Karnataka Rain: ಕರ್ನಾಟಕದ 7 ಜಿಲ್ಲೆಗಳಿಗೆ ರೆಡ್ ಅಲರ್ಟ್; ಕರಾವಳಿ, ಉತ್ತರ ಕರ್ನಾಟಕದಲ್ಲಿ ಪ್ರವಾಹ ಭೀತಿ
Karnataka Weather Today: ಇಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
Monsoon 2022: ಕರ್ನಾಟಕದ ಕರಾವಳಿ ಜಿಲ್ಲೆಗಳು ಮತ್ತು ಮಲೆನಾಡಿನಲ್ಲಿ ವರುಣನ ಆರ್ಭಟಕ್ಕೆ ಮೇಘಸ್ಫೋಟವಾಗಿದೆ. ಹಲವೆಡೆ ಭೂಕುಸಿತ ಉಂಟಾಗಿದ್ದು, ಪ್ರವಾಹದ (Karnataka Flood) ಭೀತಿಯೂ ಎದುರಾಗಿದೆ. ಇಂದು ಮಳೆಯಿಂದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ (Red Alert) ಘೋಷಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕರ್ನಾಟಕದಲ್ಲಿ ಭೂಕುಸಿತದಿಂದ (Landslide) ಮೂವರು ಮೃತಪಟ್ಟಿದ್ದಾರೆ.
ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಘಟ್ಟಪ್ರದೇಶಗಳಲ್ಲೂ ಭಾರೀ ಮಳೆ ಮುಂದುವರಿದಿದ್ದು, ಕೊಡಗಿನ ಜಿಲ್ಲೆಯ ಎಲ್ಲ ಶಾಲೆ ಕಾಲೇಜುಗಳಿಗೆ ಮತ್ತು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ, ಸಾಗರ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಶೃಂಗೇರಿ, ಕಳಸ, ಎನ್.ಆರ್.ಪುರ, ಮೂಡಿಗೆರೆ ತಾಲೂಕುಗಳ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇನ್ನೂ 2 ದಿನಗಳ ಕಾಲ ಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಸುರಿದ ಮಳೆಗೆ 8 ಮನೆಗಳಿಗೆ ಭಾಗಶಃ ಹಾನಿಯಾಗಿದ್ದರೆ, 4 ಮನೆಗಳಿಗೆ ಸಂಪೂರ್ಣ ಹಾನಿಯಾಗಿದೆ. 81 ವಿದ್ಯುತ್ ಕಂಬಗಳು ಮುರಿದಿವೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಸಿದ್ಧಾಪುರ, ಕುಮಟಾ, ಭಟ್ಕಳಗಳಲ್ಲಿ ಸಂಜೆಯಿಂದ ಭಾರೀ ಮಳೆಯಾಗುತ್ತಿದೆ. ಗಂಗಾವಳಿ ನದಿಯಲ್ಲಿ ಅಪಾಯದಲ್ಲಿ ಸಿಲುಕಿದ್ದ ಬೋಟ್‌ನಿಂದ ಐವರನ್ನು ರಕ್ಷಿಸಲಾಗಿದೆ. ಯಲ್ಲಾಪುರದಲ್ಲಿ ಭಾರಿ ಮಳೆಗೆ ಶಾಲಾ ಆವರಣದ ಗೋಡೆ ಕುಸಿದಿದೆ. ಯಲ್ಲಾಪುರ ಹಾಗೂ ಸಿದ್ಧಾಪುರದಲ್ಲಿ ಮಳೆ ಮುಂದುವರಿದಲ್ಲಿ ಗಂಗಾವಳಿ ಹಾಗೂ ಅಘನಾಶಿನಿ ನದಿಯಲ್ಲಿ ನೀರಿನ ಮಟ್ಟ ಏರಲಿದೆ.
ಇದನ್ನೂ ಓದಿ: ಮಹಾರಾಷ್ಟ್ರದ ಮಳೆಯಿಂದ ಉಕ್ಕಿ ಹರಿಯುತ್ತಿರುವ ಪಂಚಗಂಗಾ, ದೂದ್ಗಂಗಾ ನದಿ; ಬೆಳಗಾವಿಯಲ್ಲಿ ಪ್ರವಾಹ ಭೀತಿ
ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು, ಬೇಲೂರು, ಹಾಸನ, ಅರಕಲಗೂಡನಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಇನ್ನು, ಉತ್ತರ ಕರ್ನಾಟಕ ಭಾಗದ ಬೆಳಗಾವಿ, ಬಾಗಲಕೋಟೆಯಲ್ಲಿ ಮಳೆ ಮುಂದುವರೆದಿದ್ದು, ಕೃಷ್ಣಾ ನದಿ ತೀರದಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಕೃಷ್ಣಾ ನದಿಯ ಉಪನದಿಗಳಾದ ವೇದಗಂಗಾ, ದೂಧಗಂಗಾ ನದಿಗಳು ತುಂಬಿ ಹರಿಯುತ್ತಿವೆ. ಹೀಗಾಗಿ, ಕೃಷ್ಣಾ ನದಿ ತೀರದಲ್ಲಿ ನೆರೆ ಭಿತಿ ಎದುರಾಗಿದೆ.
Heavy rains continue unabated in #Karnataka. @IMDWeather has issued RED (Extremely heavy rain) alert for the next 2 days & Orange (Very heavy rain) alert thereafter in Coastal K’taka districts. @TOIBengaluru #Floods #Monsoon #rain #Mangaluru pic.twitter.com/OWLSJKjhVr
— Niranjan Kaggere (@nkaggere) July 7, 2022
ದಕ್ಷಿಣ ಕನ್ನಡ, ಉಡುಪಿಯಲ್ಲಿ ಮಳೆ ವಿಪರೀತವಾಗಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ರೆಡ್ ಅಲರ್ಟ್ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ. ಕರಾವಳಿಯ 3 ಜಿಲ್ಲೆಗಳಲ್ಲಿ ಇಂದು 204 ಮಿಲಿ ಮೀಟರ್ ಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ: Karnataka Rain Live Updates: ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದುವರಿದ ಮಳೆಯ ಆರ್ಭಟ: ಹಲವೆಡೆ ಬಿರುಗಾಳಿ ಸಹಿತ ಭಾರಿ ಮಳೆ
ಕರಾವಳಿ ಕರ್ನಾಟಕದ ಎಲ್ಲಾ ಜಿಲ್ಲೆಗಳು ಮತ್ತು ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಬೀದರ್, ಕಲ್ಬುರ್ಗಿ, ವಿಜಯಪುರ, ಯಾದಗಿರಿ ಮತ್ತು ಬೆಳಗಾವಿ ಜಿಲ್ಲೆಗಳು, ದಕ್ಷಿಣ ಒಳನಾಡಿನ ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ಕರ್ನಾಟಕ ಮತ್ತು ಉತ್ತರ ಒಳ ಕರ್ನಾಟಕದಲ್ಲಿ ಮಿಂಚು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಇಂದು ಯಾವೆಲ್ಲ ರಾಜ್ಯಗಳಲ್ಲಿ ಮಳೆ?: ಇಂದು ಕರ್ನಾಟಕ ಮಾತ್ರವಲ್ಲದೆ ಕೊಂಕಣ, ಗೋವಾ, ಗುಜರಾತ್, ಸೌರಾಷ್ಟ್ರ, ಕಚ್ ಮತ್ತು ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ಕರ್ನಾಟಕ, ವಿದರ್ಭ, ಛತ್ತೀಸ್‌ಗಢ, ರಾಜಸ್ಥಾನ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಕೂಡ ಹೆಚ್ಚು ಮಳೆಯಾಗುವ ಮುನ್ಸೂಚನೆ ಇದೆ. ಜಮ್ಮು ಮತ್ತು ಕಾಶ್ಮೀರ, ಲಡಾಖ್, ಗಿಲ್ಗಿಟ್, ಬಾಲ್ಟಿಸ್ತಾನ್, ಮುಜಫರಾಬಾದ್, ಪಂಜಾಬ್, ಹರಿಯಾಣ, ಚಂಡೀಗಢ, ಪಶ್ಚಿಮ ಉತ್ತರ ಪ್ರದೇಶ ಮತ್ತು ಪಶ್ಚಿಮ ರಾಜಸ್ಥಾನಗಳಲ್ಲಿ ವ್ಯಾಪಕ ಮಳೆಯಾಗಲಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಉತ್ತರಾಖಂಡ, ಪಶ್ಚಿಮ ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ, ಛತ್ತೀಸ್‌ಗಢ, ತೆಲಂಗಾಣ, ಕೇರಳ, ಮಾಹೆ ಮತ್ತು ಲಕ್ಷದ್ವೀಪಗಳಲ್ಲಿ ಗುಡುಗು ಸಹಿತ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ.
ಹಾಗೇ, ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ, ಉಪ-ಹಿಮಾಲಯ ಪಶ್ಚಿಮ ಬಂಗಾಳ, ಸಿಕ್ಕಿಂ, ಆಂಧ್ರ ಪ್ರದೇಶ, ಒಡಿಶಾ, ಹರಿಯಾಣ, ಚಂಡೀಗಢ, ದೆಹಲಿ, ಪಂಜಾಬ್, ಹಿಮಾಚಲ ಪ್ರದೇಶ, ಲಡಾಖ್‌ನಲ್ಲಿ ಗುಡುಗು ಸಹಿತ ಸಾಕಷ್ಟು ವ್ಯಾಪಕ ಮಳೆಯಾಗುವ ಮುನ್ಸೂಚನೆ ಇದೆ. ಪಶ್ಚಿಮ ಬಂಗಾಳ, ಜಾರ್ಖಂಡ್, ಬಿಹಾರ, ಪಶ್ಚಿಮ ಉತ್ತರ ಪ್ರದೇಶ ಮತ್ತು ರಾಯಲಸೀಮಾದಲ್ಲಿ ಗುಡುಗು ಸಹಿತ ಚದುರಿದ ಮಳೆಯಾಗುವ ಸಾಧ್ಯತೆ ಇದೆ. ಪೂರ್ವ ಉತ್ತರ ಪ್ರದೇಶ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.