
ಕೊಡಗು, ನವೆಂಬರ್ 11: ಇತ್ತೀಚೆಗೆ ರಾಜ್ಯದಲ್ಲಿ ಕಾಡು ಪ್ರಾಣಿಗಳ ದಾಳಿಗೆ ಹಲವರು ಬಲಿಯಾಗುತ್ತಲೇ ಇದ್ದಾರೆ. ರಾಜ್ಯದಲ್ಲಿ ಕಾಡಾನೆ ( Elephant attack )ಮತ್ತು ಹುಲಿ ದಾಳಿಯಿಂದಾಗಿ ( Tiger attack ) ಹಲವು ರೈತರು ಮೃತಪಟ್ಟ ಘಟನೆಗಳು ಜನರಲ್ಲಿ ಆತಂಕ ಮೂಡಿಸಿರುವ ಬೆನ್ನಲ್ಲೇ ಮತ್ತೊಂದೆ ಇಂಥದ್ದೇ ಘಟನೆ ಕೊಡಗಿನಲ್ಲಿ ಕೇಳಿಬಂದಿದೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಪಾಲಿಬೆಟ್ಟ ಬಳಿಯ ಎಮ್ಮೆಗುಂಡಿ ತೋಟದಲ್ಲಿ ಸೋಮವಾರ (ನ.10) ಕಾಡು ಆನೆಯೊಂದು ದಾಳಿ ಮಾಡಿದ ಪರಿಣಾಮ ಕಾರ್ಮಿಕನೊಬ್ಬ ಮೃತಪಟ್ಟಿದ್ದಾನೆ.
ಹಾಸನ ಸಮೀಪದ ರಾಮನಾಥಪುರದ ಹನುಮಂತ (57) ಮೃತ ದುರ್ದೈವಿ. ಆನೆ ದಾಳಿಯಿಂದ ಮೃತರ ಎದೆ ಮತ್ತು ಹೊಟ್ಟೆಯ ಮೇಲೆ ತೀವ್ರ ಗಾಯಗಳಾಗಿದ್ದವು ಎಂದು ತಿಳಿದುಬಂದಿದೆ. ಹನುಮಂತ ಕಳೆದ 30 ವರ್ಷಗಳಿಂದ ಖಾಸಗಿ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದು, ಲೈನ್ ಹೌಸ್‌ನಲ್ಲಿ ವಾಸಿಸುತ್ತಿದ್ದರು. ತೋಟದ ಮಾಲೀಕರು ಅವರನ್ನು ಆನೆ ಟ್ರ್ಯಾಕರ್ ಆಗಿ ನಿಯೋಜಿಸಿದ್ದರು. ಆನೆಗಳ ಉಪಸ್ಥಿತಿಯ ಬಗ್ಗೆ ಇತರ ಕಾರ್ಮಿಕರಿಗೆ ಎಚ್ಚರಿಕೆ ನೀಡುವ ಕೆಲಸ ಅವರದಾಗಿತ್ತು. ಇದೇ ವೇಳೆ ಈ ದುರ್ಘಟನೆ ಸಂಭವಿಸಿದೆ. ಅವರ ಸಹ ಕಾರ್ಮಿಕ ಅದೃಷ್ಟವಷಾತ್ ಈ ದಾಳಿಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಶವಪರೀಕ್ಷೆಯ ನಂತರ ಮೃತ ದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದ್ದು, ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕುಟುಂಬಕ್ಕೆ ಐದು ಲಕ್ಷ ರೂ. ಪರಿಹಾರ ನೀಡಲಾಗಿದೆ.
ಇದನ್ನೂ ಓದಿ ಮೈಸೂರು: ದನ ಮೇಯಿಸುತ್ತಿದ್ದಾಗಲೇ ಹುಲಿ ದಾಳಿ, ರೈತ ಸ್ಥಳದಲ್ಲೇ ಸಾವು
ಕೆಲ ತಿಂಗಳುಗಳಿಂದ ಕಾಡು ಪ್ರಾಣಿಗಳ ದಾಳಿಯಿಂದಾಗಿ ರಾಜ್ಯದಲ್ಲಿ ಹಲವು ಸಾವುಗಳು ಸಂಭವಿಸಿದ್ದು, ರಾಜ್ಯದ ಜನರ ನಿದ್ದೆಗೆಡಿಸಿದೆ. ಕಳೆದ ತಿಂಗಳು ಮೈಸೂರು ಜಿಲ್ಲೆಯಲ್ಲಿ ಹುಲಿ ದಾಳಿಯಿಂದ ರೈತ ಗಣೇಶ (55)ಮತ್ತು ನಿಂಗಯ್ಯ(65) ಪ್ರತ್ಯೇಕ ಘಟನೆಗಳಲ್ಲಿ ಮೃತಪಟ್ಟಿದ್ದರು. ಅಷ್ಟೇ ಅಲ್ಲದೆ ಆನೆ ತುಳಿತಕ್ಕೆ ಹಾಡಿ ನಿವಾಸಿ ವಸಂತ್(36) ಎನ್ನುವವರೂ ಬಲಿಯಾಗಿದ್ದರು. ಚಿಕ್ಕಮಗಳೂರು ಜಿಲ್ಲೆಯ ಕೆರೆಕಟ್ಟೆ ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಇಬ್ಬರು ಮೃತಪಟ್ಟಿದ್ದರು. ಇದರಿಂದಾಗಿ ಅರಣ್ಯ ಇಲಾಖೆಯ ವಿರುದ್ಧ ಗ್ರಾಮಸ್ಥರು ಸಿಡಿದೆದ್ದಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:28 pm, Tue, 11 November 25