
ಬೆಂಗಳೂರು, ಡಿಸೆಂಬರ್ 30: ಬೆಂಗಳೂರಿನ (Bengaluru) ಕೋಗಿಲು ಕ್ರಾಸ್ ಬಡಾವಣೆಯಲ್ಲಿ ಅಕ್ರಮ ಶೆಡ್ಗಳ ತೆರವು ಹಾಗೂ ನಂತರದ ಬೆಳವಣಿಗೆಗಳು ಕರ್ನಾಟಕದಲ್ಲಿ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಹೈಕಮಾಂಡ್ ಸೂಚನೆ ಬೆನ್ನಲ್ಲೇ ತಕ್ಷಣವೇ ಅಕ್ರಮ ಶೆಡ್ಗಳಲ್ಲಿ ವಾಸಿಸುತ್ತಿದ್ದ ಕೇರಳಿಗರಿಗೆ ಮನೆ ನೀಡಲು ಮುಂದಾಗಿರುವ ಕಾಂಗ್ರೆಸ್ ಸರ್ಕಾರ, ಪ್ರವಾಹ ಸೇರಿದಂತೆ ಪ್ರಾಕೃತಿಕ ವಿಕೋಪಗಳಿಂದ ನಿರಾಶ್ರಿತರಾದ ಕನ್ನಡಿಗರಿಗೇ ವರ್ಷಗಳಿಂದ ಪರಿಹಾರ ನೀಡದೇ ಇರುವ ವಿಚಾರ ಮುನ್ನೆಲೆಗೆ ಬಂದಿದೆ. ಇದೀಗ ಕಾಂಗ್ರೆಸ್ ವಿರುದ್ಧ ಜೆಡಿಎಸ್ ಎಕ್ಸ್ ಮೂಲಕ ವಾಗ್ದಾಳಿ ನಡೆಸಿದ್ದು, ಸಿಎಂ ಸಿದ್ದರಾಮಯ್ಯ ಅವರನ್ನು ಕೇರಳಿಗರ ‘ಚೇಟಾ ಸಿದ್ದರಾಮಯ್ಯ’ ಎಂದು ಜರೆದಿದೆ. ಅಲ್ಲದೆ, ಕೇರಳಕ್ಕಾಗಿ ಸಿದ್ದರಾಮಯ್ಯ ಈವರೆಗೆ ಏನೇನು ಮಾಡಿದ್ದಾರೆ ಎಂಬ ಪಟ್ಟಿ ನೀಡಿದೆ.
‘ಇದೊಂದು ಪ್ರಕರಣಕ್ಕೆ ಮಾತ್ರ ಸೀಮಿತ’ ಎಂದು ತಿಪ್ಪೇಸಾರುವ ಕೇರಳಿಗರ ಚೇಟಾ ಸಿದ್ದರಾಮಯ್ಯ ಅವರ ವಸತಿ ರಹಿತ ಕನ್ನಡಿಗರಿಗೆ ಮಿಡಿಯದ ಮಾನವೀಯತೆ, ಕೇರಳದ ಅಕ್ರಮ ವಲಸಿಗರಿಗೆ ಮಿಡಿಯುತ್ತಿರುವ ಇಬ್ಭಗೆ ನೀತಿಗೆ ಧಿಕ್ಕಾರವಿರಲಿ. ಹೈಕಮಾಂಡ್ ಆರ್ಡರ್ ಅನ್ನು ತಲೆಬಾಗಿ, ಕುರ್ಚಿ ಕಳೆದುಕೊಳ್ಳುವ ಭೀತಿಯಲ್ಲಿ ಅಕ್ರಮ ವಲಸಿಗರ ಪರವಾಗಿ, ತರಾತುರಿಯಲ್ಲಿ ಸಭೆಗಳನ್ನು ನಡೆಸಿ ಆದೇಶ ಹೊರಡಿಸಿ, ವಸತಿ ರಹಿತ ಕನ್ನಡಿಗರಿಗೆ ಬಗೆದ ವಿಶ್ವಾಸದ್ರೋಹವಲ್ಲವೇ? ಕರ್ನಾಟಕದಲ್ಲಿ ಸುಮಾರು 30 ಲಕ್ಷಕ್ಕೂ ಹೆಚ್ಚು ವಸತಿರಹಿತ ಬಡ ಕನ್ನಡಿಗರಿಗೆ ಸೂರಿಲ್ಲ. ವಸತಿ ಇಲಾಖೆಯ ಮನೆ ಹಂಚಿಕೆಗಾಗಿ ಅರ್ಜಿ ಸಲ್ಲಿಸಿ ಲಕ್ಷಾಂತರ ಜನರು ಹಗಲು ರಾತ್ರಿ ದುಡಿದ ಹಣವನ್ನು ಮುಂಗಡ ಕಟ್ಟಿ, ವರ್ಷಾನುಗಟ್ಟಲೇ ಇನ್ನೂ ಕಾಯುತ್ತಿದ್ದಾರೆ. ಇಂತಹ ನಿರ್ಗತಿಕರಿಗೆ ಮನೆಗಳನ್ನು ನೀಡುವ ಮನಸ್ಸು ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲವಾಗಿದೆ’ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.
ವೋಟ್ ಬ್ಯಾಂಕ್‌ಗಾಗಿ ಒಂದು ಸಮುದಾಯದ ಓಲೈಕೆ ಮಾಡುತ್ತಿರುವ ಕಾಂಗ್ರೆಸ್ ಪಕ್ಷ, ವಸತಿ ಸಚಿವ ಜಮೀರ್ ಅಹ್ಮದ್ ಕನ್ನಡಿಗರ ತೆರಿಗೆ ಹಣದಲ್ಲಿ ವಲಸಿಗರಿಗೆ 11.20 ಲಕ್ಷ ರೂ ವೆಚ್ಚದ ಮನೆಗಳನ್ನು ನೀಡಿ, ರಾಜ ಮಾರ್ಯಾದೆ ಕೊಡುತ್ತಿರುವುದು ರಾಜ್ಯದ ಜನರಿಗೆ ಮಾಡುತ್ತಿರುವ ವಂಚನೆ ಎಂದು ಜೆಡಿಎಸ್ ಟೀಕಿಸಿದೆ.
ಹೈಕಮಾಂಡ್‌ನ ತೊಗಲುಗೊಂಬೆಯಾದ @INCKarnataka ಸರ್ಕಾರ !
” @siddaramaiah ಮತ್ತು @DKShivakumar ಇಬ್ಬರನ್ನು ಹೈಕಮಾಂಡ್ ತನ್ನ ಕೈಗೊಂಬೆಯಾಗಿಸಿಕೊಂಡು ಆಟವಾಡಿಸುತ್ತಿದೆ.
👉 ಕೇರಳದ ಅಕ್ರಮ ವಲಸಿಗರಿಗೆ ಬೆಂಗಳೂರಿನಲ್ಲಿ 11.20 ಲಕ್ಷ ರೂ. ಮೌಲ್ಯದ ಮನೆ ಗ್ಯಾರಂಟಿ
👉 ಕೇರಳದ ವಯನಾಡಿನ ಸಂತ್ರಸ್ತರಿಗೆ 10 ಕೋಟಿ ರೂ. ವೆಚ್ಚದಲ್ಲಿ 100… pic.twitter.com/wnzxVQIUxJ
— Janata Dal Secular (@JanataDal_S) December 30, 2025
ಹೈಕಮಾಂಡ್‌ನ ತೊಗಲುಗೊಂಬೆಯಾದ ಕಾಂಗ್ರೆಸ್ ಸರ್ಕಾರ ಎಂದು ಮತ್ತೊಂದು ಎಕ್ಸ್ ಸಂದೇಶದ ಮೂಲಕ ಕಿಡಿಕಾರಿದೆ.
ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಇಬ್ಬರನ್ನು ಹೈಕಮಾಂಡ್ ತನ್ನ ಕೈಗೊಂಬೆಯಾಗಿಸಿಕೊಂಡು ಆಟವಾಡಿಸುತ್ತಿದೆ. ಕೇರಳದ ಅಕ್ರಮ ವಲಸಿಗರಿಗೆ ಬೆಂಗಳೂರಿನಲ್ಲಿ 11.20 ಲಕ್ಷ ರೂ. ಮೌಲ್ಯದ ಮನೆ ಗ್ಯಾರಂಟಿ, ಕೇರಳದ ವಯನಾಡಿನ ಸಂತ್ರಸ್ತರಿಗೆ 10 ಕೋಟಿ ರೂ. ವೆಚ್ಚದಲ್ಲಿ 100 ಮನೆ, ಆನೆದಾಳಿಗೆ ಬಲಿಯಾದ ಕೇರಳದ ವ್ಯಕ್ತಿಗೆ 15 ಲಕ್ಷ ರೂ. ಪರಿಹಾರ, ಇದು ಕನ್ನಡಿಗರ ವಿರೋಧಿ ಕಾಂಗ್ರೆಸ್ನಿಂದ ರಾಜ್ಯದ ಜನತೆಗೆ ನಿರಂತರವಾಗಿ ಆಗುತ್ತಿರುವ ಅನ್ಯಾಯ ಎಂದು ಜೆಡಿಎಸ್ ಹೇಳಿದೆ.
ಇದನ್ನೂ ಓದಿ: ಬರ–ಪ್ರವಾಹಕ್ಕೆ ವರ್ಷಗಳ ನಿರೀಕ್ಷೆ, ಕೋಗಿಲು ಲೇಔಟ್‌ಗೆ ಎರಡು ದಿನಗಳಲ್ಲಿ ಪರಿಹಾರ: ಸರ್ಕಾರದ ವಿರುದ್ಧ ಗುಡುಗಿದ ಜೋಶಿ
ಭೂಸ್ವಾಧೀನ ವಿರೋಧಿಸಿದ ರೈತರ ಮೇಲೆ ಕೋಪ, ಆಕ್ರೋಶ. ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನೆಲೆಸಿರುವ ವಲಸಿಗ ಕೇರಳಿಗರ ಮೇಲೆ ಮೃದುಧೋರಣೆ. ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ರಾಜಕೀಯಕ್ಕೆ ಧಿಕ್ಕಾರ ಎಂದು ಜೆಡಿಎಸ್ ಉಲ್ಲೇಖಿಸಿದೆ.