ವಿರಾಜಪೇಟೆ, ಜನವರಿ 23: ಕೊಡಗು ಜಿಲ್ಲೆಗೆ ಇದೇ ಜನವರಿ 25 ರಂದು ಸಿಎಂ ಸಿದ್ದರಾಮಯ್ಯ ಭೇಟಿ ನೀಡುತ್ತಿದ್ದಾರೆ. ಜಿಲ್ಲೆಯ ವಿರಾಜಪೇಟೆ ಹಾಗೂ ಮಡಿಕೇರಿಯಲ್ಲಿ ಕಾರ್ಯಕರ್ತರ ಸಭೆ ನಡೆಸುವುದಲ್ಲದೆ, ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಿದ್ದಾರೆ. ಈ ಹಿನ್ನೆಲೆ ವಿರಾಜಪೇಟೆ ಆಡಳಿತಾಧಿಕಾರಿ ನೀಡಿರೋ ಒಂದು ಆದೇಶ ವಿವಾದ ಸೃಷ್ಟಿಸಿದೆ. ವಿರಾಜಪೇಟೆ ನಗರದಲ್ಲಿ ಹಾಕಲಾಗಿರೋ ಶ್ರೀ ರಾಮನ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ಮತ್ತು ಕೇಸರಿ ಧ್ವಜಗಳನ್ನು ಜ. 23 ರ ಸಂಜೆಯ ಒಳಗೆ ತೆರವುಗೊಳಿಸುವಂತೆ ಆದೇಶ ಮಾಡಿದ್ದಾರೆ. ಈ ಆದೇಶದ ವಿರುದ್ಧ ಹಿಂದೂ ಪರ ಸಂಘಟನೆಗಳು ಮತ್ತು ಬಿಜೆಪಿ ತೀವ್ರ ಪ್ರತಿಭಟನೆ ನಡೆಸಿದೆ.
ವಿರಾಜಪೇಟೆ ಪುರಸಭೆ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಸರ್ಕಾರ, ಕಾಂಗ್ರೆಸ್ ಹಾಗೂ ಪುರಸಭೆ ಆಡಳಿತಾಧಿಕಾರಿ ವಿರುದ್ಧ ಧಿಕ್ಕಾರ ಕೂಗಿದರು. ಪ್ರೊಟೊಕಾಲ್ ಮತ್ತು ಸಾರ್ವಜನಿಕ ಶಾಂತಿ ಭಂಗವಾಗದಂತೆ ತಡೆಯಲು ಬಂಟಿಂಗ್ಸ್ ತೆರವುಗೊಳಿಸಲು ಆದೇಶ ನೀಡಲಾಗಿದೆ ಎಂದು ಪುರಸಭೆ ಆಡಳಿತಾಧಿಕಾರಿ ಚಂದ್ರ ಕುಮಾರ್ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ: ಅಯೋಧ್ಯೆ ಮಂದಿರ ಉದ್ಘಾಟನೆ ವೇಳೆ ಶಾಂತಿ ಕದಡುವ ಫೇಸ್ ಬುಕ್ ಪೋಸ್ಟ್: ಕೊಪ್ಪಳ ಪೊಲೀಸರಿಂದ FIR ದಾಖಲು
ಆದ್ರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸಿದರು. ಆಡಳಿತಾಧಿಕಾರಿ ಹಾಗೂ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದರು. ಮಾಜಿ ಸ್ಪೀಕರ್ ಕೆಜಿ ಬೋಪಯ್ಯ ಆಡಳಿತಾಧಿಕಾರಿಯನ್ನ ತೀವ್ರ ತರಾಟೆಗೆ ತೆಗೆದುಕೊಂಡರು. ಯಾವುದೇ ಕಾರಣಕ್ಕೂ ಕೇಸರಿ ಬ್ಯಾನರ್ ಗಳನ್ನು ತೆಗೆಯುವುದಿಲ್ಲ, ಒಂದು ವೇಳೆ ಪುರಸಭೆ ಅದನ್ನು ತೆರವುಗೊಳಿಸಿದರೆ ಆಗುವ ಅನಾಹುತಗಳಿಗೆ ಅವರೇ ಜವಾಬ್ದಾರಿ ಎಂದು ಎಚ್ಚರಿಕೆ ನೀಡಿದರು. ಕೊನೆಗೂ ಪ್ರತಿಭಟನೆಗೆ ಬಗ್ಗಿದ ಆಡಳಿತಾಧಿಕಾರಿ ಚಂದ್ರಕುಮಾರ್ ತಮ್ಮ ಆದೇಶ ಹಿಂಪಡೆದರು. ಹಾಗಾಗಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಹಿಂಪಡೆದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ