ಕೊಡಗು: ಮನೆಯ ಕೈದೋಟದಲ್ಲಿ ಎಳೆ ಬಿಸಿಲಿಗೆ ಮೈಯೊಡ್ಡಿ ನಸು ನಗುತ್ತಾ ನಿಂತಿರುವ ಹೂವುಗಳು ಎಂತವರನ್ನು ತನ್ನತ್ತ ಆಕರ್ಷಿಸುತ್ತದೆ. ಹೀಗಾಗಿಯೇ ವೈವಿದ್ಯಮಯವಾದ ಹೂವುಗಳನ್ನು ಮನೆಯಲ್ಲಿ ನೆಡುವುದು ಮಹಿಳೆಯರಿಗೆ ಒಂದು ಹವ್ಯಾಸವಾಗಿದೆ. ಇಂತಹದ್ದೇ ಪದ್ಧತಿಯನ್ನು ಕೊಡಗು ಜಿಲ್ಲೆಯ ಹೆಂಗೆಳೆಯರು ಮುಂದುವರಿಸಿಕೊಂಡು ಬಂದಿದ್ದು, ಮನೆಯಂಗಳದಲ್ಲಿ ಹೂವಿನ ಉದ್ಯಾನವನವನ್ನೇ ಸೃಷ್ಟಿಸಿದ್ದಾರೆ. ಅದರಲ್ಲೂ ಕೊಡಗಿನ ವಾತಾವರಣ ಹೂವಿನ ಗಿಡಗಳಿಗೆ ಹೇಳಿ ಮಾಡಿಸಿದಂತಿದ್ದು, ಮನೆಯ ಹೆಣ್ಣು ಮಕ್ಕಳು ಪ್ರತಿನಿತ್ಯ ಕೆಲವು ಗಂಟೆಗಳ ಕಾಲ ಹೂವಿನ ಗಿಡಗಳ ಆರೈಕೆಗೆಂದೇ ಸಮಯ ಮೀಸಲಿಟ್ಟಿದ್ದಾರೆ.
ಹೂವಿನ ಗಿಡಗಳನ್ನು ನಿರ್ವಹಣೆ ಮಾಡುವುದು ಅಷ್ಟು ಸುಲಭವಲ್ಲ. ಸಾವಿರಾರು ರೂಪಾಯಿ ಹಣ ಖರ್ಚಾಗುತ್ತದೆ. ಹುಳ ಹುಪ್ಪಟೆಗಳಿಂದ ಇದನ್ನು ರಕ್ಷಿಸಬೇಕು. ಒಳ್ಳೆಯ ಗೊಬ್ಬರ ಕೊಡಬೇಕು. ಹೆಚ್ಚು ನೀರು ಬೀಳಬಾರದು. ಹೆಚ್ಚು ಬಿಸಿಲೂ ಬೀಳದಂತೆ ಬಹಳ ಎಚ್ಚರಿಕೆಯಿಂದ ಒಂದು ರೀತಿಯಲ್ಲಿ ಮಕ್ಕಳಂತೆ ಆರೈಕೆ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕೊಡಗಿನ ಮಹಿಳೆಯರು ಹೂ ಕೃಷಿಯಲ್ಲಿ ಪಳಗಿರುವುದರಿಂದ ಕೈದೋಟ ಹವ್ಯಾಸ ಇವರಿಗೆ ಸ್ವಲ್ಪ ಸಲೀಸೇ ಆಗಿದೆ.
ಬೇರೆ ಕಡೆಗಳಲ್ಲಾದರೆ ಹೂದೋಟ ನಿರ್ವಹಣೆಗೆ ತರಬೇತಿ ಬೇಕು. ಆದರೆ ಕೊಡಗಿನಲ್ಲಿ ಹಿರಿಯರಿಂದಲೇ ಮಕ್ಕಳು ಹೂದೋಟ ಕೃಷಿಯನ್ನು ಕಲಿಯುತ್ತಾರೆ. ಕಳೆದ ಎರಡು ದಶಕಗಳಿಂದ ಕೊಡಗು ಜಿಲ್ಲೆಗೆ ದೇಶ ವಿದೇಶಗಳ ಹೂವುಗಳೂ ಲಗ್ಗೆ ಇಟ್ಟಿವೆ. ವಿಶೇಷವಾಗಿ ಆಂತೋರಿಯಂ, ಬಿಗೋನಿಯಾ, ಬೋಗನ್ವಿಲ್ಲಾ, ಆರ್ಕಿಡ್, ಡೇಲಿಯಾ, ವಾಟರ್ ಲಿಲ್ಲಿ, ಲೋಟಸ್ ಸೇರಿದಂತೆ ಹತ್ತಾರು ಬಗೆಯ ವೈವಿಧ್ಯಮಯ ಹೂವುಗಳು ಮನೆ ಮನಗಳನ್ನು ಅಲಂಕರಿಸಿವೆ.
ಹೂವಿನ ತೋಟ ಎನ್ನುವುದು ಕೇವಲ ಒಂದು ಹವ್ಯಾಸವಲ್ಲ. ಅದೊಂದು ಪ್ಯಾಶನ್, ಒಂದು ಸಂಸ್ಕೃತಿ, ಈ ಮೂಲಕ ಜೀವನದ ಖುಷಿ ಕಾಣುವ ಒಂದು ಸಂತೃಪ್ತಿ. ಹಚ್ಚ ಹಸಿರ ಪ್ರಕೃತಿ ಮಧ್ಯೆ ಬಣ್ಣ ಬಣ್ಣದಲ್ಲಿ ಅರಳಿ ನಸು ನಗುವ ಈ ಹೂವುಗಳನ್ನು ಬೆಳಗೆದ್ದು ನೋಡುವುದೇ ಒಂದು ಅಂದ ಎಂದು ಹೂವಿನ ಉದ್ಯಾನವನ ಮಾಡಿರುವ ಪೂಜಿತ ಹೇಳಿದ್ದಾರೆ.
ವರದಿ: ಗೋಪಾಲ್ ಸೋಮಯ್ಯ
ಇದನ್ನೂ ಓದಿ:
ಗದಗ: ಎರಡು ಎಕರೆ ಜಮೀನಿನಲ್ಲಿ ಭರ್ಜರಿ ಗುಲಾಬಿ ಹೂವು ಬೆಳೆದ ಉಪನ್ಯಾಸಕ; ಲಕ್ಷ ಲಕ್ಷ ರೂಪಾಯಿ ಸಂಪಾದನೆ
ಮಾವು ಬೆಳೆಗಾರರ ಮೊಗದಲ್ಲಿ ಮಂದಹಾಸ: ಬೀದರ್ ಜಿಲ್ಲೆಯ ಮಾವಿನ ತೋಟದಲ್ಲಿ ಭರಪೂರ ಹೂವು