Sumalatha Ambareesh: ನಾಳೆ ಕೆಆರ್ಎಸ್ ಡ್ಯಾಂನಲ್ಲಿಯೇ ಅಧಿಕಾರಿಗಳ ಜತೆ ಸಭೆ ನಡೆಸುವೆ: ಸಂಸದೆ ಸುಮಲತಾ ಅಂಬರೀಶ್
KRS Dam: ಇಷ್ಟೊಂದು ಬೆಳವಣಿಗೆ ಆದರೂ ಸಭೆಗೆ ಸಂಬಂಧಿಸಿದಂತೆ ಯಾರೂ ಸಿದ್ದರಾಗಿ ಬಂದಿರಲಿಲ್ಲ. ಎಷ್ಟು ಹಣ ಸಂಗ್ರಹ, ಎಷ್ಟು ಪ್ರಕರಣಗಳು ಸೇರಿದಂತೆ ಹಲವು ವಿಚಾರಗಳ ಬಗೆಗೆ ಯಾವುದೇ ಮಾಹಿತಿ ಇಲ್ಲ. ಅಧಿಕಾರಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿ ಕಂಡು ಬರುತ್ತಿದೆ. ಈ ಸಂಬಂಧ ನಾನು ಗಣಿ ಸಚಿವರಿಗೆ ವರದಿ ಸಲ್ಲಿಸಲು ನಿರ್ಧರಿಸಿದ್ದೇನೆ.
ಮಂಡ್ಯ: ನಾಳೆ ಕೆಆರ್ಎಸ್ ಡ್ಯಾಂನಲ್ಲಿ (KRS Dam) ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾಹಿತಿ ಪಡೆಯುತ್ತೇನೆ. ನಂತರ ಬೇಬಿ ಬೆಟ್ಟಕ್ಕೆ ಭೇಟಿ ನೀಡಿ ವಾಸ್ತವವಾಗಿ ಏನು ನಡೆಯುತ್ತಿದೆ ಎಂದು ಪರಿಶೀಲನೆ ಮಾಡುವೆ ಎಂದು ಸಂಸದೆ ಸುಮಲತಾ ಅಂಬರೀಶ್ ತಿಳಿಸಿದರು. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಅಧಿಕಾರಿಗಳ ಜತೆ ಸಭೆ ನಡೆಸಿದ ನಂತರ ಸಂಸದೆ ಸುಮಲತಾ ಅಂಬರೀಶ್, (Sumalatha Ambareesh) ಗಣಿಗಾರಿಕೆಗೆ ಸಂಬಧಿಸಿದಂತೆ 1,200 ಕೋಟಿಯಷ್ಟು ರಾಜಧನ ಸಂಗ್ರಹವಾಗಬೇಕಿದೆ. ಎಷ್ಟು ಹಣ ಸಂಗ್ರಹವಾಗಬೇಕಿದೆ ಎಂಬ ಬಗೆಗೆ ಅಧಿಕಾರಿಗಳ ಬಳಿ ಮಾಹಿತಿ ಇಲ್ಲ. ಇಷ್ಟೊಂದು ಬೆಳವಣಿಗೆ ಆದರೂ ಸಭೆಗೆ ಸಂಬಂಧಿಸಿದಂತೆ ಯಾರೂ ಸಿದ್ದರಾಗಿ ಬಂದಿರಲಿಲ್ಲ ಎಂದು ಅವರು ಆರೋಪಿಸಿದರು.
ಗಣಿಗಾರಿಕೆಯಿಂದ ಎಷ್ಟು ಹಣ ಸಂಗ್ರಹ, ಎಷ್ಟು ಪ್ರಕರಣಗಳು ಸೇರಿದಂತೆ ಹಲವು ವಿಚಾರಗಳ ಬಗೆಗೆ ಯಾವುದೇ ಮಾಹಿತಿ ಇಲ್ಲ. ಅಧಿಕಾರಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿ ಕಂಡು ಬರುತ್ತಿದೆ. ಈ ಸಂಬಂಧ ನಾನು ಗಣಿ ಸಚಿವರಿಗೆ ವರದಿ ಸಲ್ಲಿಸಲು ನಿರ್ಧರಿಸಿದ್ದೇನೆ. ಅವರು ಮೂರು ತಿಂಗಳ ಸಮಯಾವಕಾಶ ಕೋರಿದ್ದಾರೆ. ಅದನ್ನ ಜಿಲ್ಲಾಧಿಕಾರಿಯವರೂ ಒಪ್ಪಲಿಲ್ಲ. ಒಂದು ತಿಂಗಳಲ್ಲಿ ನೀವು ಎಷ್ಟು ಸಾಧ್ಯವೋ ಅಷ್ಟು ಕ್ರಮ ಕೈಗೊಳ್ಳಬೇಕು. ರಾಜಧನ ಸಂಗ್ರಹ ಮಾಡಲು ಮುಂದಾಗಬೇಕು. ಮಂಡ್ಯ ತಾಲೂಕಿನ ಆನಕುಪ್ಪೆ ಗ್ರಾಮದ ಸರ್ವೆ ನಂಬರ್ 49 ರಲ್ಲಿ ಅಕ್ರಮ ಗಣಿಗಾರಿಕೆ ಬಗೆಗೆ ದೂರು ಬಂದಿತ್ತು. ಆ ಸಂಬಂಧ ಅಧಿಕಾರಿಗಳಿಗೆ ನಮ್ಮ ಬಳಿ ಇದ್ದ ವಿಡಿಯೊ ತೋರಿಸಿದ ಮೇಲೆ ಕ್ರಮ ಕೈಗೊಳ್ಳುವುದಾಗಿ ಹೇಳುತ್ತಾರೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಅತ್ಯಂತ ಬಿಗಿ ಭದ್ರತೆಯಲ್ಲಿ ಇರಬೇಕಾದ ಜಾಗ ಕೆಆರ್ಎಸ್ ಡ್ಯಾಂ. ಆದರೆ ನಾಲ್ಕು ಜನ ಮೋಜು ಮಸ್ತಿ ಮಾಡಲು ಬರ್ತಾರೆ. ಹೀಗಾದರೆ, ಏನರ್ಥ? ಎಂದು ಪ್ರಶ್ನಿಸಿದ ಸಂಸದೆ ಸುಮಲತಾ ಅಂಬರೀಶ್, ಡ್ಯಾಂ ಸುರಕ್ಷಿತವಾಗಿದೆ ಆಗಿದೆ ಎಂದು ಕೂತ್ಕೊಂಡು ಹೇಳುವವರು, ಇದರ ಬಗೆಗೆ ಯಾಕೆ ಮಾತನಾಡಲ್ಲ? ಐದೇ ನಿಮಿಷದಲ್ಲಿ ಏನೆಲ್ಲಾ ಮಾಡಬಹುದು. ಗಣಿ ಸಚಿವರನ್ನು ಇಲ್ಲಿಗೆ ಕರೆತರಬೇಕು. ಪರಿಶೀಲಿಸಬೇಕು ಎಂದು ಅವರು ಆಗ್ರಹಿಸಿದರು.
ಇದನ್ನೂ ಓದಿ:
ಜನ ಬುದ್ಧಿ ಕಲಿಸಿದರೆ ನಾನು ಕಲಿಯುತ್ತೇನೆ: ಸಂಸದೆ ಸುಮಲತಾ ಅಂಬರೀಶ್
(MP Sumalatha Ambareesh says will make meeting with officials at KRS dam tomorrow)
Published On - 6:06 pm, Tue, 13 July 21