ಒಮಿಕ್ರಾನ್, ಕೊರೊನಾ ಭೀತಿ ನಡುವೆ ಮತ್ತೊಂದು ಆತಂಕ; ಕಣ್ಣು ಬಿಡುವ ಮುನ್ನವೇ ಉಸಿರು ಚೆಲ್ಲುತಿವೆ ನವಜಾತ ಶಿಶುಗಳು

ಒಮಿಕ್ರಾನ್, ಕೊರೊನಾ ಭೀತಿ ನಡುವೆ ಮತ್ತೊಂದು ಆತಂಕ; ಕಣ್ಣು ಬಿಡುವ ಮುನ್ನವೇ ಉಸಿರು ಚೆಲ್ಲುತಿವೆ ನವಜಾತ ಶಿಶುಗಳು
ಸಾಂದರ್ಭಿಕ ಚಿತ್ರ

ಕೇವಲ 8 ತಿಂಗಳಲ್ಲಿ 358 ಕ್ಕೂ ಅಧಿಕ ಕಂದಮ್ಮಗಳು ಕಣ್ಣು ಬಿಡುವ ಮುನ್ನವೇ ಕಣ್ಣು ಮುಚ್ಚಿವೆ. ಬಳ್ಳಾರಿ - ವಿಜಯನಗರ ಜಿಲ್ಲೆಯಲ್ಲಿ ಹಸುಗೂಸುಗಳ ಮರಣ ಮೃದಂಗ ನಡೆದಿದೆ. ಬಳ್ಳಾರಿ ವಿಮ್ಸ್ ನಲ್ಲಿ 293 ಹಾಗೂ ವಿಜಯನಗರದಲ್ಲಿ 65 ಶಿಶುಗಳು ಸೇರಿ ಕೇವಲ ಎಂಟು ತಿಂಗಳಲ್ಲಿ 358 ಶಿಶುಗಳು ಮೃತಪಟ್ಟಿವೆ.

TV9kannada Web Team

| Edited By: Ayesha Banu

Dec 27, 2021 | 12:44 PM

ಬಳ್ಳಾರಿ: ಒಮಿಕ್ರಾನ್, ಕೊರೊನಾ ಮೂರನೇ ಅಲೆ ಭೀತಿ ನಡುವೆ ಮತ್ತೊಂದು ಆಘಾತಕಾರಿ ಅಂಶ ಹೊರ ಬಿದ್ದಿದೆ. ಅಮ್ಮ ಎಂದು ಕರೆಯುವ ಮುನ್ನವೇ ನವಜಾತ ಶಿಶುಗಳು ಕಣ್ಮುಚ್ಚುತ್ತಿವೆ ಎಂಬುವುದು ತಿಳಿದು ಬಂದಿದೆ.

ಕೇವಲ 8 ತಿಂಗಳಲ್ಲಿ 358 ಕ್ಕೂ ಅಧಿಕ ಕಂದಮ್ಮಗಳು ಕಣ್ಣು ಬಿಡುವ ಮುನ್ನವೇ ಕಣ್ಣು ಮುಚ್ಚಿವೆ. ಬಳ್ಳಾರಿ – ವಿಜಯನಗರ ಜಿಲ್ಲೆಯಲ್ಲಿ ಹಸುಗೂಸುಗಳ ಮರಣ ಮೃದಂಗ ನಡೆದಿದೆ. ಬಳ್ಳಾರಿ ವಿಮ್ಸ್ ನಲ್ಲಿ 293 ಹಾಗೂ ವಿಜಯನಗರದಲ್ಲಿ 65 ಶಿಶುಗಳು ಸೇರಿ ಕೇವಲ ಎಂಟು ತಿಂಗಳಲ್ಲಿ 358 ಶಿಶುಗಳು ಮೃತಪಟ್ಟಿವೆ. ಇತ್ತ ಹಸುಗೂಸುಗಳ ಸಾವಿನ ಸಂಖ್ಯೆ ಹೆಚ್ಚುತ್ತಿದ್ದರೂ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿಲ್ಲ. ಆದ್ರೆ ಕಂದಮ್ಮಗಳ ಸಾವಿನ ಸಂಖ್ಯೆ ಕಂಡು ಗಡಿನಾಡಿನ ಜನ ಬೆಚ್ಚಿಬಿದ್ದಿದ್ದಾರೆ.

ಸರಾಸರಿ ದಿನಕ್ಕೆ 4 ಹಸುಗೂಸುಗಳ ಸಾವಾಗುತ್ತಿದೆ. ಸರಿಯಾದ ವೈದ್ಯಕೀಯ ಸೌಲಭ್ಯವಿಲ್ಲದೆ ಕಂದಮ್ಮಗಳು ಸಾವನ್ನಪ್ಪುತ್ತಿವೆ ಎಂದು ಜನರು ಆಕ್ರೋಶ ಹೊರ ಹಾಕಿದ್ದಾರೆ. ಗ್ರಾಮೀಣ ಭಾಗದ ಗರ್ಭಿಣಿ ಮಹಿಳೆಯರು ಆಸ್ಪತ್ರೆಗೆ ಬರುವ ಮುನ್ನವೇ ಅದೆಷ್ಟೋ ಕಂದಮ್ಮಗಳು ಉಸಿರು ನಿಲ್ಲಿಸುತ್ತಿವೆ. ಸರ್ಕಾರ ಹಸುಗೂಸುಗಳ ಸಾವಿನ ಪ್ರಮಾಣ ಕಡಿಮೆ ಮಾಡಲು ಸಾಕಷ್ಟು ಯೋಜನೆಗಳು ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ನವಜಾತ ಶಿಶುಗಳ ಸಾವಿನ ಸಂಖ್ಯೆ ಕಂಡು ಗರ್ಭಿಣಿ ಮಹಿಳೆಯರು ಸರ್ಕಾರಿ ಆಸ್ಪತ್ರೆಗೆ ಬರಲು ಹಿಂದೇಟು ಹಾಕುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಶಿಶುಗಳ ಸಾವಿನ ಬಗ್ಗೆ ವೈದ್ಯರು ನೀಡುವ ಉತ್ತರವೇನು? ಇನ್ನು ಈ ಬಗ್ಗೆ ಟಿವಿ9 ಜೊತೆ ವೈದ್ಯಾಧಿಕಾರಿ ಡಾ.ಅನಿಲ್ ಕುಮಾರ್ ಮಾತನಾಡಿದ್ದು ಅವಧಿಗೆ ಮುನ್ನ ಹೆರಿಗೆ, ಶಿಶುಗಳ ತೂಕ ಕಡಿಮೆ ಇರುವುದು, ಹೆರಿಗೆ ಸಮಯದಲ್ಲಿ ಮಕ್ಕಳಿಗೆ ತೊಂದರೆಯಾಗಿ ಮೃತಪಡುತ್ತಿವೆ ಎಂದಿದ್ದಾರೆ. ಬಳ್ಳಾರಿಯ ವಿಮ್ಸ್​ನಲ್ಲಿ 293 ಹಾಗೂ ವಿಜಯನಗರ ಜಿಲ್ಲೆಯಲಿ 65 ಶಿಶುಗಳ ಮರಣವಾಗಿದೆ. ಏಪ್ರಿಲ್​ನಿಂದ ನವೆಂಬರ್ ವರೆಗೂ 358 ಶಿಶುಗಳು ಮೃತಪಟ್ಟಿವೆ. ಇದಕ್ಕೆಲ್ಲ ಬೇರೆ ಬೇರೆ ಕಾರಣಗಳಿವೆ. ಅವಧಿಗೆ ಮುನ್ನ ಹೆರಿಗೆ, ಶಿಶುಗಳ ತೂಕ ಕಡಿಮೆ ಇರುವುದು, ಹೆರಿಗೆ ಸಮಯದಲ್ಲಿ ಮಕ್ಕಳಿಗೆ ತೊಂದರೆ,ಕೆಲ ಮಕ್ಕಳು ಸೋಂಕಿನಿಂದ ಮೃತಪಡುತ್ತಿವೆ.ಮುಖ್ಯವಾಗಿ ಗರ್ಭಿಣಿಗೆ ರಕ್ತಹೀನತೆ, ಹೆರಿಗೆ ಸಮಯದಲ್ಲಿ ಬಿಪಿ ಹೆಚ್ಚಾಗುವುದು ಸೇರಿದಂತೆ ವಿವಿಧ ಕಾರಣಗಳಿಂದ ತಿಂಗಳಿಗೆ ಸರಾಸರಿ 36 ಮಕ್ಕಳ ಸಾವು ಸಂಭವಿಸುತ್ತಿದೆ.

ವಿಜಯನಗರ ಜಿಲ್ಲೆಯಲ್ಲಿ ತಿಂಗಳಿಗೆ ಸರಾಸರಿ 8 ಸಾವಾಗ್ತಿವೆ. ಕೆಲವು ಕಡೆ ಚಿಕಿತ್ಸೆ ಕೊಡೋದು ವಿಳಂಬವಾಗಿ ಸಾವನ್ನಪ್ಪಿವೆ. ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರೆ ಹೆರಿಗೆ ಮಾಡ್ತಾರೆ. ಅಲ್ಲಿ ಸಮಸ್ಯೆ ಆದ್ರೆ ವಿಮ್ಸ್ ಗೆ ದಾಖಲಾಗ್ತಾರೆ. ಇನ್ನೂ ಕೆಲ ಮಕ್ಕಳ ಸಾವಿಗೆ ಸರಿಯಾದ ಕಾರಣವೇ ತಿಳಿಯುತ್ತಿಲ್ಲ ಎಂದು ಜಿಲ್ಲಾ ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ಘಟಕದ ವೈದ್ಯಾಧಿಕಾರಿ ಡಾ.ಅನಿಲ್ ಕುಮಾರ್ ಮಾಹಿತಿ ನೀಡಿದ್ದಾರೆ.

ಬಳ್ಳಾರಿಯಲ್ಲಿ ಅಪೌಷ್ಟಿಕತೆಯಿಂದ ಮಕ್ಕಳ ಸಾವು ವಿಚಾರಕ್ಕೆ ಸಂಬಂಧಿಸಿ ಆರೋಗ್ಯ ಸಚಿವ ಸುಧಾಕರ್ ಮಾತನಾಡಿದ್ದಾರೆ, ನಾನು ಈಗಷ್ಟೆ ಅಲ್ಲಿನ‌ ಡಿಹೆಚ್​ಒ ಜೊತೆ ಮಾತನಾಡಿದ್ದೇನೆ. ಕೆಲವು ಜಿಲ್ಲೆಗಳಲ್ಲಿ ಅಪೌಷ್ಟಿಕತೆ, ಕಡಿಮೆ ತೂಕಕ್ಕೆ ಮಕ್ಕಳು ತುತ್ತಾಗುತ್ತಿದ್ದಾರೆ. ಬಳ್ಳಾರಿ, ರಾಯಚೂರು, ಹೊಸಪೇಟೆ, ಬೀದರ್, ಕಲಬುರಗಿಯ ಆರೇಳು ಜಿಲ್ಲೆಯಲ್ಲಿ ಪತ್ತೆ ಮಾಡಿದ್ದೇವೆ. ಎಮ್​ಎಮ್​ಆರ್, ಮೆಟರ್ನಲ್ ಮ್ಯಾರ್ಟ್ಯಾಲಿಟಿ ರೇಟ್, ಐಎಮ್​ಆರ್ ರೇಟ್ ಚನ್ನಾಗಿದೆ. ಆದರೆ ಆರೇಳು ಜಿಲ್ಲೆಯಿಂದ ಒಟ್ಟಾರೆ ಸರಾಸರಿ ಹೆಚ್ಚು ಕಾಣಿಸುತ್ತಿದೆ. ಮಹಿಳಾ ಮತ್ತು ಮಕ್ಕಳ ಇಲಾಖೆ ಜೊತೆ ಮಾತಾಡಿದ್ದೇವೆ. ಯಾವ ರೀತಿ ಪೌಷ್ಟಿಕ ಆಹಾರ ಕೊಡಬೇಕು ಅಂತ ಚರ್ಚೆ ಮಾಡಿದ್ದೇವೆ. ಒಂದೇ ಜಿಲ್ಲೆಯಲ್ಲಿ ಇಷ್ಟು ಸಾವಾಗಿದೆ. ಅದರ ಬಗ್ಗೆಯೂ ಸಭೆ ಸಮಾಲೋಚನೆ ಮಾಡ್ತೀವಿ. ಆದಷ್ಟು ಅಪೌಷ್ಟಿಕತೆ ನಿವಾರಣೆ ಮಾಡಲೇಬೇಕು. ಸರ್ಕಾರಗಳಿಗೆ ಆ ರಾಜ್ಯದ ಮಕ್ಕಳ ಅಪೌಷ್ಟಿಕತೆ ಸರಿ ಮಾಡೋದು ಆದ್ಯ ಕರ್ತವ್ಯ. ಅಪೌಷ್ಟಿಕತೆಯಿಂದಲೇ ಕಡಿಮೆ ತೂಕದಲ್ಲಿ ಮಕ್ಕಳು ಹುಟ್ಟೋದು ಎಂದರು.

ವೈದ್ಯರ ಹೇಳಿಕೆ ಹಾಸ್ಯಾಸ್ಪದ ಎಂದ ಸಚಿವ ಹಾಲಪ್ಪ ಆಚಾರ್​ ಅಪೌಷ್ಟಿಕತೆಯಿಂದ ಶಿಶಿಗಳೂ ಸಾಯುತ್ತಿವೆ ಎಂದು ವೈದ್ಯರು ಹೇಳಿದ್ದಾರೆ. ವೈದ್ಯರ ಹೇಳಿಕೆ ಹಾಸ್ಯಾಸ್ಪದ ಎಂದು ಮಹಿಳಾ & ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ ಹೇಳಿದ್ರು. ಇಡೀ ರಾಜ್ಯಕ್ಕೆ ಒಂದೇ ತರಹದ ಪೌಷ್ಟಿಕ ಆಹಾರ ನೀಡಲಾಗ್ತಿದೆ. ಇದರ ಬಗ್ಗೆ ಮಾತಾಡಲು ನಾನು ಡಾಕ್ಟರ್ ಅಲ್ಲ. ಶಿಶುಗಳ ಸಾವಿನ ಬಗ್ಗೆ ಸರ್ಕಾರದ ಮಟ್ಟದಲ್ಲಿ ತನಿಖೆ ನಡೆಸುತ್ತೇವೆ. ನಮ್ಮ ಇಲಾಖೆಯಿಂದ ಯಾವುದೇ ತೊಂದರೆ ಆಗಿಲ್ಲ. ಯಾವ ಕಾರಣಕ್ಕೆ ಮಕ್ಕಳು ಸಾವನ್ನಪ್ಪುತ್ತಿವೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳ ಬಳಿ‌ ಮಾಹಿತಿ ಪಡೆಯುತ್ತೇನೆ.358 ಶಿಶುಗಳು ಸಾವನ್ನಪ್ಪಿರೋದು ನನಗೂ ಆಘಾತ ತಂದಿದೆ ಎಂದು ಕೊಪ್ಪಳದಲ್ಲಿ ಮಹಿಳಾ & ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ತಿಳಿಸಿದ್ದಾರೆ.

ಇದನ್ನೂ ಓದಿ: ಇಂದು ಹಿಮಾಚಲ ಪ್ರದೇಶಕ್ಕೆ ಪ್ರಧಾನಿ ಮೋದಿ ಭೇಟಿ; ವಿವಿಧ ಜಲವಿದ್ಯುತ್​ ಯೋಜನೆಗಳಿಗೆ ಶಂಕುಸ್ಥಾಪನೆ

Follow us on

Related Stories

Most Read Stories

Click on your DTH Provider to Add TV9 Kannada