ಕೊಡಗು, ಅ.04: ಜಿಲ್ಲೆಯ ಸೋಮವಾರಪೇಟೆ(Somwarpet) ಮತ್ತು ಕುಶಾಲನಗರ (Kushalnagar) ಪ್ರದೇಶದಲ್ಲಿ ಜೋಳ ಬೆಳೆದ ರೈತರ ಪರಿಸ್ಥಿತಿ ಹೇಳತೀರದಂತಾಗಿದೆ. ಹೌದು, ಈ ಭಾಗದಲ್ಲಿ ಸುಮಾರು 4000 ಹೆಕ್ಟೇರ್ ಪ್ರದೇಶದಲ್ಲಿ ಜೋಳ(Maize) ಬೆಳೆಯಲಾಗಿದೆ. ಒಂದಷ್ಟು ಮಂದಿಗೆ ನೀರಿನ ಸೌಲಭ್ಯವಿದ್ದರೆ, ಬಹುತೇಕ ಮಂದಿ ಮಳೆಯನ್ನೇ ಆಶ್ರಯಿಸಿದ್ದಾರೆ. ಆದ್ರೆ, ಈ ಬಾರಿ ಆಗಸ್ಟ್ನಲ್ಲಿ ಮಳೆ ಇಲ್ಲದ್ದರಿಂದ ಇದೀಗ ಜೋಳ, ಫಸಲು ಬಿಟ್ಟಿಲ್ಲ. ಇದರಿಂದ ಈ ಭಾಗದಲ್ಲಿ ಶೇಕಡಾ 50 ರಷ್ಟು ಬೆಳೆ ನಾಶವಾಗಿದೆ ಎಂದು ರೈತರು ಅಳಲನ್ನು ತೋಡಿಕೊಂಡಿದ್ದಾರೆ.
ಸಾಮಾನ್ಯವಾಗಿ ಕೊಡಗಿನಲ್ಲಿ ಆಗಸ್ಟ್ ತಿಂಗಳಲ್ಲಿ ಉತ್ತಮ ಮಳೆಯಾಗುತ್ತದೆ. ಇದೇ ಮಳೆಯಿಂದ ಕೃಷಿ ಚಟುವಟಿಕೆಗಳು ನಡೆಯುವುದಲ್ಲದೆ, ಅಂತರ್ಜಲವೂ ವೃದ್ಧಿಸುತ್ತದೆ. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಉತ್ತಮ ಮಳೆಯಾಗಿತ್ತಲ್ಲದೆ, ಬೆಲೆಯೂ ಉತ್ತಮವಾಗಿ ರೈತರಿಗೆ ಸಾಕಷ್ಟು ಲಾಭ ಬಂದಿತ್ತು. ಆದ್ರೆ, ಈ ವರ್ಷ ಆಗಸ್ಟ್ ತಿಂಗಳಲ್ಲಿ ಮಳೆಯ ಸುಳಿವೇ ಇಲ್ಲ. ಹಾಗಾಗಿ ಜೋಳದ ಗಿಡಗಳಲ್ಲಿ ಫಸಲು ಬಿಟ್ಟಿಲ್ಲ. ಬಿಟ್ಟ ಫಸಲು ಕೂಡ ಬಲಿಯದೆ ಅಲ್ಲಲ್ಲಿ ಸುರುಟಿ ಹೋಗುತ್ತಿವೆ. ಇನ್ನೇನು ಇನ್ನು 20 ದಿನಗಳಲ್ಲಿ ಕಟಾವು ಮಾಡಬೇಕಿದೆ. ಆದ್ರೆ, ಕಾಯಿ ಬಲಿಯದೇ ಇರುವುದರಿಂದ ರೈತರಿಗೆ ಬಹಳಷ್ಟು ನಷ್ಟವಾಗಿದೆ.
ಇದನ್ನೂ ಓದಿ:Chamarajanagar News: ಹಳೆ ದ್ವೇಷಕ್ಕೆ ಟೊಮೆಟೊ ಬೆಳೆ ನಾಶ, ಮುಗಿಲು ಮುಟ್ಟಿದ ಅನ್ನದಾತನ ಆಕ್ರಂದನ
ಹೌದು, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇದೆ ಪರಿಸ್ಥಿತಿ ಎದುರಾಗಿದೆ. ಕಷ್ಟಪಟ್ಟು ಬೆಳೆದ ಬೆಲೆ ಕೈಗೆ ಬಂದಿಲ್ಲ. ಅದರಂತೆ ಕೊಡಗು ಜಿಲ್ಲೆಯಲ್ಲಿ ಉತ್ತಮ ಬೆಳೆಯೇನೋ ಬಂದಿದೆ. ಆದರೆ, ಒಳಗಡೆ ಜೋಳವೇ ಬಂದಿಲ್ಲ. ಸರ್ಕಾರವೇನೋ ಕುಶಾಲನಗರ, ಸೋಮವಾರಪೇಟೆ ತಾಲ್ಲೂಕನ್ನ ಬರ ಪೀಡಿತ ಎಂದು ಘೋಷಣೆ ಮಾಡಿದೆ. ಅದರಂತೆ ಲಕ್ಷಾಂತರ ರೂ ಸಾಲ ಮಾಡಿ ಜೋಳ ಬೆಳೆದ ರೈತರು ಇದೀಗ ಆಕಾಶ ನೋಡುವಂತಾಗಿದೆ. ಇಲ್ಲಿ ಫಸಲು ನಾಶದ ಸೂಕ್ತ ಅಧ್ಯಯಯನ ನಡೆಸಿ ರೈತರಿಗೆ ಪರಿಹಾರ ನೀಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ