Mercy Petition: ಜೀವ ಬೆದರಿಕೆ -ದಯಾಮರಣಕ್ಕೆ ಅರ್ಜಿ ಸಲ್ಲಿಸಿದ ಕೃಷಿ ಇಲಾಖೆಯ ನಿವೃತ್ತ ಅಧಿಕಾರಿ

| Updated By: ಸಾಧು ಶ್ರೀನಾಥ್​

Updated on: Sep 16, 2022 | 7:00 PM

ತಮಗೆ ನ್ಯಾಯ ದೊರಕದ ಹಿನ್ನೆಲೆಯಲ್ಲಿ ರಾಜ್ಯಪಾಲರಿಗೆ ಜಿಲ್ಲಾಧಿಕಾರಿ ಮೂಲಕ ತಮಗೆ ದಯಾಮರಣ ನೀಡುವಂತೆ ಕುಟ್ಟಪ್ಪ ದಂಪತಿ ಮನವಿ ಮಾಡಿದ್ದಾರೆ. ಜೀವನಪೂರ್ತಿ ಸರ್ಕಾರದ ಸೇವೆ ಮಾಡಿ ನಿವೃತ್ತಿ ನಂತರ ಇಳಿ ವಯಸ್ಸಿನಲ್ಲಿ ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲದಂತಾಗಿದೆ, ಹಾಗಾಗಿ ತಮಗೆ ದಯಾ ಮರಣ ನೀಡುವಂತೆ ಅವರು ಬೇಡಿದ್ದಾರೆ.

Mercy Petition: ಜೀವ ಬೆದರಿಕೆ -ದಯಾಮರಣಕ್ಕೆ ಅರ್ಜಿ ಸಲ್ಲಿಸಿದ ಕೃಷಿ ಇಲಾಖೆಯ ನಿವೃತ್ತ ಅಧಿಕಾರಿ
ಜೀವ ಬೆದರಿಕೆ ಭೀತಿ -ದಯಾಮರಣಕ್ಕೆ ಅರ್ಜಿ ಸಲ್ಲಿಸಿದ ಕೃಷಿ ಇಲಾಖೆಯ ನಿವೃತ್ತ ಅಧಿಕಾರಿ
Follow us on

ಸೋಮವಾರಪೇಟೆ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಚೌಡ್ಲು ಗ್ರಾಮದ ಕೃಷಿ ಇಲಾಖೆ ನಿವೃತ್ತ ಅಧಿಕಾರಿ ಹೆಚ್ ಜಿ ಕುಟ್ಟಪ್ಪ ಎಂಬುವರು ದಯಾಮರಣ ಕೋರಿ (Mercy Petition) ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಚೌಡ್ಲು ಗ್ರಾಮದ ಮಂಜುನಾಥ ಅಟೋ ವರ್ಕ್ಸ್ ನಿಂದ ಕಳೆದ ಐದು ವರ್ಷಗಳಿಂದ ತಮಗೂ ಹಾಗೂ ತಮ್ಮ ಪತ್ನಿಗೂ ತೀವ್ರ ಮಾನಸಿಕ ಹಿಂಸೆಯಾಗಿದ್ದು ಎಲ್ಲಿಯೂ ನ್ಯಾಯ ದೊರಕಿಲ್ಲ ಎಂದು ಕುಟ್ಟಪ್ಪ ಅವರು ಆರೋಪಿಸಿದ್ದಾರೆ. 2011ರಲ್ಲಿ ಕೃಷಿ ಇಲಾಖೆಯಿಂದ ನಿವೃತ್ತಿಯಾದ (retired agriculture officer) ಬಳಿಕ ಕುಟ್ಟಪ್ಪ ಅವರು ಚೌಡ್ಲು ಗ್ರಾಮದ ತಮ್ಮ ಸ್ವಂತ ನಿವಾಸಲ್ಲಿ ವಾಸವಿದ್ದಾರೆ.

ಇದೇ ಮನೆಯ ಸಮೀಪದಲ್ಲೇ ಮಂಜುನಾಥ ಅಟೋ ವರ್ಕ್ಸ್ ಇದ್ದು ತೀವ್ರ ಶಬ್ಧ ಮತ್ತು ವಾಯುಮಾಲಿನ್ಯ ಉಂಟಾಗುತ್ತಿದೆ ಎಂದು ಕುಟ್ಟಪ್ಪ ದೂರಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಗ್ಯಾರೇಜ್ ಸಿಬ್ಬಂದಿ ತಮಗೆ ಜೀವ ಬೆದರಿಕೆ ಒಡ್ಡಿದ್ದು ನೆಮ್ಮದಿಯಿಂದ ಬದಕಲು ಸಾಧ್ಯವಿಲ್ಲದಂತಾಗಿದೆ ಎಂದು ದೂರಿನಲ್ಲಿ ಹೇಳಿದ್ದಾರೆ. ಗ್ಯಾರೇಜ್ ಸಿಬ್ಬಂದಿ ಬೆಳಗ್ಗಿನಿಂದ ತಡರಾತ್ರಿಯವರೆಗೂ ವಿಪರೀತ ಶಬ್ಧ ಮಾಡುವುದು, ವಾಹನಗಳನ್ನು ಸ್ಟಾರ್ಟ್ ಮಾಡಿ ಬೇಕೆಂದೇ ರೈಸ್ ಮಾಡುವುದು, ಗ್ಯಾರೇಜ್ ತ್ಯಾಜ್ಯಗಳಿಗೆ ಬೇಕೆಂದೇ ಮನೆಯ ಸಮೀಪ ಬೆಂಕಿ ಹಾಕಿ ಹೊಗೆ ಎಬ್ಬಿಸುವಂತಹ ಕೃತ್ಯಗಳನ್ನು ಮಾಡುತ್ತಿದ್ದಾರೆ.

ಇದರ ವಿರುದ್ಧ ಕೊಡಗು ಪೊಲೀಸ್ ವರಿಷ್ಠಾಧಿಕಾರಿಗಳು, ಕೊಡಗು ಜಿಲ್ಲಾಧಿಕಾರಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ಮಾಲಿನ್ಯ ನಿಯಂತ್ರಣ ಮಂಡಳಿ, ಚೌಡ್ಲು ಗ್ರಾಮ ಪಂಚಾಯಿತಿ ಮತ್ತು ಆಗಿನ ಉಸ್ತುವಾರಿ ಸಚಿವರಾಗಿದ್ದ ಸಾರಾ ಮಹೇಶ್ ಅವರಿಗೆ ಲಿಖಿತ ದೂರನ್ನು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಮಂಜುನಾಥ ಗ್ಯಾರೇಜ್, ಭೂ ಪರಿವರ್ತನೆ ಮಾಡದ ಹಿನ್ನೆಲೆಯಲ್ಲಿ ಚೌಡ್ಲು ಪಂಚಾಯಿತಿ ಗ್ಯಾರೇಜ್ ನ ಲೈಸೆನ್ಸ್ ನವೀಕರಣಗೊಳಿಸುವುದಿಲ್ಲ. ಅಲ್ಲದೆ, ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಕೂಡ ಸ್ಥಳ ಪರಿಶೀಲನೆ ನಡೆಸಿ ತ್ಯಾಜ್ಯ ಸುಡುವುದರಿಂದ ವಾಯುಮಾಲಿನ್ಯ ವಾಗಿರುವುದನ್ನು ದೃಢೀಕರಿಸಿ ಗ್ರಾಮ ಪಂಚಾಯಿತಿಗೆ ವರದಿ ನೀಡಿದೆ. ಅಲ್ಲದೆ ಸೋಮವಾರಪೇಟೆ-ಶಾಂತಳ್ಳಿ ರಾಜ್ಯ ಹೆದ್ದಾರಿ 85ರ ಬದಿಯಲ್ಲೇ ಗ್ಯಾರೇಜ್ ಇದ್ದು ರಸದತೆ ಬದಿಯಲ್ಲೇ ವಾಹನಗಳನ್ನು ನಿಲ್ಲಿಸಿಕೊಂಡು ವಾಹನಗಳ ಸಂಚಾರಕ್ಕೂ ಅಡ್ಡಿಯುಂಟು ಮಾಡುತ್ತಿರುವ ಆರೋಪವಿದೆ.

ಈ ಎಲ್ಲಾ ಕಾರಣಗಳಿಂದಾಗಿ ಚೌಡ್ಲು ಗ್ರಾಮ ಪಂಚಾಯಿತಿ ಗ್ಯಾರೇಜ್ ಅನ್ನ ತೆರವು ಗೊಳಿಸಲು ನಿರ್ಣಯಕೈಗೊಂಡು, ಗ್ಯಾರೇಜ್ ಅನ್ನ ಸ್ಥಳಾಂತರಿಸಲು 2021ರ ಮಾರ್ಚ್ ನಲ್ಲಿ ಮೂರು ತಿಂಗಳು ಗಡುವು ನೀಡುತ್ತದೆತ. ಈ ಗಡುವಿನ ವಿರುದ್ಧ ಗ್ಯಾರೇಜ್ ಮಾಲೀಕ ಮನೋಜ್ ಸೋಮವಾರಪೇಟೆ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡುತ್ತಾರೆ. ಆದರೆ ನ್ಯಾಯಾಲಯ ಈ ಪ್ರಕರಣ ತಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದೂ ಸ್ಥಳೀಯ ಪ್ರಾಧಿಕಾರದ ವ್ಯಾಪ್ತಿಯಲ್ಲೇ ಬಗೆಹರಿಸಿಕೊಳ್ಳುವಂತೆ ಸೂಚಿಸುತ್ತದೆ. ಈ ಸಂದರ್ಭ ಚೌಡ್ಲು ಪಂಚಾಯಿತಿ ಸರ್ವ ಸದಸ್ಯರು ಗ್ಯಾರೇಜ್ ತೆರವಿಗೆ ಮುಂದಾದಾಗ ಇದಕ್ಕೆ ಸೋಮವಾರಪೇಟೆ ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ಜಯಣ್ಣ ಇದಕ್ಕೆ ತಡೆಯೊಡ್ಡಿದ್ದಾರೆ ಎಂದು ಕುಟ್ಟಪ್ಪ ದಂಪತಿ ಆರೋಪಿಸಿದ್ದಾರೆ.

ಇಷ್ಟಲ್ಲಾ ಆದರೂ ತಮಗೆ ನ್ಯಾಯ ದೊರಕದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ (kodagu DC) ಮೂಲಕ ತಮಗೆ ದಯಾಮರಣ ನೀಡುವಂತೆ ಕುಟ್ಟಪ್ಪ ದಂಪತಿ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ. ಜೀವನಪೂರ್ತಿ ಸರ್ಕಾರದ ಸೇವೆ ಮಾಡಿ ನಿವೃತ್ತಿ ನಂತರ ಇಳಿ ವಯಸ್ಸಿನಲ್ಲಿ ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲದಂತಾಗಿದೆ, ಹಾಗಾಗಿ ತಮಗೆ ದಯಾ ಮರಣ ನೀಡುವಂತೆ ಅವರು ಬೇಡಿದ್ದಾರೆ.