ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆ ನಡೆಸಿರುವ ವಿದ್ಯಾರ್ಥಿಗಳಿಗೆ ಬಿಗ್ ಶಾಕ್: ಪರೀಕ್ಷಾ ಶುಲ್ಕ ಏರಿಕೆ
ಬಸ್ ಟಿಕೆಟ್ ದರ ಹಾಗೂ ನಂದಿನಿ ಹಾಲಿನ ದರ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಅಂತಿಮ ಚರ್ಚೆ ನಡೆಸಿದೆ. ಇದರ ಮಧ್ಯೆ 2026-27ನೇ ಸಾಲಿನ SSLC ಪರೀಕ್ಷೆ ಬರೆಯಲು ಸಿದ್ದತೆ ನಡೆಸಿರುವ ವಿದ್ಯಾರ್ಥಿಗಳಿಗೆ ಶಾಕ್ ಕೊಟ್ಟಿದೆ. ಹೌದು...ಹೊಸದಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವವರು, ಖಾಸಗಿ ಹಾಗೂ ಪುನರಾವರ್ತಿತ ಅಭ್ಯರ್ಥಿಗಳ ನೋಂದಣಿ ಮತ್ತು ಪರೀಕ್ಷಾ ಶುಲ್ಕಗಳು ಏರಿಕೆ ಮಾಡಿ ಶಾಲಾ ಶಿಕ್ಷಣ ಮೌಲ್ಯಮಾಪನ ಮಂಡಳಿ ಆದೇಶ ಹೊರಡಿಸಿದೆ. ಹಾಗಾದ್ರೆ, ಯಾರ್ಯಾರಿಗೆ ಎಷ್ಟು ಶುಲ್ಕ ಹೆಚ್ಚಳ ಎನ್ನುವ ವಿವರ ಇಲ್ಲಿದೆ.

ಬೆಂಗಳೂರು, (ಅಕ್ಟೋಬರ್ 04): 2026-27ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು ಪರೀಕ್ಷಾ ಶುಲ್ಕವನ್ನು ಶೇ.5ರಷ್ಟು ಹೆಚ್ಚಿಸಿ ಆದೇಶ ಹೊರಡಿಸಿದೆ. ಹೊಸದಾಗಿ ಪರೀಕ್ಷೆ ಬರೆಯುವವರು, ಖಾಸಗಿ ಹಾಗೂ ಪುನರಾವರ್ತಿತ ಅಭ್ಯರ್ಥಿಗಳ ನೋಂದಣಿ ಮತ್ತು ಪರೀಕ್ಷಾ ಶುಲ್ಕಗಳನ್ನು ಸಹ ಏರಿಕೆ ಮಾಡಲಾಗಿದೆ. ಪ್ರಥಮ ಬಾರಿಗೆ ಪರೀಕ್ಷೆ ಬರೆಯುವವರಿಗೆ ಪರೀಕ್ಷಾ ಶುಲ್ಕವನ್ನು ಶೇ.5ರಷ್ಟು ಹೆಚ್ಚಳ ಮಾಡಲಾಗಿದೆ. ಈ ಮೂಲಕ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಶುಲ್ಕ 710 ರೂಪಾಯಿಗಳಿಂದ 746 ರೂಪಾಯಿಗೆ ಏರಿಕೆಯಾಗಿದೆ.
ಈಗಾಗಲೇ ನೋಂದಣಿ ಮಾಡಿಕೊಂಡವರೂ ಪಾವತಿಸಬೇಕು ಹೆಚ್ಚುವರಿ ಹಣ
ಈಗಾಗಲೇ 10ನೇ ತರಗತಿ ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಂಡಿರುವ ಅಭ್ಯರ್ಥಿಗಳಿಗೂ ಹೆಚ್ಚುವರಿ ಶುಲ್ಕ ಪಾವತಿ ಮಾಡುವಂತೆ ಶಾಲಾ ಶಿಕ್ಷಣ ಮೌಲ್ಯಮಾಪನ ಮಂಡಳಿ ಆದೇಶದಲ್ಲಿ ತಿಳಿಸಿದೆ. ಹೀಗಾಗಿ ಈಗಾಗಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿರುವ ವಿದ್ಯಾರ್ಥಿಗಳು 76 ಹೆಚ್ಚುವರಿ ಶುಲ್ಕ ಪಾವತಿಸಬೇಕಿದೆ.
ಇದನ್ನೂ ಓದಿ: ಕಡತ ವಿಲೇವಾರಿ ತ್ವರಿತಗೊಳಿಸಲು ಸರ್ಕಾರ ದಿಟ್ಟ ಹೆಜ್ಜೆ: ಡಿಪಿಎಆರ್ ಸುತ್ತೋಲೆಯ ವಿವರ ಹೀಗಿದೆ
ಪುನರಾವರ್ತಿತ ಅಭ್ಯರ್ಥಿಗಳಿಗೂ ಶುಲ್ಕ ಹೆಚ್ಚಳ
ಇನ್ನು ಪುನರಾವರ್ತಿತವಾಗಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಶುಲ್ಕದಲ್ಲೂ ಏರಿಕೆಯಾಗಿದೆ. ಈ ಮೊದಲು ಒಂದು ವಿಷಯಕ್ಕೆ 448 ರೂಪಾಯಿ ಪಾವತಿಸಬೇಕಿತ್ತು. ಆದರೆ ಈ ಒಂದು ವಿಷಯಕ್ಕೆ 470 ರೂಪಾಯಿ ಪಾವತಿಸಬೇಕಿದೆ. ಇನ್ನು ಎರಡು ವಿಷಯಕ್ಕೆ 559 ರೂ,ನಿಂದ 587 ರೂಪಾಯಿಗೆ ಏರಿಕೆ ಮಾಡಲಾಗಿದೆ. ಅಷ್ಟೇ ಅಲ್ಲದೇ ಮೂರು ಅಥವಾ ಮೂರಕ್ಕಿಂತ ಹೆಚ್ಚಿನ ವಿಷಯಗಳಿಗೆ ಪರೀಕ್ಷೆ ಬರೆಯುವವರು 752 ರೂಪಾಯಿಗಳ ಬದಲಿಗೆ 790 ರೂಪಾಯಿ ಪಾವತಿಸಬೇಕು.
ಎಸ್‌ಎಸ್‌ಎಲ್‌ಸಿ ನೋಂದಣಿ ಶುಲ್ಕವೂ ಏರಿಕೆ
ಇನ್ನು ಎಸ್‌ಎಸ್‌ಎಲ್‌ಸಿ ಪರೀಕ್ಷಾ ಶುಲ್ಕ ಮಾತ್ರವಲ್ಲದೇ ಎಸ್‌ಎಸ್‌ಎಲ್‌ಸಿ ನೋಂದಣಿ ಶುಲ್ಕವೂ ಇದೀಗ ಏರಿಕೆಯಾಗಿದೆ. ಈ ಮೊದಲು ಹೊಸದಾಗಿ ನೋಂದಣಿಯಾಗುವ ಖಾಸಗಿ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ನೋಂದಣಿ ಶುಲ್ಕ 248 ರುಪಾಯಿ ಪಾವತಿಸಬೇಕಿತ್ತು. ಈಗ 260 ರೂಪಾಯಿಗೆ ಏರಿಕೆಯಾಗಿದೆ. ಅಂದರೆ ಖಾಸಗಿ ಅಭ್ಯರ್ಥಿಗಳು ನೋಂದಣಿ ಶುಲ್ಕವನ್ನೂ 12 ರೂಪಾಯಿ ಹೆಚ್ಚುವರಿಯಾಗಿ ವಿದ್ಯಾರ್ಥಿಗಳು ಪಾವತಿಸಬೇಕಿದೆ. ಇನ್ನು ಈಗಾಗಲೇ ಖಾಸಗಿ ಅಭ್ಯರ್ಥಿಯಾಗಿ ನೋಂದಣಿಯಾಗಿ ಪರೀಕ್ಷಾ ಶುಲ್ಕ ಪಾವತಿಸಿದ ಅಭ್ಯರ್ಥಿಗಳ ನೋಂದಣಿ ಶುಲ್ಕ 72 ರೂಪಾಯಿಗಳಿಂದ 76 ರೂಪಾಯಿಗೆ ಏರಿಕೆ ಮಾಡಲಾಗಿದೆ.




