ಕೊಡಗು ಹಾಕಿ ಹಬ್ಬದ ಲಾಂಛನ ಬಿಡುಗಡೆ: ಕೊಡವ ಕುಟುಂಬಗಳನ್ನು ಬೆಸೆಯುವ ಹಬ್ಬದ ಬಗ್ಗೆ ತಿಳಿಯಿರಿ
Kodava Hockey Festival: ವಿಶ್ವದ ಅತಿದೊಡ್ಡ ಕ್ರೀಡಾಕೂಟಗಳಲ್ಲಿ ಒಂದೆನಿಸಿರುವ ‘ಕೊಡವ ಕಪ್ ಹಾಕಿ’ ಪಂದ್ಯಾವಳಿಗೆ ವೇದಿಕೆ ಸಜ್ಜಾಗಿದ್ದು, ಇಂದು (ಡಿಸೆಂಬರ್ 21) ಸಿಎಂ ಸಿದ್ದರಾಮಯ್ಯ ಅವರು ಕೊಡಗು ಹಾಕಿ ಹಬ್ಬದ ಲಾಂಛನ ಬಿಡುಗಡೆ ಮಾಡಿದರು. ಕೇವಲ ಇದೊಂಡು ಕ್ರೀಡೆ ಮಾತ್ರವಲ್ಲ ಕೊಡವ ಕುಟುಂಬಗಳನ್ನು ಬೆಸೆಯುವ ಹಬ್ಬವಾಗಿದೆ.
ಬೆಂಗಳೂರು/ಕೊಡಗು, (ಡಿಸೆಂಬರ್ 21): ಕೊಡಗಿಗೂ(Kodagu) ಹಾಕಿಗೂ ಅವಿನಾಭಾವ ಸಂಬಂಧ. ಕೊಡಗು ಜಿಲ್ಲೆಯನ್ನು ಭಾರತೀಯ ಹಾಕಿಯ(Hockey) ತೊಟ್ಟಿಲು ಎಂದೂ ಬಣ್ಣಿಸಲಾಗುತ್ತದೆ. 50ಕ್ಕೂ ಹೆಚ್ಚು ಕೊಡವರು ಅಂತಾರಾಷ್ಟ್ರೀಯ ಹಾಕಿ ಪಂದ್ಯಾವಳಿಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಹೀಗಾಗಿ ಕೊಡಗಿಗೂ ಹಾಕಿಗೂ ಅವಿನಾಭಾವ ಸಂಬಂಧವಿದೆ. ಇದೀಗ ವಿಶ್ವದ ಅತಿದೊಡ್ಡ ಕ್ರೀಡಾಕೂಟಗಳಲ್ಲಿ ಒಂದೆನಿಸಿರುವ ‘ಕೊಡವ ಕಪ್ ಹಾಕಿ’ ಪಂದ್ಯಾವಳಿಗೆ ವೇದಿಕೆ ಸಜ್ಜಾಗಿದ್ದು, ಇಂದು (ಡಿಸೆಂಬರ್ 21) ಸಿಎಂ ಸಿದ್ದರಾಮಯ್ಯ ಅವರು ಕೊಡಗು ಹಾಕಿ ಹಬ್ಬದ ಲಾಂಛನ ಬಿಡುಗಡೆ ಮಾಡಿದರು.
ಇಂದು ಗೃಹಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಡಗು ಹಾಕಿ ಹಬ್ಬದ ಲಾಂಛನ ಬಿಡುಗಡೆ ಮಾಡಿದರು. ಈ ವೇಳೆ ಶಾಸಕ ಪೊನ್ನಣ್ಣ, ಕೊಡವ ಸಮಾಜದ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಕೊಡಗಿನಲ್ಲಿ ಮಾರ್ಚ್, ಏಪ್ರಿಲ್, ಮೇ ಬಂತೆಂದರೆ ಹಾಕಿ ಕ್ರೀಡೆಯ ಸಡಗರ ಮನೆಮಾಡುತ್ತದೆ. ‘ಕೊಡವ ಹಾಕಿ ಹಬ್ಬ’ (Kodava Hockey Festival) ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಗುತ್ತದೆ. ವಿಶೇಷವೆಂದರೆ ಕೊಡವ ಕುಟುಂಬಗಳ ನಡುವೆ ನಡೆಯುವ ಸೌದಾರ್ಹಯುತ ಟೂರ್ನಿ ಇದಾಗಿದೆ. ಬಹುಶಃ ಸಮುದಾಯಗಳ ನಡುವೆ ಬಾಂಧವ್ಯ ಬೆಸೆಯುವ ಇಂತಹ ಹಾಕಿ ಟೂರ್ನಿ ಮತ್ತೆಲ್ಲೂ ಇರಲಾರದು.
ಪ್ರಪಂಚದ ಅತಿ ದೊಡ್ಡ ಸ್ಪರ್ಧೆ ಎಂದೇ ಪರಿಗಣಿಸಲ್ಪಟ್ಟಿರುವ ಈ ಹಾಕಿ ಹಬ್ಬವು ಗಿನ್ನಿಸ್ ದಾಖಲೆಗಳ ಪುಸ್ತಕದಲ್ಲಿ ಸೇರ್ಪಡೆಯಾಗಲು ನಿರ್ದೇಶಿಸಲ್ಪಟ್ಟಿದೆ. ಗಿನೆಸ್ ದಾಖಲೆಗಳ ಪುಸ್ತಕಕ್ಕೆ ಭಾರತೀಯ ಪರ್ಯಾಯವಾಗಿರುವ ಲಿಮ್ಕಾ ದಾಖಲೆಗಳ ಪುಸ್ತಕದಲ್ಲಿ ಈಗಾಗಲೇ ಉಲ್ಲೇಖಗೊಂಡಿದೆ. ಇಂತಹ ಅದ್ಭುತ ಕ್ಷಣಕ್ಕೆ ಮತ್ತೊಮ್ಮೆ ಸಾಕ್ಷಿಯಾಗಲಿದೆ.
ಕೊಡವ ಕುಟುಂಬಗಳನ್ನು ಬೆಸೆಯುವ ಹಬ್ಬ
ಕೊಡಗಿನ ಕುಟುಂಬಗಳನ್ನು ಒಟ್ಟುಗೂಡಿಸುವ ಸಲುವಾಗಿ ಭಾರತೀಯ ಸ್ಟೇಟ್ ಬ್ಯಾಂಕಿನ ನಿವೃತ್ತ ಉದ್ಯೋಗಿ ಹಾಗೂ ಪ್ರಥಮ ದರ್ಜೆಯ ಹಾಕಿ ಆಟದ ತೀರ್ಪುಗಾರರಾಗಿದ್ದ ಪಾಂಡಂಡ ಕುಟ್ಟಪ್ಪ- ಕಾಶಿ ಸಹೋದರರ ಕನಸಿನ ಕೂಸಾಗಿ ಕೊಡವ ಹಾಕಿ ಕಪ್ 1997ರಲ್ಲಿ ಆರಂಭವಾಯಿತು. ವಿರಾಜಪೇಟೆಯ ಸಮೀಪದ ಕರಡ ಗ್ರಾಮದ ಮೈದಾನದಲ್ಲಿ ನಡೆದ ‘ಪಾಡಂಡ ಕಪ್’ ಎಂದು ಕರೆಯಲ್ಪಟ್ಟ ಈ ಟೂರ್ನಿಯಲ್ಲಿ 60 ಕುಟುಂಬಗಳು ಪಾಲ್ಗೊಂಡಿದ್ದವು. ಈ ಸ್ಪರ್ಧೆಯ ಪ್ರಪ್ರಥಮ ಉದ್ಘಾಟನಾ ಸಮಾರಂಭದ ಆರ್ಥಿಕ ವೆಚ್ಚವನ್ನು ಕುಟ್ಟಪ್ಪನವರೇ ಭರಿಸಿದ್ದರು. ನಂತರದ ವರ್ಷಗಳಲ್ಲಿ ಕುಟುಂಬಗಳು ಈ ಹಬ್ಬದಲ್ಲಿ ಭಾಗವಹಿಸುತ್ತಾ ಬಂದಿವೆ.
ಪ್ರತಿ ವರ್ಷ ಈ ಟೂರ್ನಿಗಾಗಿ ಎಲ್ಲಾ ಕುಟುಂಬಗಳು ಕಾಯುತ್ತವೆ. ಸೇನೆಯಲ್ಲಿರುವ ಅನೇಕರು ಟೂರ್ನಿಯ ಸಮಯಕ್ಕೆ ಸರಿಯಾಗಿ ರಜೆ ಪಡೆದು ಬಂದು ಆಡುತ್ತಾರೆ. ಈ ‘ಕೊಡವ ಹಾಕಿ ಹಬ್ಬ’ವನ್ನು ಪ್ರತಿ ವರ್ಷ ಒಂದೊಂದು ಕೊಡವ ಕುಟುಂಬ ಆತಿಥ್ಯ ವಹಿಸಿ ನಡೆಸಿಕೊಂಡು ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಈ ಟೂರ್ನಿಗೆ ವರ್ಷದಿಂದ ವರ್ಷಕ್ಕೆ ವ್ಯಾಪಕ ಬೆಂಬಲ ಸಿಗುತ್ತಿದೆ.