Karnataka SSLC Exam 2021 Timetable: SSLC ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ; ಜೂ.21 ರಿಂದ ಎಕ್ಸಾಂ ಶುರು

| Updated By: Digi Tech Desk

Updated on: Mar 01, 2021 | 9:50 PM

Karnataka Class 10 Exam 2021 Time Table: SSLC ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟವಾಗಿದೆ. ಜೂ.21 ರಿಂದ ಜುಲೈ 5 ರವರೆಗೆ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಯಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

Karnataka SSLC Exam 2021 Timetable: SSLC ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ; ಜೂ.21 ರಿಂದ ಎಕ್ಸಾಂ ಶುರು
ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್
Follow us on

Karnataka SSLC Exam 2021 Schedule Released: ಧಾರವಾಡ: SSLC ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟವಾಗಿದೆ. ಜೂ.21 ರಿಂದ ಜುಲೈ 5 ರವರೆಗೆ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಯಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ. ಈ ಮೊದಲು, ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದ್ದು, ಸಲಹೆ, ಮನವಿಗಳನ್ನು ಪರಿಗಣಿಸಿ ಅಂತಿಮ ವೇಳಾಪಟ್ಟಿ ಪ್ರಕಟಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಪರೀಕ್ಷಾ ಅಂತಿಮ ವೇಳಾಪಟ್ಟಿ ವಿವರ ಹೀಗಿದೆ
1. ಜೂನ್ 21: ಪ್ರಥಮ ಭಾಷೆಗಳಾದ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ ಪರೀಕ್ಷೆ
2. ಜೂನ್​ 24: ಗಣಿತ
3. ಜೂನ್​ 28: ವಿಜ್ಞಾನ ಪರೀಕ್ಷೆ
4. ಜೂ.30: ತೃತೀಯ ಭಾಷೆಗಳಾದ ಹಿಂದಿ, ಕನ್ನಡ, ಇಂಗ್ಲಿಷ್, ಅರೆಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು
5. ಜುಲೈ 2: ದ್ವಿತೀಯ ಭಾಷೆ ಇಂಗ್ಲಿಷ್/ ಕನ್ನಡ
6. ಜುಲೈ 5: ಸಮಾಜ ವಿಜ್ಞಾನ ಪರೀಕ್ಷೆ

‘ಕೊವಿಡ್​ ಶಿಕ್ಷಣದ ಮೇಲೆ ಭಾರಿ ಪರಿಣಾಮವನ್ನ ಬೀರಿದೆ’
ಕೊವಿಡ್​ ಶಿಕ್ಷಣದ ಮೇಲೆ ಭಾರಿ ಪರಿಣಾಮವನ್ನ ಬೀರಿದೆ ಎಂದು ನಗರದಲ್ಲಿ ಸಚಿವ ಸುರೇಶ್ ಕುಮಾರ್ ಹೇಳಿದರು. ನಾವು ಕೂಡ ಒಂದನೇ ತರಗತಿ ಆರಂಭಿಸಬೇಕೆಂದೆದ್ದೆವು. ಆದರೆ‌ ಮತ್ತೆ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಅಕ್ಕಪಕ್ಕದ‌ ರಾಜ್ಯದಲ್ಲಿ ಕೊರೊನಾ ಪ್ರಮಾಣ ಹೆಚ್ಚಿದೆ. ಹೀಗಾಗಿ‌‌ ಇನ್ನೂ ವಾರ ನೋಡುತ್ತೇವೆ. ಒಂದು ವಾರದ ಬಳಿಕ ಈ ಬಗ್ಗೆ ನಿರ್ಧರಿಸಲಾಗುವುದು. ಜುಲೈ 15 ರಿಂದ ಮುಂದಿನ ಶೈಕ್ಷಣಿಕ ವರ್ಷ ಆರಂಭವಾಗುವುದು ಎಂದು ಸಚಿವರು ಹೇಳಿದರು.

‘ಪೋಷಕರಿಗೂ ನಮ್ಮ ಶಾಲೆ ಎಂಬ ಅಭಿಮಾನ ಇರಬೇಕು’
ಖಾಸಗಿ ಶಾಲೆಗಳಲ್ಲಿ ಶೇಕಡಾ ‌30 ರಷ್ಟು ಫೀ ಕಡಿತ ವಿಚಾರವಾಗಿ ಸರ್ಕಾರಕ್ಕೆ ಹೈಕೋರ್ಟ್​​ ನೋಟಿಸ್ ನೀಡಿದೆ. ಈ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆದಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು. ನಮಗೆ ಇದರಲ್ಲಿ ಮಧ್ಯೆ ಪ್ರವೇಶಿಸುವುದಕ್ಕೆ ಇಷ್ಟ ಇರಲಿಲ್ಲ ಎಂದು ಹೇಳಿದರು.

ಪೋಷಕರಿಗೂ ನಮ್ಮ ಶಾಲೆ ಎಂಬ ಅಭಿಮಾನ ಇರಬೇಕು. ಆಡಳಿತ ಮಂಡಳಿಗೆ ಪೋಷಕರು ಎಂಬ ಅಭಿಮಾನ ಬೇಕು. ನಾವು ಫೀ ಕಟ್ಟಲ್ಲ ಎಂದು ಅನೇಕ ಪೋಷಕರು ಹೇಳಿದರು. ಅನೇಕ ಕಡೆ ಶಾಲೆಗಳ ಎದುರು ಪ್ರತಿಭಟನೆ ನಡೆಸಿದರು. ಪೋಷಕರ ಜೊತೆ ಖಾಸಗಿ ಶಾಲೆಯವರಿಗೆ ಚರ್ಚಿಸಲು ಹೇಳಿದೆ. ಆದರೆ ಖಾಸಗಿ ಶಾಲೆಯವರು ಅದಕ್ಕೆ ಒಪ್ಪಿಕೊಳ್ಳಲಿಲ್ಲ. ಕೊನೆಗೆ ಶೇ.25ರಷ್ಟು ಕಡಿಮೆ ತೆಗೆದುಕೊಳ್ಳಲು ಒಪ್ಪಿದರು. ಪೋಷಕರು ಶೇಕಡಾ 40ರಷ್ಟು ರಿಯಾಯತಿ ಕೇಳಿದ್ದರು. ಹೀಗಾಗಿ ಸರ್ಕಾರ ಶೇ.30 ರಿಯಾಯಿತಿಗೆ ಆದೇಶಿಸಿತ್ತು ಎಂದು ಸಚಿವ ಸುರೇಶ್​ ಕುಮಾರ್ ಹೇಳಿದರು.

ಇದನ್ನು ಪ್ರಶ್ನಿಸಿ ಖಾಸಗಿ ಶಾಲೆಯವರು ಕೋರ್ಟ್ ಮೊರೆ ಹೋಗಿದ್ದಾರೆ. ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್​​ ನೀಡಿದೆ. ಈ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆದಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.

‘ಪಾಠಕ್ಕೆ ಕತ್ತರಿ ಹಿಂದೆ ಯಾವುದೇ ರೀತಿಯ ಷಡ್ಯಂತ್ರವೂ ಇಲ್ಲ’
6ನೇ ಕ್ಲಾಸಿನ ಮಕ್ಕಳ ವಯೋಮಾನಕ್ಕೆ ಮೀರಿದ ವಿಷಯವದು. ಹೀಗಾಗಿ 6ನೇ ತರಗತಿಯ 7ನೇ ಪಾಠಕ್ಕೆ ಕತ್ತರಿ ಹಾಕಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್‌ ಕುಮಾರ್ ಸ್ಪಷ್ಟನೆ ಕೊಟ್ರು. ಪಾಠಕ್ಕೆ ಕತ್ತರಿ ಹಿಂದೆ ಯಾವುದೇ ರೀತಿಯ ಷಡ್ಯಂತ್ರವೂ ಇಲ್ಲ, ದುರುದ್ದೇಶವೂ ಇಲ್ಲ. ಸದುದ್ದೇಶದಿಂದ ವಿವಾದಿತ ಪಾಠಕ್ಕೆ ಕತ್ತರಿ ಹಾಕಲಾಗಿದೆ ಎಂದು ಹೇಳಿದರು.

‘ಹೊಸ ಧರ್ಮಗಳ ಉದಯ’ವೆಂಬ ಇಡೀ ಪಠ್ಯವನ್ನು ತೆಗೆದಿಲ್ಲ. ನಾಲ್ಕರಿಂದ ಎಂಟು ಲೈನ್ ಪಠ್ಯಕ್ಕೆ ಸಂಬಂಧವಿಲ್ಲದ ಪೀಠಿಕೆ ಇದೆ. ಇದು ಆರನೇ ತರಗತಿಯ ಮಕ್ಕಳ ವಯೋಮಾನಕ್ಕೆ ಮೀರಿದ್ದು. ಹೀಗಾಗಿ 6ನೇ ತರಗತಿಯ 7ನೇ ಪಾಠಕ್ಕೆ ಕತ್ತರಿ ಹಾಕಲಾಗಿದೆ. ನಂತರ ನೋಡಿದರೆ ಪುಸ್ತಕದಲ್ಲಿ ಇಂತಹ ಅನೇಕ ವಿಚಾರಗಳಿವೆ. 6ನೇ ತರಗತಿಯ ಪಠ್ಯದಲ್ಲಿ ಕ್ರೈಸ್ತ, ಇಸ್ಲಾಂ ಧರ್ಮದ ಬಗ್ಗೆ ಇದೆ. ಪಠ್ಯದಲ್ಲಿ ಈ ಧರ್ಮಗಳ ಬಗ್ಗೆ ನೇರವಾಗಿ ಶುರು ಮಾಡಿದ್ದಾರೆ. ಇವುಗಳ ಬಗ್ಗೆ ಯಾವುದೇ ಪೀಠಿಕೆ ಇಲ್ಲ ಎಂದು ಸುರೇಶ್​ ಕುಮಾರ್​ ಹೇಳಿದರು.

ಗೌತಮ ಬುದ್ಧರ ಬಗ್ಗೆ ನಮಗೆ ವಿಶೇಷವಾದ ಗೌರವ ಇದೆ. ಅದೇ ರೀತಿ ಮಹಾವೀರ ತೀರ್ಥಂಕರರ ಬಗ್ಗೆಯೂ ಗೌರವವಿದೆ. ಬುದ್ಧರ ಬದುಕಿನ ಬಗ್ಗೆ ಪಠ್ಯದಲ್ಲಿದೆ, ಅದನ್ನು ನಾವು ಮುಟ್ಟಿಲ್ಲ. ಉಳಿದ ವಿವಾದಿತ ಪಠ್ಯಗಳ ಬಗ್ಗೆ ತಜ್ಞರು ನೋಡಿಕೊಳ್ಳುತ್ತಾರೆ. ಪಠ್ಯದ ಬಗ್ಗೆ ಮಂತ್ರಾಲಯ ಶ್ರೀ ಸಹ ಫೋನ್‌ ಮಾಡಿದ್ದರು. 2-3 ತಿಂಗಳ ಹಿಂದೆ ಶ್ರೀಗಳು ನನಗೆ ಫೋನ್ ಮಾಡಿದ್ದರು. ಅತ್ಯಂತ ಅಪ್ರಸ್ತುತ ಸಂಗತಿಯನ್ನು ಪಾಠದಲ್ಲಿ ಸೇರಿಸಿದ್ದಾರೆ. ಪಾಠದ ಪೀಠಿಕೆಯಲ್ಲಿ ಸೇರಿಸಿದ್ದಾರೆಂದು ಶ್ರೀಗಳು ಹೇಳಿದ್ರು. ಇದರ ಬಗ್ಗೆ ನನಗೆ ಗೊತ್ತಿಲ್ಲ, ನಾನು ನೋಡುತ್ತೇನೆ ಎಂದಿದ್ದೆ. ಇದನ್ನು ತಜ್ಞರಿಗೂ ಹೇಳಿದ್ದೆ, ಇದು ಸರಿಯಾ ಅಂತಾ ಕೇಳಿದ್ದೆ ಎಂದು ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್‌ ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: Kukke Subrahmanya temple | ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶಿವರಾತ್ರಿ ಆಚರಣೆಗೆ ಒಮ್ಮತದ ಒಪ್ಪಿಗೆ

Published On - 7:26 pm, Mon, 1 March 21