
ಬೈ ಎಲೆಕ್ಷನ್.. ಪರಿಷತ್ ಚುನಾವಣೆ ಫೈಟ್ ನಂತರ ಇದೀಗ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. ಐದು ನಗರಸಭೆಗಳು ಸೇರಿದಂತೆ ಅವಧಿ ಪೂರ್ಣಗೊಂಡಿರುವ ಪುರಸಭೆ, ಪಟ್ಟಣ ಪಂಚಾಯಿತಿಗಳಿಗೆ ಇಂದು ಚುನಾವಣೆ ನಡೆಯಲಿದೆ. ಚುನಾವಣೆ ನಡೆಯುತ್ತಿರುವ ಎಲ್ಲಾ ಜಿಲ್ಲೆಗಳಲ್ಲಿ ಆಯಾ ತಾಲೂಕು ಕೇಂದ್ರಗಳಿಂದ ಚುನಾವಣಾ ಸಿಬ್ಬಂದಿ ನಿನ್ನೆಯೇ ಮತಗಟ್ಟೆಗಳಿಗೆ ಆಗಮಿಸಿದ್ದು, ಮತಗಟ್ಟೆಗಳಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ.
ಲೋಕಲ್ ಫೈಟ್
ಐದು ನಗರ ಸಭೆ, 19 ಪುರಸಭೆ, 34 ಪಟ್ಟಣ ಪಂಚಾಯಿತಿಗಳ ಒಟ್ಟು 1185 ವಾರ್ಡ್‌ಗಳಲ್ಲಿಂದು ವೋಟಿಂಗ್ ನಡೆಯಲಿದೆ. ಬೆಳಗ್ಗೆ 7ರಿಂದ ಸಂಜೆ 5ರವರೆಗೂ ಮತದಾನ ನಡೆಯಲಿದ್ದು, ಡಿಸೆಂಬರ್ 30 ರಂದು ಮತ ಎಣಿಕೆ ನಡೆಯಲಿದೆ.
ವಿಜಯನಗರ ಜಿಲ್ಲೆಯಾದ ಬಳಿಕ ಮೊದಲ ಚುನಾವಣೆ
ಹೌದು, ವಿಜಯನಗರ ಜಿಲ್ಲೆಯಾದ ಬಳಿಕ ಇದೇ ಮೊದಲ ಬಾರಿ ನೂತನ ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ನಡೆಯುತ್ತಿದೆ. ಅಷ್ಟೇ ಅಲ್ಲ ಹಗರಿಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿಯಿಂದ ಪುರಸಭೆ ಮೇಲ್ದರ್ಜೆಗೇರಿದ್ದು, ಮೊದಲ ಚುನಾವಣೆ ನಡೆಯುತ್ತಿದ್ದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಪೈಪೋಟಿ ಇದೆ. ಸಚಿವ ಆನಂದ ಸಿಂಗ್ ಹಾಗೂ ಶಾಸಕ ಭೀಮಾನಾಯ್ಕ್‌ಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.
ಕುಂದಾನಗರಿ ಬೆಳಗಾವಿಯಲ್ಲಿ ಜಿದ್ದಾಜಿದ್ದಿನ ಕಣ
ಬೆಳಗಾವಿ ಜಿಲ್ಲೆಯಲ್ಲೂ ಇಂದು ನಡೆಯುವ ಚುನಾವಣೆಗೆ ಭರ್ಜರಿ ಸಿದ್ದತೆ ಮಾಡಿಕೊಳ್ಳಲಾಗಿದೆ. 5 ಪುರಸಭೆ, 11 ಪಟ್ಟಣ ಪಂಚಾಯಿತಿಗಳಿಗೆ ಮತದಾನ ನಡೆಯಲಿದ್ದು ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ. ವಿಶೇಷ ಅಂದ್ರೆ ಕಿತ್ತೂರು ಪಟ್ಟಣ ಪಂಚಾಯಿತಿಯನ್ನ ಈ ಬಾರಿ ಕಾಂಗ್ರೆಸ್ ತೆಕ್ಕೆಗೆ ಪಡೆಯಬೇಕು ಅಂತಾ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮತ್ತು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಭರ್ಜರಿ ಪ್ರಚಾರ ನಡೆಸಿದ್ದಾರೆ.
ಉಡುಪಿಯಲ್ಲಿ ಎಸ್‌ಡಿಪಿಐ ಶಕ್ತಿಪ್ರದರ್ಶನ
ಇನ್ನು ಈ ಬಾರಿ ಉಡುಪಿ ಜಿಲ್ಲೆಯ ಕಾಪು ಪುರಸಭೆ ಸಾಕಷ್ಟು ಕುತೂಹಲ ಕೆರಳಿಸಿದೆ. ಯಾಕಂದ್ರೆ ಇದುವರೆಗೂ ಇಲ್ಲಿ 17 ತಿಂಗಳು ಕಾಂಗ್ರೆಸ್, 8 ತಿಂಗಳು ಬಿಜೆಪಿ ಆಡಳಿತ ನಡೆಸಿದೆ. ಆದ್ರೀಗ ಮುಸ್ಲಿಂ ವೋಟ್ ಬ್ಯಾಂಕ್ ಆಗಿರುವ ಕಾಪುವಿನಲ್ಲಿ ಈ ಬಾರಿ ಎಸ್‌ಡಿಪಿಐ ಭಾರಿ ಪ್ರಮಾಣದಲ್ಲಿ ಸ್ಪರ್ಧೆಗಿಳಿದಿದ್ದು, ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ.
ಚಿಕ್ಕಮಗಳೂರಿನಲ್ಲಿ ಘಟಾನುಘಟಿ ನಾಯಕರ ದಂಡು
ಚಿಕ್ಕಮಗಳೂರು ನಗರಸಭೆಯ 35 ವಾರ್ಡ್‌ಗಳಿಗೆ ಇಂದು ಮತದಾನ ನಡೆಯಲಿದೆ. ಕಳೆದ ಬಾರಿ ನಗರಸಭೆ ಗದ್ದುಗೆ ಏರಿದ ಬಿಜೆಪಿ, ಈ ಬಾರಿಯೂ ಅಧಿಕಾರವನ್ನ ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಪಣತೊಟ್ಟಿದೆ. ಹಾಗಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ತವರಲ್ಲೇ ಉಳಿದುಕೊಂಡು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪಣ ತೊಟ್ಟಿದ್ದಾರೆ. ಒಟ್ನಲ್ಲಿ ನಗರ ಸ್ಥಳೀಯ ಚುನಾವಣೆಯ ಅಖಾಡ ರಂಗೇರಿದ್ದು. ಇಂದು ಮತದಾನ ನಡೆಯಲಿದೆ. ಡಿಸೆಂಬರ್ 30ರಂದು ಅಭ್ಯರ್ಥಿಗಳ ಭವಿಷ್ಯ ಬಯಲಾಗಲಿದೆ.
ಇದನ್ನೂ ಓದಿ: ಬಿಗ್ ಬಾಸ್ ವೈಷ್ಣವಿ ಸೊಂಟ ಬಳುಕಿಸಿದ ಪರಿಗೆ ಫಿದಾ ಆದ ಅಭಿಮಾನಿಗಳು