ಮುಷ್ಕರ ಕೈ ಬಿಡಿ ಇಲ್ಲವಾದ್ರೆ ಮನೆ ಖಾಲಿ ಮಾಡಿ: ಸಾರಿಗೆ ಸಿಬ್ಬಂದಿಗೆ ಹಿರಿಯ ಅಧಿಕಾರಿಗಳಿಂದ ನೋಟಿಸ್

ಮುಷ್ಕರ ಕೈಬಿಟ್ಟು ಕೆಲಸಕ್ಕೆ ಹಾಜರಾಗಿ ಎಂದು ತಿಳಿವಳಿಕೆ ಪತ್ರ ಅಂಟಿಸುತ್ತಿರುವ ಸಿಬ್ಬಂದಿ, ಚಾಲಕ ಮತ್ತು ನಿರ್ವಾಹಕರಿಗೆ ಪತ್ರದ ಮೂಲಕವೇ ಎಚ್ಚರಿಕೆಯನ್ನೂ ರವಾನಿಸಿದ್ದಾರೆ. ಕೆಲಸಕ್ಕೆ ಹಾಜರಾಗದಿದ್ದರೆ ವಸತಿ ಗೃಹ ಹಂಚಿಕೆ ರದ್ದುಗೊಳಿಸಲಾಗುತ್ತೆ ಎಂದು ನೋಟಿಸ್​ನಲ್ಲಿ ತಿಳಿಸಲಾಗಿದೆ.

ಮುಷ್ಕರ ಕೈ ಬಿಡಿ ಇಲ್ಲವಾದ್ರೆ ಮನೆ ಖಾಲಿ ಮಾಡಿ: ಸಾರಿಗೆ ಸಿಬ್ಬಂದಿಗೆ ಹಿರಿಯ ಅಧಿಕಾರಿಗಳಿಂದ ನೋಟಿಸ್
ಮುಷ್ಕರ ನಿರತ ಸಿಬ್ಬಂದಿ ಮನೆಗೆ ನೋಟಿಸ್​

Updated on: Apr 08, 2021 | 1:42 PM

ಹುಬ್ಬಳ್ಳಿ: ರಾಜ್ಯ ಸರ್ಕಾರ ಹಾಗೂ ಸಾರಿಗೆ ನೌಕರರ ನಡುವಿನ ತಿಕ್ಕಾಟ ತಾರಕಕ್ಕೆ ಹೋಗಿದೆ. ಆರನೇ ವೇತನ ಆಯೋಗ ಜಾರಿಗೊಳಿಸಬೇಕೆಂಬ ಸಾರಿಗೆ ನೌಕರರ ಬೇಡಿಕೆಗೆ ಈಗಾಗಲೇ ನಿರಾಕರಣೆಯ ಉತ್ತರ ನೀಡಿರುವ ಸರ್ಕಾರ ಸಂಬಳ ಹೆಚ್ಚಳದ ಬಗ್ಗೆ ಮಾತನಾಡುತ್ತೇವೆ ಎಂದು ಹೇಳಿದೆ. ಆದರೆ, ಇದಕ್ಕೊಪ್ಪದ ಸಾರಿಗೆ ನೌಕರರು ಬೇಡಿಕೆ ಈಡೇರುವ ತನಕ ಮುಷ್ಕರ ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇನ್ನೊಂದೆಡೆ ಮುಷ್ಕರ ನಿರತ ನೌಕರರಿಗೆ ಬಿಸಿ ಮುಟ್ಟಿಸಲು ಸಜ್ಜಾದ ಅಧಿಕಾರಿಗಳು ಸಿಬ್ಬಂದಿ ವರ್ಗಕ್ಕೆ ನೀಡಲಾದ ವಸತಿ ಗೃಹಗಳನ್ನು ಖಾಲಿ ಮಾಡಿಸಲು ಮುಂದಾಗಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗದೇ ಮುಷ್ಕರ ಹೂಡಿರುವುದಕ್ಕೆ ಸಿಟ್ಟಾಗಿರುವ ಅಧಿಕಾರಿಗಳು, ಪ್ರತಿಭಟನೆಯನ್ನು ಮಣಿಸುವ ಸಲುವಾಗಿ ಚಾಲಕ ಮತ್ತು ನಿರ್ವಾಹಕರ ಮನೆಯ ಮೇಲೆ ಕಣ್ಣಿಟ್ಟಿದ್ದಾರೆ. ಮನೆ ಮನೆಗೆ ಭೇಟಿ ನೀಡಿ ನೋಟಿಸ್ ನೀಡುತ್ತಿರುವ ಸಾರಿಗೆ ಇಲಾಖೆ ಹಿರಿಯ ಅಧಿಕಾರಿಗಳು, ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿದ್ದಾರೆ. ಮನೆಯ ಬಾಗಿಲಿಗೆ ತಿಳಿವಳಿಕೆ ಪತ್ರವನ್ನು ಅಂಟಿಸಲಾಗುತ್ತಿದ್ದು, ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಕೆಎಸ್​ಆರ್​ಟಿಸಿ ವಸತಿ ಗೃಹಗಳಿಗೆ ನೋಟಿಸ್ ನೀಡಲಾಗಿದೆ.

ಮುಷ್ಕರ ಕೈಬಿಟ್ಟು ಕೆಲಸಕ್ಕೆ ಹಾಜರಾಗಿ ಎಂದು ತಿಳಿವಳಿಕೆ ಪತ್ರ ಅಂಟಿಸುತ್ತಿರುವ ಸಿಬ್ಬಂದಿ, ಚಾಲಕ ಮತ್ತು ನಿರ್ವಾಹಕರಿಗೆ ಪತ್ರದ ಮೂಲಕವೇ ಎಚ್ಚರಿಕೆಯನ್ನೂ ರವಾನಿಸಿದ್ದಾರೆ. ಕೆಲಸಕ್ಕೆ ಹಾಜರಾಗದಿದ್ದರೆ ವಸತಿ ಗೃಹ ಹಂಚಿಕೆ ರದ್ದುಗೊಳಿಸಲಾಗುತ್ತೆ ಎಂದು ನೋಟಿಸ್​ನಲ್ಲಿ ತಿಳಿಸಲಾಗಿದೆ. ಆ ಮೂಲಕ ಕರ್ತವ್ಯಕ್ಕೆ ಹಾಜರಾಗದವರನ್ನು ದಾರಿಗೆ ತರುವ ಪ್ರಯತ್ನ ಮಾಡಲಾಗುತ್ತಿದೆ. ಆದರೆ, ಅಧಿಕಾರಿಗಳ ಈ ಕ್ರಮಕ್ಕೆ ಸೆಡ್ಡು ಹೊಡೆದಿರುವ ನೌಕರರ ಕುಟುಂಬ ಸದಸ್ಯರು ಆಕ್ರೋಶ ಹೊರಹಾಕಿದ್ದಾರೆ.

ನೋಟಿಸ್​ ಅಂಟಿಸಲು ಬಂದ ಅಧಿಕಾರಿಗಳು

ಇದನ್ನೂ ಓದಿ:
ಬಸ್ ಓಡಿಸದಿದ್ದರೆ ಸಂಬಳ ಸಿಗಲ್ಲ: ಕೆಎಸ್​ಆರ್​ಟಿಸಿ ಸಿಬ್ಬಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಎಚ್ಚರಿಕೆ

KSRTC BMTC Strike: ಸರ್ಕಾರ ನಮ್ಮ ಗೋಳು ಏಕೆ ಕೇಳಿಸಿಕೊಳ್ಳುತ್ತಿಲ್ಲ? ಡಿಪೋದಲ್ಲಿ ಸಾರಿಗೆ ನೌಕರನ ಕಣ್ಣೀರು