
ಮಡಿಕೇರಿ, ಜನವರಿ 29: ಕೊಡಗು (Kodagu) ಜಿಲ್ಲೆಯಲ್ಲಿ ಯುವಕನೊಬ್ಬ ಹಲವು ಯುವತಿಯರೊಂದಿಗೆ ಅಸಭ್ಯವಾಗಿ ವರ್ತಿಸಿ, ರಾಸಲೀಲೆ ನಡೆಸಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಭಾರೀ ಸಂಚಲನ ಮೂಡಿಸಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ತಾಲೂಕಿನ ನಾಪೋಕ್ಲು ಗ್ರಾಮದ ಮೊಹಮ್ಮದ್ ಸವದ್ ಎಂಬ ಯುವಕನನ್ನು ಮಡಿಕೇರಿ (Madikeri) ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಮೊಹಮ್ಮದ್ ಸವದ್ ಬೆಂಗಳೂರಿನ ಸಂಪಿಗೆಹಳ್ಳಿಯ ಯೆನಪೋಯ ಕಾಲೇಜಿನಲ್ಲಿ ಬಿಬಿಎ ವಿದ್ಯಾರ್ಥಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಆರೋಪಿಯು ವಿವಿಧ ಯುವತಿಯರೊಂದಿಗೆ ಕಾಮಕೇಳಿ ನಡೆಸಿ, ಖಾಸಗಿ ಕ್ಷಣಗಳನ್ನು ಸ್ವತಃ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾನೆ ಎನ್ನಲಾಗಿದೆ. ಈ ವಿಡಿಯೋಗಳು ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಜಿಲ್ಲೆಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ.
ವೈರಲ್ ಆದ ವಿಡಿಯೋಗಳು ಜಿಲ್ಲೆಯಾದ್ಯಂತ ಸಂಚಲ ಸೃಷ್ಟಿಸಿವೆ. ಇದರ ಬೆನ್ನಲ್ಲೇ ಈ ಸಂಬಂಧ ಕೊಡಗು ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಸನ್ನ ಭಟ್ ಅವರು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಆರೋಪಿ ಸವದ್ ಸ್ನೇಹಿತರೇ ಈ ವಿಡಿಯೋಗಳನ್ನು ವೈರಲ್ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಇದರ ನಡುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಯುವಕರ ಮೇಲೆ ಹಲ್ಲೆ ನಡೆದಿರುವ ವಿಡಿಯೋಗಳೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಹಲ್ಲೆಗಳು ಸವದ್ ಕಡೆಯವರಿಂದ ನಡೆದಿರಬಹುದೆಂಬ ಅನುಮಾನ ವ್ಯಕ್ತವಾಗಿದ್ದರೂ, ಹಲ್ಲೆಗೆ ಒಳಗಾದ ಯುವಕರು ಇದುವರೆಗೆ ಯಾವುದೇ ಅಧಿಕೃತ ದೂರು ದಾಖಲಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಎಚ್ಚರ, ಟ್ರಾಫಿಕ್ ಚಲನ್ ಪಾವತಿಗೆಂದು ಸಿಕ್ಕಸಿಕ್ಕ ಲಿಂಕ್ ಕ್ಲಿಕ್ ಮಾಡ್ಬೇಡಿ: 2.32 ಲಕ್ಷ ರೂ. ಕಳಕೊಂಡ ಬೆಂಗಳೂರು ಟೆಕ್ಕಿ
ಪ್ರಕರಣದ ಎಲ್ಲ ಆಯಾಮಗಳನ್ನು ಪರಿಶೀಲಿಸಲಾಗುತ್ತಿದ್ದು, ಸತ್ಯಾಂಶ ಬಯಲಿಗೆಳೆಯಲು ಸಮಗ್ರ ತನಿಖೆ ನಡೆಸಲಾಗುತ್ತಿದೆ ಎಂದು ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಹೇಳಿದ್ದಾರೆ. ಸದ್ಯ, ಕೊಡಗು ಜಿಲ್ಲೆಯಾದ್ಯಂತ ಮೊಹಮ್ಮದ್ ಸವದ್ ಕಾಮಕೇಳಿ ವಿಡಿಯೋಗಳು ಹಲ್ಚಲ್ ಸೃಷ್ಟಿಸಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ.
Published On - 9:37 am, Thu, 29 January 26