ಸೆ. 29ರಂದು ಅಖಂಡ ಕರ್ನಾಟಕ ಬಂದ್​​, ಸಭೆಯಲ್ಲಿ ತೀರ್ಮಾನ: ಸಹಕಾರ ನೀಡಬೇಕೆಂದ ವಾಟಾಳ್ ನಾಗರಾಜ್

| Updated By: ರಮೇಶ್ ಬಿ. ಜವಳಗೇರಾ

Updated on: Sep 25, 2023 | 1:35 PM

Karnataka Bandh: ಕಾವೇರಿ ನದಿ ನೀರಿನ ವಿಚಾರವಾಗಿ ನಾಳೆ(ಸೆಪ್ಟೆಂಬರ್ 26) ಬೆಂಗಳೂರು ಬಂದ್​ಗೆ ತೀರ್ಮಾನಿಸಲಾಗಿದೆ. ಮತ್ತೊಂದೆಡೆ ರಾಜ್ಯದ ಎಲ್ಲಾ ನೀರಾವರಿ ಯೋಜನೆಗಳಿಗೆ ಆಗ್ರಹಿಸಿ ಸೆಪ್ಟೆಂಬರ್ 29ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ ನೀಡಲಾಗಿದೆ. ವಾಟಳ್ ನಾಗರಾಜ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಮುಖಂಡರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಸೆ. 29ರಂದು ಅಖಂಡ ಕರ್ನಾಟಕ ಬಂದ್​​, ಸಭೆಯಲ್ಲಿ ತೀರ್ಮಾನ: ಸಹಕಾರ ನೀಡಬೇಕೆಂದ ವಾಟಾಳ್ ನಾಗರಾಜ್
ಕರ್ನಾಟಕ ಬಂದ್​
Follow us on

ಬೆಂಗಳೂರು, (ಸೆಪ್ಟೆಂಬರ್ 25): ರಾಜ್ಯದ ಎಲ್ಲ ನೀರಾವರಿ ಯೋಜನೆಗಳಿಗೆ ಆಗ್ರಹಿಸಿ ಇದೇ ಸೆಪ್ಟೆಂಬರ್ 29ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ ಕೊಡಲಾಗಿದೆ. ಇಂದು(ಸೆಪ್ಟೆಂಬರ್ 25) ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ನಡೆದ ವಿವಿಧ ಸಂಘಟನೆಗಳ ಮುಖಂಡರ ಸಭೆಯಲ್ಲಿ ಶುಕ್ರವಾರ ಕರ್ನಾಟಕ ಬಂದ್​ಗೆ ತೀರ್ಮಾನಿಸಲಾಗಿದೆ. ಈ ಬಗ್ಗೆ ಕನ್ನಡ ಪರ ಹೋರಾಟಗಾರ ವಾಟಳ್ ನಾಗರಾಜ್ ಅಧಿಕೃತ ಘೋಷಣೆ ಮಾಡಿದ್ದು, ಕರ್ನಾಟಕದ ಎಲ್ಲ ನೀರಾವರಿ ಯೋಜನೆಗಳಿಗೆ ಆಗ್ರಹಿಸಿ ಸೆ.29ರಂದು ಕರ್ನಾಟಕ ಬಂದ್​ಗೆ ಕರೆ ನೀಡಲಾಗಿದ್ದು, ಎಲ್ಲರು ಸಹಕಾರ ನೀಡಬೇಕೆಂದು ಮನವಿ ಮಾಡಿಕೊಂಡರು.

ಕಾವೇರಿ ನದಿ ನೀರು ಹಂಚಿಕೆ ವಿವಾದ, ಮಹದಾಯಿ ಯೋಜನೆ, ಕೃಷ್ಣಾನದಿ ಯೋಜನೆ ಸೇರಿದಂತೆ ಎಲ್ಲ ಯೋಜನೆಗಳ ವಿಚಾರವಾಗಿ ಸೆ.29ರ ಕರ್ನಾಟಕ ಬಂದ್​ಗೆ ಎಲ್ಲರೂ ಸಹಕಾರ ನೀಡಬೇಕು. ಅಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಆಯೋಜನೆ ಮಾಡಲಾಗುತ್ತದೆ. ಟೌನ್​ಹಾಲ್​ನಿಂದ ಫ್ರೀಡಂಪಾರ್ಕ್​ವರೆಗೂ ಪ್ರತಿಭಟನಾ ರ್ಯಾಲಿ ನಡೆಸುತ್ತೇವೆ ಎಂದು ವಿವರಿಸಿದರು.

ಇದನ್ನೂ ಓದಿ:  ಕಾವೇರಿ ನೀರು ವಿವಾದ: ಮಧ್ಯಸ್ಥಿಕೆ ವಹಿಸುವಂತೆ ನರೇಂದ್ರ ಮೋದಿಗೆ ದೇವೇಗೌಡ ಪತ್ರ

ಸದ್ಯಕ್ಕೆ ಕರ್ನಾಟಕ ಬಂದ್​ಗೆ ಓಲಾ ಊಬರ್ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ತನ್ವೀರ್ ಪಾಷಾ ಅವರು ಬೆಂಬಲವನ್ನು ಘೋಷಿಸಿದ್ದಾರೆ. ಇನ್ನು ಇದಕ್ಕೆ ಕನ್ನಡಪರ ಸಂಘಟನೆಗಳು ಸಹ ಬೆಂಗಳೂರು ಬಂದ್ ಬದಲಾಗಿ ಕರ್ನಾಟಕ ಬಂದ್​ಗೆ ಬೆಂಬಲ ನೀಡಿವೆ.

ಇನ್ನುಳಿದಂತೆ ಯಾವೆಲ್ಲ ಸಂಘ-ಸಂಸ್ಥೆಗಳು ಕರ್ನಾಟಕ ಬಂದ್​ಗೆ ಬೆಂಬಲ ಘೋಷಿಸುತ್ತವೆ ಎನ್ನುವುದನ್ನು ಕಾದುನೋಡಬೇಕಿದೆ.

Published On - 1:27 pm, Mon, 25 September 23