ರಸ್ತೆ ಬದಿ ಕಸ ಹಾಕಿದ ಹೋಟೆಲ್ ಮಾಲೀಕನಿಗೆ 20 ಸಾವಿರ ರೂ ದಂಡ ಹಾಕಿದ ಕಡಗದಾಳು ಗ್ರಾಮ ಪಂಚಾಯ್ತಿ

| Updated By: ಆಯೇಷಾ ಬಾನು

Updated on: Dec 04, 2022 | 11:53 AM

ಮಡಿಕೇರಿಯ ಹೋಟೆಲ್ ಒಂದರ ತ್ಯಾಜ್ಯವನ್ನು ಸುಮಾರು 8-10 ಚೀಲಗಳಲ್ಲಿ ತಂದು ಎಸೆಯಲಾಗಿತ್ತು. ಹೀಗಾಗಿ ಕಡಗದಾಳು ಗ್ರಾಮ ಪಂಚಾಯ್ತಿ ದಂಡ ವಿಧಿಸಿದೆ.

ರಸ್ತೆ ಬದಿ ಕಸ ಹಾಕಿದ ಹೋಟೆಲ್ ಮಾಲೀಕನಿಗೆ 20 ಸಾವಿರ ರೂ ದಂಡ ಹಾಕಿದ ಕಡಗದಾಳು ಗ್ರಾಮ ಪಂಚಾಯ್ತಿ
ರಸ್ತೆ ಬದಿ ಕಸ ಹಾಕಿದ ಹೋಟೆಲ್ ಮಾಲೀಕನಿಗೆ 20 ಸಾವಿರ ರೂ ದಂಡ
Follow us on

ಮಡಿಕೇರಿ: ರಸ್ತೆ ಬದಿ ಕಸ ಎಸೆದಿದ್ದಕ್ಕೆ ಮಡಿಕೇರಿ ತಾಲೂಕಿನ ಕಡಗದಾಳು ಗ್ರಾ.ಪಂ. ಹೋಟೆಲ್ ಮಾಲೀಕನಿಗೆ 20 ಸಾವಿರ ರೂ. ದಂಡ ವಿಧಿಸಿದ ಘಟನೆ ನಡೆದಿದೆ. ಪ್ರತಿದಿನ ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ ಸಾವಿರಾರು ವಾಹನಗಳು ಸಂಚರಿಸುವ ಮಡಿಕೇರಿ ಬಳಿಯ ಕಡಗದಾಳು ಗ್ರಾಮದ ಮುಖ್ಯರಸ್ತೆ ಬದಿಯಲ್ಲಿ ಕಸದ ರಾಶಿ ಕಂಡುಬರುತ್ತದೆ. ಸ್ಥಳದಲ್ಲಿ ಕ್ಷಣ ನಿಂತರೂ ತಲೆ ತಿರುಗಿ ಬೀಳುವಂತ ಪರಿಸ್ಥಿತಿ ಇದೆ. ಇದನ್ನು ಗಮನಿಸಿದ ಗ್ರಾ.ಪಂ. ರಸ್ತೆ ಬದಿ ಕಸ ಎಸೆದಿದ್ದ ಹೋಟೆಲ್ ಮಾಲೀಕನಿಗೆ ದಂಡ ವಿಧಿಸಿದೆ.

ಕಡಗದಾಳು ಗ್ರಾಮ ಪಂಚಾಯ್ತಿ ವತಿಯಿಂದ ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಶ್ರಮದಾನದ ಮೂಲಕ ರಸ್ತೆಬದಿಯ ತ್ಯಾಜ್ಯಗಳನ್ನು ಸಂಗ್ರಹಿಸುವ ಮೂಲಕ ಗ್ರಾಮದ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾ ಬರಲಾಗುತ್ತಿದೆ. ಅದರಂತೆ ಶನಿವಾರ ಗ್ರಾಮದ ಸೈನಿಕ್ ಅಕಾಡೆಮಿಯ ಸದಸ್ಯರು, ಶ್ರಮದಾನದ ಮೂಲಕ ರಸ್ತೆಬದಿಯ ತ್ಯಾಜ್ಯಗಳನ್ನು ಸಂಗ್ರಹಿಸಿ, ಶುಚಿತ್ವಗೊಳಿಸುತ್ತಿದ್ದ ಸಂದರ್ಭ ರಸ್ತೆಬದಿಯಲ್ಲಿ ಮಡಿಕೇರಿಯ ಹೋಟೆಲ್ ಒಂದರ ತ್ಯಾಜ್ಯವನ್ನು ಸುಮಾರು 8-10 ಚೀಲಗಳಲ್ಲಿ ತಂದು ಎಸೆಯಲಾಗಿತ್ತು. ಎಸೆದ ತ್ಯಾಜ್ಯವನ್ನು ಶುಚಿಗೊಳಿಸುವುದಿರಲಿ, ಸ್ಥಳದಲ್ಲಿ ನಿಲ್ಲುವುದಕ್ಕೂ ಅಸಾಧ್ಯವಾದ ದುರ್ಗಂಧ ಬರುತ್ತಿದ್ದ ಹಿನ್ನೆಲೆಯಲ್ಲಿ ಸೈನಿಕ್ ಅಕಾಡೆಮಿಯ ಸದಸ್ಯರು, ಕಡಗದಾಳು ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಿ.ಟಿ.ಜಯಣ್ಣ ಹಾಗೂ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಶ್ರೀರಂಗಪಟ್ಟಣದಲ್ಲಿ ಹನುಮ ಮಾಲಾಧಾರಿಗಳಿಂದ ಸಂಕೀರ್ತನಾ ಯಾತ್ರೆ; ಎಲ್ಲೆಡೆ ಸಾವರ್ಕರ್​ ಬ್ಯಾನರ್​ ಅಳವಡಿಕೆ

ಮಡಿಕೇರಿ ನಗರದ ದರ್ಬಾರ್ ಹೋಟೆಲ್ ಮಾಲೀಕರನ್ನು ಮೊಬೈಲ್ ಮೂಲಕ ಸಂಪರ್ಕಿಸಿ, ತರಾಟೆಗೆ ತೆಗೆದುಕೊಂಡರು. ಸ್ಥಳಕ್ಕಾಗಮಿಸುವಂತೆ ಹೋಟೆಲ್ ಸಿಬ್ಬಂದಿಗೆ ಸೂಚಿಸಲಾಯಿತು. ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿಗೆ ಕೂಡಲೇ ತ್ಯಾಜ್ಯವನ್ನು ಸ್ಥಳದಿಂದ ತೆರವುಗೊಳಿಸುವಂತೆ ಒತ್ತಾಯಿಸಿದರು. ಹೋಟೆಲ್ ಅನ್ನು ಈಗಾಗಲೇ ಮುಚ್ಚಲಾಗಿದ್ದು, ಹೋಟೆಲ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಹೊರರಾಜ್ಯದ ಕಾರ್ಮಿಕರು ತ್ಯಾಜ್ಯವನ್ನು ತಂದು ಸುರಿದಿದ್ದಾರೆ ಎಂದು ಸಿಬ್ಬಂದಿ ಸಮಜಾಯಿಷಿ ನೀಡಿದರು. ಕೊನೆಗೆ ಗ್ರಾಮಸ್ಥರ ಕ್ಷಮಾಪಣೆ ಕೋರಿ ತ್ಯಾಜ್ಯವನ್ನು ಸ್ಥಳದಿಂದ ತೆರವುಗೊಳಿಸುವುದರೊಂದಿಗೆ ಗ್ರಾಮ ಪಂಚಾಯ್ತಿ ವಿಧಿಸಿದ ದಂಡವನ್ನು ಭರಿಸಿದರು. ಮುಖ್ಯರಸ್ತೆ ಬದಿಯಲ್ಲಿ ತ್ಯಾಜ್ಯ ಸುರಿದವರೇ ತ್ಯಾಜ್ಯವನ್ನು ತೆರವುಗೊಳಿಸುವುದರೊಂದಿಗೆ ಭಾರಿ ಮೊತ್ತದ ದಂಡವನ್ನು ಭರಿಸಬೇಕಾದ ಎಚ್ಚರಿಕೆಯ ಸಂದೇಶವನ್ನು ಕಡಗದಾಳು ಗ್ರಾಮ ಪಂಚಾಯ್ತಿ ನೀಡಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ