Traffic Fine Rebate: ಟ್ರಾಫಿಕ್ ರೂಲ್ಸ್ ದಂಡ ಪಾವತಿಗೆ 50% ರಿಯಾಯಿತಿ: ಇನ್ನೂ 15 ದಿನ ಅವಕಾಶ

|

Updated on: Mar 03, 2023 | 5:07 PM

ಸಂಚಾರ ನಿಯಮ ಉಲ್ಲಂಘಿಸಿ ದಂಡ ಬಾಕಿ (Traffic Fine) ಉಳಿಸಿಕೊಂಡಿರುವ ವಾಹನ ಸವಾರರು, ದಂಡ ಪಾವತಿಸಲು ಶೇ 50ರ ರಿಯಾಯಿತಿ ನೀಡಿದ್ದ ರಾಜ್ಯ ಸಂಚಾರಿ ಪೊಲೀಸ್ ಇದೀಗ ಮತ್ತೆ ಅಂಥದ್ದೇ ಅವಕಾಶ ನೀಡಿದೆ. ಶೇ 50ರಷ್ಟು ದಂಡ ಪಾವತಿಗೆ ಮಾರ್ಚ್​ 4ರಿಂದ 15 ದಿನಗಳ ಕಾಲಾವಕಾಶ ನೀಡಿ ಶುಕ್ರವಾರ ಪ್ರಕಟಣೆ ಹೊರಡಿಸಿದೆ.

ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿ ದಂಡ ಬಾಕಿ (Traffic Fine) ಉಳಿಸಿಕೊಂಡಿರುವ ವಾಹನ ಸವಾರರು ದಂಡ ಪಾವತಿಸಲು ಶೇ 50ರ ರಿಯಾಯಿತಿ ನೀಡಿದ್ದ ರಾಜ್ಯ ಸರ್ಕಾರ ಇದೀಗ ಮತ್ತೆ ಅಂಥದ್ದೇ ಅವಕಾಶ ನೀಡಿದೆ. ಶೇ 50ರಷ್ಟು ದಂಡ ಪಾವತಿಗೆ ಮಾರ್ಚ್​ 4ರಿಂದ 15 ದಿನಗಳ ಕಾಲಾವಕಾಶ ನೀಡಿದೆ. 11-02-2023ರ ಒಳಗಾಗಿ ಅನ್ವಯವಾಗುವ ಪ್ರಕರಣಗಳಿಗೆ ಮಾತ್ರ ಒಂದು ಬಾರಿಯ ಕ್ರಮವಾಗಿ ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್​ನಲ್ಲಿ ದಾಖಲಾಗಿರುವ ಬಾಕಿ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ 50ರ ರಿಯಾಯಿತಿ ನೀಡಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ಹಿಂದೆ ಫೆಬ್ರವರಿ 11ರ ವರೆಗೆ 15 ದಿನಗಳ ಕಾಲ ಶೇ 50ರ ರಿಯಾಯಿತಿಯೊಂದಿಗೆ ದಂಡ ಪಾವತಿಸಲು ಅವಕಾಶ ನೀಡಲಾಗಿತ್ತು. ಈ ಕೊಡುಗೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ರಿಯಾಯಿತಿ ದರದಲ್ಲಿ ದಂಡ ಕಟ್ಟುವ ಕಾಲಾವಕಾಶವನ್ನು ವಿಸ್ತರಿಸಬೇಕು ಎಂಬ ಬೇಡಿಕೆ ವ್ಯಕ್ತವಾಗಿತ್ತು.

ರಿಯಾಯಿತಿ ದರದಲ್ಲಿ ದಂಡ ಪಾವತಿಸಲು ಅವಕಾಶ ವಿಸ್ತರಣೆ ಬಗ್ಗೆ ಫೆಬ್ರವರಿ 14ರಂದು ನಡೆದಿದ್ದ ಉನ್ನತ ಮಟ್ಟದ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿತ್ತು.

ಇದನ್ನೂ ಓದಿ: Traffic Violation: ಟ್ರಾಫಿಕ್ ರೂಲ್ಸ್ ದಂಡ ಪಾವತಿಗೆ 50% ರಿಯಾಯಿತಿ: ದಂಡ ಪಾವತಿಸುವುದು ಹೇಗೆ? ಇಲ್ಲಿದೆ ವಿವರ

ಈ ಹಿಂದೆ 15 ದಿನಗಳ ಕಾಲ ಶೇ 50ರ ರಿಯಾಯಿತಿಯಲ್ಲಿ ದಂಡ ಪಾವತಿಗೆ ಅವಕಾಶ ನೀಡಿದ್ದಾಗ ಸವಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೋಟ್ಯಂತರ ರೂಪಾಯಿ ದಂಡ ಸಂಗ್ರಹವಾಗಿತ್ತು. ಆನ್​​ಲೈನ್​, ಆಫ್​​ಲೈನ್ ಮೂಲಕ ಜನ ದಂಡ ಪಾವತಿಸಿದ್ದರು. ಸಂಚಾರಿ ಪೊಲೀಸರ ಬಳಿಗೆ ತೆರಳಿ ದಂಡ ಪಾವತಿಸಿದವರ ಸಂಖ್ಯೆಯೂ ಹೆಚ್ಚಿತ್ತು. ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಜನ ಸಂಚಾರ ಪೊಲೀಸರ ಬಳಿ ತೆರಳಿ ಸರದಿಯಲ್ಲಿ ನಿಂತು ದಂಡ ಕಟ್ಟುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.

ಕಳೆದ ಬಾರಿ ಸುಮಾರು 44 ತರಹದ ನಿಯಮಗಳ ಉಲ್ಲಂಘಟನೆಗೆ ದಂಡದಲ್ಲಿ ರಿಯಾಯಿತಿ ನೀಡಲಾಗಿತ್ತು. ಈ ಬಾರಿಯೂ ಅದು ಹಾಗೆಯೇ ಮುಂದುವರಿಯಲಿದೆ.

ಟ್ರಾಫಿಕ್ ಫೈನ್​ ಎಲ್ಲೆಲ್ಲಿ ಪಾವತಿಸಬಹುದು?

ಕರ್ನಾಟಕ ವನ್​​ ವೆಬ್​ಸೈಟ್​​ನಲ್ಲಿ ವಿವರಗಳನ್ನು ಪಡೆದು ದಂಡ ಪಾವತಿಸಬಹುದಾಗಿದೆ. ಪೇಟಿಎಂ ಆ್ಯಪ್​ ಮೂಲಕವೂ ನಿಯಮ ಉಲ್ಲಂಘನೆಯ ವಿವರಗಳನ್ನು ಪಡೆದು ಪಾವತಿಸಬಹುದಾಗಿದೆ. ಹತ್ತಿರ ಸಂಚಾರ ಪೊಲೀಸ್​ ಠಾಣೆಗಳಲ್ಲಿ ನಿಮ್ಮ ವಾಹನದ ನೊಂದಣಿ ಸಂಖ್ಯೆಯ ವಿವರಗಳನ್ನು ಒದಗಿಸಿ ದಂಡ ಪಾವತಿಸಿ ರಶೀದಿಯನ್ನು ಪಡೆದುಕೊಳ್ಳಬಹುದಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:46 pm, Fri, 3 March 23