AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kodagu Rains: ಹೆದ್ದಾರಿ ಮೇಲೆ ಕುಸಿದು ಬಿದ್ದ ಗುಡ್ಡ, ಬೃಹತ್ ಮರ; ಮಡಿಕೇರಿ ಮಂಗಳೂರು ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತ

ಮಡಿಕೇರಿ ತಾಲೂಕಿನ ಭಾಗಮಂಡಲದಲ್ಲಿ ಒಂದೇ ದಿನದ ಅವಧಿಯಲ್ಲಿ 238 ಮಿ.ಮೀ ಮಳೆ ದಾಖಲಾಗಿದೆ. ಕಾವೇರಿ ನದಿ ಸಂಗಮದಲ್ಲಿ ನೀರಿನ ಮಟ್ಟ ಹೆಚ್ಚಿದ್ದು, ಆಯೆಂಗೇರಿ-ಭಾಗಮಂಡಲ ರಸ್ತೆಗೆ ನೀರು ನುಗ್ಗಿದೆ.

Kodagu Rains: ಹೆದ್ದಾರಿ ಮೇಲೆ ಕುಸಿದು ಬಿದ್ದ ಗುಡ್ಡ, ಬೃಹತ್ ಮರ; ಮಡಿಕೇರಿ ಮಂಗಳೂರು ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತ
ಮೊಣ್ಣಂಗೇರಿ ಬಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಗುಡ್ಡ ಜರಿದುಬಿದ್ದಿರುವುದು
Gopal AS
| Updated By: Ganapathi Sharma|

Updated on: Jul 24, 2023 | 7:22 PM

Share

ಮಡಿಕೇರಿ, ಜುಲೈ 24: ಕೊಡಗು ಜಿಲ್ಲೆಯಾದ್ಯಂತ (Kodagu Rains) ಮಳೆಯ ಆರ್ಭಟ ಸೋಮವಾರವೂ ಮುಂದುವರಿದಿದೆ. ಮಡಿಕೇರಿ ತಾಲೂಕಿನ ಎರಡನೇ ಮೊಣ್ಣಂಗೇರಿ ಬಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಗುಡ್ಡ ಜರಿದುಬಿದ್ದಿದೆ. ಬೃಹತ್ ಮರ ಕೂಡ ಉರುಳಿಬಿದ್ದಿದ್ದು, ಪರಿಣಾಮವಾಗಿ ಮಡಿಕೇರಿ – ಮಂಗಳೂರು ಮಾರ್ಗದಲ್ಲಿ (Madikeri Mangaluru Higway) ವಾಹನ ಸಂಚಾರ ಸ್ಥಗಿತಗೊಂಡಿದೆ. ಈ ಮಧ್ಯೆ, ಮುನ್ನೆಚ್ಚರಿಕಾ ಕ್ರಮವಾಗಿ ಕೊಡಗು ಜಿಲ್ಲೆಯ ಎಲ್ಲ ಶಾಲೆ ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಿಸಲಾಗಿದೆ. ಇಂದೂ (ಸೋಮವಾರ) ಕೂಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು.

ಕಾವೇರಿ ನದಿಯ ಜಲಾನಯನ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ. ಗಾಳಿ ಸಹಿತ ಮಳೆಯಿಂದಾಗಿ ಜಿಲ್ಲೆಯಾದ್ಯಂತ ಹಲವಾರು ಕಡೆ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿದೆ.

ಹಾರಂಗಿ ಜಲಾಶಯದ ಕ್ರಸ್ಟ್​​ಗೇಟ್‌ಗಳನ್ನು ತೆರೆಯಲಾಗಿದ್ದು, 20,000 ಕ್ಯೂಸೆಕ್‌ಗೂ ಹೆಚ್ಚು ನೀರು ಬಿಡಲಾಗಿದೆ. ತಗ್ಗು ಪ್ರದೇಶಗಳಲ್ಲಿರುವ ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಎಚ್ಚರಿಕೆ ನೀಡಲಾಗಿದೆ.

ಮಡಿಕೇರಿ ತಾಲೂಕಿನ ಭಾಗಮಂಡಲದಲ್ಲಿ ಒಂದೇ ದಿನದ ಅವಧಿಯಲ್ಲಿ 238 ಮಿ.ಮೀ ಮಳೆ ದಾಖಲಾಗಿದೆ. ಕಾವೇರಿ ನದಿ ಸಂಗಮದಲ್ಲಿ ನೀರಿನ ಮಟ್ಟ ಹೆಚ್ಚಿದ್ದು, ಆಯೆಂಗೇರಿ-ಭಾಗಮಂಡಲ ರಸ್ತೆಗೆ ನೀರು ನುಗ್ಗಿದೆ. ಕಾವೇರಿ ನದಿ ಪ್ರವಾಹದಿಂದಾಗಿ ಭಾಗಮಂಡಲ ವ್ಯಾಪ್ತಿಯ ಬೆಂಗೂರು ಗ್ರಾಮಕ್ಕೆ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ನಾಪೋಕ್ಲು-ಮಡಿಕೇರಿ ರಸ್ತೆಯೂ ಜಲಾವೃತವಾಗುವ ಹಂತದಲ್ಲಿದೆ.

ಇದನ್ನೂ ಓದಿ: Karnataka Rains: ಮುಂದುವರೆದ ಭಾರೀ ಮಳೆ: ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳಲ್ಲಿ ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ

ಕರಡಿಗೋಡು-ನೆಲ್ಲಿಹುದಿಕೇರಿ ವ್ಯಾಪ್ತಿಯಲ್ಲಿ ಕಾವೇರಿ ನದಿಯ ನೀರಿನ ಮಟ್ಟ ಹೆಚ್ಚುತ್ತಿದ್ದು, ಸ್ಥಳಕ್ಕೆ ವಿರಾಜಪೇಟೆ ತಹಶೀಲ್ದಾರ್ ರಾಮಚಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನದಿ ಪಾತ್ರದ ಸಮೀಪದಲ್ಲಿರುವ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ