ಬೆಂಗಳೂರು: ದ್ವಿತೀಯ ಪಿಯು ವಿದ್ಯಾರ್ಥಿಗಳ ಸಿಇಟಿ ಪರೀಕ್ಷೆ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ನಾರಾಯಣ, ಆಗಸ್ಟ್ 28 ಮತ್ತು 29ರಂದು ಸಿಇಟಿ ನಡೆಸಲಾಗುವುದು. ಸಿಇಟಿಗೆ ಈ ಬಾರಿ ದ್ವಿತೀಯ ಪಿಯುಸಿ ಅಂಕ ಪರಿಗಣಿಸಲ್ಲ. ಜೂನ್ 15ರಿಂದ ಸಿಇಟಿಗೆ ನೋಂದಣಿ ಆರಂಭವಾಗುತ್ತದೆ. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಸಿಇಟಿ ಅಂಕ ಪರಿಗಣಿಸಲಾಗುವುದು. ಎಲ್ಲ ಕೋರ್ಸ್‌ಗಳಿಗೆ ಸಿಇಟಿ ಅಂಕ ಪರಿಗಣಿಸಲು ನಿರ್ಧಾರಿಸಲಾಗಿದೆ ಎಂದು ತಿಳಿಸಿದ್ದಾರೆ.
ನೀಟ್‌ನಂತೆ ಸಿಇಟಿಯಲ್ಲಿ ಕನಿಷ್ಠ ಅಂಕ ಪರಿಗಣನೆ ವಿಚಾರದ ಬಗ್ಗೆ ಮಾತನಾಡಿದ ಉಪಮುಖ್ಯಮಂತ್ರಿ, ಕನಿಷ್ಠ ಅಂಕ ಪರಿಗಣಿಸುವ ಬಗ್ಗೆ ನಿರ್ಧಾರ ಮಾಡುತ್ತೇವೆ. ದ್ವಿತೀಯ ಪಿಯುಸಿಯಲ್ಲಿ ಶೇ.100ರಷ್ಟು ವಿದ್ಯಾರ್ಥಿಗಳು ಪಾಸ್ ಆಗುತ್ತಾರೆ. 6.5 ಲಕ್ಷ ವಿದ್ಯಾರ್ಥಿಗಳು ಪದವಿ ಕೋರ್ಸ್‌ಗಳಿಗೆ ಬರುತ್ತಾರೆ. ಹೀಗಾಗಿ ಪದವಿ ಕೋರ್ಸ್ ಹೆಚ್ಚಿಸುವ ಬಗ್ಗೆ ಚರ್ಚಿಸುತ್ತೇವೆ. ಈ ಬಾರಿ ವಿದ್ಯಾರ್ಥಿಗಳ ಸಂಖ್ಯೆ ಶೇ.30ರಷ್ಟು ಹೆಚ್ಚಾಗುತ್ತದೆ. ಅವರ ಭವಿಷ್ಯಕ್ಕಾಗಿ ಉತ್ತಮ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಸಿಇಟಿಗೆ ನೋಂದಣಿ ನೋಡಿಕೊಂಡು ಎಷ್ಟು ಕೇಂದ್ರಗಳಲ್ಲಿ ಸಿಇಟಿ ನಡೆಸಬೇಕೆಂದು ನಿರ್ಧರಿಸುತ್ತೇವೆ ಎಂದು ಹೇಳಿದ್ದಾರೆ.
ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾದ ಹಿನ್ನೆಲೆ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರಾಜ್ಯ ಸರ್ಕಾರ ಈಗಾಗಲೇ ರದ್ದುಗೊಳಿಸಿ ಘೋಷಿಸಿದೆ. 2021ನೇ ಸಾಲಿನ ವೃತ್ತಿಪರ ಕೋರ್ಸುಗಳ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಜುಲೈ 7 ಮತ್ತು 8 ರಂದು ನಡೆಯುತ್ತದೆ ಎಂದು ಈ ಹಿಂದೆ ಡಾ.ಅಶ್ವತ್ಥ ನಾರಾಯಣ ತಿಳಿಸಿದ್ದರು. ಆದರೆ ಕೊರೊನಾ ಎರಡನೇ ಅಲೆಯಿಂದ ನಿಗದಿಯಾದ ದಿನಾಂಕದಲ್ಲಿ ಪರೀಕ್ಷೆಯನ್ನು ನಡೆಸಲು ಸಾಧ್ಯವಾಗಲ್ಲ. ಹೀಗಾಗಿ ಆಗಸ್ಟ್ 28 ಮತ್ತು 29ರಂದು ಸಿಇಟಿ ಪರೀಕ್ಷೆ ನಡೆಸಲಾಗುವುದು ಎಂದು ಇಂದು (ಜೂನ್ 8) ಉನ್ನತ ಶಿಕ್ಷಣ ಸಚಿವ ತಿಳಿಸಿದ್ದಾರೆ.
ಈಗಾಗಲೇ ಘೋಷಣೆ ಮಾಡಿರುವಂತೆ ಅಗಸ್ಟ್ 28, 29 ಹಾಗೂ 30ರಂದು ಸಿಇಟಿ ನಡೆಯಲಿದ್ದು, ದ್ವಿತೀಯ ಪಿಯುಸಿ (ವಿಜ್ಞಾನ) ಪಾಸಾದ ಪ್ರತೀ ವಿದ್ಯಾರ್ಥಿಯೂ ಸಿಇಟಿ ಬರೆಯಲು ಅವಕಾಶವಿದೆ ಎಂದು ಅವರು ತಿಳಿಸಿದರು.
ಎಲ್ಲ ಐಚ್ಛಿಕ ವಿಷಯಗಳ ಪರೀಕ್ಷೆ 28 ಮತ್ತು 29ರಂದು ನಡೆಯುತ್ತದೆ. ಉಳಿದಂತೆ ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಅಗಸ್ಟ್ 30ರಂದು ಪರೀಕ್ಷೆ ನಡೆಯಲಿದೆ. ಮೊದಲು ಯಾವ ಪದ್ಧತಿಯಲ್ಲಿ ಪರೀಕ್ಷೆ ನಡೆಯುತ್ತಿತ್ತೋ ಅದೇ ರೀತಿ ಪರೀಕ್ಷೆ ನಡೆಯುತ್ತದೆ. ಪ್ರತಿ ವಿಷಯಕ್ಕೆ 60 ಅಂಕ ಇರುತ್ತದೆ. ಮೊದಲ ದಿನ ಗಣಿತ ಮತ್ತು ಜೀವವಿಜ್ಞಾನ ಹಾಗೂ ಎರಡನೇ ದಿನ ಭೌತವಿಜ್ಞಾನ ಮತ್ತು ರಸಾಯನಿಕ ವಿಜ್ಞಾನ ಇರುತ್ತದೆ ಎಂದರು.
ಅಂಕಗಳ ಮಿತಿ ಇಲ್ಲ, ವಿನಾಯಿತಿಯ ವಿವರ
ಸಿಇಟಿಯಲ್ಲಿ ಎಂಜಿನಿಯರಿಂಗ್, ಪಶುವೈದ್ಯ, ಕೃಷಿ ವಿಜ್ಞಾನ, ಆರ್ಕಿಟೆಕ್ಟ್, ಫಾರ್ಮಸಿ ಪ್ರವೇಶ ಪರೀಕ್ಷೆಗೆ ಇದ್ದ ಅರ್ಹ ಅಂಕಗಳ ಷರತ್ತನ್ನು ತೆಗೆದು ಹಾಕಲಾಗಿದೆ. ಕೇವಲ ಸಿಇಟಿ ಅಂಕಗಳ ಆಧಾರದ ಮೇಲೆ ಮಾತ್ರ ರಾಂಕ್ ಕೊಡಲಾಗುವುದು. ವೃತ್ತಿಪರ ಎಂಜಿನಿಯರಿಂಗ್ ಕೋರ್ಸ್ಗೆ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ವಿಷಯಗಳಲ್ಲಿ ಸಿಇಟಿ ಬರೆಯಲು ಸಾಮಾನ್ಯ ಅಭ್ಯರ್ಥಿಗಳು ಕನಿಷ್ಠ ಶೇ.45 ಹಾಗೂ ಪ.ಜಾತಿ ಮತ್ತು ಪ.ವರ್ಗದ ಅಭ್ಯರ್ಥಿಗಳು ಶೇ.40ರಷ್ಟು ಅಂಕಗಳನ್ನು ಗಳಿಸಬೇಕೆಂಬ ಷರತ್ತು ಇತ್ತು. ಆದರೆ ಈಗ ಬದಲಿಸಿದ್ದು, ಪಿಸಿಎಂ ಹಾಗೂ ನಿಗದಿತ ಐಚ್ಛಿಕ ವಿಷಯಗಳಲ್ಲಿ ಉತ್ತೀರ್ಣರಾಗಿರುವ ಎಲ್ಲ, ಅಂದರೆ ಜಸ್ಟ್ ಪಾಸ್ ಆಗಿರುವ ವಿದ್ಯಾರ್ಥಿಗಳು ಕೂಡ ಸಿಇಟಿ ಬರೆಯಲು ಅರ್ಹತೆ ಹೊಂದಿರುತ್ತಾರೆ. ಅಂಕಗಳ ಮಿತಿ ಸಡಿಲಿಕೆ ಮಾಡಿರುವ ಬಗ್ಗೆ ಎಲ್ಲ ಸಂಬಂಧಿತ ಪರೀಕ್ಷಾ ಮಂಡಳಿಗಳು, ಇನ್ನಿತರೆ ಸಂಬಂಧಿತ ಎಲ್ಲ ಸಂಸ್ಥೆಗಳಿಗೆ ಸರಕಾರ ಪತ್ರ ಬರೆಯಲಿದೆ ಎಂದು ಡಿಸಿಎಂ ಇದೇ ವೇಳೆ ತಿಳಿಸಿದರು.
2021-22ನೇ ವರ್ಷಕ್ಕೆ ಮಾತ್ರ
ಎಂಜಿನಿಯರಿಂಗ್ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ರಾಂಕ್ ನಿರ್ಧರಿಸಲು ಪ್ರಸ್ತುತ ನಿಯಮದಲ್ಲಿ ಇರುವಂತೆ ಅರ್ಹತಾ ಪರೀಕ್ಷೆ ಮತ್ತು ಸಿಇಟಿ ಪರೀಕ್ಷೆಯಲ್ಲಿ ಪಡೆದ ಪಿಸಿಎಂ ವಿಷಯಗಳ ಅಂಕಗಳನ್ನು ಸಮನಾಗಿ ಪರಿಗಣಿಸಿ ಸಿಇಟಿ ರಾಂಕ್ ನೀಡಲಾಗುತ್ತಿತ್ತು. ಅದರ ಬದಲಿಗೆ ಈಗ ಕೇವಲ ಸಿಇಟಿ ಪರೀಕ್ಷೆಯಲ್ಲಿನ ಪಿಸಿಎಂ ವಿಷಯಗಳಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳನ್ನು ಮಾತ್ರ ಪರಿಗಣಿಸಿ ಎಂಜಿನಿಯರಿಂಗ್ ರಾಂಕ್ ಕೊಡಲಾಗುವುದು. ಈ ಬದಲಾವಣೆ 2021-22ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಮಾತ್ರ ಅನ್ವಯವಾಗುತ್ತದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.
ಜೂನ್ 15ರಿಂದ ನೋಂದಣಿ
ಸಿಇಟಿ ಬರೆಯಲಿಚ್ಛಿಸುವ ವಿದ್ಯಾರ್ಥಿಗಳು ಜೂನ್ 15ರಿಂದಲೇ ಆನ್ ಲೈನ್ ಮೂಲಕ ರಿಜಿಸ್ಟ್ರೇಷನ್ ಮಾಡಿಕೊಳ್ಳಬೇಕು ಎಂದು ಅವರು ಮಾಹಿತಿ ನೀಡಿದರು.
ಇದನ್ನೂ ಓದಿ
ಬಗೆಹರಿಯುತ್ತಿಲ್ಲ ದ್ವಿತೀಯ ಪಿಯುಸಿ ಫಲಿತಾಂಶ ವಿಚಾರ; ಶಿಕ್ಷಣ ಇಲಾಖೆಗೆ ಸಲಹೆ, ಸವಾಲು ತಿಳಿಸಿದ ರುಪ್ಸಾ
ದ್ವಿತೀಯ ಪಿಯುಸಿ ಪರೀಕ್ಷೆ ರದ್ದು; ಪ್ರತಿಷ್ಠಿತ ಕಾಲೇಜುಗಳಲ್ಲಿ ಹೆಚ್ಚಿದ ಸೀಟು ಬೇಡಿಕೆ
(ashwath narayan said the CET exam will be conducted on August 28 and 29)
Published On - 12:09 pm, Tue, 8 June 21