ಅಂಬರೀಷ್​ ಸ್ಮಾರಕ ನಿರ್ಮಾಣಕ್ಕೆ ಭೂಮಿ ಪೂಜೆ; ಅವರು ಸಂಪಾದಿಸಿದ್ದು ಹಣವನ್ನಲ್ಲ, ಅಭಿಮಾನಿಗಳನ್ನು ಎಂದ ಸುಮಲತಾ

ಅಂಬರೀಷ್​ ಸ್ಮಾರಕ ನಿರ್ಮಾಣಕ್ಕೆ ಭೂಮಿ ಪೂಜೆ; ಅವರು ಸಂಪಾದಿಸಿದ್ದು ಹಣವನ್ನಲ್ಲ, ಅಭಿಮಾನಿಗಳನ್ನು ಎಂದ ಸುಮಲತಾ
ಸುಮಲತಾ

ಅಂಬರೀಷ್​ ಅವರಿಗೆ ಕೋಟಿಕೋಟಿ ಹಣ‌ ಸಂಪಾದನೆ ಮಾಡುವ ಆಸೆ ಇರಲಿಲ್ಲ. ಆದರೆ,  ಕೋಟಿ ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದಾರೆ ಎಂದು ಸುಮಲತಾ ಅಂಬರೀಷ್​ ಹೇಳಿದ್ದಾರೆ.

TV9kannada Web Team

| Edited By: Rajesh Duggumane

Feb 27, 2022 | 2:59 PM

ನಟ ಅಂಬರೀಷ್ (Ambareesh)​ ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. ಹಲವು ಸಿನಿಮಾಗಳಲ್ಲಿ ನಟಿಸಿದ್ದ ಅವರು, ಸ್ಯಾಂಡಲ್​ವುಡ್​ಗೆ ದೊಡ್ಡಣ್ಣನಂತೆ ಇದ್ದರು. ಏನೇ ಸಮಸ್ಯೆ ಎದುರಾದರೂ ಅದನ್ನು ಮುಂದೆ ನಿಂತು ಬಗೆಹರಿಸುತ್ತಿದ್ದರು. ಅವರು ನಮ್ಮನ್ನು ಅಗಲಿ ಕೆಲವು ವರ್ಷಗಳು ಕಳೆದಿವೆ. ಅವರ ಸಮಾಧಿ ಇರುವ ಜಾಗದಲ್ಲಿ ಸ್ಮಾರಕ ನಿರ್ಮಾಣ ಆಗಬೇಕು ಎಂಬುದು ಅವರ ಅಭಿಮಾನಿಗಳು ಹಾಗೂ ಕುಟುಂಬದವರ ಕನಸಾಗಿತ್ತು. ಈಗ ಸ್ಮಾರಕ ನಿರ್ಮಾಣಕ್ಕೆ ಭೂಮಿ ಪೂಜೆ ನಡೆದಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋ ಆವರಣದಲ್ಲಿ ಸ್ಮಾರಕ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಭೂಮಿ ಪೂಜೆ ಮಾಡಿದ್ದಾರೆ. ಸಂಸದೆ, ಅಂಬಿ ಪತ್ನಿ ಸುಮಲತಾ ಅಂಬರೀಷ್ (Sumalatha Ambareesh), ನಟ ದೊಡ್ಡಣ್ಣ, ನಿರ್ಮಾಪಕ ರಾಕ್​ಲೈನ್ ವೆಂಕಟೇಶ್, ಸಚಿವರಾದ ಕೆ. ಗೋಪಾಲಯ್ಯ, ಎಸ್ ಟಿ ಸೋಮಶೇಖರ್, ಡಾ. ಅಶ್ವಥ್ ನಾರಾಯಣ್, ಆರ್. ಅಶೋಕ್ ಮೊದಲಾದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸ್ಮಾರಕ ನಿರ್ಮಾಣದ ಬಗ್ಗೆ ಮಾತನಾಡಿದ ಸುಮಲತಾ, ‘ಅಂಬರೀಷ್ ಅವರ ಸ್ಮಾರಕ ನಿರ್ಮಾಣ ಮಾಡಲು ಮುಂದಾಗಿರುವ ಮುಖ್ಯಮಂತ್ರಿಗಳಿಗೆ ಧನ್ಯವಾದ. ಸ್ಮಾರಕ ನಿರ್ಮಾಣ ಮಾಡುವ ಯೋಜನೆಗೆ ಸಿಎಂ ಆಗಿದ್ದ ಯಡಿಯೂರಪ್ಪ ಐದೇ ನಿಮಿಷಗಳಲ್ಲಿ ಒಪ್ಪಿಗೆ ನೀಡಿದ್ದರು. ಯಡಿಯೂರಪ್ಪ ಅವರಿಗೂ ಅನಂತ ಅನಂತ ಧನ್ಯವಾದಗಳು. ಅಂಬರೀಷ್​ ಅವರಿಗೆ ಕೋಟಿಕೋಟಿ ಹಣ‌ ಸಂಪಾದನೆ ಮಾಡುವ ಆಸೆ ಇರಲಿಲ್ಲ. ಆದರೆ,  ಕೋಟಿ ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದಾರೆ. ಸಿನಿಮಾ, ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಅಂಬರೀಷ್ ಕೊಡುಗೆ ಏನು ಎಂಬುದು ಸಮಾಜಕ್ಕೆ ತಿಳಿಯಬೇಕಿದೆ. ಹೀಗಾಗಿ ಸ್ಮಾರಕದ ಅವಶ್ಯಕತೆ ಇದೆ’ ಎಂದಿದ್ದಾರೆ.

ಅಂಬರೀಷ್​ ಜತೆಗಿ ಫ್ರೆಂಡ್​ಶಿಪ್​ ನೆನೆದಿರುವ ಬಸವರಾಜ್​ ಬೊಮ್ಮಾಯಿ, ‘ಅಂಬರೀಷ್​ ನನ್ನ ಆತ್ಮೀಯ ಸ್ನೇಹಿತ ಆಗಿದ್ದರು. ನಾನು ಯಾವಾಗಲೂ ಅಂಬರೀಷ್ ಅಂತಾನೇ ಕರೆಯುತ್ತಿದ್ದೆ. ಈಗಲೂ ನಾನು ಹಾಗೆಯೇ ಕರೆಯುತ್ತೇನೆ. ನನಗೆ ಅವರೊಂದಿಗೆ 40 ವರ್ಷಗಳ ಸ್ನೇಹವಿತ್ತು. ನಾವಿಬ್ಬರೂ ರಾಜ್ಯಾದ್ಯಂತ ಸಂಚರಿಸಿದ್ದೇವೆ, ಒಟ್ಟಾಗಿ ಕೆಲಸ ಮಾಡಿದ್ದೇವೆ. ಅವರು ತಮ್ಮ ಆತ್ಮಸಾಕ್ಷಿಗೆ ಬದ್ಧರಾಗಿ ಬದುಕಿದ್ದರು. ‘ಲೇ..’ ಅಂತಾ ಅಂಬರೀಷ್ ಅವರಿಂದ ಕರೆಸಿಕೊಳ್ಳಬೇಕು ಎಂದು ಎಲ್ಲರೂ ಬಯಸುತ್ತಿದ್ದರು. ಹುಟ್ಟಿನಿಂದಲೂ ಅವರು ನಾಯಕರು’ ಎಂದರು.

‘ಸ್ನೇಹಕ್ಕಾಗಿ ಅಂಬರೀಷ್ ಏನೂ ಬೇಕಾದರೂ ಮಾಡುತ್ತಿದ್ದರು. ಕರ್ನಾಟಕದ ಅಭಿವೃದ್ಧಿಯ ಕುರಿತು ಅನೇಕ ಕನಸು ಕಂಡಿದ್ದರು. ಆದರೆ, ಅಧಿಕಾರಕ್ಕೆ ಅವರು ಎಂದೂ ಅಂಟಿಕೊಳ್ಳಲಿಲ್ಲ. ಕಾವೇರಿ ಹೋರಾಟದಲ್ಲಿ ಅಧಿಕಾರ ತ್ಯಾಗ ಮಾಡಿದ ಏಕೈಕ ವ್ಯಕ್ತಿ ಅಂಬರೀಷ್. ಮಂಡ್ಯ ಅಂದರೆ ಅಂಬರೀಷ್​​ಗೆ ಪಂಚಪ್ರಾಣ. ಉತ್ತರ ಕರ್ನಾಟಕದ ಜನರ ಮೇಲೆ ಅವರಿಗೆ ಅಪಾರ ಪ್ರೀತಿ ಇತ್ತು. ಅಂಬರೀಷ್ ಅವರಲ್ಲಿನ ಗುಣಧರ್ಮಗಳನ್ನು ಸುಮಲತಾ ಅಳವಡಿಸಿಕೊಂಡಿದ್ದಾರೆ. ಅಭಿಷೇಕ್ ಕೂಡ ಆ ಗುಣಧರ್ಮಗಳನ್ನು ಅಳವಡಿಸಿಕೊಳ್ಳಲಿ. ಅಭಿಷೇಕ್ ಬಹುಬೇಗ ಮಂಡ್ಯದ ಗಂಡಾಗಲಿ’ ಎಂದಿದ್ದಾರೆ ಬಸವರಾಜ್​ ಬೊಮ್ಮಾಯಿ.

ಪುನೀತ್​ರನ್ನು ನೆನಪಿಸಿಕೊಂಡ ಬೊಮ್ಮಾಯಿ

‘ಪುನೀತ್ ರಾಜ್​ಕುಮಾರ್ ಅಗಲಿದ ನಂತರ ಅವರ ಅಭಿಮಾನಿಗಳನ್ನು ನೋಡುತ್ತಿದ್ದೇವೆ. ಪುನೀತ್ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರಧಾನ ಮಾಡುವ ದಿನವನ್ನು ಆದಷ್ಟು ಬೇಗ ಪ್ರಕಟಿಸುತ್ತೇನೆ. ಪುನಿತ್ ಸ್ಮಾರಕದ ನಿರ್ಮಾಣವನ್ನೂ ಆದಷ್ಟು ಬೇಗ ಆರಂಭಿಸುತ್ತೇವೆ’ ಎಂದು ಭರವಸೆ ನೀಡಿದರು ಅವರು.

ಇದನ್ನೂ ಓದಿ:ಅಪ್ಪುಗೆ ಕರ್ನಾಟಕ ರತ್ನ ಸಿಕ್ಕಿದೆ ಅಂದರೆ ಅಂಬರೀಷ್​ಗೂ ಸಿಕ್ಕಿದಂತೆ: ಸಂಸದೆ ಸುಮಲತಾ ಅಂಬರೀಷ್ ಹೇಳಿಕೆ 

Hijab Row: ಬಿಕಿನಿ ಬೀಚ್​ಗೇ ವಿನಃ ಕಾಲೇಜಿಗಲ್ಲ, ಎಲ್ಲದಕ್ಕೂ ಡ್ರೆಸ್ ಕೋಡ್ ಇರುತ್ತದೆ; ಸುಮಲತಾ ಅಂಬರೀಶ್ ಪ್ರತಿಕ್ರಿಯೆ

Follow us on

Related Stories

Most Read Stories

Click on your DTH Provider to Add TV9 Kannada