ಕೊಡಗು ಜಿಲ್ಲೆಯಲ್ಲೂ ಕಮಿಷನ್ ದಂಧೆ: ಶಾಸಕರ ವಿರುದ್ಧ ಗುತ್ತಿಗೆದಾರರ ಗಂಭೀರ ಆರೋಪ
ಶಾಸಕರು ಕಮಿಷನ್ ಇಲ್ಲದೆ ನಮಗೆ ರಾಜ್ಯ ಹಣಕಾಸು ಸಚಿವರಿಂದ ಬಾಕಿ ಹಣ ಬಿಡುಗಡೆ ಮಾಡಿಸಲಿ ಎಂದು ಕೊಡಗು ಜಿಲ್ಲೆಯ ಗುತ್ತಿಗೆದಾರರು ಬೇಸರ ವ್ಯಕ್ತಪಡಿಸಿದರು.
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಪ್ರತಿ ಕಾಮಗಾರಿಗೆ ಶೇ 40ರ ಕಮಿಷನ್ ಪಡೆದುಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಕಮಿಷನ್ ದಂದೆ ಅವ್ಯಾಹತವಾಗಿ ನಡೆಯುತ್ತಿದೆ ಎಂದು ಶಾಸಕ ಕೆ.ಜಿ.ಬೋಪಯ್ಯ ವಿರುದ್ಧ ಗುತ್ತಿಗೆದಾರರ ಸಂಘದ ಅಧ್ಯಕ್ಷ ರವಿ ಚಂಗಪ್ಪ ಗಂಭೀರ ಆರೋಪ ಮಾಡಿದರು. ಶಾಸಕರು ಕಮಿಷನ್ ಇಲ್ಲದೆ ನಮಗೆ ರಾಜ್ಯ ಹಣಕಾಸು ಸಚಿವರಿಂದ ಬಾಕಿ ಹಣ ಬಿಡುಗಡೆ ಮಾಡಿಸಲಿ. ಜಿಲ್ಲೆಯಲ್ಲಿ ಕಮಿಷನ್ ನೀಡದ ಕಾರಣ ನಮಗೆ ಹಣ ಬಿಡುಗಡೆ ಆಗುತ್ತಿಲ್ಲ. ವಿವಿಧ ಹಂತಗಳಲ್ಲಿ ಭಾರಿ ಮೊತ್ತದ ಕಮಿಷನ್ ನೀಡಬೇಕಿದೆ. ಪಂಚಾಯತ್ ರಾಜ್ ಇಲಾಖೆಯಿಂದ ₹49 ಕೋಟಿ ಬರಬೇಕು. ಸೋಮವಾರ ಬೆಳಗ್ಗೆ 11 ಗಂಟೆಗೆ ಶಾಸಕರು ಪಂಚಾಯತ್ ರಾಜ್ ಇಲಾಖೆಯ ಕಚೇರಿಗೆ ಬಂದು ಹಣ ಬಿಡುಗಡೆ ಮಾಡಿಸಲಿ, ನಮ್ಮ ಗುತ್ತಿಗೆದಾರರೂ ಅಲ್ಲಿಗೆ ಬಂದಿರುತ್ತಾರೆ. ಯಾವುದೇ ಕಮಿಷನ್ ಪಡೆಯದೇ ಬಾಕಿ ಮೊತ್ತ ಬಿಡುಗಡೆ ಮಾಡಲಿ ಎಂದು ಒತ್ತಾಯಿಸಿದರು.
ಸಂಪೂರ್ಣ ತನಿಖೆ ಆಗಲಿ: ಬೋಪಯ್ಯ
ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಕುರಿತು ಪ್ರತಿಕ್ರಿಯಿಸಿದ ಶಾಸಕ ಕೆ.ಜಿ.ಬೋಪಯ್ಯ, ಸಂತೋಷ್ ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆಯಾಗಬೇಕಿದೆ, ಸಾವಿಗೆ ಏನು ಕಾರಣ? ಸಂತೋಷ್ ಜೊತೆಗಿದ್ದ ಅವರಿಬ್ಬರೂ ಯಾಕೆ ಓಡಿ ಹೋಗಿದ್ದಾರೆ. ಅಲ್ಲಿ ಏನಾಯಿತೆಂದು ಸಂತೋಷ್ ಸ್ನೇಹಿತರಿಬ್ಬರು ಹೇಳಬೇಕು. ಸಂತೊಷ್ ಪಾಟೀಲ್ ಸಾವಿನ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಲಿ ಎಂದು ಆಗ್ರಹಿಸಿದರು.
ಗುತ್ತಿಗೆದಾರರಿಂದ ಮುಷ್ಕರಕ್ಕೆ ನಿರ್ಧಾರ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ್ ಅವರದ್ದು ಆತ್ಮಹತ್ಯೆ ಅಲ್ಲ, ಅದು ಸರ್ಕಾರವೇ ಮಾಡಿರುವ ಕೊಲೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳಿದ್ದರು. ಚಾಮರಾಜಪೇಟೆಯಲ್ಲಿ ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಅವರು, ರಾಜ್ಯದಲ್ಲಿ ಅತ್ಯಂತ ಭ್ರಷ್ಟ ಸರ್ಕಾರ ಆಡಳಿತದಲ್ಲಿದೆ. ಈ ಭ್ರಷ್ಟಾಚಾರ ಖಂಡಿಸಿ ನಾವು ಒಂದು ತಿಂಗಳು ಕೆಲಸ ಮಾಡುವುದಿಲ್ಲ ಎಂದು ಘೋಷಿಸಿದರು. ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳಲ್ಲೂ ಭ್ರಷ್ಟಾಚಾರ ಮಿತಿ ಮೀರಿದೆ. ಬಿಜೆಪಿ ಸರ್ಕಾರವು ರೌಡಿಸಂ ಮಾಡುತ್ತಿದೆ. ನಮ್ಮ ಬಳಿ ಸಾಕಷ್ಟು ಸಾಕ್ಷ್ಯಾಧಾರಗಳಿದ್ದರೂ ಸರ್ಕಾರ ತೊಂದರೆ ಕೊಡಬಹುದು ಎನ್ನುವ ಕಾರಣಕ್ಕೆ ಅವನ್ನು ಒದಗಿಸುತ್ತಿಲ್ಲ. ಪ್ರತಿ ಟೆಂಡರ್‌ಗೂ ಕನಿಷ್ಠ ಶೇ 5ರ ಕಮಿಷನ್ ಕೊಡಬೇಕಿದೆ. ಮುಖ್ಯಮಂತ್ರಿ ಕಚೇರಿಯಲ್ಲಿಯೇ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಆರೋಗ್ಯ, ನೀರಾವರಿ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಗುತ್ತಿಗೆದಾರರನ್ನು ಕಾಡುತ್ತಿರುವ ಭ್ರಷ್ಟಾಚಾರ ಸಮಸ್ಯೆಗಳನ್ನು ಪರಿಹರಿಸದಿದ್ದರೆ 15 ದಿನಗಳಲ್ಲಿ ದಾಖಲೆ ಬಿಡುಗಡೆ ಮಾಡಲಾಗುವುದು ಎಂದು ಎಚ್ಚರಿಸಿದರು.
ನಾವು ಸರ್ಕಾರವನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿಲ್ಲ. ನಮ್ಮ ಮಾತು ಸಂಪೂರ್ಣ ಸತ್ಯ. ಆರೋಗ್ಯ ಇಲಾಖೆಯ ಸಚಿವ ಡಾ.ಕೆ.ಸುಧಾಕರ್ ಅತ್ಯಂತ ಭ್ರಷ್ಟ ಮಂತ್ರಿ. ಅವರು ಪ್ರತಿ ಕಾಮಗಾರಿಗಳಲ್ಲಿಯೂ ಶೇ 5ರ ಕಮಿಷನ್ ಪಡೆಯುತ್ತಿದ್ದಾರೆ ಎಂದರು. ಗುತ್ತಿಗೆಯನ್ನು ಇಂಥವರಿಗೇ ನೀಡಬೇಕೆಂದು ಸಚಿವರು ಮೊದಲೇ ನಿರ್ಧರಿಸುತ್ತಾರೆ. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ₹ 10 ಸಾವಿರ ಕೋಟಿ ವೆಚ್ಚದ ಕಾಮಗಾರಿ ನಡೆದಿದೆ. ಅಷ್ಟು ದೊಡ್ಡಮೊತ್ತದ ಹಣ ವೆಚ್ಚ ಮಾಡಿದರೂ ಕಾಮಗಾರಿ ಕಳಪೆಯಾಗಿದೆ ಎಂದು ಉದಾಹರಣೆ ನೀಡಿದರು.
ಇದನ್ನೂ ಓದಿ: ನನ್ನ ಸಿಡಿ ತಯಾರಿಸಿದ್ದ ‘ಮಹಾನ್ ನಾಯಕನೇ’ ಸಂತೋಷ್ ಪ್ರಕರಣದಲ್ಲೂ ಭಾಗಿ: ರಮೇಶ್ ಜಾರಕಿಹೊಳಿ ಹೊಸ ಬಾಂಬ್
ಇದನ್ನೂ ಓದಿ: ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿಲ್ಲ, ಸರ್ಕಾರವೇ ಕೊಲೆ ಮಾಡಿದೆ: ಗುತ್ತಿಗೆದಾರರ ಸಂಘ ಆಕ್ರೋಶ, ಮುಷ್ಕರಕ್ಕೆ ನಿರ್ಧಾರ
Published On - 1:56 pm, Thu, 14 April 22