ಬೆಂಗಳೂರು, ಫೆಬ್ರವರಿ 5: ಎಸ್‌ಎಸ್ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ (sslc preparatory exam) ಮುಸ್ಲಿಂ ತುಷ್ಟೀಕರಣ (Muslim appeasement) ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಶಿಕ್ಷಣ ಇಲಾಖೆ ಇಂದು (ಸೋಮವಾರ) ಅಧಿಕೃತವಾಗಿ ಸ್ಪಷ್ಟನೆ ನೀಡುವ ಸಾಧ್ಯತೆ ಇದೆ. ಫೆಬ್ರವರಿ 26ರಿಂದ ಮಾರ್ಚ್ 3ರವರೆಗೆ ಎಸ್‌ಎಸ್ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ನಡೆಯಲಿದ್ದು, ಪ್ರತಿ ದಿನ ಬೆಳಗ್ಗೆ 10.15ರಿಂದ ಆರಂಭವಾಗಲಿದೆ. ಆದರೆ ಮಾರ್ಚ್ 1ರ ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ವಿಜ್ಞಾನ ಪರೀಕ್ಷೆ ನಿಗದಿಯಾಗಿದೆ. ಮುಸ್ಲಿಮರ ನಮಾಜ್‌ಗೆ ಅನುಕೂಲ ಮಾಡಿಕೊಡಲು ವೇಳಾಪಟ್ಟಿ ಬದಲಾವಣೆ ಎಂಬ ಆರೋಪ ಕೇಳಿಬಂದಿದ್ದು, ಪ್ರತಿಪಕ್ಷ ಬಿಜೆಪಿ ನಾಯಕರು ಸಹ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮಾರ್ಚ್ 1ರಂದು ದ್ವಿತೀಯ ಪಿಯು ಮುಖ್ಯ ಪರೀಕ್ಷೆ ನಡೆಯಲಿದೆ. ಮಾರ್ಚ್ 1ರಂದು ದ್ವಿತೀಯ ಪಿಯುಸಿ ಕನ್ನಡ, ಅರೇಬಿಕ್ ಪರೀಕ್ಷೆ ನಿಗದಿಯಾಗಿದೆ. ಮಾರ್ಚ್ 1ರ ಶುಕ್ರವಾರ ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೆ ಪರೀಕ್ಷೆ ನಡೆಯಲಿದೆ. ಹೀಗಾಗಿ ಮಾರ್ಚ್ 1ರಂದು ಎಸ್‌ಎಸ್ಎಲ್‌ಸಿ ಪ್ರಿಪರೇಟರಿ ಎಕ್ಸಾಂ ಮಧ್ಯಾಹ್ನ ನಿಗದಿ ಮಾಡಲಾಗಿದೆ. ಮಾರ್ಚ್ 1ರ ಮಧ್ಯಾಹ್ನ 2 ಗಂಟೆಯಿಂದ ಎಸ್‌ಎಸ್ಎಲ್‌ಸಿ ವಿಜ್ಞಾನ ಪ್ರಿಪರೇಟರಿ ಪರೀಕ್ಷೆ ನಡೆಯಲಿದೆ.
ಮಾರ್ಚ್ 1ರಂದು ದ್ವಿತೀಯ ಪಿಯು ಮುಖ್ಯ ಪರೀಕ್ಷೆ ಬೆಳಗ್ಗೆ ನಡೆಯುವ ಕಾರಣ ಎಸ್‌ಎಸ್ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆಯನ್ನು ಮಧ್ಯಾಹ್ನ ನಿಗದಿಮಾಡಲಾಗಿದೆ. ನಮಾಜ್‌ಗೆ ಅನುಕೂಲ ಮಾಡಿಕೊಡಲು ಮಧ್ಯಾಹ್ನ ಪರೀಕ್ಷೆ ನಡೆಸುತ್ತಿಲ್ಲ ಎಂದು ಕರ್ನಾಟಕ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ ಸ್ಪಷ್ಟನೆ ನೀಡಿದೆ. ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಲಾಖೆ ಈ ಸ್ಪಷ್ಟನೆ ನೀಡಿದೆ. ಇದೀಗ ಶಿಕ್ಷಣ ಇಲಾಖೆ ಅಧಿಕೃತವಾಗಿ ಸ್ಪಷ್ಟೀಕರಣ ನೀಡುವ ನಿರೀಕ್ಷೆ ಇದೆ.
ಎಸ್‌ಎಸ್ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆಯ ವೇಳಾಪಟ್ಟಿಯಲ್ಲಿ ಮುಸ್ಲಿಂ ತುಷ್ಟೀಕರಣ ಆರೋಪಕ್ಕೆ ಸಂಬಂಧಿಸಿ, ಸರಕಾರದ ನಿಯಮವನ್ನು ಭಟ್ಕಳದ ಹಿಂದೂ ಮುಖಂಡ ಶ್ರೀಕಾಂತ ನಾಯ್ಕ ಖಂಡಿಸಿದ್ದಾರೆ. ಬೆಳಗ್ಗಿನ ನಮಾಜ್‌ಗೆ ಅನುಕೂಲ ಮಾಡಿಕೊಡಲು ಪರೀಕ್ಷೆಯ ವೇಳಾಪಟ್ಟಿಯನ್ನೇ ಸರಕಾರ ಬದಲಾಯಿಸಿದೆ ಎಂದು ಅವರು ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ಬೆಳಿಗ್ಗೆ ನಮಾಜ್‌ಗೆ ಅನುಕೂಲವಾಗಲು ಪರೀಕ್ಷೆ ವೇಳಾಪಟ್ಟಿಯನ್ನೇ ಶಿಕ್ಷಣ ಇಲಾಖೆ ಬದಲಾಯಿಸಿದೆ-ಹಿಂದೂ ಮುಖಂಡ ಗಂಭೀರ ಆರೋಪ
ಕಾಂಗ್ರೆಸ್ ಸರ್ಕಾರದ ನಿರ್ದೇಶನದಂತೆ ಮುಸ್ಲಿಂ ತುಷ್ಟೀಕರಣಕ್ಕಾಗಿ ರಾಜ್ಯ ಶಿಕ್ಷಣ ಇಲಾಖೆ ಸಮಯ ಬದಲಾಯಿಸಿದೆ. ಶಿಕ್ಷಣ ಕ್ಷೇತ್ರದಲ್ಲೂ ನೇರವಾಗಿ ಸರಕಾರ ಮುಸ್ಲಿಂ ತುಷ್ಟೀಕರಣದ ನಡೆಸುತ್ತಿದೆ ಎಂದು ಹಿಂದೂ ಮುಖಂಡರು ಖಂಡನೆ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:03 am, Mon, 5 February 24