
ಬೆಂಗಳೂರು, ಅಕ್ಟೋಬರ್ 08: ರಾಜ್ಯ ಸರ್ಕಾರವು ಸರ್ಕಾರಿ ನೌಕರರ ಹಾಜರಾತಿ ಕಳ್ಳಾಟ ತಡೆಯಲು ಇತ್ತೀಚೆಗೆ ‘ಕರ್ತವ್ಯ ಆ್ಯಪ್’ ಜಾರಿಗೊಳಿಸಿದೆ. ಇದು ಪೊಲೀಸ್ ಇಲಾಖೆಗೂ ಕಡ್ಡಾಯಗೊಳಿಸಲಾಗಿದೆ. ಆ ಮೂಲಕ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ನಿತ್ಯದ ಹಾಜರಾತಿಯನ್ನು ಇದೇ ಆ್ಯಪ್ನಲ್ಲಿ ದಾಖಲಿಸಲಾಗುತ್ತಿದೆ. ಆದರೆ ಇದೀಗ ಈ ಆ್ಯಪ್ನಿಂದಲೇ ಪೊಲೀಸರ ದೈನಂದಿನ ಕರ್ತವ್ಯಕ್ಕೆ ಅಡ್ಡಿ ಉಂಟಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಕರ್ತವ್ಯ ಆ್ಯಪ್ನಲ್ಲಿ ಲಾಗಿನ್ ಮತ್ತು ಲಾಗ್‌ಔಟ್ ಕಡ್ಡಾಯಗೊಳಿಸಿ ಡಿಜಿ ಮತ್ತು ಐಜಿಪಿ ಆದೇಶ ಹೊರಡಿಸಿದ್ದರು. ಸದ್ಯ ಈ ನಿಯಮದಿಂದ ಪೊಲೀಸ್ ಸಿಬ್ಬಂದಿ ವರ್ಗದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಪೊಲೀಸರು ಸಮಯ ನೋಡಿಕೊಂಡು ಕೆಲಸ ಮಾಡಲು ಸಾಧ್ಯವೆ ಎಂದು ಪ್ರಶ್ನಿಸಲಾಗುತ್ತಿದೆ.
‘ಕರ್ತವ್ಯ ಆ್ಯಪ್’ ಸದ್ಯ ಪೊಲೀಸ್ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದೆ. ಭದ್ರತೆ, ತನಿಖೆಗೆ ಬೇರೆ ಜಿಲ್ಲೆಗೆ ಅಥವಾ ರಾಜ್ಯಗಳಿಗೆ ತೆರಳುವ ಅನಿವಾರ್ಯತೆ ಇರುತ್ತದೆ. ಬೆಳಗಿನ ರೋಲ್ ಕಾಲ್ ಅಥವಾ ಬಂದೋಬಸ್ತ್ ವೇಳೆ ಕರ್ತವ್ಯ ಆ್ಯಪ್ನಲ್ಲಿ ಲಾಗಿನ್ ಆಗಿ ಬಳಿಕ ಲಾಗ್‌ಔಟ್ ಆಗುವುದು ಪ್ರಾಯೋಗಿಕವಾಗಿ ಅಸಾಧ್ಯ ಎನ್ನಲಾಗುತ್ತಿದೆ.
ಇನ್ನು ಶಿಫ್ಟ್ ಮುಗಿದರೂ, ಲಾಗ್‌ಔಟ್ ಆದರೂ ಕರ್ತವ್ಯ ಮುಂದುವರೆಸಬೇಕು. ಹಾಗಾಗಿ ಪೊಲೀಸರ ದೈನಂದಿನ ಕರ್ತವ್ಯಕ್ಕೆ ಅಡ್ಡಿಯುಂಟಾಗಿದೆ. ಪೊಲೀಸ್ ಇಲಾಖೆ ಸ್ವರೂಪವನ್ನೇ ಅರ್ಥೈಸಿಕೊಳ್ಳದೆ ಆ್ಯಪ್ ಜಾರಿ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಒಟ್ಟಿನಲ್ಲಿ ‘ಕರ್ತವ್ಯ ಆ್ಯಪ್’ ಇದೀಗ ಪೊಲೀಸ್ ಸಿಬ್ಬಂದಿಗೆ ಟೆನ್ಷನ್ ತಂದಿಟ್ಟಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಗಮನ ಹರಿಸಿ ತ್ವರಿತ ಕ್ರಮಕ್ಕೆ ಆಗ್ರಹಿಸಲಾಗಿದೆ.
ಇದನ್ನೂ ಓದಿ: ಇನ್ಮುಂದೆ ರೇಷನ್ ಕಾರ್ಡ್ ಇ-ಕೆವೈಸಿ ಮತ್ತಷ್ಟು ಸುಲಭ: ಆಹಾರ ಇಲಾಖೆಯಿಂದ ‘ಅನ್ನ ಸೇವೆ ಆ್ಯಪ್’ ಬಿಡುಗಡೆ
ಇನ್ನು ಇ-ಆಡಳಿತ ಇಲಾಖೆಯು ಸರ್ಕಾರಿ ನೌಕರರ ಹಾಜರಾತಿಯನ್ನು ಡಿಜಿಟಲೀಕರಣಗೊಳಿಸುವ ನಿಟ್ಟಿನಲ್ಲಿ ಈ ಕರ್ತವ್ಯ ಆ್ಯಪ್ವನ್ನು ಸಿದ್ಧಪಡಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.