ಕೊಡಗಿನ ಪ್ರಪ್ರಥಮ ಫ್ಲೈ ಓವರ್ ಪೂರ್ಣಗೊಳ್ಳಲು 6 ವರ್ಷ ಹಿಡಿಸಿದೆ, ಭಾಗಮಂಡಲ ಜನರಿನ್ನು ಪ್ರವಾಹಕ್ಕೆ ಹೆದರಬೇಕಿಲ್ಲ
Kodagu Flyover completed: ಸದ್ಯ ಮೇಲ್ಸೇತುವೆಯಿಂದಾಗಿ ಭಾಗಮಂಡಲ ಜನರು ಪ್ರವಾಹಕ್ಕೆ ಹೆದರಬೇಕಾಗಿಲ್ಲ. ಊರು ದ್ವೀಪವಾಗುವುದು ತಪ್ಪಲಿದೆ. ಮಾತ್ರವಲ್ಲ. ದಿನಗಟ್ಟಲೆ ಹೊರ ಪ್ರಪಂಚದ ಸಂಪರ್ಕ ತಪ್ಪುವ ಸಮಸ್ಯೆಯೂ ಇನ್ನಿಲ್ಲ.
30 ಕೊಟಿ ರೂ ವೆಚ್ಚದ ಒಂದು ಕಾಮಗಾರಿ ಮುಗಿಯಲು ಎಷ್ಟು ಬೇಕಾಗಬಹುದು ಅಬ್ಬಬ್ಬಾ ಅಂದ್ರೆ ಎರಡು ವರ್ಷ ಸಾಕು. ಆದ್ರೆ ಕೊಡಗಿನ ಪ್ರಪ್ರಥಮ ಫ್ಲೈ ಓವರ್ (Kodagu Flyover) ಬರೋಬ್ಬರಿ ಆರು ವರ್ಷದ ಬಳಿಕ ಸಂಪೂರ್ಣವಾಗಿದೆ. ಹಾಗಾಗಿ ಊರಿನ ಜನ (localities) ಖುಷಿಯಾಗಿದ್ದಾರೆ. ಆದ್ರೆ ಸೇತುವೆಯ ಎರಡೂ ಬದಿ ಮಣ್ಣಿನ ರಾಶಿ ತುಂಬಿಕೊಂಡಿದ್ದು ಇಡೀ ಊರು ಧೂಳುಮಯವಾಗಿದೆ.
ಅಲ್ಲಿನ ಮೇಲ್ಸೇತುವೆ ನೋಡಿದ್ರೆ ಯಾವುದೋ ಮೆಟ್ರೋ ಸಿಟಿಯಲ್ಲಿದ್ದೇವೇನೋ ಅನ್ಸುತ್ತೆ. ಆದ್ರೆ ಇದು ಕೊಡಗಿನ ಕುಗ್ರಾಮದಲ್ಲಿರೋ ಮೇಲ್ಸೇತುವೆ. ಮಡಿಕೇರಿ ತಾಲ್ಲೂಕಿನ ಭಾಗಮಂಡಲ ಗ್ರಾಮ ಪ್ರತಿ ವರ್ಷ ಮಳೆಗಾಲದಲ್ಲಿ ಕಾವೇರಿ ಪ್ರವಾಹದಲ್ಲಿ ಮುಳುಗಡೆಯಾಗುತ್ತದೆ. ಇದ್ರಿಂದ ಮಡಿಕೇರಿ ಭಾಗಮಂಡಲ ತಲಕಾವೇರಿ ಹಾಗೂ ನಾಪೋಕ್ಲು ಸಂಪರ್ಕ ಕಡಿತಗೊಂಡು ಇಡೀ ಊರು ದ್ವೀಪದಂತಾಗುತ್ತದೆ.
ಈ ಸಮಸ್ಯೆಯನ್ನ ಪರಿಹರಿಸಲಿಕ್ಕೆ ಅಂತ 2018ರಲ್ಲಿ ಈ ಊರಿಗೆ ಮೇಲ್ಸೇತುವೆ ಘೋಷಣೆಯಾಗಿ ಕೆಲಸವೂ ಶುರುವಾಗುತ್ತದೆ. ಮುಂದಿನ ಮಳೆಗಾಲದ ಒಳಗೇ ಮೇಲ್ಸೇತುವೆ ಸಂಪೂರ್ಣವಾಗಲಿದೆ ಎಂದು ಹೇಳಲಾಗಿತ್ತು. ಆದ್ರೆ ಕಾಮಗಾರಿ ಶುರುವಾಗಿ ಆರು ವರ್ಷಗಳೇ ಕಳೆದ್ರೂ ಮೇಲ್ಸೇತುವೆ ಸಂಪೂರ್ಣ ವಾಗಲಿಲ್ಲ. ಕಾಮಗಾರಿಯಿಂದಾಗಿ ಇಡೀ ಭಾಗಮಂಡಲ ಗ್ರಾಮ ಕೇಂದ್ರ ಕೆಸರು ಧೂಳಿನಿಂದ ಇನ್ನಿಲ್ಲದ ಕಿರಿ ಕಿರಿ ಅನುಭವಿಸಿತ್ತು. ಆದ್ರೆ ಇದೀಗ ಮೇಲ್ಸೇತುವೆಯ ಬಹುತೇಕ ಕಾಮಗಾರಿ ಸಂಪೂರ್ಣವಾಗಿದ್ದು ವಾಹನಗಳು ಓಡಾಡುತ್ತಿವೆ.
ಇದನ್ನೂ ಓದಿ: ಹಾದಿ ತಪ್ಪಿದ ಹೆದ್ದಾರಿ ಪ್ರಾಧಿಕಾರ, ಸಾವಿನ ದಾರಿಯಾದ ಬೆಂಗಳೂರು-ಹೈದರಾಬಾದ್ ರಾಷ್ಟ್ರಿಯ ಹೆದ್ದಾರಿ… ಸ್ಥಳೀಯರ ಹೆಣಗಾಟ!
ಸೇತುವೆಯೇನೋ ಸಂಪೂರ್ಣವಾಗಿದೆ. ಆದ್ರೆ ಸೇತುವೆ ಮೇಲೆ ಡಾಂಬರೀಕರಣವಾಗಿಲ್ಲ. ಸೇತುವೆ ಕೆಳಗಿನ ರಸ್ತೆಗಳ ದುರಸ್ಥಿಯಾಗಿಲ್ಲ. ಬೇಸಿಗೆ ಕಾಲದಲ್ಲಿ ವಿಪರೀತ ಧೂಳಿನ ಸಮಸ್ಯೆಯಾದ್ರೆ, ಮಳೆಗಾಲದಲ್ಲಿ ಗ್ರಾಮ ಕೆಸರಿನ ಕೊಂಪೆಯಾಗುತ್ತದೆ. ಆದ್ದರಿಂದ ಸೇತುವೆಯ ಉಳಿದ ಕಾಮಗಾರಿಯನ್ನ ಆದಷ್ಟು ಬೇಗ ಸಂಪೂರ್ಣಗೊಳಿಸಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಜೂನ್ ತಿಂಗಳಿನಿಂದ ಮಳೆಗಾಲ ಶುರುವಾದ್ರೆ ಮತ್ತೆ ಈ ಊರಿನ ಜನರು ನರಕ ಅನುಭವಿಸಬೇಕಾಗುತ್ತದೆ.
ಸದ್ಯ ಮೇಲ್ಸೇತುವೆಯಿಂದಾಗಿ ಭಾಗಮಂಡಲ ಜನರು ಪ್ರವಾಹಕ್ಕೆ ಹೆದರಬೇಕಾಗಿಲ್ಲ. ಊರು ದ್ವೀಪವಾಗುವುದು ತಪ್ಪಲಿದೆ. ಮಾತ್ರವಲ್ಲ. ದಿನಗಟ್ಟಲೆ ಹೊರ ಪ್ರಪಂಚದ ಸಂಪರ್ಕ ತಪ್ಪುವ ಸಮಸ್ಯೆಯೂ ಇನ್ನಿಲ್ಲ. ಹಾಗಾಗಿ ಸಧ್ಯ ಭಾಗಮಂಡಲ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ