ಕೋಗಿಲು ಕಲಹ: ಅರ್ಹರಿಗೆ 11.2 ಲಕ್ಷ ರೂ ವೆಚ್ಚದಲ್ಲಿ ಮನೆ ನಿರ್ಮಾಣ; ಸಿಎಂ ಘೋಷಣೆ
ಬೆಂಗಳೂರಿನ ಕೋಗಿಲು ಲೇಔಟ್‌ನಲ್ಲಿ ಅಕ್ರಮ ಮನೆಗಳ ನೆಲಸಮದ ನಂತರ, ಸಿಎಂ ಸಿದ್ದರಾಮಯ್ಯ ಅರ್ಹ ನಿವಾಸಿಗಳಿಗೆ ಪರಿಹಾರ ಘೋಷಿಸಿದ್ದಾರೆ. 7 ಕಿ.ಮೀ ಅಂತರದಲ್ಲಿ ತಲಾ 11.2 ಲಕ್ಷ ರೂ. ವೆಚ್ಚದಲ್ಲಿ ಹೊಸ ಮನೆಗಳನ್ನು ನಿರ್ಮಿಸಲಾಗಿದೆ. ಹೊಸ ವರ್ಷದಂದು ಮನೆಗಳನ್ನು ಹಂಚುವ ಗುರಿ ಸರ್ಕಾರ ಹೊಂದಿದೆ.

ಬೆಂಗಳೂರು, ಡಿಸೆಂಬರ್ 29: ಇತ್ತೀಚೆಗೆ ಬೆಂಗಳೂರಿನ ಕೋಗಿಲು ಲೇಔಟ್‌ನಲ್ಲಿ ಅಕ್ರಮ ಮನೆಗಳು ನೆಲಸಮ (Kogilu Layout Demolition) ಮಾಡಲಾಗಿತ್ತು. ಇದಾದ ಒಂದು ವಾರದ ಬಳಿಕ ಕೇರಳ ಸಿಎಂ ಪಿಣರಾಯ್ ವಿಜಯನ್, ಬುಲ್ಡೋಜರ್ ರಾಜ್ ಆಂತಾ ಟ್ವೀಟ್ ಮಾಡಿ ಕುಟುಕಿದ್ದರು. ಇಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಇದೀಗ ಸಿಎಂ ಸಿದ್ದರಾಮಯ್ಯ (Siddaramaiah) ಸಭೆ ಮಾಡಿದ್ದು, ಅರ್ಹರಿಗೆ 7 ಕಿ.ಮೀ ಅಂತರದಲ್ಲಿ ತಲಾ ಒಂದು ಮನೆಗೆ 11.2 ಲಕ್ಷ ರೂ ಮೌಲ್ಯದಲ್ಲಿ ನಿರ್ಮಿಸಲಾಗಿರುವ ಮನೆಗಳನ್ನು ಹಂಚಿಕೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಅರ್ಹರಿಗೆ 11.2 ಲಕ್ಷ ರೂ ವೆಚ್ಚದಲ್ಲಿ ಮನೆ ನಿರ್ಮಾಣ: ಸಿಎಂ
ರಾಜ್ಯ ಸರ್ಕಾರ ಕೋಗಿಲು ಲೇಔಟ್ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಲು ತೀರ್ಮಾನಿಸಿದೆ. ಅರ್ಹರಿಗೆ ಪರಿಹಾರದ ರೂಪದಲ್ಲಿ ಮನೆಗಳ ಹಂಚಿಕೆ ಮಾಡಲು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸಭೆ ಬಳಿಕ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ ಮಾಡಿದ್ದು, ನೋಟಿಸ್ ನೀಡಿದ ಬಳಿಕ ಮನೆಗಳನ್ನು ತೆರವುಗೊಳಿಸಲಾಗಿದೆ. ಡಿ.20ರಂದು ಸುಮಾರು 167 ಮನೆಗಳನ್ನು ತೆರವುಗೊಳಿಸಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕೋಗಿಲು ಲೇಔಟ್ಗೆ ಡಿಕೆ ಶಿವಕುಮಾರ್ ಭೇಟಿ: ಸ್ಥಳ ಪರಿಶೀಲನೆ ಬಳಿಕ ಹೇಳಿದ್ದಿಷ್ಟು
ರವಿವಾರ ಸ್ಥಳಕ್ಕೆ ಸಚಿವ ಜಮೀರ್, ಇಂದು ಡಿಸಿಎಂ ಭೇಟಿ ನೀಡಿದ್ದರು. ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಶೆಡ್ ನಿರ್ಮಿಸಿದ್ದರು. ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅರ್ಹರಿಗೆ 7 ಕಿ.ಮೀ ಅಂತರದಲ್ಲಿ 11.2 ಲಕ್ಷ ರೂ ವೆಚ್ಚದಲ್ಲಿ ತಲಾ ಒಂದು ಮನೆ ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ.
ಹೊಸ ವರ್ಷದ ಆರಂಭದ ದಿನ ಮನೆ
ನಾಳೆ ಅಥವಾ ನಾಡಿದ್ದು ಪರಿಶೀಲಿಸಿ ಅರ್ಹ ವ್ಯಕ್ತಿಗಳಿಗೆ ಪರ್ಯಾಯ ವ್ಯವಸ್ಥೆಗೆ ಸೂಚಿಸಲಾಗುವುದು. ಡಿಸಿ, ಪಾಲಿಕೆ ಅಧಿಕಾರಿಗಳು ನೀಡುವ ಪಟ್ಟಿ ಆಧರಿಸಿ ಮನೆ ನೀಡಲಾಗುವುದು. ಈ ಬಗ್ಗೆ ಕಾಂಗ್ರೆಸ್ ನಾಯಕ ವೇಣುಗೋಪಾಲ್ ಅವರೂ ಚರ್ಚಿಸಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಜೊತೆಯೂ ವೇಣುಗೋಪಾಲ್ ಚರ್ಚಿಸಿದ್ದಾರೆ. ಆ ಜಾಗ ಬಿಟ್ಟು ಬೇರೆ ಕಡೆ ವ್ಯವಸ್ಥೆ ಮಾಡುವುದಾಗಿ ಅವರಿಗೆ ಹೇಳಿದ್ದೆ, ಅದರಂತೆ ಬೈಯಪ್ಪನಹಳ್ಳಿ ಸರ್ವೆ ನಂಬರ್ 23ರಲ್ಲಿ ರಾಜೀವ್ ಗಾಂಧಿ ವಸತಿ ನಿಗಮದಿಂದ ಮನೆಗಳನ್ನು ನಿರ್ಮಿಸಿ ಕೊಡಲಾಗಿದೆ. ಹೊಸ ವರ್ಷದ ಆರಂಭದ ದಿನ ಮನೆ ನೀಡಲು ವಸತಿ ಸಚಿವ ಜಮೀರ್ ಒಪ್ಪಿದ್ದಾರೆ ಎಂದರು.
ಇನ್ನು ಇದರಲ್ಲಿ ವಿಶೇಷ ಆಸಕ್ತಿ ಇಲ್ಲ, ಕಮ್ಯೂನಿಸ್ಟ್‌ನವರು ಆಸಕ್ತಿ ವಹಿಸಿದ್ದಾರೆ. ಕೇರಳದಲ್ಲಿ ಚುನಾವಣೆ ಬರುತ್ತಿದೆ, ಹೀಗಾಗಿ ಆಸಕ್ತಿ ವಹಿಸಿದ್ದಾರೆ. ಮನುಷ್ಯತ್ವ ಆಧಾರದ ಮೇಲೆ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ. ಇನ್ಮುಂದೆ ಈ ರೀತಿ ಯಾರೂ ಒತ್ತುವರಿ ಮಾಡದಂತೆ ಸೂಚಿಸಿದ್ದೇವೆ. ತಹಶೀಲ್ದಾರ್ ಹಾಗೂ ವಿಎಗೆ ಗೊತ್ತಿಲ್ಲದೇ ಒತ್ತುವರಿ ಸಾಧ್ಯವೇ ಇಲ್ಲ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು
ಇನ್ನು ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿದ್ದು, ಸಿಎಂ ಸೂಚನೆ ಮೇರೆಗೆ ಅಲ್ಲಿ ಹೋಗಿ ನೋಡಿದ್ದೇನೆ. ಅಕ್ರಮ ಜಾಗದಲ್ಲಿ ಶೆಡ್ ಹಾಕಿದ್ದಾರೆ. ಆದರೆ ಮಾನವೀಯತೆ ದೃಷ್ಟಿಯಿಂದ 1 ಲಕ್ಷ ರೂ ಸ್ಕೀಮ್ ಇದೆ. ಯಾರು ಅರ್ಹ ಇದ್ದಾರೆ ಅಂತ ಅವರಿಗೆ ಮನೆ ಕೊಡುತ್ತೇವೆ. ಬೇರೆ ವ್ಯವಸ್ಥೆ ಮಾಡುತ್ತೇವೆ. ಮುಂದಿನ ಮೂರು ದಿನ ಪ್ರತಿಯೊಂದು ಕೇಸ್ ನೋಡುತ್ತಾರೆ. ಎಲ್ಲಾ ದಾಖಲೆ ನೋಡಿ ವಸತಿ ಕೊಡುತ್ತೇವೆ. ಅರ್ಹ ಕೇಸ್ ಇದ್ದರೆ ಮನೆ ಕೊಡುತ್ತೇವೆ. ನಾವು ಒತ್ತುವರಿ ಕೇಸ್ಗೆ ಆಸ್ಪದ ಕೊಡುವುದಿಲ್ಲ. ಅಲ್ಲಿ ವಾಸ ಮಾಡುವುದಕ್ಕೆ ಅರ್ಹ ಜಾಗ ಇಲ್ಲ. ಸುತ್ತಮುತ್ತ ಪರಿಸರ ಕಾಪಾಡುವುದು ನಮ್ಮ ಉದ್ದೇಶ ಎಂದು ಹೇಳಿದ್ದಾರೆ.
ವರದಿ: ಈರಣ್ಣ ಬಸವ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:39 pm, Mon, 29 December 25




