ಅಬ್ದುಲ್ ಜಬ್ಬಾರ್ ಬೆನ್ನಲ್ಲೇ ಜಮೀರ್ ಆಪ್ತೆಗೆ ಗೇಟ್‌ಪಾಸ್, ಉಪಾಧ್ಯಕ್ಷೆ ಸ್ಥಾನದಿಂದ ಉಚ್ಚಾಟನೆ!
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಸುತ್ತಮುತ್ತ ರಾಜಕೀಯ ಬೆಳವಣಿಗೆಗಳು ತೀವ್ರಗೊಳ್ಳುತ್ತಿರುವ ಹಿನ್ನೆಲೆ, ಕೆಪಿಸಿಸಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸಣ್ಣಪುಟ್ಟ ನಾಯಕರ ತಪ್ಪುಗಳನ್ನೂ ಗಂಭೀರವಾಗಿ ಪರಿಗಣಿಸುತ್ತಿರುವ ಕೆಪಿಸಿಸಿ,, ಶಿಸ್ತು ಉಲ್ಲಂಘನೆ ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಿದೆ. ಇದಕ್ಕೆ ಪೂರಕವೆಂಬಂತೆ ಸಚಿವ ಜಮೀರ್ ಅಹ್ಮದ್ ಖಾನ್ ಆಪ್ತೆಯನ್ನೂ ಸಹ ಕಾಂಗ್ರೆಸ್ನಿಂದ ಉಚ್ಛಾಟನೆ ಮಾಡಲಾಗಿದೆ.

ಬೆಂಗಳೂರು, (ಏಪ್ರಿಲ್ 15): ದಾವಣಗೆರೆ (Davanagere) ದಂಗಲ್ ತೀವ್ರ ಸ್ವರೂಪ ಪಡೆದುಕೊಂಡಿದೆ. ದಕ್ಷಿಣ ಕ್ಷೇತ್ರದ ಉಪಚುನಾವಣೆ ಕಾಂಗ್ರಸ್ನಲ್ಲಿ (Congress) ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದು, ಕೆಲವು ದಿನಗಳಿಂದ ಬಿಡುವಿಲ್ಲದ ರಾಜಕೀಯ ಚಟುವಟಿಕೆ ನಡೆಯುತ್ತಿವೆ. ಬೈ ಎಲೆಕ್ಷನ್ ವೇಳೆ ಪಕ್ಷ ವಿರೋಧ ಚಟುವಟಿಕೆ ಆರೋಪದ ಮೇಲೆ ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. ಇದರ ಬೆನ್ನಲ್ಲೇ ಇದೀಗ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೂ ಸಂಕಷ್ಟ ಎದುರಾಗಿದ್ದು, ಹೈಕಮಾಂಡ್ ಕ್ರಮದ ಬಗ್ಗೆ ಚಿಂತನೆ ನಡೆಸಿದೆ. ಇದರ ಮಧ್ಯೆ ಇದೀಗ ಜಮೀರ್ ಅಹ್ಮದ್ ಖಾನ್ ಆಪ್ತೆ, ಬೆಂಗಳೂರು ಉತ್ತರ ಜಿಲ್ಲಾ ಉಪಾಧ್ಯಕ್ಷೆ ಅಫ್ರಿನ್ ಖಾನ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ವಿಚಾರದಲ್ಲಿ ಸಣ್ಣಪುಟ್ಟ ನಾಯಕರ ತಪ್ಪನ್ನು ಗಂಭೀರವಾಗಿ ಪರಿಗಣಿಸುತ್ತಿರುವ ಕೆಪಿಸಿಸಿ, ಪಕ್ಷ ವಿರೋಧಿ, ಅಶಿಸ್ತು ರೀತಿ ನಡೆದುಕೊಳ್ಳುವವರ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಅದರಂತೆ ತೆ ಸಚಿವ ಜಮೀರ್ ಅಹ್ಮದ್ ಖಾನ್ ಆಪ್ತೆ ಅಫ್ರಿನ್ ಖಾನ್ ಅವರನ್ನ ಸಹ ಕಾಂಗ್ರೆಸ್ನಿಂದ ಉಚ್ಛಾಟನೆ ಮಾಡಲಾಗಿದೆ.
ಇದನ್ನೂ ಓದಿ: ಸಿದ್ದರಾಮಯ್ಯ ಬಣಕ್ಕೆ ಮತ್ತೊಂದು ಪೆಟ್ಟು ನೀಡಿದ ಡಿಕೆ ಶಿವಕುಮಾರ್: ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವದಿಂದ ಜಬ್ಬಾರ್ ಅಮಾನತು
ಶಾಸಕ ರಿಜ್ವಾನ್ ಅರ್ಷದ್ ವಿರುದ್ಧ ಅಫ್ರಿನ್ ಖಾನ್ ಅವಹೇಳನಕಾರಿ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಅಲ್ಲದೆ ರಿಜ್ವಾನ್ ಅರ್ಷದ್ ಅವರನ್ನು ‘ಮೀರ್ ಸಾದಿಕ್’ ಎಂದು ಉಲ್ಲೇಖಿಸಿ ಪೋಸ್ಟ್ ಮಾಡಿದ್ದು ಪಕ್ಷದ ಅಸಮಾಧಾನಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಅಫ್ರಿನ್ ಖಾನ್ ತಲೆದಂಡವಾಗಿದೆ.
ಮೂರ್ಖತನದ ನಿರ್ಧಾರ ಎಂದ ಅಫ್ರಿನ್ ಖಾನ್
ಇನ್ನು ಪಕ್ಷದಿಂದ ಉಚ್ಚಾಟನೆ ಆದೇಶಕ್ಕೆ ಪ್ರತಿಕ್ರಿಯಿಸಿದ ಅಫ್ರಿನ್ ಖಾನ್ ಪಕ್ಷದ ವಿರುದ್ಧ ಸಿಡಿದೆದ್ದಾರೆ. ʼʼನಾನು ಏಪ್ರಿಲ್ 4ರಂದೇ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದೇನೆ. ಆದರೆ ಇಂದು ನನ್ನನ್ನು ಹೊರಹಾಕಲಾಗಿದೆ. ಇದು ಮೂರ್ಖತನದ ನಿರ್ಧಾರʼʼ ಎಂದು ಲೇವಡಿ ಮಾಡಿದ್ದಾರೆ.
ಜಮೀರ್ ವಿರುದ್ಧವೂ ಕ್ರಮಕ್ಕೆ ಚಿಂತನೆ
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಪ್ರಚಾರ ಕಾರ್ಯದಲ್ಲಿ ಭಾಗಿಯಾಗದೆ, ಪಕ್ಷದ ಒಂದಿಷ್ಟು ಅಲ್ಪಸಂಖ್ಯಾತ ಹಿರಿಯ ಮುಖಂಡರು ಪಕ್ಷವನ್ನು ಸೋಲಿಸಲು ಹುನ್ನಾರ ಮಾಡಿದ್ದಾರೆ ಎಂಬ ಆರೋಪವೂ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ವರಿಷ್ಠರು, ಮೇಲ್ಮನೆ ಸದಸ್ಯರಾದ ಅಬ್ದುಲ್ ಜಬ್ಬಾರ್ ಮತ್ತು ನಸೀರ್ ಅಹ್ಮದ್ ವಿರುದ್ಧ ಕ್ರಮಕೈಗೊಂಡಿದೆ. ಇದೀಗ ಹಿಟ್ ಲಿಸ್ಟ್ನಲ್ಲಿ ಜಮೀರ್ ಅಹ್ಮದ್ ಖಾನ್ ಸಹ ಇದ್ದು, ಅವರನ್ನು ಸಚಿವ ಸ್ಥಾನದಿಂದ ಕೈಬಿಡುವ ಬಗ್ಗೆ ಹೈಕಮಾಂಡ್ ಚಿಂತನೆ ನಡೆಸಿದೆ. ಆದ್ರೆ, ಮಂತ್ರಿಮಂಡಲದಿಂದ ವಜಾ ಮಾಡಿದರೆ ತಪ್ಪು ಸಂದೇಶ ಹೋಗುತ್ತೆ. ಇದರಿಂದ ಬೇರೆ ರಾಜಕೀಯ ಬೆಳವಣಿಗೆಗಳು ನಡೆಯುತ್ತವೆ. ಹೀಗಾಗಿ ಜಮೀರ್ ಅವರನ್ನ ಏಕಾಏಕಿ ಸಚಿವ ಸ್ಥಾನದಿಂದ ವಜಾ ಮಾಡುವುದು ಅಷ್ಟು ಸರಿಯಲ್ಲ ಎಂದು ಹೈಕಮಾಂಡ್ಗೆ ತಿಳಿಸಿಲಾಗಿದೆ. ಹೀಗಾಗಿ ಹೈಕಮಾಂಡ್ ಜಮೀರ್ ಅಹ್ಮದ್ ಖಾನ್ ವಿಷಯದಲ್ಲಿ ಕಾದು ನೋಡುವ ಮೊರೆ ಹೋಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:08 pm, Wed, 15 April 26




