
ಬೆಂಗಳೂರು, ಅಕ್ಟೋಬರ್ 19: ರಾಜ್ಯದಲ್ಲಿ ಮಳೆ ಮತ್ತಷ್ಟು ದಿನಗಳ ಕಾಲ ಮುಂದುವರಿಯುವ ಸಾಧ್ಯತೆ ಇದ್ದು, 23 ಜಿಲ್ಲೆಗಳಲ್ಲಿ ನಾಳೆ ಯೆಲ್ಲೋ ಅಲರ್ಟ್ (Weather Forecast) ಘೋಷಿಸಲಾಗಿದೆ. ಕರಾವಳಿ ಭಾಗದಲ್ಲಿ ಗಾಳಿ ಮತ್ತು ಗುಡುಗು ಸಹಿತ ಅಧಿಕ ಮಳೆಯಾಗುವ ಸಾಧ್ಯತೆ ಇದ್ದು, ಉತ್ತರ ಮತ್ತು ಕಲ್ಯಾಣ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಅಥವಾ ಒಣ ಹವೆ ಇರುವ ಸಾಧ್ಯತೆ ಇದೆ. ರಾಜಧಾನಿ ಬೆಂಗಳೂರಲ್ಲಿಯೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುಂದಿನ 7 ದಿನಗಳ #ಮಳೆ #ಮುನ್ಸೂಚನೆ ಮತ್ತು #ಎಚ್ಚರಿಕೆಗಳು: (ಮೂಲ: IMD) ರಾಜ್ಯದಾದ್ಯಂತ ಗುಡುಗು ಸಹಿತ ಜೋರಾದ ಗಾಳಿಯೊಂದಿಗೆ, ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಚದುರದಿಂದ ವ್ಯಾಪಕವಾಗಿ ಹಗುರದಿಂದ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಭಾರಿ ಮಳೆ. ಉತ್ತರ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ pic.twitter.com/hDymBYEIak
— Karnataka State Natural Disaster Monitoring Centre (@KarnatakaSNDMC) October 19, 2025
ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡದ ವಿವಿಧೆಡೆ ನಾಳೆ ಉತ್ತಮ ಮಳೆಯಾಗಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಪುತ್ತೂರು, ಸುಳ್ಳ ಮತ್ತು ಉಡುಪಿ ಜಿಲ್ಲೆಯ ಕುಂದಾಪುರ, ಕಾರ್ಕಳ ಮತ್ತು ಉಡುಪಿ ತಾಲೂಕಿನಲ್ಲಿ ವರುಣ ಅಬ್ಬರಿಸಲಿದ್ದಾನೆ. ಉತ್ತರ ಕನ್ನಡ ಭಾಗದಲ್ಲಿ ಗಾಳಿ ಸಹಿತ ಮಳೆಯಾಗಲಿರುವ ಕಾರಣ ಮುಂಜಾಗೃತಾ ಕ್ರಮವಾಗಿ ಮೀನುಗಾರರಿಗೆ ಸಮುದ್ರ ಇಳಿಯದಂತೆ ಸೂಚಿಸಲಾಗಿದೆ. ಗಾಳಿಯ ವೇಗ ಗಂಟೆಗೆ 35-45 ಕಿ.ಮೀ. ಇರುವ ಸಾಧ್ಯತೆ ಇದೆ. ದಕ್ಷಿಣ ಒಳನಾಡು ಭಾಗದಲ್ಲಿಯೂ ಸಾಧಾರಣ ಮಳೆಯಾಗಲಿದ್ದು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ತುಮಕೂರು, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉತ್ತರ ಒಳನಾಡು ಭಾಗದಲ್ಲಿ ಮೋಡ ಕವಿದ ವಾತಾವರಣ ಹೆಚ್ಚಾಗಿ ಕಂಡುಬರಲಿದೆ. ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಇದೇ ರೀತಿಯ ವಾತಾವರಣ ಕಂಡುಬರಲಿದೆ.
ಇದನ್ನೂ ಓದಿ: ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್; ಹವಾಮಾನ ಇಲಾಖೆ ಮುನ್ಸೂಚನೆ
ಬೆಂಗಳೂರು ನಗರದಲ್ಲಿಯೂ ನಾಳೆ ಗುಡುಗು ಸಹಿತ ಸಣ್ಣ ಪ್ರಮಾಣದ ಮಳೆಯನ್ನು ನಿರೀಕ್ಷಿಸಲಾಗಿದೆ. ಶೇಕಡಾ 78ರಿಂದ 100ರಷ್ಟು ಮಳೆಯ ಸಾಧ್ಯತೆ ಇದ್ದು, ಗಾಳಿಯ ವೇಗ ಗಂಟೆಗೆ 13-15 ಕಿ.ಮೀ. ಇರಲಿದೆ. ನಗರದ ಗರಿಷ್ಠ ಉಷ್ಣಾಂಶ 27 ಡುಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.