ಮಡಿಕೇರಿ: ನವೋದಯ ವಿದ್ಯಾಲಯದಲ್ಲಿ ಒಟ್ಟು 31 ಮಕ್ಕಳಿಗೆ ಕೊರೊನಾ ದೃಢ; ಶಾಲೆ ಸೀಲ್ಡೌನ್
Coronavirus: ಇಂದು (ಅಕ್ಟೋಬರ್ 27) ಮತ್ತೆ 10 ವಿದ್ಯಾರ್ಥಿಗಳಿಗೆ ಕೊವಿಡ್19 ಸೋಂಕು ಖಚಿತವಾಗಿದೆ. ಸೋಂಕಿತ ವಿದ್ಯಾರ್ಥಿಗಳಿಗೆ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮಡಿಕೇರಿ: ಇಲ್ಲಿನ ಗಾಳಿಬೀಡು ಗ್ರಾಮದಲ್ಲಿರುವ ನವೋದಯ ವಿದ್ಯಾಲಯದಲ್ಲಿ ಮತ್ತೆ 10 ಮಕ್ಕಳಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಶಾಲೆಯಲ್ಲಿ ನಿನ್ನೆ 21 ಮಕ್ಕಳಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಇಂದು (ಅಕ್ಟೋಬರ್ 27) ಮತ್ತೆ 10 ವಿದ್ಯಾರ್ಥಿಗಳಿಗೆ ಕೊವಿಡ್19 ಸೋಂಕು ಖಚಿತವಾಗಿದೆ. ಸೋಂಕಿತ ವಿದ್ಯಾರ್ಥಿಗಳಿಗೆ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಕಳೆದ ಕೆಲವು ದಿನಗಳಿಂದ ಕೆಲವು ವಿದ್ಯಾರ್ಥಿಗಳು ಶೀತ ಜ್ವರದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ನವೋದಯ ಶಾಲೆಯ ವಿದ್ಯಾರ್ಥಿಗಳಿಗೆ ಕೊರೊನಾಟೆಸ್ಟ್ ಮಾಡಿಸಲಾಗಿತ್ತು. ಆರೋಗ್ಯ ಇಲಾಖೆ ಕೊರೊನಾ ಪರೀಕ್ಷೆ ಮಾಡಿಸಿತ್ತು. ಇದರಲ್ಲಿ ಒಟ್ಟು 31 ಮಕ್ಕಳಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಸೋಂಕಿತ ವಿದ್ಯಾರ್ಥಿಗಳಿಗೆ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಬಗ್ಗೆ ಟಿವಿ9ಗೆ ಕೊಡಗು ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿ, ಪ್ರತಿಕ್ರಿಯೆ ನೀಡಿದ್ದಾರೆ. ನವೋದಯ ಶಾಲೆಯ ವಿದ್ಯಾರ್ಥಿಗಳಿಗೆ ಕೊವಿಡ್ ಪರೀಕ್ಷೆ ಮಾಡಲಾಗಿದೆ. 270 ವಿದ್ಯಾರ್ಥಿಗಳ ಪೈಕಿ 31 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ವಿದ್ಯಾರ್ಥಿಗಳನ್ನು ಶಾಲೆಯಲ್ಲೇ ಕ್ವಾರಂಟೈನ್ ಮಾಡಲಾಗಿದೆ. 7 ದಿನಗಳ ಕಾಲ ವಿದ್ಯಾರ್ಥಿಗಳ ಮೇಲೆ ನಿಗಾ ವಹಿಸುತ್ತೇವೆ. ಶಾಲೆಯ 40 ಸಿಬ್ಬಂದಿಗೂ ಕೊವಿಡ್ ಟೆಸ್ಟ್ ಮಾಡಲಾಗಿದೆ. ಸದ್ಯಕ್ಕೆ ನವೋದಯ ಶಾಲೆ ಸೀಲ್ಡೌನ್ ಮಾಡಲಾಗಿದೆ. ಮೂರನೇ ಅಲೆಗೂ ಈ ಪ್ರಕರಣಕ್ಕೂ ಸಂಬಂಧ ಇಲ್ಲ ಎಂದು ಟಿವಿ9ಗೆ ಕೊಡಗು ಡಿಹೆಚ್ಒ ಡಾ.ವೆಂಕಟೇಶ್ ಮಾಹಿತಿ ನೀಡಿದ್ದಾರೆ.
ವಿದೇಶಗಳಲ್ಲಿ ಕಂಡು ಬರುತ್ತಿರುವ ಕೊರೊನಾ ವೈರಾಣುವಿನ ಡೆಲ್ಟಾ ಎವೈ 4.2 ರೂಪಾಂತರಿ ಕರ್ನಾಟಕದಲ್ಲಿ ಪತ್ತೆಯಾಗಿದೆ. ಬೆಂಗಳೂರಿನ ಮೂವರು ಮತ್ತು ರಾಜ್ಯದ ಇತರೆಡೆಯ ನಾಲ್ವರಲ್ಲಿ ಈ ರೂಪಾಂತರಿ ಪತ್ತೆಯಾಗಿರುವುದನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಡಿ.ರಣದೀಪ್ ದೃಢಪಡಿಸಿದ್ದಾರೆ. ಹೊಸ ರೂಪಾಂತರಿಯಿಂದ ರಾಜ್ಯದಲ್ಲಿ ಈವರೆಗೆ ಯಾರೊಬ್ಬರೂ ಸಾವನ್ನಪ್ಪಿಲ್ಲ ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳು ನಿಯಂತ್ರಣದಲ್ಲಿವೆ. ವಿದೇಶಗಳಿಂದ ಬರುವ ಪ್ರವಾಸಿಗರು ಕನಿಷ್ಠ 72 ಗಂಟೆ ಮೊದಲು ಮಾಡಿಸಿಕೊಂಡಿರುವ ಆರ್ಟಿ-ಪಿಸಿಆರ್ ಪರೀಕ್ಷೆಯ ವರದಿ ಹಾಜರುಪಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ವರದಿಗಳನ್ನು ಏರ್ ಸುವಿಧಾ ಪೋರ್ಟಲ್ನಲ್ಲಿ ಈ ವರದಿಗಳನ್ನು ಅಪ್ಲೋಡ್ ಮಾಡಬೇಕು. ಇಷ್ಟು ಬಿಟ್ಟರೆ ರಾಜ್ಯದಲ್ಲಿ ಕ್ವಾರಂಟೈನ್ನಂಥ ಕ್ರಮಗಳನ್ನು ಜಾರಿಗೊಳಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ನಿನ್ನೆ (ಅಕ್ಟೋಬರ್ 26) ಹೊಸದಾಗಿ 277 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಮೂಲಕ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 29,86,553 ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 29,39,990 ಜನ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 7 ಜನರ ಸಾವು ಸಂಭವಿಸಿದೆ. ಅದರಂತೆ, ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 38,024 ಜನ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ 8,510 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದೆ.
ಇದನ್ನೂ ಓದಿ: ಕೊರೊನಾ ಮರೆತು ಹಬ್ಬ ಆಚರಣೆ ಮಾಡಬೇಡಿ; ಎಚ್ಚರಿಕೆ ನೀಡಿದ ದೇವಿಶೆಟ್ಟಿ
ಇದನ್ನೂ ಓದಿ: ಚೀನಾದಲ್ಲಿ ಮತ್ತೆ ಕೊರೊನಾ ಅಬ್ಬರ; ಲಾಂಝೌ ನಗರ ಸಂಪೂರ್ಣ ಲಾಕ್ಡೌನ್
Published On - 4:49 pm, Wed, 27 October 21