Karnataka Rajyotsava 2022 Highlights : ಮುಂದಿನ ವರ್ಷದಿಂದ ರಾಜ್ಯೋತ್ಸವ ಪ್ರಶಸ್ತಿಯಲ್ಲಿ ಬದಲಾವಣೆ: ಬೊಮ್ಮಾಯಿ ಘೋಷಣೆ

| Updated By: ವಿವೇಕ ಬಿರಾದಾರ

Updated on: Nov 01, 2022 | 9:31 PM

Karnataka Rajyotsava 2022 Highlights : ರಾಜ್ಯದ ಅತ್ಯುನ್ನತ ಪ್ರಶಸ್ತಿಯಾದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗಣ್ಯರಿಗೆ ಗೌರವಿಸಲಾಗುತ್ತದೆ. ರಾಜ್ಯೋತ್ಸವ ಪ್ರಶಸ್ತಿಗೆ 67 ಸಾಧಕರನ್ನು ಗುರುತಿಸಲಾಗಿದೆ. ಹಿರಿಯ ನಟರಾದ ದತ್ತಣ್ಣ , ಅವಿನಾಶ್​, ಸಿಹಿಕಹಿ ಚಂದ್ರು ಅವರಿಗೂ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.

Karnataka Rajyotsava 2022 Highlights : ಮುಂದಿನ ವರ್ಷದಿಂದ ರಾಜ್ಯೋತ್ಸವ ಪ್ರಶಸ್ತಿಯಲ್ಲಿ ಬದಲಾವಣೆ: ಬೊಮ್ಮಾಯಿ ಘೋಷಣೆ
ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಸಾಧಕರು

Karnataka State Formation Day 2022 Highlights: ರಾಜ್ಯದ ಅತ್ಯುನ್ನತ ಪ್ರಶಸ್ತಿಯಾದ 2022ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಸಮಾರಂಭ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇಂದು (ನ.1) 67 ಜನಕ್ಕೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 60 ವರ್ಷ ಆದವರಿಗೆ ಮಾತ್ರ ಪ್ರಶಸ್ತಿ ಅಂತಾ ಮಾಡಿ ನಮ್ಮ ಸರ್ಕಾರ ತಪ್ಪು ಮಾಡಿದೆ. ಸಣ್ಣ ವಯಸ್ಸಿನಲ್ಲಿಯೇ ಪ್ರಶಸ್ತಿ ಕೊಟ್ಟರೇ, ಇನ್ನು ಹೆಚ್ಚಿನ ಸಾಧನೆ ಮಾಡೋಕೆ ಆಗತ್ತೆ. ಮುಂದಿನ ವರ್ಷ ಇದು ಬದಲಾವಣೆ ಆಗಲೇಬೇಕು. ವಯಸ್ಸಿನ ಗಡಿಮಿತಿ ಇಲ್ಲದೇ ನಿಜವಾದ ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತೆ ಎಂದು  ಘೋಷಿಸಿದರು.

ರಾಜ್ಯೋತ್ಸವ ಪ್ರಶಸ್ತಿ ಪಡೆದವರನ್ನು ಗುರುತು ಮಾಡಿ ಅವರ ಅನುಭವ, ಸಂದೇಶವನ್ನ ಕಲೆ ಹಾಕಿ‌ ಅಂತಾ ವೇದಿಕೆ ಮೇಲೆ ಸಚಿವ ಸುನೀಲ್ ಕುಮಾರ್​ಗೆ ಸಿಎಂ ಬೊಮ್ಮಾಯಿ ಸೂಚಿಸಿದರು. ಪ್ರಶಸ್ತಿ ಪಡೆದವರು ನಾಡು ಕಟ್ಟುವಲ್ಲಿ ಹೇಗೆ ಶ್ರಮಿಸಿದರೂ ಅನ್ನೋದನ್ನ ತಿಳಿದುಕೊಳ್ಳಬೇಕು. ಅವರ ಅನುಭವದಿಂದ ನಾಡು ಕಟ್ಟುವ ಒಂದು ಕೃತಿಯನ್ನ ಬಿಡುಗಡೆ ಮಾಡಬೇಕು. ಆ ಕೃತಿಯನ್ನು ಎಲ್ಲ ವಿದ್ಯಾರ್ಥಿಗಳಿಗೆ ಹಂಚಬೇಕು. ನಾಡು ಕಟ್ಟಲು ಭಿನ್ನಾಭಿಪ್ರಾಯ ಇರಬಾರದು. ನಾವೆಲ್ಲ ಒಗ್ಗಟ್ಟಾಗಿ ಇರಬೇಕು ಎಂದು ಸೂಚನೆ ನೀಡಿದರು.

ನಾವು ಚಿಕ್ಕವರಿದ್ದಾಗ, ನಾವು ತೊದಲು ನುಡಿಯುವ ವಯಸ್ಸಿನಲ್ಲಿ ನಮ್ಮ ತಾಯಿ ಕೊಟ್ಟ ಮುತ್ತಿನ ಪ್ರಶಸ್ತಿಯನ್ನ ನಾವು ಮರಿಯೋಕೆ ಆಗಲ್ಲ. ಶಾಲಾ ಹಂತದಲ್ಲಿ ಶಿಕ್ಷಕರು ಕೊಡುವ ಪ್ರಶಸ್ತಿಯನ್ನು ಮರಿಯೋಕೆ ಆಗಲ್ಲ. ಹೀಗೆ ಬದುಕಿನ ಎಲ್ಲ ಹಂತದಲ್ಲಿಯೂ ಪ್ರಶಸ್ತಿ ಇರುತ್ತದೆ. ಪ್ರಶಸ್ತಿ ಹಿಂದೆ ದೊಡ್ಡ ಕಥೆ, ಪ್ರಯತ್ನ ಇದೆ ಎಂದರು.

ಅರ್ಜಿಗಳನ್ನು ಹೆಚ್ಚು ಸ್ವೀಕರಿಸದೆ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಿದ್ದೇವೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಮಾತನಾಡಿ ವಿವಿಧ ಕ್ಷೇತ್ರಗಳಲ್ಲಿ 67 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿದ್ದೇವೆ. ಅರ್ಜಿಗಳನ್ನು ಹೆಚ್ಚು ಸ್ವೀಕರಿಸದೆ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಿದ್ದೇವೆ. ಸೇವಾ ಸಿಂಧು ಆ್ಯಪ್ ನಲ್ಲಿ 9000 ಅರ್ಜಿಗಳು ಬಂದಿದ್ದವು. ಅರ್ಜಿ ಹಾಕಿದವರಿಗಿಂತ, ಸಮಿತಿ ಗುರುತಿಸಿದವರಿಗೆ ಪ್ರಶಸ್ತಿ ನೀಡಲಾಗಿದೆ.

ಈಗ ರಾಜ್ಯದ ಅತ್ಯುನ್ನತ ಪ್ರಶಸ್ತಿಯಾದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗಣ್ಯರಿಗೆ ಗೌರವಿಸಲಾಗುತ್ತದೆ. ರಾಜ್ಯೋತ್ಸವ ಪ್ರಶಸ್ತಿಗೆ 67 ಸಾಧಕರನ್ನು ಗುರುತಿಸಲಾಗಿದೆ. ಹಿರಿಯ ನಟರಾದ ದತ್ತಣ್ಣ , ಅವಿನಾಶ್​, ಸಿಹಿಕಹಿ ಚಂದ್ರು ಅವರಿಗೂ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಸೋಲಿಗರಲ್ಲಿ ಸಹಕಾರ ಸಂಸ್ಥೆಗಳ ಕುರಿತು ಅರಿವು ಮೂಡಿಸಿದ ಸೋಲಿಗರ ಮಾದಮ್ಮ, ರಾಮನಗರದ ಸಾಲುಮರದ ನಿಂಗಣ್ಣ, ಉಡುಪಿ ಜಿಲ್ಲೆಯ ದೈವ ನರ್ತಕ ಗುಡ್ಡ ಪಾಣಾರ, ಯಕ್ಷಗಾನ ಕಲಾವಿದರಾದ ಎಂ. ಪ್ರಭಾಕರ ಜೋಷಿ, ಸುಬ್ರಹ್ಮಣ್ಯ ಧಾರೇಶ್ವರ, ಪತ್ರಕರ್ತರಾದ ಎಚ್‌.ಆರ್‌. ಶ್ರೀಶ, ಜಿ.ಎಂ. ಶಿರಹಟ್ಟಿ ರಾಜ್ಯೋತ್ಸವ ಪ್ರಶಸ್ತಿ ಲಭಿಸಲಿದೆ.

ಸಂಘ ಸಂಸ್ಥೆಗಳಿಗೆ ವಿಶೇಷ ಪ್ರಶಸ್ತಿ

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಹತ್ತು ಸಂಘ ಸಂಸ್ಥೆಗಳಿಗೆ ವಿಶೇಷ ಪ್ರಶಸ್ತಿ ಪ್ರಕಟಿಸಲಾಗಿದೆ. ಪುರಸ್ಕೃತರಿಗೆ ತಲಾ ₹ 5 ಲಕ್ಷ ನಗದು, 25 ಗ್ರಾಂ. ಚಿನ್ನ ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗಿದೆ.

LIVE NEWS & UPDATES

The liveblog has ended.
  • 01 Nov 2022 04:46 PM (IST)

    ಪುನೀತ್ ತನ್ನ ಸಾಧನೆ, ಸರಳತೆ ಮೂಲಕ ಜನರ ಮನಗೆದ್ದಿದ್ದಾರೆ: ಡಾ. ವಿರೇಂದ್ರ ಹೆಗ್ಗಡೆ

    ದಕ್ಷಿಣ ಕನ್ನಡ: ಪುನೀತ್​ಗೆ ಕರ್ನಾಟಕ ರತ್ನ ಗೌರವ ದೊರೆತಿದ್ದು ಸಂತಸದ ವಿಚಾರ. ಇಂದು ಪುನೀತ್​ ರಾಜ್​ಕುಮಾರ್​​ರನ್ನು ನಾವೆಲ್ಲ ಸ್ಮರಿಸಬೇಕು ಎಂದು ಮಂಗಳೂರಿನಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ. ಪುನೀತ್​ ತಂದೆ ರಾಜ್​​​ಕುಮಾರ್ ಅವರ​ ನನಗೆ ಅತ್ಯಂತ ಪ್ರೀತಿಯವರು ಮತ್ತು ಕ್ಷೇತ್ರದ ಬಗ್ಗೆ ಅಪಾರ ಗೌರವವಿತ್ತು. ಪುನೀತ್ ತನ್ನ ಸಾಧನೆ, ಸರಳತೆ ಮೂಲಕ ಜನರ ಮನಗೆದ್ದಿದ್ದಾರೆ. ಪುನೀತ್ ನಿಧನ ವಿಚಾರವನ್ನು ಈಗಲೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ಕರ್ನಾಟಕ ರತ್ನ ಪ್ರಶಸ್ತಿ ಪಡೆಯಲು ಪುನೀತ್​ ಅರ್ಹ ವ್ಯಕ್ತಿ ಎಂದು ಹೇಳಿದರು.

    ಪುನೀತ್ ರಾಜ್​​ಕುಮಾರ್​​​​ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ. ರಾಜಕುಮಾರ್​ ಅವರ ಪುತ್ರ ಪುನೀತ್ ತನ್ನ ವೈಯಕ್ತಿಕ ವ್ಯಕ್ತಿತ್ವ, ನಟನೆ ಮತ್ತು ಸ್ವಭಾವದಿಂದ ಪ್ರೀತಿ ಪಾತ್ರರಾಗಿದ್ದರು. ಅವರ ಸಾವು ಇನ್ನೂ ನಮಗೆ ಅರಗಿಸಿಕೊಳ್ಳಲಾಗ್ತಿಲ್ಲ. ಇಂಥಹ ಸಾವು ಅಂತ ದೊಡ್ಡ ಮತ್ತು ಭವಿಷ್ಯವಿದ್ದ ಕಲಾವಿದನಿಗೆ ಬರಬಾರದಿತ್ತು. ಭಗವಂತನ ಪಾದ ಸೇರಿದ ಪುನೀತ್​​ನನ್ನು ಇವತ್ತು ಸ್ಮರಿಸುತ್ತೇನೆ ಎಂದು ಸ್ಮರಿಸಿದರು.

    ಪುನಿತ್​ ಎಲ್ಲಾ ಕಲಾವಿದರಿಗೂ ಇವರು ಸ್ಪೂರ್ತಿಯಾಗಿರಲಿ. ಕನ್ನಡದ ಸೇವೆ, ಸ್ವಭಾವತ ಸ್ನೇಹಪರರಾಗಿದ್ದರೆ ಜನ ಮತ್ತು ಸರ್ಕಾರ ಹೇಗೆ ನಮ್ಮನ್ನು ಸ್ಮರಿಸಿಕೊಳ್ಳುತ್ತೆ ಅನ್ನೋದು ಎಲ್ಲಾ ಕಲಾವಿದರಿಗೂ ಗೊತ್ತಾಗಲಿ. ಪುನೀತ್ ರ ಪುಣ್ಯದಿಂದ ಮತ್ತಷ್ಟು ಉತ್ತಮ ಕಲಾವಿದರು ‌ಮೂಡಿ ಬರಲಿ ಅಂತ ಹಾರೈಸುತ್ತೇನೆ ಎಂದರು.

  • 01 Nov 2022 04:25 PM (IST)

    ಪುನೀತ್​ರನ್ನು ಲೋಹಿತ್​ ಎಂದು ಕರೆಯುತ್ತಿದ್ದ ಸುಧಾಮೂರ್ತಿ

    ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರಿಗೆ  ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಇನ್ಫೋಸಿಸ್​​ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾಮೂರ್ತಿ ಆಗಮಿಸಿದ್ದು, ನಟ ಪುನೀತ್​ ರಾಜ್​ಕುಮಾರ್ ಅನೇಕರಿಗೆ ಮಾದರಿಯಾಗಿದ್ದಾರೆ. ಚಿತ್ರರಂಗದಲ್ಲಿನ ಸಾಧನೆ ಪರಿಗಣಿಸಿ ಪುನೀತ್​ಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗುತ್ತಿದೆ. ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವುದಕ್ಕೆ ಸಂತೋಷ ಆಗುತ್ತಿದೆ. ಪುನೀತ್​ ರಾಜ್​ಕುಮಾರ್​​ ಸಮಾಜಕ್ಕೆ ಒಳ್ಳೆಯ ಚಿತ್ರಗಳನ್ನು ನೀಡಿದ್ದಾರೆ.


  • 01 Nov 2022 11:53 AM (IST)

    Kannada Rajyotsava Celebration Live Updates: ಕನ್ನಡದ ಮನಸ್ಸುಗಳನ್ನು ಗೆದ್ದಂತಹ ವ್ಯಕ್ತಿ ಪುನೀತ್

    ಮಂಗಳೂರು: ಕರ್ನಾಟಕದ ಅತ್ಯುನ್ನತ ಶ್ರೇಷ್ಠ ಪ್ರಶಸ್ತಿ ಕರ್ನಾಟಕ ರತ್ನ ಪ್ರಶಸ್ತಿ‌ಯನ್ನು ಪುನೀತ್ ರಾಜ್ ಕುಮಾರ್ ಅವರಿಗೆ ನೀಡಲಾಗುತ್ತಿದೆ. ಈ ಮೂಲಕ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಣೆ ಮಾಡಲು ಸರ್ಕಾರ ನಿರ್ಧರಿಸಿದೆ, ಸಂಜೆ 5ಗಂಟೆಗೆ ವಿಧಾನಸೌಧದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ‌. ಚಿಕ್ಕ ವಯಸ್ಸಿನಲ್ಲಿ ಹೆಚ್ಚು ಸಾಧನೆ ಮಾಡಿ ಜನಪ್ರೀಯತೆ ಗಳಿದಿದವರು ಮತ್ತು ಕನ್ನಡದ ಮನಸ್ಸುಗಳನ್ನು ಗೆದ್ದಂತಹ ವ್ಯಕ್ತಿ ಪುನೀತ್ ರಾಜ್ ಕುಮಾರ್,  ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಪುನೀತ್ ರಾಜ್ ಕುಮರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಹೇಳಿದರು.

  • 01 Nov 2022 11:23 AM (IST)

    Kannada Rajyotsava Celebration Live Updates: ಅಭಿಮಾನಿಗಳಿಂದ ವಿಧಾನಸೌಧದ ಮುಂದೆ ಅಪ್ಪು ಜಪ

    ಬೆಂಗಳೂರು: ಪುನೀತ್ ರಾಜ್​ಕುಮಾರ್​ಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗುತ್ತಿದೆ. ಸಂಜೆ ವಿಧಾನಸೌಧದ ಮುಂಭಾಗದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ, ಈ ನಿಟ್ಟಿನಲ್ಲಿ ಈಗಾಗಲೇ ವಿಧಾನಸೌಧದ ಬಳಿ ನೂರಾರು ಅಭಿಮಾನಿಗಳು ಆಗಮಿಸಿದ್ದು, ಪುನೀತ್ ನಟನೆಯ ಚಿತ್ರಗಳ ಹಾಡು ಹೇಳುತ್ತಿದ್ದಾರೆ.

  • 01 Nov 2022 10:31 AM (IST)

    Kannada Rajyotsava Celebration Live Updates: ಮಳೆಯಲ್ಲಿಯೇ ಕುಪ್ಪಳಿಸಿದ ಶಾಲಾ ವಿದ್ಯಾರ್ಥಿಗಳು

    ಕೋಲಾರ: ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಸಚಿವ ಮುನಿರತ್ನ ಅವರು ಉದ್ಘಾಟಿಸಿದರು. ಕಾರ್ಯಕ್ರಮದ ಮಧ್ಯೆ ಮಳೆ ಸುರಿಯಲು ಆರಂಭವಾಯಿತು. ಈ ವೇಳೆ ರಾಜ್ಯೋತ್ಸವ ಸಂಭ್ರಮದಲ್ಲಿದ್ದ ಶಾಲಾ ಮಕ್ಕಳೆಲ್ಲರು ಮಳೆಯಲ್ಲಿಯೇ ಕುಣಿದು ಕುಪ್ಪಳಿಸಿದರು.

  • 01 Nov 2022 10:19 AM (IST)

    ನಾಡದ್ರೋಹಿ ಘೋಷಣೆ ಕೂಗಿದ ಎಂಇಎಸ್​ ಕಾರ್ಯಕರ್ತರಿಂದ ಉದ್ಧಟತನ ಪ್ರದರ್ಶನ

    ಬೆಳಗಾವಿ: ಕುಂದಾನಗರಿಯಲ್ಲಿ ಒಂದೆಡೆ ಅದ್ದೂರಿ ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆಮಾಡಿದ್ದರೆ ಮತ್ತೊಂದೆಡೆ ಕರ್ನಾಟಕ ರಾಜ್ಯೋತ್ಸವಕ್ಕೆ ಪ್ರತಿಯಾಗಿ ಎಂಇಎಸ್ ಕರಾಳ ದಿನಾಚರಣೆ ಆಚರಣೆ ಮಾಡುತ್ತಿದೆ. ಬೆಳಗಾವಿಯ ಸಂಭಾಜಿ ಮೈದಾನದಿಂದ ಕರಾಳ ದಿನದ ಮೆರವಣಿಗೆಗೆ ಚಾಲನೆ ನೀಡಲಾಗಿದ್ದು, ಮೆರವಣಿಗೆ ಆರಂಭವಾಗುತ್ತಿದ್ದಂತೆ ಕಾರ್ಯಕರ್ತರು ಪುಂಡಾಟ ಶುರು ಮಾಡಿದ್ದಾರೆ. ಬೆಳಗಾವಿ, ಬೀದರ್, ಬಾಲ್ಕಿ, ನಿಪ್ಪಾಣಿ,‌ ಖಾನಾಪುರ ‌ಸೇರಿ ಗಡಿಭಾಗಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಘೋಷಣೆ ಕೂಗಿ ಉದ್ಧಟತನ ಪ್ರದರ್ಶನ ಮಾಡಿದ್ದಾರೆ. ಇದೇ ವೇಳೆ ಮಹಾರಾಷ್ಟ್ರಕ್ಕೆ ಸೇರುತ್ತೇವೆ ಇಲ್ಲವಾದರೆ ಜೈಲಿಗೆ ಹೋಗುತ್ತೇವೆ ಎಂಬ ಘೋಷಣೆಯೂ ಕೂಗಿದ್ದಾರೆ.
    ಕಪ್ಪು ಬಟ್ಟೆ ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡ ಎಂಇಎಸ್ ಪುಂಡರ ಪುಂಡಾಟಿಕೆ ಹತ್ತಿಕ್ಕಲು ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

  • 01 Nov 2022 10:14 AM (IST)

    Kannada Rajyotsava Celebration Live Updates: ಕರುನಾಡಿನಲ್ಲಿ ಹುಟ್ಟಬೇಕಾದರೆ ಏಳೇಳು ಜನ್ಮದದಲ್ಲಿ ಪುಣ್ಯ ಮಾಡಿರಬೇಕು: ಸಿಎಂ

    ಬೆಂಗಳೂರು: ಈ ನಾಡಿನಲ್ಲಿ ಹುಟ್ಟ ಬೇಕಾದರೆ ಏಳೇಳು ಜನ್ಮದ ಪುಣ್ಯ ಮಾಡಿರಬೇಕು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು. ಕಂಠೀರವ ಸ್ಟೇಡಿಯಂನಲ್ಲಿ ಶಿಕ್ಷಣ ಇಲಾಖೆ ಆಯೋಜಿಸಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕನ್ನಡ ನಾಡು ಪುಣ್ಯದ ಬೀಡು. ಅತ್ಯಂತ ಸಂಪತ್ದಬರಿತ ನಾಡು ನಮ್ಮ ನಾಡು. ಕರ್ನಾಟಕದ ಏಕೀಕರಣ ಹೋರಾಟದ ಯಾರೂ ಮರೆಯುವಂತಿಲ್ಲ. ಮದ್ರಾಸ್ ಕರಾವಳಿ ಮಧ್ಯ ಕರ್ನಾಟಕ ಅಂತ ಹಂಚಿ ಹೋಗಿತ್ತು. ಆದರೆ ಅದನ್ನ ಹಾಲೂರು ವೆಂಕಟರಾಯರು ಹೋರಾಟ ಮಾಡಿ ಕರ್ನಾಟಕ ಏಕೀಕರಣ ಮಾಡಿದರು. ಇದರಲ್ಲಿ ಹಲವಾರು ಮಹನೀಯರ ಶ್ರಮ ಇದೆ. ಇದಕ್ಕೆ ರಾಷ್ಟ್ರ ಕವಿ ಕುವೆಂಪು ಕೂಡಾ ಹಿಂಪನ್ನ ನೀಡಿದ್ದರು. ಶಿಕ್ಷಣ ಆರೋಗ್ಯ, ಉದ್ಯೋಗ ಜೊತೆ ಭಾರತದ ಭವಿಷ್ಯವನ್ನೂ ನಿರ್ಮಾಣ ಮಾಡುವ ಶಕ್ತಿ ಕರ್ನಾಟಕಕ್ಕೆ ಇದೆ ಎಂದರು.

  • 01 Nov 2022 09:48 AM (IST)

    Kannada Rajyotsava Celebration Live Updates: ದೇವನಹಳ್ಳಿಯಲ್ಲಿ ಕನ್ನಡ ರಾಜ್ಯೋತ್ಸವ

    ದೇವನಹಳ್ಳಿ: ನಾಡಿನೆಲ್ಲೆಡೆ 67 ನೇ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ ನಡೆಯುತ್ತಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲೂ ರಾಜ್ಯೋತ್ಸವ ಸಂಭ್ರಮ‌ ಮನೆ ಮಾಡಿದೆ. ದೇವನಹಳ್ಳಿ ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾದ ಧ್ವಜಾರೋಹಣದಲ್ಲಿ ಭಾಗಿಯಾದ ಜಿಲ್ಲಾ ‌ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರು ಕನ್ನಡ ಧ್ವಜಾರೋಹಣ ನೆರವೇರಿಸಿದರು. ಬಳಿಕ ತೆರೆದ ವಾಹನದಲ್ಲಿ ತೆರಳಿ ಗೌರವ ವಂದನೆ ಸ್ವೀಕಾರ ಮಾಡಿದರು. ಇದೇ ವೇಳೆ ಪೊಲೀಸ್ ಎನ್​ಸಿಸಿ ಮತ್ತು ಶಾಲಾ ಮಕ್ಕಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಕಾರ್ಯಕ್ರಮದಲ್ಲಿ ಸ್ಥಳಿಯ ಶಾಸಕ, ಡಿಸಿ, ಎಸ್​ಪಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಜನಪ್ರತಿನಿಧಿಗಳು ಭಾಗಿಯಾದರು.

  • 01 Nov 2022 09:44 AM (IST)

    Kannada Rajyotsava Celebration Live Updates: ಕಾರವಾರ ನಗರದ ಡಿ.ಆರ್ ಕ್ರೀಡಾಂಗಣದಲ್ಲಿ ಧ್ವಜಾರೋಹಣ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ 67 ನೇ ಕನ್ನಡ ರಾಜ್ಯೋತ್ಸವ ಸಂಭ್ರಮ ಮನೆಮಾಡಿದ್ದು, ಕಾರವಾರ ನಗರದ ಡಿ.ಆರ್ ಕ್ರೀಡಾಂಗಣದಲ್ಲಿ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಕನ್ನಡ ಧ್ವಜಾರೋಹಣ ನೆರವೇರಿಸಿದರು. ಬಳಿಕ ಪೊಲೀಸ್, ಡಿಆರ್, ಎನ್ಎಸ್ಎಸ್, ಅರಣ್ಯ ಸಿಬ್ಬಂದಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ಇದೇ ವೇಳೆ ಕನ್ನಡ ಸಂಸ್ಕೃತಿ ಮೆರೆಯುವ ಸ್ತಬ್ಧ ಚಿತ್ರಗಳ ಮೆರವಣಿಗೆ ನಡೆಯಿತು. ಕಾರ್ಯಕ್ರಮದಲ್ಲಿ ಶಾಸಕಿ ರೂಪಾಲಿ ನಾಯ್ಕ, ಎಂಎಲ್​ಸಿ ಗಣಪತಿ ಉಳ್ವೆಕರ್, ಡಿಸಿ, ಎಸ್​ಪಿ, ಸಿಇಓ ಸೇರಿದಂತೆ ಹಲವು ಗಣ್ಯರು ಭಾಗಿಯಾದರು.

  • 01 Nov 2022 09:15 AM (IST)

    Kannada Rajyotsava Celebration Live Updates: ಕನ್ನಡ ರಾಜ್ಯೋತ್ಸವ ಹಿನ್ನೆಲೆ ಅಟೋಗಳ ಮೆರವಣಿಗೆ

    ಕೊಪ್ಪಳ: ಕನ್ನಡ ರಾಜ್ಯೋತ್ಸವ ಹಿನ್ನೆಲೆ ಜಿಲ್ಲೆಯ ಗಂಗಾವತಿ ತಾಲೂಕಿನ ಬಂಡಿಹರ್ಲಾಪುರ ಗ್ರಾಮದಲ್ಲಿ ಕರ್ನಾಟಕ ಚಾಲಕರ ಒಕ್ಕೂಟದಿಂದ ಅದ್ದೂರಿ ಕನ್ನಡ ರಾಜ್ಯೋತ್ಸವ ನಡೆಸಲಾಯಿತು. ರಾಜ್ಯೋತ್ಸವದ ಪ್ರಯುಕ್ತ ಆಟೋಗಳ ಮೆರವಣಿಗೆ ಕೂಡ ನಡೆಸಲಾಯಿತು. 30 ಅಟೋಗಳಿಗೆ ತಾಯಿ ಭುವನೇಶ್ವರಿ ಭಾವಚಿತ್ರ ಹಾಗೂ ಕನ್ನಡ ಬಾವುಟ ಅಳವಡಿಸಿ ಬಂಡಿಹರ್ಲಾಪುರ ಗ್ರಾಮದಿಂದ ಹುಲಗಿ ಗ್ರಾಮದವರೆಗೆ ಮೆರವಣಿಗೆ ನಡೆಸಲಾಯಿತು. ಇದೇ ವೇಳೆ ಪುನಿತ್ ರಾಜ್ ಕುಮಾರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪಟಾಕಿ ಹೊಡೆದು ಸಂಭ್ರಮಾಚರಣೆ ಮಾಡಲಾಯಿತು.

  • 01 Nov 2022 09:12 AM (IST)

    Kannada Rajyotsava Celebration Live Updates: ಅಪ್ಪು ಪೋಟೋ ಇಟ್ಟುಕೊಂಡು ಪೂಜಿಸುತ್ತಿರುವ ತಿಮ್ಮಣ್ಣ ಮತ್ತು ಮಕ್ಕಳು

    ಬೆಂಗಳೂರು: ಬಾಲನಟನಿಂದ ಚಿತ್ರರಂಗಕ್ಕೆ ಸಲ್ಲಿಸಿದ ಸೇವೆಯ ಜೊತೆ ಸಮಾಜ ಸೇವೆಯ ಕೆಲಸಗಳನ್ನ ಗುರುತಿಸಿ ಪುನೀತ್ ರಾಜ್​ಕುಮಾರ್​ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಈ ನಡುವೆ ತಿಮ್ಮಣ್ಣ ಮತ್ತು ಮಕ್ಕಳು ಅಪ್ಪು ಫೋಟೋ ಇಟ್ಟುಕೊಂಡು ಪೂಜಿಸುತ್ತಿರುವುದು ಕಂಡುಬಂದಿದೆ. ಅಪ್ಪು ವಾಕಿಂಗ್​ಗಾಗಿ ಬರುತ್ತಿದ್ದ ರಮಣಶ್ರೀ ಪಾರ್ಕ್ ಸಿಬ್ಬಂದಿಗೆ ಸಹಾಯ ಮಾಡಿದ್ದರು.
    ಟಿವಿ ಮತ್ತು ಮಕ್ಕಳಿಗೆ ಎರಡು ಸೈಕಲ್ ಕೊಡಿಸಿದ್ದರು. ಲಾಕ್ ಡೌನ್ ಟೈಮ್​ನಲ್ಲಿ ಮಕ್ಕಳಿಗೆ ಮನೆಯಿಂದಲೇ ಊಟ ತಂದುಕೊಡುತ್ತಿದ್ದರು ಎಂದು ಹೇಳಿ ತಿಮ್ಮಣ್ಣ ಭಾವುಕರಾದರು. ಅಲ್ಲದೆ  ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿ ನಾವು ನೋಡಲು ಹೋಗುತ್ತಿದ್ದೇವೆ ಎಂದರು.

  • 01 Nov 2022 09:02 AM (IST)

    Kannada Rajyotsava Celebration Live Updates: ಅಪ್ಪು ಸಮಾಧಿ ಮುಂದೆ ಹುಟ್ಟುಹಬ್ಬ ಆಚರಣೆ

    ಬೆಂಗಳೂರು: ಧಾರವಾಡದ ಐದು ವರ್ಷದ ಬಾಲೆ ಪ್ರತಿಜ್ಞಾ ಪುನೀತ್ ಅಭಿಮಾನಿಯಾಗಿದ್ದಾಳೆ. ಇಂದು ಈಕೆಯ ಹುಟ್ಟುಹಬ್ಬ. ಹೀಗಾಗಿ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿ ಮುಂದೆ ಹುಟ್ಟುಹಬ್ಬ ಆಚರಿಸುವ ನಿಟ್ಟಿನಲ್ಲಿ ಶ್ರೀನಾಥ್ ಮತ್ತು ಅನುರಾಧ ದಂಪತಿ ಬೆಂಗಳೂರಿಗೆ ಆಗಮಿಸಿದ್ದಾರೆ. ಜನ್ಮದಿನ ಆಚರಣೆಗೂ ಮುನ್ನ ಅಶ್ವಿನಿ ಪುನೀತ್ ರಾಜ್ ಕುಮಾರ್ ಆಶೀರ್ವಾದ ಪಡೆಯಲು ಪುನೀತ್ ನಿವಾಸದ ಬಳಿ ಪುತ್ರಿ ಸಹಿತ ದಂಪತಿ ಕಾಯುತ್ತಿದ್ದಾರೆ. ಪುನೀತ್ ನಿವಾಸದ ಮುಂದೆ ಇರುವ ಗಣೇಶ ಮೂರ್ತಿಗೆ ನಮಸ್ಕರಿಸಿ ನಿಂತುಕೊಂಡಿದ್ದಾರೆ.

  • 01 Nov 2022 08:58 AM (IST)

    Kannada Rajyotsava Celebration Live Updates: ಪುನೀತ್ ನಿವಾಸದ ಮಿಂದೆ ಆಗಮಿಸಿರುವ ಅಭಿಮಾನಿಗಳು

    ಬೆಂಗಳೂರು: ಇಂದು ಪುನೀತ್ ರಾಜ್ ಕುಮಾರ್​ಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಹೀಗಾಗಿ ಸದಾಶಿವನಗರದಲ್ಲಿರುವ ಅಪ್ಪು ನಿವಾಸದ ಮುಂದೆ ಧಾರವಾಡದ ಮಹಿಳಾ ಅಭಿಮಾನಿಗಳು ಆಗಮಿಸಿದ್ದು, ಪುನೀತ್ ಪತ್ನಿ ಅಶ್ವಿನಿ ಭೇಟಿಯಾಗಿ ಕಂಠೀರವ ಸ್ಟುಡಿಯೋಗೆ ತೆರಳಿ ಸಮಾಧಿ ದರ್ಶನ ಮಾಡಲಿದ್ದಾರೆ.

  • 01 Nov 2022 08:33 AM (IST)

    ಕಲಬುರ್ಗಿ: ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಧ್ವಜಾರೋಹಣಕ್ಕೆ ಮುಂದಾದವರ ಬಂಧನ

    ಕಲಬುರ್ಗಿ: ಕಲ್ಯಾಣ ಕರ್ನಾಟಕವನ್ನು ಸಮಗ್ರ ಕರ್ನಾಟಕದಿಂದ ಪ್ರತ್ಯೇಕಗೊಳಿಸಬೇಕು ಎಂದು ಆಗ್ರಹಿಸಿ ಪ್ರತ್ಯೇಕ ರಾಜ್ಯದ ಧ್ವಜಾರೋಹಣಕ್ಕೆ ಮುಂದಾದ ‘ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ’ ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ. ಮುಂಜಾನೆ 7.30ಕ್ಕೆ ಕಲಬುರ್ಗಿ ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ಧ್ವಜಾರೋಹಣ ನಡೆಸುವುದಾಗಿ ಸಮಿತಿ ಸದಸ್ಯರು ಈ ಮೊದಲೇ ಘೋಷಿಸಿದ್ದರು. ಕರ್ನಾಟಕ ಸರ್ಕಾರದಿಂದ ತಮಗೆ ಅನ್ಯಾಯವಾಗುತ್ತಿದೆ. ತಾರತಮ್ಯ ಅನುಭವಿಸುತ್ತಿದ್ದೇವೆ ಎಂದು ಸಮಿತಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರತ್ಯೇಕ ಧ್ವಜಾರೋಹಣ ಪ್ರಯತ್ನ ನಡೆಯಬಹುದು ಎಂಬ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ದಿವಂಗತ ಉಮೇಶ್ ಕತ್ತಿ, ವೈಜನಾಥ್ ಪಾಟೀಲ್ ಚಿತ್ರಪಟಗಳನ್ನು ಹೋರಾಟಗಾರರು ಧ್ವಜಸ್ತಂಭದ ಬಳಿಗೆ ತಂದಿದ್ದರು.

  • 01 Nov 2022 08:27 AM (IST)

    Kannada Rajyotsava Celebration Live Updates: ಮಧ್ಯರಾತ್ರಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

    ಬೆಳಗಾವಿ: ಜಿಲ್ಲೆಯಲ್ಲಿ ಮಧ್ಯರಾತ್ರಿಯೇ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಯಿತು. ಚೆನ್ನಮ್ಮ ವೃತ್ತದಲ್ಲಿ ಕರವೇ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ನೇತೃತ್ವದಲ್ಲಿ ಕೇಕ್​ ಕತ್ತರಿಸಿ, ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಲಾಯಿತು. ಇದೇ ವೇಳೆ ದಿವಂಗತ ನಟ ಪುನೀತ್ ರಾಜ್​ಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಘೋಷಣೆ ಕೂಗಲಾಯಿತು. ಪುಟ್ಟ ಮಕ್ಕಳ ಕನ್ನಡ ಹಾಡುಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಸಂಭ್ರಮಾಚರಣೆ ಮುಗಿಯುತ್ತಿದ್ದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಎಲ್ಲರನ್ನೂ ಮನೆಗೆ ಕಳುಹಿಸಿದ್ದಾರೆ.

  • 01 Nov 2022 08:24 AM (IST)

    Kannada Rajyotsava Celebration Live Updates: ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ; ವಿಧಾನಸೌಧದ ಸುತ್ತಮುತ್ತ ಬಿಗಿ ಭದ್ರತೆ

    ಬೆಂಗಳೂರು: ನಟ ಪುನೀತ್​ ರಾಜ್​ಕುಮಾರ್​ಗೆ ಇಂದು ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಹಿನ್ನೆಲೆ ವಿಧಾನಸೌಧದ ಸುತ್ತಮುತ್ತ ಪೊಲೀಸ್ ಬಿಗಿ ಬಂದೋಬಸ್ತ್​ ಕೈಗೊಳ್ಳಲಾಗಿದೆ. ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸಗೌಡ ನೇತೃತ್ವದಲ್ಲಿ ಭದ್ರತೆ ಕೈಗೊಳ್ಳಲಾಗಿದ್ದು, 9 ಎಸಿಪಿ, 21 ಪೊಲೀಸ್ ಇನ್ಸ್​ಪೆಕ್ಟರ್, 30 ಪಿಎಸ್​ಐಗಳು, 300 ಕಾನ್ಸ್​ಟೇಬಲ್​ಗಳು​, 6 ಕೆಎಸ್​ಆರ್​ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಮಧ್ಯಾಹ್ನ 12ರ ನಂತರ ಅಂಬೇಡ್ಕರ್​ ರಸ್ತೆಯಲ್ಲಿ ಸಂಚಾರ ಬಂದ್​ ಮಾಡಲಾಗುತ್ತದೆ . ಸಂಚಾರ ವಿಭಾಗದ ಡಿಸಿಪಿ ನೇತೃತ್ವದಲ್ಲಿ ಟ್ರಾಫಿಕ್​ ನಿರ್ವಹಣೆ ಮಾಡಲಾಗುತ್ತಿದ್ದು, 500ಕ್ಕೂ ಹೆಚ್ಚು ಟ್ರಾಫಿಕ್​ ಪೊಲೀಸರ ನಿಯೋಜನೆ ಮಾಡಲಾಗಿದೆ.

  • 01 Nov 2022 08:18 AM (IST)

    Kannada Rajyotsava Celebration Live Updates: ಸಕ್ಕರೆನಾಡು ಮಂಡ್ಯದಲ್ಲೊಬ್ಬ ಅಪ್ಪಟ ಕನ್ನಡಾಭಿಮಾನಿ

    ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ ಹೀಗೊಬ್ಬ  ಅಪ್ಪಟ ಕನ್ನಡಾಭಿಮಾನಿ. ಈ ಕನ್ನಡಾಭಿಮಾನಿಯ ಅಭಿಮಾನಕ್ಕೆ ಸಾಕ್ಷಿ ಈತನ ಬಣ್ಣದ ಮನೆ. ಶ್ರೀರಂಗಪಟ್ಟಣ ತಾಲೂಕಿನ ಕುಪ್ಪೆದಡ ಗ್ರಾಮದ ಶಿವನಂಜು ಮನೆ ಕನ್ನಡ ಭಾವುಟ ಬಣ್ಣ (ಹಳದಿ ಮತ್ತು ಕೆಂಪು)ದಿಂದ ಕೂಡಿದೆ. ಈ ಬಣ್ಣದ ಮನೆಯಲ್ಲಿ ಕನ್ನಡಾಂಭೆಗೆ ಗರ್ಭಗುಡಿ ನಿರ್ಮಾಣ ಮಾಡಿ ನಿತ್ಯ ಪೂಜೆ ಮಾಡಲಾಗುತ್ತದೆ. ಅಲ್ಲದೆ ಕನ್ನಡ ಸಾಹಿತ್ಯದ ಕಂಪು ಹರಡಿದ ಕನ್ನಡದ ಕವಿಗಳ ಭಾವಚಿತ್ರಗಳನ್ನು ಮನೆಯಲ್ಲಿ ಇರಿಸಲಾಗಿದೆ. ಇಂದು ಮನೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿ ಸ್ನೇಹಿತರ ಜೊತೆ ಸಂಭ್ರಮಿಸಲಾಗುತ್ತಿದೆ. ಈತನ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  • 01 Nov 2022 08:03 AM (IST)

    ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ರಾಜ್ಯೋತ್ಸವ ಇಲ್ಲ

    ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಕನ್ನಡ ರಾಜೋತ್ಸವಕ್ಕೆ ಕಂದಾಯ ಇಲಾಖೆ ಅನುಮತಿ ನಿರಾಕರಿಸಿದೆ. ಮೈದಾನದ ಸುತ್ತಲೂ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ. ಸುಮಾರು 200 ಪೊಲೀಸರು ಹಾಗೂ 2 ಕೆಎಸ್​ಆರ್​ಪಿ ತುಕಡಿಗಳನ್ನು ನಿಯೋಜಿಸಲಾಗಿದೆ.

  • 01 Nov 2022 07:56 AM (IST)

    Kannada Rajyotsava Celebration Live Updates: ಬೆಳಗಾವಿ- ರಾಜ್ಯೋತ್ಸವ ಸಂಭ್ರಮ ಹೆಚ್ಚಿಸಲಿದೆ 1 ಲಕ್ಷ ಹೋಳಿಗೆ

    ಬೆಳಗಾವಿ: ಗಡಿನಾಡು ಬೆಳಗಾವಿಯಲ್ಲಿ ರಾಜ್ಯೋತ್ಸವಕ್ಕೆ ಅದ್ಧೂರಿ ಸಿದ್ಧತೆ ನಡೆದಿದೆ. ರಾಜ್ಯೋತ್ಸವ ಮೆರವಣಿಗೆಯಲ್ಲಿ ಭಾಗವಹಿಸುವ ಕನ್ನಡಿಗರಿಗಾಗಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರ ನೇತೃತ್ವದಲ್ಲಿ ದಾಸೋಹದ ವ್ಯವಸ್ಥೆ ಮಾಡಲಾಗಿದೆ. ಸುಮಾರು 50 ಸಾವಿರ ಮಂದಿ ಪಾಲ್ಗೊಳ್ಳುವ ಸಾಧ್ಯತೆಯಿದ್ದು, ಇದಕ್ಕಾಗಿ 1 ಲಕ್ಷ ಹೋಳಿಗೆ ಸಿದ್ಧಪಡಿಸಲಾಗಿದೆ. ಕಳೆದ ಎರಡು ದಿನಗಳಿಂದ ಹೂರಣದ ಹೋಳಿಗೆ ಸಿದ್ಧಪಡಿಸುವ ಕೆಲಸ ನಡೆಯುತ್ತಿದ್ದು, ಸುಮಾರು 200 ಮಹಿಳೆಯರು ಅಡುಗೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಹೋಳಿಗೆ ದಾಸೋಹಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮತ್ತು ಚಿತ್ರನಟ ಸಾಯಿಕುಮಾರ್ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ತಲಾ ಎರಡು ಹೋಳಿಗೆ, ಅನ್ನ ಸಾಂಬಾರ್, ಬದನೆಕಾಯಿ, ಆಲೂಗಡ್ಡೆ ಪಲ್ಯ ವಿತರಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

    ಬೆಳಗಾವಿಯಲ್ಲಿ ಮಧ್ಯರಾತ್ರಿಯೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

Published On - 7:43 am, Tue, 1 November 22

Follow us on