ಕೆಜಿಎಫ್ ಚಿನ್ನದ ಗಣಿ: ಕಾರ್ಮಿಕರ ಬಾಕಿ ಹಣ ನೀಡದಿದ್ದರೆ ಚುನಾವಣೆ ಬಹಿಷ್ಕಾರ

ಕೋಲಾರದ ಚಿನ್ನದ ಗಣಿ ಮುಚ್ಚಿ ಎರಡು ದಶಕ ಕಳೆದರೂ ಕಾರ್ಮಿಕರಿಗೆ ಮಾತ್ರ ಸಿಗಬೇಕಿದ್ದ ಬಾಕಿ ಹಣ ಇದುವರೆಗೆ ಸಿಕ್ಕಿಲ್ಲ. ಇದಕ್ಕಾಗಿ ಹೋರಾಟಗಳೇ ನಡೆದರೂ ಈವರೆಗೆ ಬೇಡಿಕೆ ಈಡೇರಿಲ್ಲ. ಈ ಬಾರಿ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.

ಕೆಜಿಎಫ್ ಚಿನ್ನದ ಗಣಿ: ಕಾರ್ಮಿಕರ ಬಾಕಿ ಹಣ ನೀಡದಿದ್ದರೆ ಚುನಾವಣೆ ಬಹಿಷ್ಕಾರ
ಕೆಜಿಎಫ್ ಚಿನ್ನದ ಗಣಿ: ಕಾರ್ಮಿಕರ ಬಾಕಿ ಹಣ ನೀಡದಿದ್ದರೆ ಚುನಾವಣೆ ಬಹಿಷ್ಕಾರ
Follow us
| Updated By: Rakesh Nayak Manchi

Updated on:Nov 28, 2022 | 2:43 PM

ಕೋಲಾರ: ವಿಶ್ವ ಪ್ರಸಿದ್ದಿ ಪಡೆದಿರುವ ಕೆಜಿಎಫ್ (Kolar gold fields-KGF)​ನಲ್ಲಿ ಚಿನ್ನದ ಗಣಿ ಪ್ರಾರಂಭಿಸಲಾಗಿತ್ತು. ಕೇವಲ ನೂರು ಅಡಿ ಬಗೆದರೆ ಸಾಕು ಚಿನ್ನ ಸಿಗುತ್ತಿತ್ತು. ಆದರೆ ಕಾರಣಾಂತರಗಳಿಂದ 2001 ರಲ್ಲಿ ಗಣಿ ಮುಚ್ಚಲಾಗಿತ್ತು. ಅಂದಿನಿಂದ ಗಣಿಯಲ್ಲಿ ಕೆಲಸ ಮಾಡಿದ ಕಾರ್ಮಿಕರ ಪರಿಸ್ಥತಿ ಜಟಿಲವಾಯಿತು. ಕಾರ್ಮಿಕರು ಬಾಕಿ ಹಣಕ್ಕಾಗಿ ಹೋರಾಟಗಳನ್ನೇ ನಡೆಸಲಾಯಿತು. ಆದರೂ ಬಾಕಿ ಹಣ ಪಾವತಿಯಾಗಿಲ್ಲ. ಆದರೆ ಈ ಬಾರಿ ಕಾರ್ಮಿಕರು ಒಗ್ಗಟ್ಟಿನ ಮಂತ್ರ ಪಠಿಸಿದ್ದು, ತಮಗೆ ನೀಡಬೇಕಿದ್ದ ಬಾಕಿ ಹಣವನ್ನು ನೀಡದೇ ಇದ್ದಲ್ಲಿ ಮುಂಬರುವ ಕರ್ನಾಕಟದ ವಿಧಾನಸಭೆ ಚುನಾವಣೆಯನ್ನು (Karnataka election) ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ನಿವೃತ್ತ ಕಾರ್ಮಿಕರಿಗೆ ಕೇಂದ್ರ ಗಣಿ ಸಚಿವಾಲಯ ಬಾಕಿ ಉಳಿಸಿಕೊಂಡಿರುವ 52 ಕೋಟಿ ರೂ. ಹಣವನ್ನು ಶೀಘ್ರವಾಗಿ ಬಿಡುಗಡೆ ಮಾಡದಿದ್ದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಗಣಿ ಕಾಲೋನಿಗಳಲ್ಲಿರುವ ಮತದಾರರು ಚುನಾವಣೆ ಬಹಿಷ್ಕಾರ ಮಾಡುವ ಎಚ್ಚರಿಕೆಯನ್ನ ನೀಡಿದ್ದಾರೆ. ಎರಡು ದಶಕದ ಹಿಂದೆ ಕೇಂದ್ರ ಸರ್ಕಾರ ನಷ್ಟದ ನೆಪವೊಡ್ಡಿ ಕೆಜಿಎಫ್ ಚಿನ್ನದ ಗಣಿಗೆ ಅಧಿಕೃತವಾಗಿ ಬೀಗ ಹಾಕಿತ್ತು. ಚಿನ್ನದ ಗಣಿಗೆ ಬೀಗ ಹಾಕಿ 22 ವರ್ಷಗಳೇ ಕಳೆದಿವೆ. ಆದರೂ ಇಂದಿಗೂ ಕಾರ್ಮಿಕರ ಹತ್ತಾರು ಸಮಸ್ಯೆಗಳು ಈಡೇರಿಲ್ಲ.

ಏಕಾಏಕಿ ಸಾವಿರಾರು ಕಾರ್ಮಿಕರನ್ನು ಬೀದಿಗೆ ತಳ್ಳಿದ ಕೇಂದ್ರ ಸರ್ಕಾರ ಕೊನೆಯಾದಾಗಿ ಕಾರ್ಮಿಕರಿಗೆ ಬರಬೇಕಿದ್ದ 52 ಕೋಟಿ ರೂಪಾಯಿ ವೇತನ ಸೇರಿದಂತೆ ಕೆಲವೊಂದು ಸವಲತ್ತುಗಳನ್ನು ಇಂದಿಗೂ ನೀಡಿಲ್ಲ. ಅದಕ್ಕಾಗಿ ಹತ್ತಾರು ವರ್ಷಗಳ ಕಾಲ ಕಾನೂನು ಸಮರ ಸಾರಿ ಹೋರಾಟ ಮಾಡಿದ ಕಾರ್ಮಿಕರ ಧ್ವನಿಯೂ ಈಗ ಅಡಗಿ ಹೋಗಿದೆ. ಇದರಿಂದ ರೋಸಿ ಹೋಗಿರುವ ಭಾರತ್ ಗೋಲ್ಡ್ ಮೈನ್ಸ್ (BGM) ಎಂಪ್ಲಾಯಿಸ್ ಅಸೋಸಿಯೇಷನ್ ಕಾರ್ಮಿಕರು ಇತ್ತೀಚೆಗೆ ಪ್ರತಿಭಟನೆ ನಡೆಸಿ, ಕಳೆದ 22 ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವ ಹಣ ಸೇರಿದಂತೆ ಬಡ್ಡಿ ಸಮೇತ ಬಾಕಿ ಹಣ ನೀಡುವುದು, ಮೈನಿಂಗ್ ಪ್ರದೇಶದಲ್ಲಿರುವ ಮನೆಗಳನ್ನ ಕಾರ್ಮಿಕರಿಗೆ ಮಾಡಿಕೊಡದೆ ಇದ್ದರೆ ಮುಂದಿನ ಎಲ್ಲಾ ಚುನಾವಣೆಗಳನ್ನ ಪಕ್ಷಾತೀತವಾಗಿ ಬಹುಷ್ಕಾರ ಹಾಕುವ ಎಚ್ಚರಿಕೆಯನ್ನ ನೀಡಿದ್ದಾರೆ.

ಇದನ್ನೂ ಓದಿ: ಹೆಣ್ಣು ಮಕ್ಕಳ ಅನುಕೂಲಕ್ಕಾಗಿ ಕೋಲಾರದ ಸರ್ಕಾರಿ ಕಾಲೇಜು ಆವರಣದಲ್ಲಿ ಪಿಂಕ್ ರೂಂಗೆ ಚಾಲನೆ ಕೊಟ್ಟ ಹೃದಯ ಫೌಂಡೇಶನ್

“ಕಾರ್ಮಿಕರ ಬಾಕಿ ಪಾವತಿಸುವಂತೆ ಹಾಗೂ ಕಂಪನಿಯನ್ನು ಮರು ಪ್ರಾರಂಭಿಸಿ ಎಂದು ಸುಪ್ರೀಂ ಕೋರ್ಟ್ 2013ರಲ್ಲಿ ಆದೇಶ ಹೊರಡಿಸಿತ್ತು. ಆದೇಶ ಇದ್ದರೂ ಫೈಲ್ ಅನ್ನು ಮೂಲೆಗೆ ಹಾಕಲಾಯಿತು. ಈ ನಡುವೆ 800 ಜನ ಕಾರ್ಮಿಕರು ಮೃತಪಟ್ಟಿದ್ದಾರೆ. ಹೀಗಾಗಿ ಕಳೆದ ಏಪ್ರಿಲ್​ನಲ್ಲಿ ಹೈಕೋರ್ಟ್​ಗೆ ಮತ್ತೆ ಅರ್ಜಿ ಸಲ್ಲಿಸಿದ್ದೇವೆ. ಕಾರ್ಮಿಕರಿಗೆ ನೀಡಬೇಕಿದ್ದ ಎಲ್ಲವನ್ನು ನೀಡಲಾಗಿದೆ. ಬಾಕಿ ಯಾವುದೂ ಉಳಿದಿಲ್ಲ ಎಂದು ಬಿಜಿಎಂ ಸುಳ್ಳು ಹೇಳಿದೆ.” -ಪಾರ್ತಿಬನ್, ನಿವೃತ್ತ ಗಣಿ ಕಾರ್ಮಿಕ

ಕೆಜಿಎಫ್​ನಲ್ಲಿರುವ ಚಿನ್ನದ ಗಣಿಗಳ ಕಚೇರಿ ಸ್ವರ್ಣಭವನದ ಮುಂಭಾಗ ಪ್ರತಿಭಟನೆ ನಡೆಸಿರುವ ಭಾರತ್ ಗೋಲ್ಡ್ ಮೈನ್ಸ್ ಎಂಪ್ಲಾಯಿಸ್ ಅಸೋಸಿಯೇಷನ್ ಕಾರ್ಮಿಕರು ಚುನಾವಣೆ ಬಹಿಷ್ಕಾರ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ನಷ್ಟದ ಕಾರಣವೊಡ್ಡಿ ಕಾರ್ಖಾನೆಗೆ ಬೀಗ ಹಾಕಿದ ಅಂದಿನ ಸರ್ಕಾರಗಳ ವಿರುದ್ಧ ಕಾರ್ಮಿಕರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಗಣಿ ಮುಚ್ಚಿ 22 ವರ್ಷ ಕಳೆದಿದ್ದು 3500 ಕಾರ್ಮಿಕರಿಗೆ ವಿಆರ್​ಎಸ್ ನೀಡುವಂತೆ ಒತ್ತಡ ಹಾಕಿದರು. ಆದರೆ 1000 ಕಾರ್ಮಿಕರು ಮೃತಪಟ್ಟಿದ್ದಾರೆ. ತಮಗೆ ಬರಬೇಕಾದ ಪರಿಹಾರದ ಹಣವನ್ನು ಕಣ್ಣಲ್ಲಿ ಕಾಣದ ಕುಟುಂಬಗಳು ಬೀದಿ ಪಾಲಾಗಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.

ಇದುವರೆಗೂ ಕೇಂದ್ರ ಸರ್ಕಾರ ನಮ್ಮ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ, ಪರಿಣಾಮ ನಿವೃತ್ತ ಗಣಿ ಕಾರ್ಮಿಕರು ಹೈಕೋರ್ಟ್​ನಲ್ಲಿ ಹೂಡಿದ್ದ ಪ್ರಕರಣ ನವೆಂಬರ್​ 28 ರಂದು ತೀರ್ಪು ಬರುವ ಸಾಧ್ಯತೆ ಇದೆ. 28ರಂದು ಬರಲಿರುವ ತೀರ್ಪು ಗಮನಿಸಿ ಮುಂದಿನ ನಿರ್ಧಾರ ಮಾಡಲಾಗುವುದು. ಅಲ್ಲದೆ ಚುನಾವಣೆ ಸಂರ್ದಭದಲ್ಲಿ ಬಿಜಿಎಂಎಲ್ ಗಣಿ ಕಾರ್ಖಾನೆ ಕಾರ್ಮಿಕರ ಬಗ್ಗೆ ಕನಿಕರ ತೊರಿಸುವ ನಂತರ ಕಾರ್ಮಿಕರನ್ನು ಮರೆತು ಬಿಡುವ ರಾಜಕಾರಣಿಗಳ ಕ್ರಮ ಸರಿಯಲ್ಲ, ಹಾಗಾಗಿ ಕಾರ್ಮಿಕರು ಒಂದಾಗಿ ಈಬಾರಿಯ ವಿಧಾನಸಭಾ ಚುನಾವಣೆಯನ್ನೇ ಬಹಿಷ್ಕರಿಸಲಿದ್ದೇವೆ ಎಂದು ರಾಜಕೀಯ ಪಕ್ಷಗಳ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.

ಒಟ್ಟಾರೆ ಚಿನ್ನದ ಗಣಿಗೆ ಬೀಗ ಹಾಕಿ ಅನ್ನ ಕಿತ್ತುಕೊಂಡ ಸರ್ಕಾರಗಳು ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಇದರ ಪರಿಣಾಮ ಕಾರ್ಮಿಕರ ಬದುಕು ದುಸ್ಥರವಾಗಿದೆ. ಬಿಜಿಎಂಎಲ್ ಹಾಗೂ ಸರ್ಕಾರಗಳ ಹುನ್ನಾರದಿಂದ ಬೇಸತ್ತ ಕಾರ್ಮಿಕರು ಚುನಾವಣೆ ಬಹಿಷ್ಕಾರದ ಎಚ್ಚರಿಕೆ ಸ್ಥಳೀಯ ರಾಜಕೀಯ ನಾಯಕರಿಗೆ ತಲೆ ನೋವಾಗಿ ಪರಿಣಮಿಸಿರುವುದಂತೂ ಸುಳ್ಳಲ್ಲ.

ವರದಿ: ರಾಜೇಂದ್ರಸಿಂಹ, ಟಿವಿ9 ಕೋಲಾರ

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:43 pm, Mon, 28 November 22