Karnataka Unlock: ಕರ್ನಾಟಕ ಅನ್​ಲಾಕ್​ ಆದರೂ ಈ ನಿಯಮಗಳು ಮುಂದುವರೆಯಲಿವೆ; ಈ ಕೆಳಗಿನ 11 ಜಿಲ್ಲೆಗಳಲ್ಲಿ ವಿಶೇಷ ಮಾರ್ಗಸೂಚಿ ಜಾರಿ

| Updated By: Digi Tech Desk

Updated on: Jun 14, 2021 | 9:04 AM

Karnataka Unlock Guidelines: ಮಂಡ್ಯ, ಮೈಸೂರು, ಹಾಸನ, ಶಿವಮೊಗ್ಗ, ಬೆಳಗಾವಿ, ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ದಾವಣಗೆರೆ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಜೂನ್​ 21ರ ಬೆಳಗ್ಗೆ 6 ಗಂಟೆವರೆಗೆ ಲಾಕ್​ಡೌನ್​ ಇರಲಿದ್ದು ಪ್ರಸ್ತುತ ಚಾಲ್ತಿಯಲ್ಲಿರುವ ಕಠಿಣ ನಿಯಮಾವಳಿಗಳೇ ಮುಂದುವರೆಯಲಿವೆ.

Karnataka Unlock: ಕರ್ನಾಟಕ ಅನ್​ಲಾಕ್​ ಆದರೂ ಈ ನಿಯಮಗಳು ಮುಂದುವರೆಯಲಿವೆ; ಈ ಕೆಳಗಿನ 11 ಜಿಲ್ಲೆಗಳಲ್ಲಿ ವಿಶೇಷ ಮಾರ್ಗಸೂಚಿ ಜಾರಿ
ಲಾಕ್​ಡೌನ್ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆ ಕೊಂಚ ತಗ್ಗುತ್ತಿರುವ ಕಾರಣ ಸೋಂಕು ನಿಯಂತ್ರಣಕ್ಕಾಗಿ ವಿಧಿಸಲಾಗಿದ್ದ ಲಾಕ್​ಡೌನ್​ ಇಂದಿನಿಂದ ಕೆಲವೆಡೆ ಸಡಿಲಗೊಳ್ಳುತ್ತಿದೆ. ರಾಜ್ಯದ 11 ಜಿಲ್ಲೆಗಳನ್ನು ಹೊರತುಪಡಿಸಿ ಮಿಕ್ಕೆಲ್ಲಾ ಕಡೆ ಅನ್​ಲಾಕ್​ ಪ್ರಕ್ರಿಯೆ ಆರಂಭವಾಗಿದ್ದು, ಒಂದಷ್ಟು ನಿಯಮಗಳ ಪ್ರಕಾರ ವ್ಯಾಪಾರ, ವಹಿವಾಟು, ಜನಸಂಚಾರ ಆರಂಭವಾಗುತ್ತಿದೆ. ಆದರೆ, ಹೆಚ್ಚಿನ ಭಾಗಗಳಲ್ಲಿ ಅನ್​ಲಾಕ್​ ಎಂದೊಡನೆ ಜನರು ಪ್ರವಾಹೋಪಾದಿಯಲ್ಲಿ ಮಾರುಕಟ್ಟೆಗಳತ್ತ ಧಾವಿಸಿ ಸಾಮಾಜಿಕ ಅಂತರ, ಮಾಸ್ಕ್ ಸೇರಿದಂತೆ ಕೊರೊನಾ ನಿಯಮಾವಳಿಗಳನ್ನು ಸಂಪೂರ್ಣ ಗಾಳಿಗೆ ತೂರುತ್ತಿರುವುದು ಚಿಂತೆಗೆ ಕಾರಣವಾಗುತ್ತಿದೆ. ಅನ್​ಲಾಕ್​ ಆದ ಮಾತ್ರಕ್ಕೆ ಕೊರೊನಾ ನಿರ್ಮೂಲನೆ ಆಗಿಲ್ಲ, ದಯವಿಟ್ಟು ನಿಯಮಾವಳಿಗಳನ್ನು ಪಾಲಿಸಿ, ಆರೋಗ್ಯದ ಬಗ್ಗೆ ನಿಗಾ ವಹಿಸಿ ಎಂದು ಪೊಲೀಸರು ಪದೇ ಪದೇ ಎಚ್ಚರಿಕೆ ನೀಡುತ್ತಿದ್ದಾರೆ. ಅನ್​ಲಾಕ್​ ಆಗುತ್ತಿರುವ ಮೊದಲ ದಿನ ರಾಜ್ಯದ ಕೆಲ ಪ್ರದೇಶಗಳ ಪರಿಸ್ಥಿತಿ ಹೇಗಿದೆ ಎಂಬುದರ ಪಕ್ಷಿನೋಟ ಈ ವರದಿಯಲ್ಲಿದೆ.

ಕೊರೊನಾ ಪ್ರಕರಣ ಹೆಚ್ಚಿರುವ 11 ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಜೂನ್ 21ರವರೆಗೂ ಲಾಕ್‌ಡೌನ್‌ ಮುಂದುವರೆಯಲಿದೆ ಎಂದು ರಾಜ್ಯ ಸರ್ಕಾರ ಈಗಾಗಲೇ ತಿಳಿಸಿದೆ. ಅದರನ್ವಯ ಮಂಡ್ಯ, ಮೈಸೂರು, ಹಾಸನ, ಶಿವಮೊಗ್ಗ, ಬೆಳಗಾವಿ, ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ದಾವಣಗೆರೆ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಜೂನ್​ 21ರ ಬೆಳಗ್ಗೆ 6 ಗಂಟೆವರೆಗೆ ಲಾಕ್​ಡೌನ್​ ಇರಲಿದ್ದು ಪ್ರಸ್ತುತ ಚಾಲ್ತಿಯಲ್ಲಿರುವ ಕಠಿಣ ನಿಯಮಾವಳಿಗಳೇ ಮುಂದುವರೆಯಲಿವೆ.

ಅನ್​ಲಾಕ್​ ವಿಚಾರಕ್ಕೆ ಬಂದರೆ ಬೆಂಗಳೂರು ನಗರ ಸೇರಿ ಹಲವು ಜಿಲ್ಲೆಗಳು ಅನ್‌ಲಾಕ್ ಆಗುತ್ತಿವೆ. ಅನ್​ಲಾಕ್​ ಆಗುತ್ತಿರುವ ಬಹುತೇಕ ಕಡೆಗಳಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಇದ್ದ ಸಮಯ ವಿಸ್ತರಣೆ ಮಾಡಲಾಗಿದ್ದು, ಮಧ್ಯಾಹ್ನ 2ರವರೆಗೆ ಅಗತ್ಯ ವಸ್ತು ಖರೀದಿಗೆ ಹಾಗೂ ಬೀದಿಬದಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಶೇ.50ರಷ್ಟು ಸಿಬ್ಬಂದಿ ಬಳಸಿ ಎಲ್ಲ ಕಾರ್ಖಾನೆಗಳ ಆರಂಭಕ್ಕೆ ಅನುಮತಿ ಕೊಡಲಾಗಿದ್ದು, ಶೇ.30ರಷ್ಟು ಸಿಬ್ಬಂದಿಯೊಂದಿಗೆ ಗಾರ್ಮೆಂಟ್ಸ್ ಆರಂಭ ಮಾಡಬಹುದಾಗಿದೆ. ಸಿಮೆಂಟ್, ಸ್ಟೀಲ್ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಿರುವ ರಾಜ್ಯ ಸರ್ಕಾರ ಎಲ್ಲಾ ರೀತಿಯ ನಿರ್ಮಾಣ ಚಟುವಟಿಕೆಗಳಿಗೆ ಅಸ್ತು ಎಂದಿದೆ.

ಆದರೆ, ಹೊಟೇಲ್​, ಬಾರ್​ಗಳಲ್ಲಿ ಪಾರ್ಸೆಲ್​ ಪಡೆಯಲಷ್ಟೇ ಅವಕಾಶವಿದ್ದು, ಕೊರೊನಾ ನಿಯಮಾವಳಿಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಮದ್ಯ ಪಾರ್ಸೆಲ್ ಪಡೆಯಲು ಮಧ್ಯಾಹ್ನ 2ರವರೆಗೆ ಅನುಮತಿ ನೀಡಲಾಗಿದೆ. ಬೆಳಗ್ಗೆ 5ರಿಂದ 10 ಗಂಟೆಯವರೆಗೆ ಪಾರ್ಕ್​ಗಳು ತೆರೆದಿರಲಿದ್ದು, ಬೆಳಗ್ಗೆ 10 ಗಂಟೆಯವರೆಗೆ ವಾಯುವಿಹಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ವಾಹನ ಸಂಚಾರದ ವಿಚಾರದಲ್ಲಿ ಕೆಎಸ್​ಆರ್​ಟಿಸಿ, ಬಿಎಂಟಿಸಿ, ಖಾಸಗಿ ಬಸ್ ಹಾಗೂ ಬೆಂಗಳೂರು ಮೆಟ್ರೋ ಸಂಚಾರಕ್ಕೆ ನಿರ್ಬಂಧ ಮುಂದುವರೆಯಲಿದೆ. ರಾಜ್ಯದಲ್ಲಿ ಆಟೋ, ಟ್ಯಾಕ್ಸಿಗಳ ಸಂಚಾರಕ್ಕೆ ಅವಕಾಶ ನೀಡಲಾಗಿದ್ದರೂ ಇಬ್ಬರು ಪ್ರಯಾಣಿಕರಷ್ಟೇ ಏಕಕಾಲದಲ್ಲಿ ಪ್ರಯಾಣ ನಡೆಸಬಹುದಾಗಿದೆ. ಇತ್ತ ಮಾಲ್​, ಚಿತ್ರಮಂದಿರಗಳ ಮೇಲಿನ ನಿರ್ಬಂಧ ಮುಂದುವರೆಯುತ್ತಿದೆ.

ಅನ್​ಲಾಕ್​ ನಂತರವೂ ರಾಜ್ಯಾದ್ಯಂತ ನೈಟ್​ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರಲಿದೆ ಎನ್ನುವುದು ಗಮನಾರ್ಹ. ಸಂಜೆ 7 ರಿಂದ ಬೆಳಗ್ಗೆ 5 ರವರೆಗೆ ನೈಟ್​ ಕರ್ಫ್ಯೂ ಹಾಗೂ ವಾರಾಂತ್ಯದಲ್ಲಿ ಸಂಪೂರ್ಣ ಕರ್ಫ್ಯೂ ಇರಲಿದೆ. ಸರ್ಕಾರಿ ಕಚೇರಿಗಳಲ್ಲಿ ಶೇ.50ರಷ್ಟು ಸಿಬ್ಬಂದಿ ಕರ್ತವ್ಯ ನಿರ್ವಹಿಸಬಹುದಾಗಿದ್ದು, ಆರೋಗ್ಯ, ವೈದ್ಯಕೀಯ ಶಿಕ್ಷಣ, ಕಂದಾಯ, ಗೃಹ ಇಲಾಖೆ, ಅಗ್ನಿಶಾಮಕ ದಳ, ಕಾರಾಗೃಹ, ವಿಪತ್ತು ನಿರ್ವಹಣಾ ಸಿಬ್ಬಂದಿ, ಜಿಲ್ಲಾಧಿಕಾರಿಗಳ ಕಚೇರಿ, ಬಿಬಿಎಂಪಿ ಸಿಬ್ಬಂದಿಗೆ ಹಾಗೂ ಇತರೆ ಇಲಾಖೆಗಳ ಕೊವಿಡ್ ಸೇವಾ ಸಿಬ್ಬಂದಿಗೆ ಕಾರ್ಯ ನಿರ್ವಹಿಸಲು ಅವಕಾಶ ನೀಡಲಾಗಿದೆ. ಮದುವೆಗಳಲ್ಲಿ ಭಾಗಿಯಾಗಲು 40 ಜನರಿಗಷ್ಟೇ ಅವಕಾಶ ಹಾಗೂ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಐವರಿಗಷ್ಟೇ ಅವಕಾಶ ಎಂಬ ನಿಯಮ ಜಾರಿಯಲ್ಲಿರಲಿದೆ.

ಬಾಗಲಕೋಟೆಯಲ್ಲಿ ಅನ್​ಲಾಕ್​ ಆಗುತ್ತಿದ್ದರೂ ಅಗತ್ಯವಸ್ತು ಖರೀದಿ ಸಮಯವನ್ನು ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ ಕಡಿತಗೊಳಿಸಿದ್ದಾರೆ. ಸರ್ಕಾರ ನೀಡಿದ ಅವಧಿಗಿಂತ 2 ಗಂಟೆ ಕಡಿತಗೊಳಿಸಲಾಗಿದ್ದು, ಬಾಗಲಕೋಟೆಯಲ್ಲಿ ಅಗತ್ಯವಸ್ತು ಖರೀದಿಗೆ ಬೆಳಗ್ಗೆ 6ರಿಂದ ಮಧ್ಯಾಹ್ನ 12ರವರೆಗೆ ಮಾತ್ರ ಅವಕಾಶ ಇರಲಿದೆ. ಅಗತ್ಯವಸ್ತು ಹೊರತುಪಡಿಸಿ ಇತರ ಅಂಗಡಿ ತೆರೆಯುವಂತಿಲ್ಲ ಎಂದು ಆದೇಶಿಸಲಾಗಿದ್ದು, ಹೊಟೇಲ್​ಗಳಲ್ಲಿ ಮಾತ್ರ ದಿನವಿಡೀ ಪಾರ್ಸೆಲ್‌ಗೆ ಅವಕಾಶ ನೀಡಲಾಗಿದೆ.

ಗದಗ ಜಿಲ್ಲೆಯಲ್ಲಿ ಬೆಳಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ಅಗತ್ಯವಸ್ತು ಖರೀದಿಗೆ ಅವಕಾಶವಿದೆ. ಆದರೆ, ಬಟ್ಟೆ ಅಂಗಡಿ, ಜ್ಯುವೆಲ್ಲರಿ ಶಾಪ್‌ ತೆರೆಯಲು ಅವಕಾಶವಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟವಾಗಿ ತಿಳಿಸಿದೆ. ಹಾವೇರಿ, ಚಿತ್ರದುರ್ಗ, ಬಳ್ಳಾರಿ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲೂ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಲಾಗಿದ್ದು, ಮಧ್ಯಾಹ್ನ 2 ಗಂಟೆ ತನಕ ಅವಕಾಶ ಇರಲಿದೆ. ತುಮಕೂರು ಜಿಲ್ಲೆಯಲ್ಲೂ ಇದೇ ನಿಯಮ ಜಾರಿಯಲ್ಲಿದ್ದು ಉತ್ಪಾದನಾ ಘಟಕ, ಕೈಗಾರಿಕೆಗಳಲ್ಲಿ ಶೇ.50 ರಷ್ಟು ಸಿಬ್ಬಂದಿ ಅವಕಾಶ ಹಾಗೂ ಗಾರ್ಮೆಂಟ್ಸ್ ಗೆ ಶೇ.30ರಷ್ಟು ಸಿಬ್ಬಂದಿ ಕೆಲಸ ಮಾಡಲು ಅವಕಾಶ ನೀಡಲಾಗಿದೆ.

ಹಾಸನ ಜಿಲ್ಲೆಯಲ್ಲಿ ಜೂನ್ 21ರವರೆಗೂ ಲಾಕ್‌ಡೌನ್ ಮುಂದುವರೆದಿದ್ದು, ವಾರದಲ್ಲಿ 3 ದಿನ ಅಂದರೆ ಸೋಮವಾರ, ಬುಧವಾರ, ಶುಕ್ರವಾರ ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 12ರವರೆಗೆ ಅವಕಾಶ ನೀಡಲಾಗಿದೆ. ಜತೆಗೆ, ರೈತ ಸಂಪರ್ಕ ಕೇಂದ್ರ, ರಸಗೊಬ್ಬರ ಮಾರಾಟ, ಕೃಷಿ ಯಂತ್ರೋಪಕರಣ ಮಳಿಗೆ ತೆರೆಯಲು ಅವಕಾಶ ನೀಡಲಾಗಿದೆ. ಇನ್ನುಳಿದ 4ದಿನ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್​ಡೌನ್ ಚಾಲ್ತಿಯಲ್ಲಿರುತ್ತದೆ.

ಮಂಡ್ಯ ಜಿಲ್ಲೆಯಲ್ಲಿ ಜೂನ್ 15, 16, 18, 19ರಂದು ಸಂಪೂರ್ಣ ಲಾಕ್‌ಡೌನ್ ಇರಲಿದೆ. ಇಂದು (ಜೂನ್ 14) ಹಾಗೂ ಜೂನ್​ 17ರಂದು ಬೆಳಗ್ಗೆ 6 ಗಂಟೆಯಿಂದ 11 ಗಂಟೆವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಸಂಪೂರ್ಣ ಲಾಕ್​ಡೌನ್​ ಜಾರಿಯಿರುವ ದಿನಗಳಲ್ಲಿ ಹಣ್ಣು, ತರಕಾರಿ, ದಿನಸಿ, ಮಾಂಸ, ಮದ್ಯ ಮಾರಾಟಕ್ಕೂ ನಿಷೇಧವಿದ್ದು, ಬ್ಯಾಂಕ್‌, ಅಂಚೆ ಕಚೇರಿ, ಎಲ್‌ಐಸಿ ಕಚೇರಿಗಳೂ ಬಂದ್ ಆಗಲಿವೆ. ಮೆಡಿಕಲ್, ಹಾಲಿನ ಬೂತ್, ಎಟಿಎಂ ಹಾಗೂ ಪೆಟ್ರೋಲ್ ಬಂಕ್​ಗಳಿಗೆ ರಿಯಾಯಿತಿ ನೀಡಲಾಗಿದೆ.

ಇದನ್ನೂ ಓದಿ:
Karnataka Unlock Revised Guidelines: ಲಾಕ್​ಡೌನ್ ತೆರವುಗೊಂಡ ಜಿಲ್ಲೆಗಳಲ್ಲಿ ಯಾವ ಅಂಗಡಿ ತೆರೆಯಬಹುದು? ಸ್ಪಷ್ಟಪಡಿಸಿದ ಸರ್ಕಾರ

Published On - 8:00 am, Mon, 14 June 21