ಕೊಡಗು, ಮಾ.21: ರಾಜ್ಯಾದ್ಯಂತ ನೀರಿನ ಸಮಸ್ಯೆ(Water Crisis) ಬಂದೊದಗಿದೆ. ಅದರಂತೆ ಕಾವೇರಿ ತವರು ಕೊಡಗಿ (Kodagu)ನಲ್ಲೇ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದ್ದು, ಜೀವನದಿ ಈಗಲೇ ಬತ್ತಲಾರಂಭಿಸಿದೆ. ಹಾಗಾಗಿ ಕುಶಾಲನಗರ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆಯಲ್ಲಿ ಭಾರೀ ಸಮಸ್ಯೆ ತಲೆದೋರಿದೆ. ಈ ಹಿನ್ನೆಲೆಯಲ್ಲಿ ಈಗಲೇ ಎಚ್ಚೆತ್ತ ಜನರು ಕಾವೇರಿ ನದಿಗೆ ಅಡ್ಡಲಾಗಿ 1500 ಮರಳಿನ ಮೂಟೆಗಳನ್ನಿಟ್ಟು ನೀರು ಸಂಗ್ರಹಿಸಲು ಯತ್ನಿಸಲಾಗಿದೆ.
ಕುಶಾಲನಗರ ಪುರಸಭೆ ವ್ಯಾಪ್ತಿಯ ಬೈಚನಹಳ್ಳಿ ಬಳಿ ನದಿಗೆ ಅಡ್ಡಲಾಗಿ ಮರಳು ಮೂಟೆಯ ತಡೆಗೋಡೆ ನಿರ್ಮಿಸಲಾಗಿದೆ. ಆದ್ರೆ ನದಿ ದಿನೇ ದಿನೇ ಬತ್ತುತ್ತಿದ್ದು ಇನ್ನು ಕೆಲವೇ ದಿನಗಳಲ್ಲಿ ಈಗಿರುವ ನೀರೂ ಬತ್ತಿ ಹೋಗುವ ಆತಂಕ ಎದುರಾಗಿದೆ. ಕುಶಾಲನಗರ ಪಟ್ಟಣಕ್ಕೆ ನಿತ್ಯ 39 ಲಕ್ಷ ಲೀಟರ್ ನೀರು ಬೇಕಾಗಿದೆ. ಸಧ್ಯ ನದಿಯಿಂದ 28 ಲಕ್ಷ ಲೀಟರ್ ನೀರು ಲಭ್ಯವಿದ್ದು, ಉಳಿದ ನೀರನ್ನು ಬೋರ್ವೆಲ್ಗಳ ಮೂಲಕ ಸಂಗ್ರಹಿಸಲಾಗುತ್ತಿದೆ. ಇನ್ನು ಖಾಸಗಿ ಜಾಗದ ಮಾಲಿಕರು, ತಮ್ಮ ಬೋರ್ವೆಲ್ಗಳ ನೀರನ್ನು ಪುರಸಭೆಗೆ ಜೊತೆಗೆ ಟ್ಯಾಂಕರ್ಗಳ ಮೂಲಕ ಹಲವು ಬಡಾವಣೆಗಳಿಗೆ ನೀರು ಪೂರೈಸಲಾಗುತ್ತಿದೆ. ಏಪ್ರಿಲ್ ಮೇ ತಿಂಗಳಲ್ಲಿ ಪಟ್ಟಣದಲ್ಲಿ ಕುಡಿಯುವ ನೀರಿಗೆ ಗಂಭೀರ ಸಮಸ್ಯೆ ಎದುರಾಗುವ ಆತಂಕವಿದೆ.
ಇನ್ನು ಕಳೆದ ಎರಡ್ಮೂರು ದಿನಗಳ ಹಿಂದೆ ಮಡಿಕೇರಿ ತಾಲೂಕಿನ ಚೈಯ್ಯಂಡಾಣೆ, ಕುಂಜಿಲಗೇರಿ, ಬೆಳ್ಳುಮಾಡು ವ್ಯಾಪ್ತಿಯಲ್ಲಿ ವರ್ಷದ ಮೊದಲ ಮಳೆಯಾಗಿದ್ದು, ಬರದಿಂದ ಕಂಗೆಟ್ಟಿದ್ದ ರೈತರಲ್ಲಿ ಮಂದಹಾಸ ಮೂಡಿತ್ತು. ಆದರೆ, ಜಿಲ್ಲೆಯ ಕುಶಾಲನಗರ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆಯಲ್ಲಿ ಭಾರೀ ಸಮಸ್ಯೆ ತಲೆದೋರಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:12 pm, Thu, 21 March 24