ಕೊಡಗು, ಜು.30: ಕರ್ನಾಟಕದ ಹಲವೆಡೆ ಭಾರೀ ಮಳೆ ಆಗುತ್ತಿದ್ದು, ಉತ್ತರ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳು ಸೇರಿದಂತೆ ಕೆಲವೆಡೆ ಗುಡ್ಡ ಕುಸಿತ ಆಗಿ, ಅವಘಡಗಳು ಸಂಭವಿಸಿವೆ. ಈ ಹಿನ್ನಲೆ ಎಚ್ಚೆತ್ತ ಕೊಡಗು(Kodagu) ಜಿಲ್ಲಾಡಳಿತ ಮುಂದಿನ ಎರಡು ದಿನಗಳ ಕಾಲ ಕೊಡಗು ಜಿಲ್ಲೆಗೆ ರೆಡ್ ಅಲರ್ಟ್ ಘೋಷಣೆ ಮಾಡಿ, ಗುಡ್ಡ, ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರಲು ಸೂಚನೆ ನೀಡಿದೆ. ಇದರಿಂದ ಸಧ್ಯ ಕೊಡಗು ಜಿಲ್ಲೆಯ ಜನ ಆತಂಕದಲ್ಲಿದ್ದಾರೆ.
ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬೇತ್ರಿ ಗ್ರಾಮದಲ್ಲಿ ಭಾರೀ ಮಳೆಗೆ ಕಾವೇರಿ ಹಿನ್ನೀರಿನಲ್ಲಿ ಸಿಲುಕಿದ್ದ 6 ಜನರು ಸೇರಿದಂತೆ ಜಾನುವಾರುಗಳನ್ನು ರಕ್ಷಣೆ ಮಾಡಲಾಗಿದೆ. ಹೌದು, ಮನೆಯಲ್ಲಿದ್ದ 6 ಜನರು, 2 ಜಾನುವಾರು ಮತ್ತು 2 ನಾಯಿಗಳನ್ನು ಮಡಿಕೇರಿ ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಪ್ರವಾಹದಿಂದ ದ್ವೀಪದಂತಾಗಿದ್ದ ಗ್ರಾಮದಲ್ಲಿ ನಿವಾಸಿಗಳು ಸಿಲುಕಿದ್ದರು. ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಅವರನ್ನು ರಕ್ಷಿಸಿ, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಇದನ್ನೂ ಓದಿ:ಕೇರಳದ ವಯನಾಡಿನಲ್ಲಿ ಗುಡ್ಡ ಕುಸಿತ, ಐವರು ಸಾವು, 100ಕ್ಕೂ ಹೆಚ್ಚು ಮಂದಿ ಸಿಲುಕಿರುವ ಶಂಕೆ
ಇನ್ನು ವರುಣಾರ್ಭಟಕ್ಕೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು 6 ಜಾನುವಾರುಗಳು ಸಾವನ್ನಪ್ಪಿದ ಘಟನೆ ಪೊನ್ನಂಪೇಟೆ ತಾಲೂಕಿನ ತೆರಾಲು ಗ್ರಾಮದಲ್ಲಿ ನಡೆದಿದೆ. ಮೃತ ಹಸುಗಳು ಬೊಜ್ಜಂಗಡ ನಟರಾಜ್ ಎಂಬುವರಿಗೆ ಸೇರಿದ್ದು, ರೈತ ಕಂಗಾಲಾಗಿದ್ದಾನೆ. ಜೊತೆಗೆ ಮಡಿಕೇರಿ ತಾಲೂಕಿನ ಪೆರಾಜೆ ಬಳಿಯ ಮಜಿಕೊಡಿ ಹೊಸಗದ್ದೆ ಯಲ್ಲಿ ಏಕಾಏಕಿ ಗುಡ್ಡ ಕುಸಿದುಬಿದ್ದಿದ್ದು, ಅಡಕೆ ತೋಟಗಳಿಗೆ ಹಾನಿಯಾಗಿದೆ. ಯಾವುದೇ ಮನೆಗಳು ಇರದೇ ಇರುವುದರಿಂದ ಅನಾಹುತ ತಪ್ಪಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ