ಬೆಂಗಳೂರು: ಚಿಂದಿ ಆಯುವ, ರದ್ದಿ ಹೆಕ್ಕುವ ಮತ್ತು ಬಡತನದ ಅಂಚಿನಲ್ಲಿರುವ ಕುಟುಂಬಗಳ ಮಕ್ಕಳಿಗೆ ಶಿಕ್ಷಣ ದೊರೆಯುವಂತೆ ಮಾಡಲು ಮತ್ತು ಅವರಲ್ಲಿ ಕಲಿಕೆಯ ಬಗ್ಗೆ ಆಸಕ್ತಿ ಮೂಡಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (Women and Child Development Department) ವಿನೂತನ ಹೆಜ್ಜೆ ಇಟ್ಟಿರುವ ಬಗ್ಗೆ ವರದಿಯಾಗಿದೆ. ಮಕ್ಕಳಿಗೆ ಕಲಿಕೆಯ ಅಗತ್ಯತೆಯನ್ನು ಮನವರಿಕೆ ಮಾಡಿಕೊಡಲು ಮತ್ತು ಆರೋಗ್ಯಕರ ಜೀವನವನ್ನು ಉತ್ತೇಜಿಸಲು ಅವರನ್ನು ಅಂಗನವಾಡಿಗಳಿಗೆ ಸೇರಿಸುವಂತೆ ಪೋಷಕರ ಮನವೊಲಿಸಲು ‘ವಾಹನ ಆಧಾರಿತ ಸಂಚಾರಿ ಅಭಿಯಾನ (Mobile van campaign)’ವನ್ನು ಇಲಾಖೆ ಆರಂಭಿಸಿದೆ.
ಸುಮಾರು 20,000 ಮಂದಿಯಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮುಂದಿನ 10 ದಿನಗಳಲ್ಲಿ ಸಂಚಾರಿ ವಾಹನವು 5,000 ಮನೆಗಳಿಗೆ ತಲುಪಲಿದೆ. 25 ಅಂಗನವಾಡಿ ಕೇಂದ್ರಗಳು ಮತ್ತು 25 ಸರ್ಕಾರಿ ಶಾಲೆಗಳ ನಿಕಟ ಸಹಭಾಗಿತ್ವದಲ್ಲಿ ಅಭಿಯಾನ ಆರಂಭಿಸಲಾಗಿದೆ. 3 ರಿಂದ 6 ವರ್ಷ ವಯಸ್ಸಿನ ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಲಾಗುತ್ತದೆ ಎಂದು ಇಲಾಖೆ ನೀಡಿದ ಮಾಹಿತಿ ಆಧರಿಸಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ಕಳೆದ ವರ್ಷದ ಉಪಕ್ರಮದ ಯಶಸ್ಸಿನ ಆಧಾರದಲ್ಲಿ ಈ ವರ್ಷವೂ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಸೂಕ್ತ ನಡವಳಿಕೆ, ಮುಟ್ಟಿನ ಆರೋಗ್ಯ ಮತ್ತು ನೈರ್ಮಲ್ಯ, ನೀರು ಹಾಗೂ ನೈರ್ಮಲ್ಯ ಮತ್ತಿತರ ಅಭ್ಯಾಸಗಳ ಬಗ್ಗೆ ಜನರಿಗೆ ತಿಳಿಸಲು ವಾಹನಗಳನ್ನು ಬಳಸಲಾಗಿತ್ತು. ಈ ಅಭಿಯಾನವು ಸಮುದಾಯದೊಂದಿಗೆ ತೊಡಗಿಸಿಕೊಳ್ಳಲು ಪರಿಣಾಮಕಾರಿ ಮಾಧ್ಯಮವೆಂದು ಸಾಬೀತಾಗಿದೆ ಎಂದು ವರದಿ ಉಲ್ಲೇಖಿಸಿದೆ.
‘ಸೇವ್ ದ ಚಿಲ್ಡ್ರನ್’ ಸಹಯೋಗದಲ್ಲಿ ಮತ್ತು ಸಾಮಾಜಿಕ ಉಪಕ್ರಮದ ಭಾಗವಾಗಿ ‘ಹೆಚ್ ಆ್ಯಂಡ್ ಎಂ ಫೌಂಡೇಶನ್’ನಿಂದ ದೊರೆಯುವ ಧನಸಹಾಯವನ್ನು ಪಡೆದುಕೊಂಡು ಈ ಅಭಿಯಾನ ನಡೆಸಲಾಗುತ್ತದೆ. ಅಭಿಯಾನಕ್ಕೆ ಇಲಾಖೆಯ ಉಪನಿರ್ದೇಶಕ ಎಸ್ ಸಿದ್ಧರಾಮಣ್ಣ ಈಗಾಗಲೇ ಚಾಲನೆ ನೀಡಿದ್ದಾರೆ.
ಇದನ್ನೂ ಓದಿ: Tv9 Education Summit: ಎರಡನೇ ದಿನಕ್ಕೆ ಕಾಲಿಟ್ಟ ಎಜುಕೇಷನ್ ಎಕ್ಸ್ ಪೋಗೆ ಭರ್ಜರಿ ರೆಸ್ಪಾನ್ಸ್, ಇ ಬೈಕ್ ಗೆದ್ದ ಗಾನವಿ
30 ಕೊಳೆಗೇರಿ ಸಮುದಾಯಗಳಿಗೆ ಸಮಗ್ರ ಶಿಕ್ಷಣ, ಮಕ್ಕಳ ಸ್ನೇಹಿ ನೈರ್ಮಲ್ಯ ಸೌಲಭ್ಯಗಳು ಮತ್ತು ಸುರಕ್ಷಿತ ಕುಡಿಯುವ ನೀರನ್ನು ಒದಗಿಸುವ ಮೂಲಕ ಶೈಕ್ಷಣಿಕ ಅಂತರವನ್ನು ಕಡಿಮೆ ಮಾಡಲು ಅಭಿಯಾನವು ಪ್ರಯತ್ನಿಸುತ್ತದೆ ಎಂದು ಸೇವ್ ದಿ ಚಿಲ್ಡ್ರನ್ನ ದಕ್ಷಿಣ ಭಾರತದ ಸಂವಹನ ಮತ್ತು ಪ್ರಚಾರ ವ್ಯವಸ್ಥಾಪಕ, ರೂಪಾಲಿ ಗೋಸ್ವಾಮಿ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.
ಚಿಂದಿ ಆಯುವ ಸಮುದಾಯದ ಪ್ರತಿಯೊಂದು ಮಗುವನ್ನು ಹತ್ತಿರದ ಅಂಗನವಾಡಿ ಕೇಂದ್ರಗಳಿಗೆ ದಾಖಲಿಸುವುದು ನಮ್ಮ ಉದ್ದೇಶವಾಗಿದೆ. ನಾವು ಆಟಗಳನ್ನು ಆಧಾರಿತ ಕಲಿಕಾ ವಿಧಾನವನ್ನು ಒದಗಿಸುತ್ತೇವೆ, ದೃಶ್ಯ ಕಲಿಕೆಗೆ ಒತ್ತು ನೀಡುತ್ತೇವೆ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಸಂತೋಷದಾಯಕ ವಾತಾವರಣವನ್ನು ಸೃಷ್ಟಿಸಲು ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತೇವೆ. ಈ ಅಂಗನವಾಡಿ ಕೇಂದ್ರಗಳು ಉಚಿತ ಮತ್ತು ಎಲ್ಲರಿಗೂ ಪ್ರವೇಶಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:56 pm, Fri, 23 June 23