ಬೆಂಗಳೂರು: ಕಿತ್ತೂರು ರಾಣಿ ಚೆನ್ನಮ್ಮನಂತೆ ಕೆಳದಿ ರಾಣಿ ಚೆನ್ನಮ್ಮ(Keladi Channamma) ನವರ ಹೋರಾಟ, ಕ್ಷಮಾಗುಣಗಳು ಆದರ್ಶನೀಯವಾಗಿದ್ದು, ಈ ಕುರಿತು ಪಠ್ಯದಲ್ಲಿ ಅಳವಡಿಸುವ ಚಿಂತನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. ಗೃಹ ಕಛೇರಿ ಕೃಷ್ಣದಲ್ಲಿ ಕೆಳದಿ ರಾಣಿ ಚೆನ್ನಮ್ಮನ ಪಟ್ಟಾಭಿಷೇಕದ 350ನೇ ವರ್ಷಾಚರಣೆ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚೆನ್ನಮ್ಮನವರ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಮೂರು ಬಾರಿ ಮೊಘಲರು ಆಕ್ರಮಣ ಮಾಡಿದರೂ, ನಂತರ ಪ್ರಾಣ ಭಿಕ್ಷೆ ಬೇಡಿ ಬಂದಾಗ ಮೊಘಲ್ ಸಾಮ್ರಾಜ್ಯದ ಶಿವಾಜಿ ಮಗ ರಾಜಾರಾಮನಿಗೆ ಆಶ್ರಯ ನೀಡಿ ಕ್ಷಮಿಸಿದ ಹೃದಯ ವೈಶಾಲ್ಯತೆ ಒಬ್ಬ ಮಹಿಳೆ ಕಂದಾಚಾರವನ್ನು ಬಿಟ್ಟು ಪ್ರಗತಿಪರವಾದ ಚಿಂತನೆಗಳಿಂದ ಆ ಕಾಲದಲ್ಲಿ ತನ್ನ ಗಟ್ಟಿ ನಿಲುವನ್ನು ತೋರಿದ ರೀತಿ, ದೂರದೃಷ್ಟಿ, ಕ್ಷಮಾಗುಣ ಹೊಂದಿದ್ದ ರೋಮಾಂಚನಕಾರಿಯಾಗಿದೆ. ಮುಂದಿನ ಪೀಳಿಗೆಯ ಮಕ್ಕಳಿಗೆ ಇವರ ಬಗ್ಗೆ ತಿಳಿಸುವ ಅಗತ್ಯವಿದೆ. ಹೀಗಾಗಿ ಕೆಳದಿ ರಾಣಿ ಚೆನ್ನಮ್ಮನವರ ಬಗ್ಗೆ ಪಠ್ಯದಲ್ಲಿ ಅಳವಡಿಸುವ ಕುರಿತು ಶಿಕ್ಷಣ ಇಲಾಖೆಯ ಸಂಬಂಧಪಟ್ಟವರೊಂದಿಗೆ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಇದಕ್ಕೂ ಮೊದಲು ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಮಾತನಾಡಿ, ಮರಾಠಿಯಲ್ಲಿನ ಮೂಡಿಲಿಪಿಯ ಬಗ್ಗೆ ಅಧ್ಯಯನ ಕೈಗೊಳ್ಳುವ ಮೂಲಕ ಕನ್ನಡ ಸಾಹಿತ್ಯ ಕೃಷಿಗೆ ನೆರವಾಗಬೇಕು. ನಮಗೆ ಬಹಳಷ್ಟು ಸಾಹಿತ್ಯ ಸಿಕ್ಕಿರುವುದು ಮರಾಠಿಯಲ್ಲಿ. ಹೀಗಾಗಿ ಮರಾಠಿಯಲ್ಲಿನ ಪುಸ್ತಕಗಳು ಕನ್ನಡಕ್ಕೆ ಅನುವಾದ ಆಗುತ್ತಿವೆ. ಹೀಗಾಗಿ ಮರಾಠಿಯ ಮೂಡಿಲಿಪಿಯ ಬಗ್ಗೆ ಅಧ್ಯಯನ ಕ್ರಮ ಕ್ರಮಕೈಗೊಳ್ಳಬೇಕು ಎಂದರು. ರಾಜಾರಾಂ ಮೋಹನರಾಯ್ ಅವರಿಗೂ ಮೊದಲೇ ಅಂದರೆ 350 ವರ್ಷಗಳ ಹಿಂದೆಯೇ ಸತಿ ಸಹಗಮನ ಪದ್ಧತಿಯ ವಿರುದ್ಧ ಹೋರಾಡಿದ ಧೀರೆ ಕೆಳದಿ ರಾಣಿ ಚೆನ್ನಮ್ಮ. ಸುಮಾರು ಮುನ್ನೂರಾ ಐವತ್ತು ವರ್ಷಗಳ ಹಿಂದೆಯೇ ಕರ್ನಾಟಕ-ಮಹಾರಾಷ್ಟ್ರದ ನಡುವೆ ಸಾಮರಸ್ಯ ಮೆರೆದವರು ಕೆಳದಿ ರಾಣಿ ಚೆನ್ನಮ್ಮ. ಇವರ ಹೋರಾಟ, ಪ್ರಾಣಿ ಭಿಕ್ಷೆ ಬೇಡಿ ಬಂದ ಮೊಘಲರು, ಮರಾಠಿಗರಿಗೆ ಚೆನ್ನಮ್ಮ ತೋರಿದ ಮಾನವೀಯತೆ ಹೀಗೆ ಕೆಳದಿ ಪರಂಪರೆಯನ್ನು ಕೇಳಿದರೆ ಮೈ ರೋಮಾಂಚನವಾಗುತ್ತದೆ. ಅಂತಹ ಪರಂಪರೆಯ ಕರ್ನಾಟಕ ನಮ್ಮದು ಎಂಬುದು ಹೆಮ್ಮೆಯ ಸಂಗತಿ. ಹೀಗಾಗಿ ಕೆಳದಿ ರಾಣಿ ಚೆನ್ನಮ್ಮ ಅವರ ಹೆಸರನ್ನು ಮತ್ತಷ್ಟು ಚಿರಸ್ಥಾಯಿಗೊಳಿಸುವ ಕೆಲಸ ಸರಕಾರದಿಂದ ಆಗಬೇಕು ಎಂದು ಶ್ರೀಗಳು ಮನವಿ ಮಾಡಿದರು.
ಕೆಳದಿ ಮತ್ತು ಸಾಗರದ ಮಧ್ಯೆ ಒಂದು ಅಧ್ಯಯನ ಪೀಠ ಆಗಬೇಕು. ಅದು ಕುವೆಂಪು ವಿವಿ ಅಡಿಯಲ್ಲಿ ಕಾರ್ಯ ನಿರ್ವಹಿಸುವಂತಿರಬೇಕು. ಪ್ರತಿ ವರ್ಷ ಫೆ.27ರಂದು ರಾಜ್ಯಾದ್ಯಂತ ಕೆಳದಿ ರಾಣಿ ಚೆನ್ನಮ್ಮ ನವರ ಜಯಂತಿಯನ್ನು ಆಚರಿಸಬೇಕು. ಅವರು ಜನಿಸಿದ್ದು ಶಿವಮೊಗ್ಗ ಜಿಲ್ಲೆಯಲ್ಲಿ. ಹೀಗಾಗಿ ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ಕೆಳದಿ ರಾಣಿ ಚೆನ್ನಮ್ಮನವರ ಹೆಸರಿಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಶ್ರೀಗಳು ಒತ್ತಾಯಿಸಿದರು. ಕೆಳದಿ ಮತ್ತು ಕಾಶಿಗೆ ಸಂಬಂಧಿಸಿದಂತೆ ಕಾಶಿಯಲ್ಲಿ ಒಂದು ಸ್ಮಾರಕ ನಿರ್ಮಾಣ ಆಗಬೇಕಿದೆ. ಈ ಬಗ್ಗೆ ಪ್ರಧಾನ ಮಂತ್ರಿಯವರಿಗೆ ಶೀಘ್ರದಲ್ಲೇ ಮನವಿ ಸಲ್ಲಿಸಲಾಗುವುದು ಎಂದು ವಚನಾನಂದ ಸ್ವಾಮೀಜಿ ತಿಳಿಸಿದರು. ಶ್ರೀಗಳ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುವುದಾಗಿ ಭರವಸೆ ನೀಡಿದ ಸಿಎಂ, ಕೆಳದಿಯ ಸುತ್ತಮುತ್ತಲಿನ ಪ್ರದೇಶವನ್ನು ಅಭಿವೃದ್ಧಿ ಪಡಿಸಲಾಗುವುದು. ಜತೆಗೆ ಮುಂದಿನ ವರ್ಷ ಕೆಳದಿಯಲ್ಲಿ ಚೆನ್ನಮ್ಮನವರ ಪಟ್ಟಾಭಿಷೇಕ ಆಚರಣೆ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದರು. ಇದೇ ದಿನ ಪಲ್ಸ್ ಪೋಲಿಯೋ ಹಾಗೂ ಕೆಳದಿ ಚೆನ್ನಮ್ಮನವರ 350ನೇ ಪಟ್ಟಾಭಿಷೇಕದ ಸಂಭ್ರಮವನ್ನು ಆಚರಿಸುವುದು ಖುಷಿಯ ಸಂಗತಿ. ಇಂದಿನ ಕಾರ್ಯಕ್ರಮದಲ್ಲಿ ಹೆಣ್ಣು ಮಗುವಿಗೆ ಪಲ್ಸ್ ಪೋಲಿಯೋ ಹನಿ ಹಾಕಿ ಉದ್ಘಾಟಿಸಿದ್ದು, ಚೆನ್ನಮ್ಮನಿಗೆ ಪಲ್ಸ್ ಪೋಲಿಯೋ ಹನಿ ಹಾಕಿದಂತಾಯಿತು ಎಂದು ಸ್ವಾಮೀಜಿಯವರು ನುಡಿದರು. ಕಾರ್ಯಕ್ರಮದಲ್ಲಿ ಸಚಿವ ಮುರುಗೇಶ್ ನಿರಾಣಿ,ಡಾ.ಸುಧಾಕರ್ ,ಪಂಚಮಸಾಲಿ ಸಮುದಾಯದ ಗಣ್ಯರು ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ:
Theatre: ಅಂಕಪರದೆ; ನಮ್ಮ ಕ್ಯಾಂಟೀನ್ ದಾಮು ಪೋಡಿ ತಗೊಂಡು ಕೆಂಡೋನಿಯಾಕ್ಕೆ ಹೋದಮೇಲೆ ಏನಾಯ್ತಂತೆ?