‘ನನ್ನನೇ ಟ್ರ್ಯಾಪ್​ ಮಾಡಲು ಯತ್ನಿಸಿದ್ದರು’: ಸಿಎಂ ಡಿಕೆ ಶಿವಕುಮಾರ್​ ಸ್ಫೋಟಕ ಆರೋಪ

ಖಾಸಗಿ ಸ್ಟಿಂಗ್ ಆಪರೇಷನ್ ಸಾಧ್ಯತೆಯ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಸಚಿವರಿಗೆ ಎಚ್ಚರಿಕೆ ನೀಡಿದ್ದ ಸಿಎಂ ಡಿಕೆ ಶಿವಕುಮಾರ್ ಇದೀಗ ಮತ್ತೊಂದು ಸ್ಫೋಟಕ ಆರೋಪ ಮಾಡಿದ್ದಾರೆ. ಮುಖ್ಯಮಂತ್ರಿಯಾದ ನಂತರ ತಮ್ಮನ್ನೇ ಟ್ರ್ಯಾಪ್ ಮಾಡಲು ಕೆಲವರು ಪ್ರಯತ್ನಿಸಿದ್ದರು ಎಂದು ಅವರು ದೆಹಲಿಯಲ್ಲಿ ಆರೋಪಿಸಿದ್ದಾರೆ. ಸ್ಟಿಂಗ್ ಆಪರೇಷನ್ ಆರೋಪಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಿರುಗೇಟು ನೀಡಿದ್ದಾರೆ.

‘ನನ್ನನೇ ಟ್ರ್ಯಾಪ್​ ಮಾಡಲು ಯತ್ನಿಸಿದ್ದರು’: ಸಿಎಂ ಡಿಕೆ ಶಿವಕುಮಾರ್​ ಸ್ಫೋಟಕ ಆರೋಪ
ಸಿಎಂ ಡಿಕೆಶಿವಕುಮಾರ್​
Image Credit source: tv9

Updated on: Oct 08, 2026 | 11:37 AM

ನವದೆಹಲಿ, ಅಕ್ಟೋಬರ್ 8: ಮುಖ್ಯಮಂತ್ರಿ ಆದ ಬಳಿಕ ತಮ್ಮನ್ನೇ ಟ್ರ್ಯಾಪ್ ಮಾಡಲು ಕೆಲವರು ಪ್ರಯತ್ನಿಸಿದ್ದರು ಎಂದು ಕರ್ನಾಟಕದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ಫೋಟಕ ಆರೋಪ ಮಾಡಿದ್ದಾರೆ. ಸಚಿವರಿಗೆ ಸ್ಟಿಂಗ್ ಆಪರೇಷನ್ ಬಗ್ಗೆ ಸಚಿವ ಸಂಪುಟ ಸಭೆಯಲ್ಲೇ ಎಚ್ಚರಿಕೆ ನೀಡಿರುವ ವಿಚಾರದ ಕುರಿತು ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಅವರು, ತಮ್ಮ ಬಳಿ ಈ ಬಗ್ಗೆ ಎಲ್ಲ ಮಾಹಿತಿಯೂ ಇದೆ ಎಂದಿದ್ದಾರೆ. ತಮ್ಮ ಬಳಿ ಕೆಲವರು ಬಂದಿದ್ದರು. ಫೋಟೋ ಬೇಕಿದ್ದರೆ ನೀಡುತ್ತೇನೆ ಎಂದಿರುವ ಡಿಕೆ ಶಿವಕುಮಾರ್, ಚರ್ಚೆಗೆಂದು ಬಂದು ಏನೇನು ಮಾಡಿದ್ದಾರೆ ಎಂಬುದು ತಮಗೆ ಗೊತ್ತಿದೆ ಎಂದು ಹೇಳಿದ್ದಾರೆ. ಈ ವಿಚಾರದ ಹಿಂದಿನ ಪಿತಾಮಹ ಯಾರು ಎಂಬುದೂ ಗೊತ್ತಿದೆ. ಯಾರು ಹಣಕಾಸಿನ ನೆರವು ನೀಡುತ್ತಿದ್ದಾರೆ ಎಂಬ ಮಾಹಿತಿಯೂ ಇದೆ ಎಂದು ಹೇಳಿದ್ದಾರೆ.

ಜವಾಬ್ದಾರಿಯುತ ಸ್ಥಾನದಲ್ಲಿದ್ದೇನೆ, ಸುಮ್ಮನೆ ಮಾತನಾಡಲ್ಲ: ಡಿಕೆ ಶಿವಕುಮಾರ್

ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತಿರುವುದರಿಂದ ಸುಮ್ಮನೆ ಮಾತನಾಡುವುದಿಲ್ಲ. ಎಲ್ಲ ಸಾಕ್ಷ್ಯಾಧಾರಗಳಿವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮವರು ಎಚ್ಚರಿಕೆಯಿಂದ ಇರಬೇಕೆಂದು ಸೂಚನೆ ನೀಡಿದ್ದೇನೆ ಎಂದಿದ್ದಾರೆ.

ಎಸ್​ಐಆರ್ ಫಾರ್ಮ್-7 ದುರ್ಬಳಕೆ ಆರೋಪ: ವರಿಷ್ಠರಿಗೆ ದಾಖಲೆ ನೀಡುವೆ ಎಂದ ಸಿಎಂ

ಎಸ್​ಐಆರ್ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗದ ಫಾರ್ಮ್-7 ದುರ್ಬಳಕೆ ಮಾಡಲಾಗಿದೆ ಎಂಬ ಆರೋಪದ ಬಗ್ಗೆಯೂ ಡಿ.ಕೆ. ಶಿವಕುಮಾರ್ ಮಾತನಾಡಿದ್ದಾರೆ. ಫಾರ್ಮ್-7 ಹೇಗೆ ದುರ್ಬಳಕೆಯಾಗಿದೆ ಎಂಬ ದಾಖಲೆಗಳನ್ನು ಹೈಕಮಾಂಡ್ ಗಮನಕ್ಕೆ ತರುವುದಾಗಿ ಹೇಳಿದ್ದಾರೆ. ಎಲ್ಲ ದಾಖಲೆಗಳನ್ನು ತಮ್ಮೊಂದಿಗೆ ದೆಹಲಿಗೆ ತಂದಿದ್ದೇನೆ ಎಂದಿರುವ ಅವರು, ಈ ಬಗ್ಗೆ ವರಿಷ್ಠರಿಗೆ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ. ಬಿಜೆಪಿ ನಾಯಕರು ಯಾಕೆ ಪ್ರಕರಣ ದಾಖಲಿಸುತ್ತಿದ್ದೀರಿ ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ ಈ ವಿಚಾರದಲ್ಲಿ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಈ ಅಕ್ರಮದಲ್ಲಿ ರಾಜ್ಯಪಾಲರನ್ನು ಭೇಟಿಯಾದ ಕೆಲವು ನಾಯಕರೇ ಭಾಗಿಯಾಗಿದ್ದಾರೆ ಎಂಬ ಆರೋಪವನ್ನೂ ಡಿ.ಕೆ. ಶಿವಕುಮಾರ್ ಮಾಡಿದ್ದಾರೆ. ತಮ್ಮ ಹೆಸರು ಬಯಲಿಗೆ ಬರುತ್ತದೆ ಎಂಬ ಕಾರಣಕ್ಕೆ ತನಿಖೆ ಬೇಡ ಎನ್ನುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ನಾಯಕರ ಮೇಲೆ ನಡೆದ ಪೊಲೀಸರ ದಾಳಿಯನ್ನು ಅಮಾನವೀಯ ಎಂದು ಅವರು ಹೇಳಿದ್ದಾರೆ.

ಡಿಕೆ ಶಿವಕುಮಾರ್ ಮಾತಿನ ವಿಡಿಯೋ
Sting Operation: ಯಾರು ಪಿತಾಮಹ, ಯಾರು ಹಣಕಾಸು ನೆರವು ಕೊಡ್ತಿದ್ದಾರೆ ಗೊತ್ತಿದೆ ಎಂದ ಸಿಎಂ DK ಶಿವಕುಮಾರ್ |#TV9D

ಜಿಎಸ್​​ಟಿ ಸಭೆಯಲ್ಲಿ ರಾಜ್ಯದ ಮಾಹಿತಿ ನೀಡುವೆ: ಡಿಕೆಶಿ

ಕಳೆದ ಮೂರು ದಿನಗಳಿಂದ ಜಿಎಸ್​ಟಿ ಸಭೆ ನಡೆಯುತ್ತಿದ್ದು, ಇಂದು ಮುಖ್ಯಮಂತ್ರಿಗಳನ್ನು ಸಭೆಗೆ ಆಹ್ವಾನಿಸಲಾಗಿದೆ. ರಾಜ್ಯದ ಹಿತದೃಷ್ಟಿಯಿಂದ ಅಗತ್ಯ ಮಾಹಿತಿಯನ್ನು ತಿಳಿಸುವುದಾಗಿ ಶಿವಕುಮಾರ್ ತಿಳಿಸಿದ್ದಾರೆ.

ಡಿಕೆಶಿ ಆರೋಪಕ್ಕೆ ವಿಜಯೇಂದ್ರ ತಿರುಗೇಟು

ಇನ್ನು ಸಚಿವರ ಸ್ಟಿಂಗ್ ಆಪರೇಷನ್ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ವಿಜಯೇಂದ್ರ, ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ಯಾರು ಸ್ಟಿಂಗ್ ಆಪರೇಷನ್ ಮಾಡುತ್ತಿದ್ದಾರೆ ಎಂಬುದು ರಾಜ್ಯದ ಜನರಿಗೆ ಗೊತ್ತಿದೆ ಎಂದು ಹೇಳಿದ್ದಾರೆ. ತಮ್ಮ ಶಾಸಕರ ಮೇಲೆಯೇ ಸ್ಟಿಂಗ್ ಮಾಡುತ್ತಾರೋ, ಡಿಂಗ್ ಡಿಂಗ್ ಆಪರೇಷನ್ ಯಾರು ಮಾಡಿದ್ದಾರೆ ಎಂಬುದೂ ಗೊತ್ತಿದೆ ಎಂದು ಡಿ.ಕೆ. ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ಸ್ಟಿಂಗ್​​ ಆಪರೇಷನ್ ಹಲ್​​ಚಲ್​​​​​​: ಕಾಂಗ್ರೆಸಿಗರಲ್ಲೇ ಭಿನ್ನರಾಗ, ಡಿಸಿಎಂ ಹೇಳಿದ್ದು ಒಂದಾದ್ರೆ ಸಚಿವರು ಹೇಳಿದ್ದು ಮತ್ತೊಂದು!

ವರದಿ: ನಟರಾಜ್, ಟಿವಿ9, ನವದೆಹಲಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:25 am, Thu, 8 October 26

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us