ಬೆಂಗಳೂರು: ಸಾರಿಗೆ ನಿಗಮಗಳ ನೌಕರರ ಮುಷ್ಕರದ ಮುಂದಾಳತ್ವ ವಹಿಸಿರುವ ಕೋಡಿಹಳ್ಳಿ ಚಂದ್ರಶೇಖರ್ ಬ್ಲಾಕ್ಮೇಲ್ ತಂತ್ರ ರೂಪಿಸುತ್ತಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೊಮ್ಮಾಯಿ, ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ತರುವ ಕೆಲಸ ಆಗಿದೆ. ಕೋಡಿಹಳ್ಳಿ ಚಂದ್ರಶೇಖರ್ ಸಾರಿಗೆ ನೌಕರರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ರೀತಿಯ ವ್ಯಕ್ತಿಗಳ ಬಗ್ಗೆ ಹುಷಾರಾಗಿರಬೇಕು ಎಂದು ನೌಕರರಿಗೆ ಸೂಚನೆ ನೀಡಿದ್ದಾರೆ.
ಬಸ್ ಚಾಲನೆಗೆ ಮುಂದಾಗಲಿರುವ ನೌಕರರಿಗೆ ಭದ್ರತೆ: ಸಾರಿಗೆ ಮುಷ್ಕರದ ನಡುವೆಯೇ ಸರ್ಕಾರ ಸಿಬ್ಬಂದಿಗೆ ಆಫರ್ ಒಂದನ್ನು ನೀಡಿದೆ. ನಾಳೆ ಬಸ್ ಸಂಚಾರ ಮಾಡಲು ಮುಂದಾಗುವ ನೌಕರರಿಗೆ ಭದ್ರತೆ ಒದಗಿಸುತ್ತೇವೆ ಎಂದು ಗೃಹ ಸಚಿವ ಬೊಮ್ಮಾಯಿ ಹೇಳಿದ್ದಾರೆ. ಶನಿವಾರ ಮುಷ್ಕರದ ನಡುವೆಯೂ ಓಡಾಡಿದ್ದ ಬಸ್ಗಳ ಮೇಲೆ ಕಲ್ಲು ತೂರಾಟ ನಡೆದಿತ್ತು. ಹೀಗಾಗಿ, ಅನೇಕ ಚಾಲಕರು ಬಸ್ ಚಾಲನೆ ಮಾಡೋಕೆ ಹಿಂಜರಿದಿದ್ದರು. ಅಂಥವರಿಗೆ ಈ ಆಫರ್ ನೀಡಲಾಗಿದೆ.
ಚಂದ್ರಶೇಖರ್ ಸ್ವಪ್ರತಿಷ್ಠೆಯಿಂದ ತೊಂದರೆ: ಚಂದ್ರಶೇಖರ್ ಸ್ವಪ್ರತಿಷ್ಠೆಯಿಂದ ರಾಜ್ಯದ ಆರೂವರೆ ಕೋಟಿ ಜನರಿಗೆ ತೊಂದರೆ ಆಗುತ್ತಿದೆ ಎಂದು ಗೋವಿಂದ ಕಾರಜೋಳ ಹೇಳಿಕೆ ನೀಡಿದ್ದಾರೆ. ಮುಷ್ಕರದ ಗೊಂದಲಕ್ಕೆ ಕೋಡಿಹಳ್ಳಿ ಅವರೇ ಕಾರಣ. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ನಷ್ಟಕ್ಕೂ ಅವರು ಕಾರಣ. ರೈತರ ವಿಚಾರದಲ್ಲಿ ಹೋರಾಟಕ್ಕೆ ಕೋಡಿಹಳ್ಳಿ ಸಿದ್ಧವಿಲ್ಲ ಎಂದು ಆರೋಪಿಸಿದ್ದಾರೆ.
Published On - 9:31 pm, Sun, 13 December 20