಿಸಿದರು.
ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಜಿಲ್ಲೆಯ ಕೊಪ್ಪ ತಾಲೂಕಿನ ಹುತ್ತಿನಗದ್ದೆ ಬಳಿ ಭೂಮಿ ಬಾಯ್ತೆರೆದಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಸುಮಾರು 100 ಮೀಟರ್ ವ್ಯಾಪ್ತಿಯಲ್ಲಿ ಭೂ ಕುಸಿತ ಉಂಟಾಗಿದ್ದು, ಭೂ ಕುಸಿತದ ದೃಶ್ಯ ಭಯ ಬೀಳಿಸುವಂತಿದೆ. ರಸ್ತೆಯ ಅರ್ಧಭಾಗ ಸಂಪೂರ್ಣ ಕಟ್ ಆಗಿದ್ದು, ಶಾಂತಿಕುಡಿಗೆ, ಶುಂಠಿಕುಡಿಗೆ, ಬಿಟ್ಟಿಕುಡಿಗೆ ಗ್ರಾಮಸ್ಥರು ಪರದಾಡುವಂತ್ತಾಗಿದೆ. ರಸ್ತೆ ಕಟ್ ಆಗಿರುವುದರಿಂದ ವಾಹನ ಸಂಚಾರ ಬಂದ್ ಆಗಿದ್ದು,
ತುಂಡಾಗಿರುವ ರಸ್ತೆಯಲ್ಲಿ ಓಡಾಡಲು ಜನರು ಹೆದರುತ್ತಿದ್ದಾರೆ.
ಗದಗ: ತುಂಗಾ-ಭದ್ರಾ ನದಿ ಪಾತ್ರದಲ್ಲಿ ಧಾರಾಕಾರ ಮಳೆ ಹಿನ್ನೆಲೆ ತುಂಗಭದ್ರಾ ನದಿ ಉಕ್ಕಿಹರಿಯುತ್ತಿದೆ. ತುಂಗಭದ್ರಾ ಡ್ಯಾಂನಿಂದ ಅಪಾರ ನೀರು ಹರಿಬಿಡಲಾಗಿದೆ. ಜಿಲ್ಲೆಯ ಮುಂಡರಗಿ ತಾಲೂಕಿನ ಹಮ್ಮಿಗಿ ಬ್ಯಾರೇಜ್ ಭರ್ತಿ ಆಗಿದ್ದು, ಒಳಹರಿವು 57,563 ಕ್ಯೂಸೆಕ್. 14 ಗೇಟ್ಗಳ ಮೂಲಕ 57,563 ಕ್ಯೂಸೆಕ್ ನೀರು ಹರಿಬಿಡಲಾಗಿದೆ. ಜಿಲ್ಲೆಯ ತುಂಗಭದ್ರಾ ನದಿ ಪಾತ್ರದ ಜನ್ರಿಗೆ ಎಚ್ಚರಿಕೆ ನೀಡಲಾಗಿದೆ.
ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯ ಲಾಲ ಬಹಾದ್ದೂರ ಶಾಸ್ತ್ರಿ ಜಲಾಶಯದ ಇಂದಿನ ನೀರಿನ ಮಟ್ಟ ಹೀಗಿದೆ.
ಗರಿಷ್ಠ ಮಟ್ಟ: 519.60 ಮೀಟರ್
ಇಂದಿನ ನೀರಿನ ಮಟ್ಟ: 515.08 ಮೀಟರ್
ಒಳ ಹರಿವು: 75,207 ಕ್ಯೂಸೆಕ್
ಹೊರ ಹರಿವು : 451
ಜಲಾಶಯದ ಒಳ ಹರಿವಿನಲ್ಲಿ ಹೆಚ್ಚಳ ಉಂಟಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಚೆಂಡಿಯಾದಲ್ಲಿ ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲೇ ಅತೀ ಹೆಚ್ಚು ಮಳೆ ಆಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಿಂದ ಮಾಹಿತಿ ನೀಡಿದೆ. ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಿರುವ ಮಾಹಿತಿಯನ್ನು KSNDMC ಟ್ವೀಟ್ ಮಾಡಿದೆ.
24 ಗಂಟೆಗಳ #ಕರ್ನಾಟಕದ ಮಳೆ ನಕ್ಷೆ: 7th ಜುಲೈ 2022ರ 8.30AM ರಿಂದ 8th ಜುಲೈ 2022 ರ 8.30AM ರವರೆಗೆ, ಅತ್ಯಧಿಕ 260ಮಿಮೀ ಮಳೆ @ಉತ್ತರ ಕನ್ನಡ_ಕಾರವಾರ _ಚೆಂಡಿಯಾ. pic.twitter.com/fDvvqTBo7A
— KSNDMC (@KarnatakaSNDMC) July 8, 2022
ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರಿ ಮಳೆಯಿಂದಾಗಿ ಗಣನೀಯ ಪ್ರಮಾಣದಲ್ಲಿ ಭದ್ರಾ ನದಿ ಹರಿವು ಹೆಚ್ಚುತ್ತಿದೆ. ಕುದುರೆಮುಖ, ಕೆರೆಕಟ್ಟೆ ಭಾಗದಲ್ಲಿ ಮಳೆ ಆರ್ಭಟ ಹೆಚ್ಚಿದ್ದು, ಭದ್ರಾ ನದಿಪಾತ್ರದ ಕಾಫಿ, ಅಡಿಕೆ ತೋಟಗಳು ಮುಳುಗಡೆಯಾಗಿವೆ. ನದಿ ಪಾತ್ರದ ಮನೆಗಳಿಗೂ ನೀರು ನುಗ್ಗುವ ಆತಂಕ ಸೃಷ್ಟಿಯಾಗಿದ್ದು, ಭಾರೀ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಆಗುಂಬೆ ಹೋಬಳಿಯ ನಾಬಳ ಸೇತುವೆ ಮುಳುಗಡೆಯಾಗಿದ್ದು, ತೀರ್ಥಹಳ್ಳಿ ಶೃಂಗೇರಿ ರಸ್ತೆ ಸಂಪರ್ಕ ರಸ್ತೆ ಕಡಿತವಾಗಿದೆ. ಕಳೆದ ಎರಡು ದಿನಗಳಿಂದ ಗ್ರಾಮಸ್ಥರು ಪರದಾಡುವಂತ್ತಾಗಿದೆ.
ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನದಲ್ಲಿ ಆರೆಂಜ್ ಅಲರ್ಟ್ ಘೋಷಿಸಿದ್ದು, ಬೆಳಗಾವಿ, ಕಲಬುರಗಿ, ಬೀದರ್ ಜಿಲ್ಲೆಯಲ್ಲಿ ನಾಳೆಯಿಂದ 3 ದಿನ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ರಾಜ್ಯದಲ್ಲಿ ಜೂನ್ ತಿಂಗಳಲ್ಲಿ ಮಳೆ ಕೊರತೆ ಎದುರಾಗಿತ್ತು. ಜುಲೈನಲ್ಲಿ ವಾಡಿಕೆಗಿಂತ ಅಧಿಕ ಮಳೆ ಎಂದು ಇಲಾಖೆ ಮಾಹಿತಿ ನೀಡಿದ್ದು, ಇಲ್ಲಿಯವರೆಗೆ ವಾಡಿಕೆಯಂತೆ 58 ಮಿ.ಮೀ. ಮಳೆ ಆಗಬೇಕಿತ್ತು. ರಾಜ್ಯದಲ್ಲಿ ಜುಲೈ 7ರವರೆಗೆ 112 ಮಿ.ಮೀ. ಮಳೆಯಾಗಿದೆ. ಈವರೆಗೂ ವಾಡಿಕೆಗಿಂತ ಶೇ.94ಕ್ಕೂ ಹೆಚ್ಚು ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಹಾಮಳೆ ಮುಂದುವರೆದಿದ್ದು, ನೋಡನೋಡುತ್ತಿದ್ದಂತೆ ಗುಡ್ಡ ಕುಸಿದಿದೆ. ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಜಾಲ್ಸೂರು ಬಳಿ ಘಟನೆ ನಡೆದಿದೆ. ನಿಲ್ಲಿಸಿದ್ದ ಬೈಕ್ಗಳ ಮೇಲೆ ಗುಡ್ಡ ಬಿದಿದ್ದು, ಜನರು ದಿಕ್ಕಪಾಲಾಗಿ ಓಡಿಹೋಗಿದ್ದಾರೆ.
ಶಿವಮೊಗ್ಗ: ಮಲೆನಾಡಿನಲ್ಲಿ ಧಾರಾಕಾರ ಮಳೆ ಹಿನ್ನಲೆ ವಿಶ್ವವಿಖ್ಯಾತ ಜೋಗ್ ಫಾಲ್ಸ್ನಲ್ಲಿ ಸೌಂದರ್ಯ ಇಮ್ಮಡಿಯಾಗಿದೆ. ಜೋಗ್ ಫಾಲ್ಸ್ನಿಂದ ನೀರು ಧುಮುಕುತ್ತಿದ್ದು, ಇಬ್ಬನಿ ಕಣ್ಣಾ ಮುಚ್ಚಾಲೆ ಆಡುತ್ತಿದೆ. ಕ್ಷಣದಲ್ಲೇ ಫಾಲ್ಸ್ ಮಾಯವಾಗಿ ಮತ್ತೆ ಪ್ರತ್ಯಕ್ಷವಾಗುತ್ತಿದೆ. ಜೋಗ್ ಫಾಲ್ಸ್ನಲ್ಲಿ ಇಬ್ಬನಿಯಾಟ ನೋಡಿದ ಪ್ರವಾಸಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ನಿರಂತರ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ 66 ಜಲಾವೃತವಾಗಿದೆ. ಕಾರವಾರ ನಗರದ ಬಿಣಗ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸುಮಾರು 5 ಕಿ.ಮೀ.ವರೆಗೂ ವಾಹನಗಳು ನಿಂತಿವೆ.
ಮಂಡ್ಯ: ಕೊಡಗಿನಲ್ಲಿ ಧಾರಾಕಾರ ಮಳೆ ಹಿನ್ನೆಲೆ ಕೆ.ಆರ್.ಎಸ್.ಡ್ಯಾಂ ಭರ್ತಿಗೆ ಇನ್ನೂ ಕೇವಲ 5 ಅಡಿ ಬಾಕಿ ಇದೆ.
38858 ಸಾವಿರ ಕ್ಯೂಸೆಕ್ ಗೆ ಹೆಚ್ಚಿದ KRS ಒಳ ಹರಿವಿನ ಪ್ರಮಾಣವಿದ್ದು, ಡ್ಯಾಂನ ಗರಿಷ್ಠ ಮಟ್ಟ 124.80 ಅಡಿ ಇದೆ.
ಕೆಆರ್‌ಎಸ್ ಇಂದಿನ ನೀರಿನ ಮಟ್ಟ ಹೀಗಿದೆ. ಜಲಾಶಯದ ನೀರಿನ ಗರಿಷ್ಠ ಮಟ್ಟ 124.80 ಅಡಿಗಳು, ಜಲಾಶಯದ ಇಂದಿನ ನೀರಿನ ಮಟ್ಟ 119.44 ಅಡಿ, ಇಂದಿನ ಒಳಹರಿವಿನ ಪ್ರಮಾಣ 38858 ಕ್ಯೂಸೆಕ್, ಇಂದಿನ ಹೊರ ಹರಿವಿನ ಪ್ರಮಾಣ 3270 ಕ್ಯೂಸೆಕ್, ಜಲಾಶದ ಗರಿಷ್ಠ ನೀರಿನ ಸಂಗ್ರಹ – 49.452 ಟಿಎಂಸಿ. ಇಂದಿನ ಸಂಗ್ರಹ ಟಿಎಂಸಿ – 42.341 ಟಿಎಂಸಿ.
ಬೆಳಗಾವಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಅಂಬೋಲಿ ಫಾಲ್ಸ್ ಮೈದುಂಬಿಕೊಂಡು ಧುಮ್ಮಿಕ್ಕುತ್ತಿದೆ. ಜಿಲ್ಲೆಯ ಗಡಿಗೆ ಹೊಂದಿಕೊಂಡು ಮಹಾರಾಷ್ಟ್ರದ ಪಶ್ಚಿಮ ಘಟ್ಟ ಅರಣ್ಯ ಪ್ರದೇಶದಲ್ಲಿರುವ ಫಾಲ್ಸ್. ಮಹಾರಾಷ್ಟ್ರ ಗೋವಾ ಮಾರ್ಗ ಮಧ್ಯವಿದ್ದು, ನೂರಾರು ಜನ ಪ್ರವಾಸಿಗರು ಎಂಜಾಯ್ ಮಾಡುತ್ತಿದ್ದಾರೆ. ನೂರು ಅಡಿ ಮೇಲಿಂದ ಧುಮ್ಮಿಕ್ಕುವ ಜಲಧಾರೆಗೆ ಪ್ರವಾಸಿಗರು ಮನಸೋತಿದ್ದಾರೆ.
ಮಡಿಕೇರಿ: ಕೊಡಗಿನಾದ್ಯಂತ ಮಳೆ ಆರ್ಭಟ ಮುಂದುವರಿಕೆ ಹಿನ್ನೆಲೆ ಇಂದೂ ಕೂಡ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ .ಬಿ.ಸಿ ಸತೀಶ್ ಆದೇಶ ಹೊರಡಿಸಲಾಗಿದೆ. ಜಿಲ್ಲೆಯಲ್ಲಿ ಅಪಾಯಮಟ್ಟ ಮೀರಿ ನದಿಗಳು ಹರಿಯುತ್ತಿದ್ದು, ನದಿತೀರದ, ಬೆಟ್ಟಗುಡ್ಡದ ನಿವಾಸಿಗಳು ಆತಂಕದಲ್ಲಿದ್ದಾರೆ. ಭಾಗಮಂಡಲ ತ್ರಿವೇಣಿ ಸಂಗಮ ಜಲಾವೃತಗೊಂಡಿದೆ. ಮಡಿಕೇರಿ ತಾಲೂಕಿನ ಕೊಟ್ಟಮುಡಿ, ಚೆರಿಯಪರಂಬು ವ್ಯಾಪ್ತಿಯಲ್ಲಿ ಪ್ರವಾಹದ ಆತಂಕ ಉಂಟಾಗಿದೆ.
Published On - 8:59 am, Fri, 8 July 22