
ಬೆಂಗಳೂರು, ಜುಲೈ 04: ಜೂನ್ನಲ್ಲಿ ಮಂದಗತಿಯಲ್ಲಿದ್ದ ಮುಂಗಾರು ಮಳೆ (rain) ಇದೀಗ ಜುಲೈ ಆರಂಭವಾಗುತ್ತಿದ್ದಂತೆ ಕರ್ನಾಟಕದಾದ್ಯಂತ ಚುರುಕು ಪಡೆದುಕೊಂಡಿದೆ. ಪರಿಣಾಮ ಮಲೆನಾಡು, ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಹಳ್ಳಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ಕೆಲವೆಡೆ ಸೇತುವೆಗಳು ಜಲಾವೃತಗೊಂಡಿವೆ. ಭಾರಿ ಮಳೆ ಮುಂದುವರೆದಿರುವುದರಿಂದ ಮುಂಜಾಗೃತ ಕ್ರಮವಾಗಿ ಕೆಲ ಹಲವು ಜಿಲ್ಲೆಗಳಲ್ಲಿ ಶಾಲಾ, ಕಾಲೇಜುಗಳಿಗೆ ರಜೆ (Holiday) ನೀಡಲಾಗಿದೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್ನಲ್ಲಿ ಕಳೆದ 24 ಗಂಟೆಯಲ್ಲಿ 270 ಮಿ.ಮೀ. ದಾಖಲೆ ಪ್ರಮಾಣದ ಮಳೆ ಆಗಿದೆ. ಆ ಮೂಲಕ ರಾಜ್ಯದಲ್ಲೇ ಅತ್ಯಧಿಕ 270 ಮಿಲಿ ಮೀಟರ್ ಪ್ರಮಾಣದ ಮಳೆ ದಾಖಲಾಗಿದೆ.
ಇದನ್ನೂ ಓದಿ: Karnataka Rains: ಹಾಸನ, ಶಿವಮೊಗ್ಗ ಸೇರಿ ಕರ್ನಾಟಕದ 6 ಜಿಲ್ಲೆಗಳಿಗೆ ಮಳೆಯ ರೆಡ್ ಅಲರ್ಟ್, ಇಂದು ಭಾರಿ ಮಳೆ
ಅದೇ ರೀತಿಯಾಗಿ ಹೊಸನಗರ ತಾಲೂಕಿನ ಯಡಿಯೂರಿನಲ್ಲಿ 234 ಮಿ.ಮೀ. ಮಳೆ, ಮಾಸ್ತಿಕಟ್ಟೆಯಲ್ಲಿ 217 ಮಿ.ಮೀ., ಮಾಣಿಯಲ್ಲಿ 207 ಮಿ.ಮೀ., ಸಾವೇ ಹಕ್ಕಲಿನಲ್ಲಿ 159 ಮಿ.ಮೀ., ಬಿದನೂರು ನಗರದಲ್ಲಿ 134 ಮಿ.ಮೀ., ಚಕ್ರಾ ನಗರದಲ್ಲಿ 120 ಮಿ.ಮೀ., ಲಿಂಗನಮಕ್ಕಿಯಲ್ಲಿ 83 ಮಿ.ಮೀ., ಹೊಸನಗರದಲ್ಲಿ 75.4 ಮಿಲಿ ಮೀಟರ್ ಮಳೆ ದಾಖಲಾಗಿದೆ.
ಇನ್ನು ಲಿಂಗನಮಕ್ಕಿ ಜಲಾಶಯಕ್ಕೆ 45070 ಕ್ಯೂಸೆಕ್ ನೀರಿನ ಒಳ ಹರಿವಿದ್ದು, ಜಲಾಶಯದಲ್ಲಿ ಕಳೆದ ಬಾರಿಗಿಂತ 33 ಅಡಿ ಹೆಚ್ಚಿನ ನೀರು ಸಂಗ್ರಹವಾಗಿದೆ. ಲಿಂಗನಮಕ್ಕಿ ಜಲಾಶಯದ ಗರಿಷ್ಠ ಮಟ್ಟ 1819 ಅಡಿ ಇದ್ದು, ನೀರಿನ ಮಟ್ಟ 1787.80 ಅಡಿ ತಲುಪಿದೆ. ಕಳೆದ ವರ್ಷ ಇದೇ ಅವಧಿಗೆ 1754.95 ಅಡಿ ನೀರಿನ ಸಂಗ್ರಹವಾಗಿತ್ತು.
ದಾವಣಗೆರೆ ಜಿಲ್ಲೆಯ ನ್ಯಾಮತಿ, ಹೊನ್ನಾಳಿ ಹಾಗೂ ಹರಿಹರ ತಾಲೂಕಿನ ವ್ಯಾಪ್ತಿಯಲ್ಲಿ ಹರಿಯುತ್ತಿರುವ ತುಂಗಭದ್ರಾ ನದಿ ಇದೀಗ ಮೈತುಂಬಿ ಕೊಂಡಿದೆ. ಮಲೆನಾಡಿನಲ್ಲಿ ಮಳೆ ಹಿನ್ನಲೆ ಕೆಲ ದಿನಗಳ ಹಿಂದೆ ಖಾಲಿ ಖಾಲಿ ಆಗಿದ್ದ ತುಂಗಭದ್ರೆಗೆ ಭರ್ಜರಿ ನೀರು ಬಂದಿದೆ. ಖಾಲಿಯಾಗಿದ್ದ ನದಿಯಲ್ಲಿ ಭರ್ಜರಿ ನೀರು ಕಂಡು ಜನರು ಸಂತಸ ವ್ಯಕ್ತಪಡಿಸಿದ್ದಾರೆ.
ಹರಿಹರದ ಹರಿಹರೇಶ್ವರ ದೇವಸ್ಥಾನ ಬಳಿಯ ತುಂಗಭದ್ರ ನದಿಯಲ್ಲಿ ಇರುವ ಪಾದ ಗಟ್ಟೆಯ ಗೋಪುರದಲ್ಲಿ ನೀರು ಹರಿಯುತ್ತಿದೆ. ನದಿ ವೀಕ್ಷಣೆಗೆ ಜನರು ಬರುತ್ತಿದ್ದಾರೆ. ಇನ್ನು ಆಯಾ ತಾಲೂಕಾ ಆಡಳಿತಗಳು ನದಿಪಾತ್ರದ ಜನತೆ ನದಿಗೆ ಇಳಿಯದಂತೆ ಎಚ್ಚರಿಕೆ ನೀಡಿದೆ.
ವರುಣಾರ್ಭಟ ಹಿನ್ನೆಲೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ನೀಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಜಿಲ್ಲೆಯ 6 ತಾಲೂಕಿನಲ್ಲಿ ಇಂದು ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಚಿಕ್ಕಮಗಳೂರು, ಕಳಸ, ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕಿನಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ಇಂದು ರಜೆ ನೀಡಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶಿಸಿದ್ದಾರೆ.
ಇನ್ನು ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಮಳೆಯ ಅಬ್ಬರ ಮುಂದುವರಿದಿದ್ದು, ಶಿರಸಿ, ಜೋಯಿಡಾ, ಸಿದ್ದಾಪುರ ತಾಲೂಕಿಗೆ ಇಂದು ರಜೆ ಘೋಷಿಸಲಾಗಿದೆ. ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಿ ಡಿಸಿ ಲಕ್ಷ್ಮೀಪ್ರಿಯಾ ಆದೇಶ ಹೊರಡಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ನಿರಂತರ ಮಳೆ ಹಿನ್ನಲೆ ಬಂಟ್ವಾಳ ತಾಲೂಕು ವ್ಯಾಪ್ತಿಯ ಶಾಲೆ, ಕಾಲೇಜುಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಅಂಗನವಾಡಿಯಿಂದ ಪದವಿಪೂರ್ವ ಕಾಲೇಜುವರೆಗೆ ರಜೆ ಘೋಷಣೆ ಮಾಡಿ ಬಂಟ್ವಾಳ ತಹಶೀಲ್ದಾರ್ ಆದೇಶಿಸಿದ್ದಾರೆ.
ಇದನ್ನೂ ಓದಿ: ಮುಂದುವರಿದ ಮಳೆಯ ಅಬ್ಬರ: ಇಂದು ಈ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅಂಗನವಾಡಿಗಳು, ಶಾಲೆಗಳಿಗೆ ಇಂದು ರಜೆ ಘೋಷಿಸಿ ಸಾಗರ ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್ ಆದೇಶ ಹೊರಡಿಸಿದ್ದಾರೆ. ಹೊಸನಗರ ತಾಲೂಕಿನಾದ್ಯಂತ ಮಳೆ ಅಬ್ಬರ ಮುಂದುವರೆದಿದೆ. ಹಾಗಾಗಿ ಅಂಗನವಾಡಿ, ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಇಂದು ಹೊಸನಗರ ತಹಶೀಲ್ದಾರ್ ರಶ್ಮಿ ಹಾಲೇಶ್ ರಜೆ ಘೋಷಿಸಿದ್ದಾರೆ. ಶಿವಮೊಗ್ಗ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಇಂದು ರಜೆ ನೀಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.