AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರ–ಪ್ರವಾಹಕ್ಕೆ ವರ್ಷಗಳ ನಿರೀಕ್ಷೆ, ಕೋಗಿಲು ಲೇಔಟ್‌ಗೆ ಎರಡು ದಿನಗಳಲ್ಲಿ ಪರಿಹಾರ: ಸರ್ಕಾರದ ವಿರುದ್ಧ ಗುಡುಗಿದ ಜೋಶಿ

ಕೋಗಿಲು ಲೇಔಟ್‌ನಲ್ಲಿ ಅಕ್ರಮ ಕಟ್ಟಡಗಳ ತೆರವಿನ ನಂತರ, ರಾಜ್ಯ ಸರ್ಕಾರ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಲು ತೀರ್ಮಾನಿಸಿದೆ. ಆದರೆ, ಪ್ರಹ್ಲಾದ್ ಜೋಶಿ ಈ ಕ್ರಮವನ್ನು "ತುಷ್ಟೀಕರಣ ರಾಜಕಾರಣ" ಎಂದು ಟೀಕಿಸಿದ್ದಾರೆ. ಬರ ಪೀಡಿತರು ಪರಿಹಾರಕ್ಕಾಗಿ ಕಾಯುತ್ತಿರುವಾಗ, ಒಂದು ಸಮುದಾಯಕ್ಕೆ ಎರಡು ದಿನಗಳಲ್ಲಿ ಪರಿಹಾರ ನೀಡಿರುವುದಕ್ಕೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

ಬರ–ಪ್ರವಾಹಕ್ಕೆ ವರ್ಷಗಳ ನಿರೀಕ್ಷೆ, ಕೋಗಿಲು ಲೇಔಟ್‌ಗೆ ಎರಡು ದಿನಗಳಲ್ಲಿ ಪರಿಹಾರ: ಸರ್ಕಾರದ ವಿರುದ್ಧ ಗುಡುಗಿದ ಜೋಶಿ
ಸರ್ಕಾರದ ವಿರುದ್ಧ ಗುಡುಗಿದ ಜೋಶಿ
ಭಾವನಾ ಹೆಗಡೆ
|

Updated on: Dec 30, 2025 | 11:32 AM

Share

ಬೆಂಗಳೂರು, ಡಿಸೆಂಬರ್ 30: ಇತ್ತೀಚೆಗೆ ಕೋಗಿಲು ಬಡಾವಣೆಯಲ್ಲಿ (Kogilu Layout) ಅಕ್ರಮವಾಗಿ ನಿರ್ಮಿಸಿದ್ದ ಕಟ್ಟಡಗಳನ್ನು ಜೆಸಿಬಿ ಬಳಸಿ ತೆರವು ಮಾಡಿತ್ತು. ಇದೀಗ ರಾಜ್ಯ ಸರ್ಕಾರ ಕೋಗಿಲು ಲೇಔಟ್ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಲು ತೀರ್ಮಾನಿಸಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಕರ್ನಾಟಕದ ಜನ ವಿಪತ್ತಿಗೊಳಗಾಗಿ ಪರಿಹಾರಕ್ಕಾಗಿ ಕಾಯುತ್ತಿದ್ದರೂ ಕೇವಲ ಎರಡೇ ದಿನಗಳಲ್ಲಿ ಒಂದು ಸಮುದಾಯಕ್ಕೆ ಪರಿಹಾರ ಒದಗಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ.

11 ಲಕ್ಷ ರೂ. ವೆಚ್ಚದಲ್ಲಿ ಹೊಸ ಮನೆ ನಿರ್ಮಾಣ

ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಮ್ಮ ಎಕ್ಸ್​ ಸಂದೇಶದೊಂದಿಗೆ ಕರ್ನಾಟಕ ಸರ್ಕಾರವನ್ನು ಪ್ರಜಾಪ್ರಭುತ್ವ ವಿರೋಧಿ ಮತ್ತು ಜೆಸಿಬಿ ಸರ್ಕಾರ ಎಂದು ತೀವ್ರವಾಗಿ ಟೀಕಿಸಿದ್ದರು. ಇದೆಲ್ಲದರ ನಡುವೆ ಕೋಗಿಲು ಲೇಔಟ್ ಸಂತ್ರಸ್ತರಿಗೆ ಬೇರೆ ಕಡೆ ವಸತಿ ನೀಡಲು ವ್ಯವಸ್ಥೆ ಮಾಡಿರುವುದು ರಾಜ್ಯದ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ. ಕೋಗಿಲು ಲೇಔಟ್‌ನಲ್ಲಿ ಅಕ್ರಮ ಮನೆಗಳ ನೆಲಸಮದ ನಂತರ, ಸಿಎಂ ಸಿದ್ದರಾಮಯ್ಯ ಅರ್ಹ ನಿವಾಸಿಗಳಿಗೆ ಪರಿಹಾರ ಘೋಷಿಸಿದ್ದು, 7 ಕಿ.ಮೀ ಅಂತರದಲ್ಲಿ ತಲಾ 11.2 ಲಕ್ಷ ರೂ. ವೆಚ್ಚದಲ್ಲಿ ಹೊಸ ಮನೆಗಳನ್ನು ನಿರ್ಮಿಸಲಾಗಿದೆ. ಈ ಕುರಿತು ಪ್ರಹ್ಲಾದ್ ಜೋಶಿ ಎಕ್ಸ್ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ ಕೋಗಿಲು ಕಲಹ: ಅರ್ಹರಿಗೆ 11.2 ಲಕ್ಷ ರೂ ವೆಚ್ಚದಲ್ಲಿ ಮನೆ ನಿರ್ಮಾಣ; ಸಿಎಂ ಘೋಷಣೆ

ಜೋಶಿಯ ಎಕ್ಸ್ ಪೋಸ್ಟ್​ನಲ್ಲೇನಿದೆ?

ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಒಂದು ಧರ್ಮದ ಓಲೈಕೆ ಹಾಗೂ ತುಷ್ಟೀಕರಣಕ್ಕಾಗಿ ಅತಿವೇಗವಾಗಿ ಹಾಗೂ ತುರ್ತಾಗಿ ಔಪಚಾರಿಕ ಪರಿಹಾರ ನೀಡಲು ಮುಂದಾಗಿರುವುದು ಅತಿ ಬೇಸರದ ಸಂಗತಿ ಎಂದು ಬರೆದುಕೊಂಡಿರುವ ಜೋಶಿ, ಬರ ಮತ್ತು ಪ್ರವಾಹದಂತಹ ವಿಪತ್ತುಗಳ ಪರಿಹಾರವನ್ನು ಪಡೆಯಲು ರಾಜ್ಯಾದ್ಯಂತ ಜನರು ವರ್ಷಗಳಿಂದ ಕಾಯುತ್ತಿದ್ದರು, ಈ ಸಂದರ್ಭದಲ್ಲಿ, ಕೇವಲ ಎರಡೇ ದಿನಗಳಲ್ಲಿ ಒಂದು ಸಮುದಾಯಕ್ಕೆ ಪರಿಹಾರ ಒದಗಿಸಲಾಗಿದೆ.

ಪ್ರಹ್ಲಾದ್ ಜೋಶಿ ಪೋಸ್ಟ್ ಇಲ್ಲಿದೆ

ಪಕ್ಕದ ರಾಜ್ಯದ ಕಾಂಗ್ರೆಸ್ ನಾಯಕರೊಬ್ಬರು ಕರೆ ಮಾಡಿ, ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದ ನಂತರ, ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಕಾಂಗ್ರೆಸ್ ಪಕ್ಷದ ನಾಯಕತ್ವದ ಕೈಗೊಂಬೆಯಾಗಿ, ತನ್ನ ಕರ್ತವ್ಯ ಹಾಗೂ ಕಾನೂನಿನ ಪರಿಮಿತಿಯ ಜವಾಬ್ದಾರಿಯನ್ನು ಗಾಳಿಗೆ ತೂರಿ, ತುಷ್ಠಿಕರಣ ರಾಜಕಾರಣದ ಪರಮಾವಧಿಯನ್ನು ಪ್ರದರ್ಶಿಸಿದೆ. ಗೃಹಲಕ್ಷ್ಮಿ ಫಲಾನುಭವಿಗಳು ಕಾಯಬಹುದೇ ವಿನಃ ಅಕ್ರಮವಾಗಿ ಅತಿಕ್ರಮಿಸಿದವರು ಕಾಯುವಂತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.